Showing posts with label ದೇವರ ನಾಮಗಳು. Show all posts
Showing posts with label ದೇವರ ನಾಮಗಳು. Show all posts

Thursday, April 10, 2014

ಧರ್ಮಕ್ಕೆ ಕೈ ಬಾರದೀ ಕಾಲ

ಧರ್ಮಕ್ಕೆ ಕೈ ಬಾರದೀ ಕಾಲ
ಪಾಪಕರ್ಮಕ್ಕೆ ಮನಸೋಲೋದಿ ಕಲಿ ಕಾಲ
ದಂಡ ದ್ರೋಹಕೆ ಉಂಡು ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ।।೧।।

ದಿಂಡೇರಿಗುಂಟು ಜಗಭಂಡರಿಗುಂಟು
ಅಂಡಲೆವರಿಗಿಲ್ಲವೀ ಕಾಲ
ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕ್ಕುಂಟು
ಉತ್ತಮರಿಗಿಲ್ಲವೀ ಕಾಲ ।।೨।।

ತೋತ್ತೇರಿಗುಂಟು ತಾಟಕಿಗುಂಟು
ಹೆತ್ತತಾಯಿಗಿಲ್ಲವೀ ಕಾಲ
ಹುಸಿ ದಿಟವಾಯಿತು ರಸ ಕಸವಾಯಿತು
ಸೊಸೆ ಅತ್ತೆಯ ದಂಡಿಸೋದೀ ಕಾಲ
ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ
ಸ್ತುತಿಸುವವರಿಗಿಲ್ಲವೀ ಕಾಲ ।।೩।।

ಬಿಡೆ ನಿನ್ನ ಪಾದ ಬಿಂಕವದೇಕೋ

ಬಿಡೆ ನಿನ್ನ ಪಾದ ಬಿಂಕವದೇಕೋ ।।ಪ।।
ಕೊಡು ಮನದಿಷ್ಟವ ಕೋಪವಿದೇಕೋ ।।ಅಪ॥

ನೇರ ಹೊಕ್ಕರು ಬಿಡೆ ಬೆನ್ನಿನೊಳಗೆ ಬಹು
ಭಾರ ಪೊತ್ತೆನೆಂದು ಬಿದ್ದರು ಬಿಡೆನು
ಕೋರೆಯ ಮಸೆಯುತ ಕೆಸರು ಕೊಂಡರು
ಬಿಡೆನು ಘೋರ ರೂಪವ ತಾಳಿ ಘುರಿ ಘುರಿಸಲು ನಾನು ।।೧।।

ತಿರುಕನೆಂದು ಬಿಡೆ ತಿಳಿಯ ತಾಯಕೊರಳ
ತರಿವನೆಂದರು ನಿನ್ನ ನಾ ಬಿಡೆನೋ
ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ
ದುರುಳ ಮಡುವಿನಲ್ಲಿ ಧುಮುಕಿದರೆಯು ನಾನು ।।೨।।

ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು
ಒಡನೆ ಹಯವೇರಿ ಓಡಿದರು ಬಿಡೆನು
ಪೊಡವಿಯೊಳಗೆ ನಮ್ಮ ಪುರಂದರವಿಠಲನ
ಕಡೆ ಹಾಯಿಸುವ ಭಾರ ನಿನ್ನದಕೆ ನಾನು ।।೩।।

Monday, March 17, 2014

ಕರವ ಮುಗಿವೆ ಕರುಣಿಸು

ಕರವ ಮುಗಿವೆ ಕರುಣಿಸು
ಬಾಯಿ ತೆರೆದ ಬಗೆಯೇನು ದೇವರ ದೇವ ಪ।
ತೋಯದಳ ನೇತ್ರನೆ ।।ಅಪ।।

ಅಸುರನ ಉದರವ ಹಸನಾಗಿ ಬಗೆವಾಗ
ಹಸಿದು ಬಾಯಿ ತೆರೆದೆಯೋ
ಬಿಸಜಾಕ್ಷ ಭೂಮಂಡಲವು
ಬಸಿರೆಳಿದ್ದ ಉಬ್ಬಸಿಗೆ ಬಾಯಿ ತೆರೆದೆಯೋ ।।೧।।

ಮಡದಿಯ ರೂಪಕ್ಕೆ ಮರುಳಾಗಿ ಅದರಿಂದ
ಬಡನೆ ಬಾಯಿ ತೆರೆದೆಯೋ
ದೃಢದಿ ಪ್ರಹ್ಲಾದನು ಒಡೆಯ
ರಕ್ಷಿಸೆಂಬೋ ನುಡಿಗೆ ಬಾಯಿ ತೆರೆದೆಯೋ ।।೨।।

ಗುರುಸತ್ಯಬೋಧರಾಯರ ನಿತ್ಯಭಜನೆಗೆ
ಬೆರೆತು ಬಾಯಿ ತೆರೆದೆಯೋ
ವರ ಕದರಮಂಡಲಗಿ ಹನುಮಯ್ಯನ ಒಡೆಯನೆ
ಕರವ ಮುಗಿವೆ ಬಾಯಿ ಮುಚ್ಚಿ ಕರುಣಿಸು ।।೩।।