Wednesday, January 23, 2013

ಶ್ರೀ ಹರಿಕಥಾಮೃತಸಾರ - 23

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಬೃಹತ್ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಹರಿ ಸಿರಿ ವಿರಂಚೀರ ಮುಖ ನಿರ್ಜನರ ಆವೇಶಾವತಾರಗಳ

ಸ್ಮರಿಸು ಗುಣಗಳ ಸರ್ವ ಕಾಲದಿ ಭಕ್ತಿ ಪೂರ್ವಕದಿ//


ಮೀನ ಕೂರ್ಮ ಕ್ರೋಡ ನರಹರಿ ಮಾಣವಕ ಭೃಗುರಾಮ ದಶರಥ ಸೂನು

ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ

ಶ್ರೀನಿವಾಸ ವ್ಯಾಸ ಋಷಭ ಹಯಾನನಾ ನಾರಾಯಣೀ ಹಂಸ ಅನಿರುದ್ಧ

ತ್ರಿವಿಕ್ರಮ ಶ್ರೀಧರ ಹೃಷೀಕೇಶ//1//


ಹರಿಯು ನಾರಾಯಣನು ಕೃಷ್ಣ ಅಸುರ ಕುಲಾಂತಕ ಸೂರ್ಯ ಸಮಪ್ರಭ

ಕರೆಸುವನು ನಿರ್ದುಷ್ಟ ಸುಖ ಪರಿಪೂರ್ಣ ತಾನೆಂದು

ಸರ್ವದೇವೋತ್ತಮನು ಸರ್ವಗ ಪರಮ ಪುರುಷ ಪುರಾತನ

ಜರಾಮರಣ ವರ್ಜಿತ ವಾಸುದೇವಾದಿ ಅಮಿತ ರೂಪಾತ್ಮ//2//


ಈ ನಳಿನಭವ ಜನನಿ ಲಕ್ಷ್ಮೀ ಜ್ಞಾನ ಬಲ ಭಕ್ತಾದಿ ಗುಣ ಸಂಪೂರ್ಣಳು ಎನಿಪಳು

ಸರ್ವ ಕಾಲದಿ ಹರಿ ಕೃಪಾ ಬಲದಿ

ಹೀನಳು ಎನಿಪಳು ಅನಂತ ಗುಣದಿ ಪುರಾಣ ಪುರುಷಗೆ

ಪ್ರಕೃತಿಗಿನ್ನು ಸಮಾನರು ಎನಿಸುವರಿಲ್ಲ ಮುಕ್ತಾಮುಕ್ತ ಸುರರೊಳಗೆ//3//


ಗುಣಗಳ ತ್ರಯಮಾನಿ ಶ್ರೀ ಕುಂಭಿಣಿ ಮಹಾ ದುರ್ಗ ಅಂಭ್ರಣೀ ರುಗ್ಮಿಣಿಯು

ಸತ್ಯಾಶಾಂತಿಕೃತಿ ಜಯ ಮಾಯ ಮಹಲಕುಮಿ ಜನಕಜಾಕಮಲ ಆಲಯಾ

ದಕ್ಷಿಣೆ ಸುಪದ್ಮಾ ತ್ರಿಲೋಕ ಈಶ್ವರಿ

ಅಣು ಮಹತ್ತಿನೊಳಿದ್ದು ಉಪಮಾರಹಿತಳು ಎನಿಸುವಳು//4//


ಘೋಟಕಾಸ್ಯನ ಮಡದಿಗಿಂತಲಿ ಹಾಟಕ ಉದರಪವನರು ಈರ್ವರು

