Friday, March 7, 2014

ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ।।
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಚುತಾನಂತನ  ।।೧।।

ಸಾಸಿರ ನಾಮದ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ ಯಾದವಕುಲವಂದ್ಯನ 
ವೇದಾಂತ ವೇದ್ಯನ ಇಂದಿರಾರಮಣನ ।।೨।।

ಆದಿಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದನು ಬೇಲೂರ ಚೆನ್ನಿಗನ ।।೩।।

ದಾನವ ಕೊಂದದ್ದಲ್ಲಿ ಕಾಣಿರೋ

ರಾಗ : ಧನ್ಯಾಸಿ
ತಾಳ : ಆದಿತಾಳ

ದಾನವ ಕೊಂದದ್ದಲ್ಲಿ ಕಾಣಿರೋ ಪ।
ಗಾನ ವಿನೋದಿ ನಮ್ಮ ತೊರವೆಯ ನರಸಿಂಹ ।। ।।

ಅಚ್ಚಪುರುಷನೆಂಬ ಸ್ವಚ್ಛರತ್ನ ಒಡಲೊಳು
ಬಿಚ್ಚಿ ಬೆದಕಿ ನೋಡಿದರೆ ಇನ್ನೆಷ್ಟು ಇದ್ದಾವೋ ಎಂದು ।।೧।।

ನೆಂಟತನವು ಬೆಳೆಯಬೇಕೆಂದು ಕರುಳ ಕೊರಳೊಳು
ಹಾಕಿಕೊಂಡನೆಷ್ಟೋ ದೇಹ ಸಂಬಂಧದಿಂದ ।।೨।।

ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ
ಉರಿಮೊರೆ ದೈವ ನಮ್ಮ ಪುರಂದರವಿಠಲ ।।೩।।

Wednesday, March 5, 2014

ಮಹದಾದಿ ದೇವ ನಮೋ ಮಹದಾದಿ ದೇವ ನಮೋ

ಮಹದಾದಿ ದೇವ ನಮೋ ಮಹದಾದಿ ದೇವ ನಮೋ ।।ಪ।।
ಮಹಮಾಹಿಮನೆ ನಮೋ ಪ್ರಹ್ಲಾದವರದ ಅಹೋಬಲ ನಾರಸಿಂಹ ।। ಪ।।

ಧರಣಿಗುಬ್ಬಸವಾಗೆ ತಾರಾಪಥವು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು
ತರುಗಿರಿಗಳಲ್ಲಾಡೆ  ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ ನಾರಸಿಂಹ ।।೧।।

ಸಿಡಿಲಂತೆ ಘರ್ಜಿಸುತ ಕುಡಿಯನಾಲಗೆ ಚಾಚಿ
ಅಡಿಗಡಿಗೆ ಲಂಘಿಸುತ ಕಡುಕೋಪದಿಂದ
ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗೆದೆ ಕಡುಗಲಿ ನಾರಸಿಂಹ ।।೨।।

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಹೂಮಳೆಯ ಕರೆಯೆ
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಜಕರ
ಕರುಣಿಸಿದೆ ಪುರಂದರವಿಠಲ ನಾರಸಿಂಹ ।।೩।।