Monday, January 20, 2014

ನರಸಿಂಹ ಮಂತ್ರ ಒಂದಿರಲು ಸಾಕು

ರಾಗ : ಬಿಲಹರಿ
ತಾಳ : ಆಟತಾಳ

ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತಕೋಟಿಗಳ ಸಂಹರಿಸಿ ಭಾಗ್ಯವನೀವ

ಹಸುಳೆ ಪ್ರಹ್ಲಾದನ ತಲೆಗಾಯ್ದದೀ ಮಂತ್ರ
ಅಸುರನೊಡಲ ಬಗೆದ ದಿವ್ಯ ಮಂತ್ರ
ವಸುಧೆಯೊಳು ದಾನವರ ಅಸುವ ಸೆಳೆವ ಮಂತ್ರ
ಪಶುಪತಿಗೆ ಪ್ರಿಯವಾದ ಮೂಲಮಂತ್ರ ।। ।।

ದಿಟ್ಟ ಧೃವರಾಯಗೆ ಪಟ್ಟಗಟ್ಟಿದ ಮಂತ್ರ
ಸೃಷ್ಟಿಯೊಳು ವಿಭೀಷಣನ ಪೊರೆದ ಮಂತ್ರ
ತುಟ್ಟ ತುದಿಯೊಳು ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಪರಿಗಿದು ದೃಷ್ಟಮಂತ್ರ ।। ।।

ಹಿಂಡುಭೂತವ ಕಡುದು ತುಂಡು ಮಾಡುವ ಮಂತ್ರ
ಕೊಂಡಾಡಿಲೋಕಕದ್ದುಂಡ ಮಂತ್ರ
ಗಂಡುಗಲಿ ಪ್ರಚಂಡ ಹಿಂಡು ದಾನವರುಗಳ
ಗಂಡ ಪುರಂದರವಿಠಲನ ಮಹಾಮಂತ್ರ ।। ।।

Friday, January 17, 2014

ನಮೋ ನಮಸ್ತೇ ನರಸಿಂಹ ದೇವಾ

ರಾಗ : ಸಾವೇರಿ
ತಾಳ : ಆದಿತಾಳ

ನಮೋ ನಮಸ್ತೇ ನರಸಿಂಹ ದೇವಾ - ಸ್ಮರಿಸುವವರ ಕಾವ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ

ಕ್ಷೇತ್ರಜ್ಞ ಕ್ಷೇಮಧಾಮಭೂಮಾ ದಾನವಕುಲಭೀಮ
ಗಾತ್ರಸನ್ನುತ ಬ್ರಹ್ಮಾದಿ ಸೋಮ
ಸನ್ಮಂಗಳನಾಮ ಚಿತ್ರಮಹಿಮನಕ್ಷತ್ರನೇಮಿ
ಸರ್ವತ್ರ ಮಿತ್ರ ಸುಚರಿತ್ರ ಪವಿತ್ರ ।। ।।

ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ
ಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ ।। ।।

ತಪನಕೋಟಿ ಪ್ರಭಾ ಶರೀರ - ದುರಿತೌಘವಿದೂರ
ಪ್ರಪಿತಾಮಹಮಂದಾರ - ಖಳವಿಪಿನಕುಠಾರ
ಕೃಪಣಬಂದು ತವ ನಿಪುಣತನಕೆ
ನಾನುಪಮೆಗಾಣೆ ಕಾಶ್ಯಪಿವರವಹನಾ ।। ।।

ವೇದವೇದಾಂಗವೇದ್ಯ - ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ - ಅನುಪಮಅನವದ್ಯ
ಮೋದಮಯನೆ ಪ್ರಹ್ಲಾದವರದ
ನಿತ್ಯೊದಯ ಮಂಗಳ ಪಾದಕಮಲಕೆ ।। ।।

ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿಕ್ಷಣಕೆ
ಕಥಾಮೃತ ಉಣಿಸು ಕರುಣದಿ ।। ।।