ಕೋಟಿ ಗುಣದಿಂದ ಅಧಮರು ಎನಿಪರು ಆವಕಾಲದಲಿ

ಖೇಟಪತಿ ಶೇಷ ಅಮರೇಂದ್ರರ ಪಾಟಿಮಾಡದೆ

ಶ್ರೀಶನ ಕೃಪಾ ನೋಟದಿಂದಲಿ ಸರ್ವರೊಳು ವ್ಯಾಪಾರ ಮಾಡುವರು//5//


ಪುರುಷ ಬ್ರಹ್ಮ ವಿರಿಂಚಿ ಮಹಾನ್ ಮರುತ ಮುಖ್ಯಪ್ರಾಣ ಧೃತಿ ಸ್ಮೃತಿ

ಗುರುವರ ಮಹಾಧ್ಯಾತ ಬಲ ವಿಜ್ಞಾತ ವಿಖ್ಯಾತ ಗರಳಭುಗ್

ಭವರೋಗ ಭೇಷಜ ಸ್ವರವರಣ ವೇದಸ್ಥ ಜೀವೇಶ್ವರ

ವಿಭೀಷಣ ವಿಶ್ವ ಚೇಷ್ಟಕ ವೀತಭಯ ಭೀಮ//6//


ಅನಿಲಸ್ಥಿತಿ ವೈರಾಗ್ಯ ನಿಧಿ ರೋಚನ ವಿಮುಕ್ತಿಗಾನಂದ ದಶಮತಿ

ಅನಿಮಿಶೇಷ ಅನಿದ್ರ ಶುಚಿ ಸತ್ವಾತ್ಮಕ ಶರೀರ

ಅಣು ಮಹದ್ರೂಪಾತ್ಮಕ ಅಮೃತ ಹನುಮದಾದಿ ಅವತಾರ

ಪದ್ಮಾಸನ ಪದವಿ ಸಂಪ್ರಾಪ್ತ ಪರಿಸರಾಖಣ ಆಶ್ಮಸಮ//7//


ಮಾತರಿಶ್ವ ಬ್ರಹ್ಮರು ಜಗನ್ಮಾತೆಗೆ ಅಧಮ ಅಧೀನರೆನಿಪರು

ಶ್ರೀ ತರುಣಿ ವಲ್ಲಭನು ಈರ್ವರೊಳು ಆವ ಕಾಲದಲಿ

ನೀತ ಭಕ್ತಿ ಜ್ಞಾನ ಬಲ ರೂಪ ಅತಿಶಯದಿಂದಿದ್ದು

ಚೇತನಾಚೇತನಗಳೊಳು ವ್ಯಾಪ್ತರೆನಿಪರು ತತ್ತದಾಹ್ವಯದಿ//8//


ಸರಸ್ವತೀ ವೇದ ಆತ್ಮಿಕಾ ಭುಜಿ ನರಹರೀ ಗುರುಭಕ್ತಿ ಬ್ರಾಹ್ಮೀ

ಪರಮ ಸುಖ ಬಲ ಪೂರ್ಣೆ ಶ್ರದ್ಧಾ ಪ್ರೀತಿ ಗಾಯತ್ರೀ

ಗರುಡ ಶೇಷರ ಜನನಿ ಶ್ರೀ ಸಂಕರುಷಣನ ಜಯ ತನುಜೆ

ವಾಣೀ ಕರಣ ನಿಯಾಮಕೆ ಚತುರ್ದಶ ಭುವನ ಸನ್ಮಾನ್ಯೇ//9//


ಕಾಳಿಕಾಶಿಜೆ ವಿಪ್ರಜೆ ಪಾಂಚಾಲಿ ಶಿವಕನ್ಯ ಇಂದ್ರಸೇನಾ

ಕಾಲಮಾನೀ ಚಂದ್ರದ್ಯುಸಭಾ ನಾಮ ಭಾರತಿಗೆ

ಘಾಳಿಬ್ರಹ್ಮರ ಯುವತಿಯರು ಏಳೇಳು ಐವತ್ತೊಂದು ಗುಣದಿಂ ಕೀಳರೆನಿಪರು

ತಮ್ಮ ಪತಿಗಳಿಂದಲಿ ಆವಾಗ//10//


