Tuesday, February 25, 2014

ನಂಬಿದೆ ನಿನ್ನ ಪಾದ ನರಸಿಂಹ

ನಂಬಿದೆ ನಿನ್ನ ಪಾದ ನರಸಿಂಹ
ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ।।೧।।

ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೋ ನರಸಿಂಹ ।।೨।।

ತುಂಬುರು ನಾರದಪ್ರಿಯ ನರಸಿಂಹ
ಚೆಲ್ವ ಶಂಬರಾರಿಯ ಪಿತನೆ ನರಸಿಂಹ ।।೩।।

ಅಂಬರೀಷನ ಕಾಯ್ದ ನರಸಿಂಹ
ಜಗದಂಬಾರಮಣನೆ ಸಿರಿ ನರಸಿಂಹ ।।೪।।

ಬಾಲ ಕರೆದಲ್ಲಿ ಬಂದೆ ನರಸಿಂಹ
ಭಕ್ತಪಾಲಿಪ ದಯಾಳು ಸಿರಿ ನರಸಿಂಹ ।।೫।।

ಲೀಲೆಯಿಂದ ಹಿರಣ್ಯನ ನರಸಿಂಹ
ಕೊಂದ ಲೋಲ ಸಿರಿಯರಸನೆ ನರಸಿಂಹ ।।೬।।

ಅಚ್ಯುತಾನಂತ ಗೋವಿಂದ ನರಸಿಂಹ
ಸಿರಿಸಚ್ಚಿದಾನಂದ ಮುಕುಂದ ನರಸಿಂಹ ।।೭।।

ಕಿಚ್ಚಿನಂದದಿ ಬಂದೆ ನರಸಿಂಹ
ಭವ ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ ।।೮।।

ಕರಿಮೊರೆಯನು ಕೇಳಿ ನರಸಿಂಹ
ಬಲು ಬರದಿಂದೊದಗಿ ಬಂದೆ ನರಸಿಂಹ ।।೯।।

ಗರುಡವಾಹನನಾಗಿ ನರಸಿಂಹ
ಉದ್ಧರಿಸಿ ಕಾಯ್ದೆನಲ್ಲೋ ನರಸಿಂಹ ।।೧೦।।

ದೇವರ ದೇವನು ನೀನು ನರಸಿಂಹ
ಬೇರೆ ಕಾವರನು ಕಾಣೆನಯ್ಯ ನರಸಿಂಹ ।।೧೧।।

ಭಾವಜನಯ್ಯನೆ ಸಿರಿ ನರಸಿಂಹ
ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ।।೧೨।।

ತಂದೆ ತಾಯಿ ಗುರು ದೈವ ನರಸಿಂಹ
ಎನ್ನ ಬಂಧುಬಳಗವು ನೇನೆ ನರಸಿಂಹ ।।೧೩।।

ಕುಂದು ಹೆಚ್ಚು ನೋಡಬೇಡ ನರಸಿಂಹ
ಪುರಂದರವಿಠಲ ಕಾಯೋ ನರಸಿಂಹ ।।೧೪।।

Wednesday, February 19, 2014

ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ

ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲವ ಪರಿಹರಿಸಿ ಮನದಿಷ್ಟಾರ್ಥಗಳನ್ನೆಲ್ಲ ಕೊಟ್ಟು ರಕ್ಷಿಸುವಂಥ ।।ಕೃಷ್ಣಮೂರ್ತಿ।।

ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿಂದೆಸವ ಲಲಾಟ
ಶಿಸ್ತೀಲಿ ಕೊಳಲ ನೋಡುವೆ ಓರೆ ನೋಟ
ಕೌಸ್ತುಭ ಎಡಬಲದಲಿ ಓಲಾಟ ।।೧।।

ಘಮಘಮಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯ ಕೊರಳ
ಬಗೆಬಗೆಯ ಹೊನ್ನುಂಗುರವಿಟ್ಟ ಬೆರಳು
ಸೊಗಸಿನ ನಾಭಿಯ ತಾವರೆಯರಳು ।।೨।।

ಉಡದಾರ ಒಡ್ಯಾಣ ನಿಖಿಲಾಭರಣ
ಉಡುಗೆ ಪೀತಾಂಬರ ರವಿ ಶೀತ ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಶ್ರೀ ಪುರಂದರವಿಠಲನ ಕರುಣ ।।೩।।