Wednesday, September 18, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨೧


ಮಾರುತಿ ನಿನ್ನ ನಿರುತಡಿ ಭಜಿಪೆ
ತ್ವರಿತದಿ ಹರಿ ಸರ್ವೋತ್ತಮನೆಂಬೋ
ಸರಸವಿಜ್ಞಾನವ ಸರಿ ಇಲ್ಲದೆ ಇತ್ತು
ಪರಿಪಾಲಿಸು ಎಂದು ಶಿರಸದಿ ನಮಿಪೆ
ಸರಿಯಾರಯ್ಯ ನಿನಗೆ ಸರಸಿಜಾಂಡದೊಳು
ಅರಸಿ ನೋಡಲು ಆರಾರು ಇಲ್ಲವೋ
ಕಾರುಣ್ಯಸಾಗರ ಕರುಣಿಸಿ ನೀ ಎನ್ನ
ಹರಿ ತಾ ಕರುಣಿಪೆನೆಂದು ಅರಿತು ನಿನ್ನಯ ದಿವ್ಯಚರಣ
ಸೇರಿದೆನಯ್ಯ ಸರಿ ಬಂದದ್ದು ಮಾಡೋ
ಹರಿ ಕುಲವರಿಯನೆ ಪರಿಪರಿ ಜನರನ್ನ ಪಾಲಿಸಿ ಎನ್ನನು
ದೂರದಿ ಇಟ್ಟರೆ ದೊರೆತನವೇನಯ್ಯ
ಸಾರುವೆ ಸಾರುವೆ ಸರಸಿಜನಾಭನ ಸುತನೆ
ಆರು ಮೂರೆರೆಡೊ೦ದು ಸಾವಿರ
ಮೂರೆರೆಡು ಶತ ಶ್ವಾಸ ಜಪಗಳನು
ಮೂರು ಜೀವರಲ್ಲಿ ನೀರಜ್ಜಕಲ್ಪ
ಪರಿಯಂತರ ಮಾಡಿ ಅವರವರ ಗತಿಯ
ಮರೆಯದೆ ನೀಡುವೆ ಗಿರಿಶತನುಪಾದ
ಗುರು ಜಗನ್ನಾಥವಿಠಲನ್ನ ಅರಿವಂತೆ ಮಾಡೋ ಧೀರ॥

Sunday, September 15, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨೦


ದುಷ್ಟದೈತ್ಯರು ಬಹಳ ಸಿಟ್ಟಿನಿಂದ ಬಂದು
ಘಟ್ಟಬೆಟ್ಟಗಳಲ್ಲಿ ಶ್ರೇಷ್ಠಸುರನಿಗೆ ಹೊಡೆಯ
ಬೆಟ್ಟಕ್ಕೆ ಬಿಗಿದರೆ ಲೋಷದ ತೆರದಂತೆ
ಮುಷ್ಠಿಯಿಂದಲಿ ಭೀಮ ಪೆಟ್ಟು ಹೊಡೆಯಲಾಗಿ
ನಷ್ಟರಾಗಿ ಖಳರು ದಶದಿಶಿಗೆ ಓಡಿದರು
ಹೃಷ್ಟಮನದಲಿ ಸುರರು ಜಯದುಂದುಭಿಯ ಹೊಡೆಯೆ
ತುಷ್ಟರಾಗಿ ಅವರ ಇಷ್ಟವನು ಸಲಿಸಿ
ಶ್ರೇಷ್ಠ ಗುರು ತಂದೆ ಗೋಪಾಲವಿಠಲನ ಮನ
ಮುಟ್ಟಿ ಭಜಿಸುವ ಪ್ರಾಣನೆ ಸಲಹೊ॥

Thursday, September 12, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೯


ಹರಿಯು ತುಷ್ಟನಾಗಿ ಪರಮೇಷ್ಠಿಗೆ ಪೇಳ್ದ
ಪರಮೇಷ್ಠಿ ಒಲಿದು ಸೂರ್ಯಂಗೆ ಪೇಳ್ದ
ಕರುಣಿಸಿ ಸೂರ್ಯ ಯಾಜ್ಞವಲ್ಕ್ಯರಿಗೆ ಪೇಳ್ದೆನೊ
ಅರಿವುದು ಉದ್ಗೀಥ ಬ್ರಾಹ್ಮಣ ಇದೇ
ಆರು ಈ ವಿದ್ಯೆವನು ಪೆಲಿ ಕೇಳ್ದವರಿಗೆ
ದಾರಿದ್ರ್ಯ ಭವರೋಗ ದುಃಖ ಕಳೆದೂ
ಬಾರಿಬಾರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು
ಧೀರ ಗುರು ತಂದೆ ಗೋಪಾಲವಿಠಲ ದೂತ
ಕಾರುಣ್ಯದಿಂದ ಸಲಹೊ ಪ್ರಾಣ ॥

Monday, September 9, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೮


ಚತುರದೇಹದಿ ವ್ಯಾಪ್ತ ಚತುರಮೋಕ್ಷಪ್ರದ
ಚತುರ ಉಪಾಸಕನೆ ಚತುರಮಣರಹಿತಾ
ಚತುರಾಶ್ರಮೋದ್ಧರನೆ ಚತುರರ್ಧವರ್ಣನೆ
ಚತುರದಶ ಇಳೆವ್ಯಾಪ್ತ ಚತುರಗುಣ ಪೂರ್ಣನಿಧಿ
ಚತುರಯೋಗಿಗಳೊಡೆಯ ಚತುರದೈತ್ಯರ ಬಡವ
ಚತುರ ಗುರು ತಂದೆ ಗೋಪಾಲವಿಠಲ ಪ್ರೀಯ
ಚತುರಮತಿಯಿತ್ತು ಸಲಹೊ ಪ್ರಾಣ॥

Tuesday, September 3, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೭




ಹರಿಗೆ ಅನ್ನವು ಪ್ರಾಣ ಭಗವತ್ಕರ್ಮದಲಿ
ಹರಿಗೆ ಅನ್ನ ಅಪಾನ ಅನ್ಯಕರ್ಮ ತ್ಯಾಗದಲಿ
ಹರಿಗೆ ಅನ್ನವು ವ್ಯಾನ ನಿರೋಧ ನಿಧಿದ್ಯಾಸನದಲಿ
ಹರಿಗೆ ಅನ್ನವು ಉದಾನ ಯೋಗಧಾರಣದಲಿ
ಹರಿಗೆ ಅನ್ನ ಸಮಾನ ವಾಗೀಂದ್ರಯನಿಯಾಮದಲಿ
ಹರಿಗೆ ಈ ಪರಿ ಅನ್ನತ್ವ ಗುರು ತಂದೆ ಗೋಪಾಲವಿಠಲ
ಪ್ರೀತದೂತ ಪ್ರಾಣನ ಲೀಲಾ॥