ಹರಿ ಸಮೀರ ಆವೇಶ ನರ ಸಂಕರುಷಣ ಆವೇಶ ಯುತ ಲಕ್ಷ್ಮಣ

ಪರಮ ಪುರುಷನ ಶುಕ್ಲ ಕೇಶ ಆವೇಶ ಬಲರಾಮ

ಹರ ಸದಾಶಿವ ತಪಾಹಂಕೃತು ಮೃತ ಯುಕ್ತ ಶುಕ ಊರ್ಧ್ವಾಪಟು

ತತ್ಪುರುಷ ಜೈಗೀಶೌರ್ವ ದ್ರೌಣೀ ವ್ಯಾಧ ದೂರ್ವಾಸ//11//


ಗರುಡ ಶೇಷ ಶಶಿ ಅಂಕದಳ ಶೇಖರರು ತಮ್ಮೊಳು ಸಮರು

ಭಾರತಿ ಸರಸಿಜಾಸನ ಪತ್ನಿಗೆ ಅಧಮರು ನೂರು ಗುಣದಿಂದ

ಹರಿ ಮಡದಿ ಜಾಂಬವತಿಯೊಳು ಶ್ರೀ ತರುಣಿಯ ಆವೇಶವಿಹುದು ಎಂದಿಗೂ

ಕೊರತೆಯೆನಿಪರು ಗರುಡ ಶೇಷರಿಗೆ ಐವರು ಐದುಗುಣ//12//


ನೀಲಭದ್ರಾ ಮಿತ್ರವಿಂದಾ ಮೇಲೆನಿಪ ಕಾಳಿಂದಿ ಲಕ್ಷ್ಮಣ

ಬಾಲೆಯರಿಗಿಂದ ಅಧಮ ವಾರುಣಿ ಸೌಪರಣಿ ಗಿರಿಜಾ

ಶ್ರೀ ಲಕುಮಿಯುತ ರೇವತೀ ಶ್ರೀ ಮೂಲ ರೂಪದಿ ಪೇಯಳು ಎನಿಪಳು

ಶೈಲಜಾದ್ಯರು ದಶಗುಣ ಅಧಮ ತಮ್ಮ ಪತಿಗಳಿಗೆ//13//


ನರಹರಿ ಈರ ಆವೇಶ ಸಂಯುತ ನರಪುರಂದರಗಾಧಿ ಕುಶ

ಮಂದರದ್ಯುಮ್ನ ವಿಕುಕ್ಷಿ ವಾಲೀ ಇಂದ್ರನ ಅವತಾರ

ಭರತ ಬ್ರಹ್ಮಾವಿಷ್ಟ ಸಾಂಬ ಸುದರ್ಶನ ಪ್ರದ್ಯುಮ್ನ

ಸನಕಾದ್ಯರೊಳಗಿಪ್ಪ ಸನತ್ಕುಮಾರನು ಷನ್ಮುಕನು ಕಾಮ//14//


ಈರೈದು ಗುಣ ಕಡಿಮೆ ಪಾರ್ವತಿ ವಾರುಣೀಯರಿಗೆ ಇಂದ್ರ ಕಾಮ

ಶರೀರಮಾನಿ ಪ್ರಾಣ ದಶ ಗುಣ ಅವರ ಶಕ್ರನಿಗೆ

ಮಾರಜಾ ರತಿ ದಕ್ಷ ಗುರುವೃತ್ತ ಅರಿ ಜಾಯಾ ಶಚಿ ಸ್ವಯಂಭುವರು

ಆರು ಜನ ಸಮ ಪ್ರಾಣಗೆ ಅವರರು ಹತ್ತು ಗುಣದಿಂದ//15//


ಕಾಮ ಪುತ್ರ ಅನಿರುದ್ಧ ಸೀತಾರಾಮನ ಅನುಜ ಶತ್ರುಹನ ಬಲರಾಮನನುಜ

ಪೌತ್ರ ಅನಿರುದ್ಧನೊಳಗೆ ಅನಿರುದ್ಧ

ಕಾಮ ಭಾರ್ಯಾ ರುಗ್ಮವತಿ ಸನ್ನ್ನಾಮ ಲಕ್ಷ್ಮಣಳು ಎನಿಸುವಳು