Thursday, January 16, 2014

ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ

ರಾಗ : ಶಂಕರಾಭರಣ
ತಾಳ : ಅಟ್ಟತಾಳ

ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ

ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ
ಕರವ ಪಿಡಿದು ನಿಜ ಶರಣನೆಂದೆನಿಸು
ಭಾಸುರ ಕರುಣಾಂಬುಧೆ ಗರುಡವಾಹನ - ಲಕ್ಷ್ಮೀ ।। ।।

ತರಳ ಪ್ರಹ್ಲಾದನ ನುಡಿಯ ಕೇಳಿ
ತ್ವರಿತದಿ ಬಂದ್ಯೋ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರಲರಿಯೆ
ಎಂದೆಂದು ಕೆಂಗಿಡಿಯ ಅಹಭರದಿಂದುಗುಳುತ ಬೊಬ್ಬಿರುದಿ ಬೆಂಬತ್ತಿ
ಕರ್ಬುರಕಶ್ಯಪುವಿನ ಹಿಂಗರುಳ ಪಿಡಿದ ಲಕ್ಷ್ಮೀ ।। ।।

ಪ್ರಳಯಾಂಬುನಿಧಿಘನಘೋಶದಂತೆ
ಘುಳುಘುಳಿಸುತಲಿ ಪ್ರದೋಷ ಕಾಲ ತಿಳಿದು
ದೈತ್ಯನ ಅತಿರೋಷದಿಂದ ಅಪ್ಪಳಿಸಿ ಮೇದಿನಿಗೆ ನಿರ್ದೋಷ
ಅಹ ಸೆಳೆ ಸೆಳೆಯುತ ಚರ್ಮಸುಲಿದು ಕೆನ್ನೆತ್ತರೋಕುಳಿಯಾಡಿದೆ
ದಿಶಾವಳಿಗಳೊಳಗೆ - ಲಕ್ಷ್ಮೀ ।। ।।

ಕ್ರೂರದೈತ್ಯನ ದೋರೆಗರುಳ ತೆಗೆದ್ಹಾರ ಮಾಡಿದೆ
ನಿಜಕೊರಳ ಕಂಡು ವಾರಿಜಾಸನ ಮುಖ್ಯರರಳ
ಪುಷ್ಪಸಾರಗರೆದು ವೇಗ ತರಳ
ಅಹ ಧೀರಪ್ರಹ್ಲಾದನ ತೋರಿತ್ವದಂಘ್ರಿ
ಸರೋರುಹವನು ಸಾರ್ದರೋ ಕಾರುಣ್ಯನಿಧೆ - ಲಕ್ಷ್ಮೀ ।। ।।

ಜಯಜಯ ದೇವವರೇಣ್ಯ ಮಹದ್ಭಯ
ನಿವಾರಣನೆ ಅಗಣ್ಯ ಗುಣಾಶ್ರಯ ಘೋರ
ದುರಿತಾರಣ್ಯ ಧನಂಜಯ ಜಗದೇಕಶರಣ್ಯ
ಅಹ ಲಯವಿವರ್ಜಿತ ಲೋಕತ್ರಯವ್ಯಾಪ್ತ
ನಿಜಭಕ್ತಪ್ರಿಯ ಘೋರಾಮಯಹರ ದಯಮಾಡು - ಲಕ್ಷ್ಮೀ ।। ।।

ಕುಟಿಲದವೇಷದವ ನೀನಲ್ಲ ನಿನ್ನಾರ್ಭಟಕಂಜಿದರು ಸುರರೆಲ್ಲ
ನರನಟನೆ ತೋರಿದ್ಯೋ ಲಕ್ಷ್ಮೀನಲ್ಲ
ನಾಪಾಸಟಿ ಕಾಣೆನಪ್ರತಿಮಲ್ಲ
ಅಹ ವಟಪತ್ರಶಯನ ಧೂರ್ಜಟಿವಂದ್ಯ
ಜಗನ್ನಾಥವಿಠಲ ಕೃತಾಂಜಲಿಪುಟದಿ ಬೇಡುವೆ - ಲಕ್ಷ್ಮೀ ।। ।।