ಪೌಲೋಮಿ ಚಿತ್ರಾಂಗದೆಯು ತಾರಾ ಎರಡು ಪೆಸರುಗಳು//16//


ತಾರ ನಾಮಕ ತ್ರೈತೆಯೊಳು ಸೀತಾ ರಮಣನ ಆರಾಧಿಸಿದನು

ಸಮೀರಯುಕ್ತ ಉದ್ಧವನು ಕೃಷ್ಣಗೆ ಪ್ರೀಯನೆನಿಸಿದನು

ವಾರಿಜಾಸನ ಯುಕ್ತ ದ್ರೋಣನು ಮೂರಿಳೆಯೊಳು ಬೃಹಸ್ಪತಿಗೆ ಅವತಾರವೆಂಬರು

ಮಹಾಭಾರತ ತಾತ್ಪರ್ಯದೊಳಗೆ//17//


ಮನು ಮುಖಾದ್ಯರಿಗಿಂತ ಪ್ರವಹಾ ಗುಣದಿ ಪಂಚಕ ನೀಚನೆನಿಸುವ

ಿನ ಶಶಾಂಕರು ಧರ್ಮ ಮಾನವಿ ಎರಡು ಗುಣದಿಂದ ಕನಿಯರೆನಿಪರು ಪ್ರವಹಗಿಂತಲಿ

ದಿನಪ ಶಶಿ ಯಮ ಧರ್ಮ ರೂಪಗಳು

ಅನುದಿನದಿ ಚಿಂತಿಪುದು ಸಂತರು ಸರ್ವ ಕಾಲದಲಿ//18//


ಮರುತನ ಆವೇಶಯುತ ಧರ್ಮಜ ಕರಡಿ ವಿದುರನು ಸತ್ಯಜಿತು

ಈರೆರೆಡು ಧರ್ಮನ ರೂಪ

ಬ್ರಹ್ಮಾವಿಷ್ಟ ಸುಗ್ರೀವ ಹರಿಯ ರೂಪಾವಿಷ್ಟ ಕರ್ಣನು ತರಣಿಗೆ ಎರಡು ಅವತಾರ

ಚಂದ್ರಮ ಸುರಪನ ಆವೇಶಯುತನು ಅಂಗದನು ಎನಿಸಿಕೊಳುತಿಪ್ಪ//19//


ತರಣಿಗಿಂತಲಿ ಪಾದ ಪಾದರೆ ವರುಣ ನೀಚನು

ಮಹಭಿಷಕು ದುರ್ದರ ಸುಶೇಷಣನು ಶಂತನೂ ನಾಲ್ವರು ವರುಣ ರೂಪ

ಸುರಮುನೀ ನಾರದನು ಕಿಂಚಿತ್ ಕೊರತೆ ವರುಣಗೆ

ಅಗ್ನಿ ಭೃಗು ಅಜ ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮ//20//


ನೀಲ ದುಷ್ಟದ್ಯುಮ್ನ ಲವ ಈ ಲೇಲಿಹಾನನ ರೂಪಗಳು

ಭೃಗು ಕಾಲಿಲಿ ಒದ್ದದರಿಂದ ಹರಿಯ ವ್ಯಾಧನೆನಿಸಿದನು

ಏಳು ಋಷಿಗಳಿಗೆ ಉತ್ತಮರು ಮುನಿ ಮೌಳಿ ನಾರದಗೆ ಅಧಮ ಮೂವರು

ಘಾಳಿಯುತ ಪ್ರಹ್ಲಾದ ಬಾಹ್ಲಿಕರಾಯನು ಎನಿಸಿದನು//21//


ಜನಪ ಕರ್ಮಜರೊಳಗೆ ನಾರದ ಮುನಿ ಅನುಗ್ರಹ ಬಲದಿ

ಪ್ರಹ್ಲಾದನಳ ಭೃಗು ದಾಕ್ಷಾಯಣಿಯರಿಗೆ ಸಮನು ಎನಿಸಿಕೊಂಬ

ಮನು ವಿವಸ್ವಾನ್ ಗಾಧಿಜ ಈರ್ವರು ಅನಳಗಿಂತಲಿ ಕಿಂಚಿತು ಅಧಮ

ಎಣೆಯೆನಿಸುವರು ಸಪ್ತರ್ಷಿಗಳಿಗೆ ಎಲ್ಲ ಕಾಲದಲಿ//22//


ಕಮಲಸಂಭವ ಭವರೆನಿಪ ಸಂಯಮಿ ಮರೀಚೀ ಅತ್ರಿ ಅಂಗಿರಸುಮತಿ

ಪುಲಹಾಕ್ರುತು ವಸಿಷ್ಠ ಪುಲಸ್ತ್ಯ ಮುನಿ ಸ್ವಾಹಾ ರಮಣಗೆ ಅಧಮರು

ಮಿತ್ರನಾಮಕ ದ್ಯುಮಣಿ ರಾಹುಯುಕ್ತ ಭೀಷ್ಮಕ ಯಮಳರೂಪನು

ತಾರನಾಮಕನು ಎನಿಸಿ ತ್ರೈತೆಯೊಳು//23//


ನಿರ್ಋತಿಗೆ ಎರಡವತಾರ ದುರ್ಮುಖ ಹರಯುತ ಘಟೋತ್ಕಚನು

ಪ್ರಾವಹಿ ಗುರು ಮಡದಿ ತಾರಾ ಸಮರು ಪರ್ಜನ್ಯಗೆ ಉತ್ತಮರು

ಕರಿಗೊರಳ ಸಂಯುಕ್ತ ಭಗದತ್ತರಸು ಕತ್ಥನ ಧನಪ ರೂಪಗಳೆರೆಡು

ವಿಘ್ನಪ ಚಾರುದೇಷ್ಣನು ಅಶ್ವಿನಿಗಳು ಸಮ//24//


ಡೋನಾ ಧ್ರುವ ದೋಷಾರ್ಕ ಅಗ್ನಿ ಪ್ರಾಣ ದ್ಯುವಿಭಾವಸುಗಳು ಎಂಟು

ಕೃಶಾನು ಶ್ರೇಷ್ಠ ದ್ಯುನಾಮ ವಸು ಭೀಷ್ಮಾರ್ಯ ಬ್ರಹ್ಮ ಯುತ

ದ್ರೋಣ ನಾಮಕ ನಂದ ಗೋಪ ಪ್ರಧಾನ ಅಗ್ನಿಯನು ಉಳಿದು ಏಳು ಸಮಾನರೆನಿಪರು

ತಮ್ಮೊಳಗೆ ಜ್ಞಾನಾದಿ ಗುಣದಿಂದ//25//


ಭೀಮರೈವತ ಓಜ ಅಜೈಕಪದ ಆ ಮಹನ್ಬಹು ರೂಪಕನು ಭವ

ವಾಮ ಉಗ್ರ ವೃಶಾಕಪೀ ಅಹಿರ್ ಬುಧ್ನಿಯೆನಿಸುತಿಹ ಈ ಮಹಾತ್ಮರ ಮಧ್ಯದಲಿ

ಉಮಾ ಮನೋಹರೋತ್ತಮನು

ದಶನಾಮಕರು ಸಮರೆನಿಸಿಕೊಂಬರು ತಮ್ಮೊಳು ಎಂದೆಂದು//26//


ಭೂರಿ ಅಜೈಕಪ ಪದಾಹ್ವ ಅಹಿರ್ ಬುಧ್ನಿ ಈರೈದು ರುದ್ರಗಣ ಸಂಯುತ

ಭೂರಿಶ್ರವನು ಎಂದೆನಿಪ ಶಲ ವಿರುಪಾಕ್ಷ ನಾಮಕನು

ಸೂರಿ ಕೃಪ ವಿಷ್ಕಂಭ ಸಹದೇವಾ ರಣಾಗ್ರಣಿ

ಸೋಮದತ್ತನು ತಾ ರಚಿಸಿದ ದ್ವಿರೂಪ ಧರೆಯೊಳು ಪತ್ರತಾಪಕನು//27//


ದೇವ ಶಕ್ರ ಉರುಕ್ರಮನು ಮಿತ್ರಾ ವರುಣ ಪರ್ಜನ್ಯ ಭಗ

ಪೂಷಾ ವಿವಸ್ವಾನ್ ಸವಿತೃ ಧಾತಾ ಆರ್ಯಮ ತ್ವಷ್ಟ್ರು

ದೇವಕೀ ಸುತನಲ್ಲಿ ಸವಿತೃ ವಿಭಾವಸೂ ಸುತ ಭಾನುಯೆನಿಸುವ

ಜ್ಯಾವನಪಯುತ ವೀರಸೇನನು ತ್ವಷ್ಟ್ರು ನಾಮಕನು//28//


ಎರಡಧಿಕ ದಶ ಸೂರ್ಯರೊಳು ಮೂರೆರೆಡು ಜನರು ಉತ್ತಮ

ವಿವಸ್ವಾನ್ ವರುಣ ಶಕ್ರ ಉರುಕ್ರಮನು ಪರ್ಜನ್ಯ ಮಿತ್ರಾಖ್ಯ

ಮರುತನ ಆವೇಶಯುತ ಪಾಂಡೂವರ ಪರಾವಹನು ಎಂದೆನಿಪ

ಕೇಸರಿ ಮೃಗಪ ಸಂಪಾತಿ ಶ್ವೇತತ್ರಯರು ಮರುದಂಶ//29//


ಪ್ರತಿಭವಾತನು ಚೇಕಿತನು ವಿಪ್ರುಥುವು ಎನಿಸುವನು ಸೌಮ್ಯ ಮಾರುತ

ವಿತತ ಸರ್ವೋತ್ತುಂಗ ಗಜನಾಮಕರು ಪ್ರಾಣ ಅಂಶ

ದ್ವಿತೀಯ ಪಾನ ಗವಾಕ್ಷ ಗವಯ ತೃತೀಯ ವ್ಯಾನ

ಉದಾನ ವೃಷಪರ್ವ ಅತುಳ ಶರ್ವತ್ರಾತ ಗಂಧ ಸುಮಾದನರು ಸಮಾನ//30//


ಐವರೊಳಗೆ ಈ ಕುಂತಿಭೋಜನು ಆವಿ ನಾಮಕ ನಾಗಕೃಕಲನು

ದೇವದತ್ತ ಧನಂಜಯರು ಅವತಾರ ವರ್ಜಿತರು

ಆವಹೋದ್ವಹ ವಿವಹ ಸಂವಹ ಪ್ರಾವಹೀ ಪತಿ ಮರುತ ಪ್ರವಹನಿಗೆ

ಆವಕಾಲಕು ಕಿಂಚಿತು ಅಧಮರು ಮರುದ್ಗಣರೆಲ್ಲ//31//


ಪ್ರಾಣಾಪಾನ ವ್ಯಾನೋದಾನ ಸಮಾನರ ಐವರನು ಉಳಿದು ಮರುತರು ಊನರೆನಿಪರು

ಹತ್ತು ವಿಶ್ವೇದೇವರು ಇವರಿಂದ ಸೂನುಗಳುಯೆನಿಸುವನು

ಐವರ ಮಾನಿನೀ ದ್ರೌಪತಿಗೆ

ಕೆಲವರು ಕ್ಷೋಣಿಯೊಳು ಕೈಕೇಯರು ಎನಿಪರು ಎಲ್ಲ ಕಾಲದಲಿ//32//


ಪ್ರತಿವಿಂದ್ಯ ಶ್ರುತ ಸೋಮಶ್ರುತ ಕೀರ್ತಿ ಶತಾನಿಕ ಶ್ರುತಕರ್ಮ

ದ್ರೌಪತಿ ಕುವರರು ಇವರೊಳಗೆ ಅಭಿತಾಮ್ರ ಪ್ರಮುಖ ಚಿತ್ರರಥನು ಗೋಪ ಕಿಶೋರ

ಬಲರೆಂಬ ಅತುಲರು ಐ ಗಂಧರ್ವರಿಂದಲಿ ಯುತರು

ಧರ್ಮ ವೃಕೋದರ ಆದಿಜರು ಎಂದು ಕರೆಸುವರು//33//


ವಿವಿದಮೈಂದರು ನಕುಲ ಸಹದೇವ ವಿಭು ತ್ರಿಶಿಖ ಅಶ್ವಿನಿಗಳು ಇವರೊಳು

ದಿವಿಪನ ಆವೇಶವು ಇಹುದು ಎಂದಿಗು

ದ್ಯಾವಾ ಪೃಥ್ವಿ ಋಭು ಪವನ ಸುತ ವಿಶ್ವಕ್ಸೇನನು ಉಮಾ ಕುವರ ವಿಘ್ನಪ

ಧನಪ ಮೊದಲಾದವರು ಮಿತ್ರಗೆ ಕಿಂಚಿತು ಅಧಮರು ಎನಿಸಿಕೊಳುತಿಹರು//34//


ಪಾವಕಾಗ್ನಿ ಕುಮಾರನು ಎನಿಸುವ ಚಾವನೋಚಿಥ್ಯ ಮುನಿ

ಚಾಕ್ಶುಷ ರೈವತ ಸ್ವಾವರೋಚಿಷ ಉತ್ತಮ ಬ್ರಹ್ಮ ರುದ್ರ ಇಂದ್ರ

ದೇವಧರ್ಮನು ದಕ್ಷನಾಮಕ ಸಾವರ್ಣಿ ಶಶಿಬಿಂದು ಪ್ರುಥು

ಪ್ರೀಯವ್ರತನು ಮಾಂಧಾತ ಗಯನು ಕಕುಸ್ಥ ದೌಷ್ಯಂತಿ//35//


ಭರತ ಋಷಭಜ ಹರಿಣಿಜ ದ್ವಿಜ ಭರತ ಮೊದಲಾದ ಅಖಿಳರಾಯರೊಳಿರುತಿಹುದು

ಶ್ರೀ ವಿಷ್ಣು ಪ್ರಾಣಾವೇಶ ಪ್ರತಿದಿನದಿ

ವರ ದಿವಸ್ಪತಿ ಶಂಭು: ಅದ್ಭುತ ಕರೆಸುವನು ಬಲಿ ವಿಧೃತ ಧೃತ

ಶುಚಿ ನೆರೆಖಲೂ ಕೃತಧಾಮ ಮೊದಲಾದ ಅಷ್ಟ ಗಂಧರ್ವ//36//


ಅರಸುಗಳು ಕರ್ಮಜರು ವೈಶ್ವಾನರಗೆ ಅಧಮ ಶತಗುಣದಿ

ವಿಘ್ನೇಶ್ವರಗೆ ಕಿಂಚಿದ್ ಗುಣ ಕಡಿಮೆ ಬಲಿ ಮುಖ್ಯ ಪಾವಕರು

ಶರಭ ಪರ್ಜನ್ಯಾಖ್ಯ ಮೇಘಪ ತರಣಿ ಭಾರ್ಯಾ ಸಂಜ್ಞೆ

ಶಾರ್ವರೀಕರನ ಪತ್ನೀ ರೋಹಿಣೀ ಶಾಮಲಾ ದೇವಕಿಯು//37//


ಅರಸಿಯೆನಿಪಳು ಧರ್ಮರಾಜಗೆ ವರುಣ ಭಾರ್ಯ ಉಷಾದಿ ಷಟ್ಕರು

ಕೊರತೆಯೆನಿಪರು ಪಾವಕಾದ್ಯರಿಗೆ ಎರಡು ಗುಣದಿಂದ

ಎರಡು ಮೂರ್ಜನರಿಂದ ಅಧಮ ಸ್ವಹ ಕರೆಸುವಳು

ಉಷಾದೇವಿ ವೈಶ್ವಾನರನ ಮಡದಿಗೆ ದಶ ಗುಣ ಅವರಳು ಅಶ್ವಿನೀ ಭಾರ್ಯಾ//38//


ಸುದರ್ಶನ ಶಕ್ರಾದಿ ಸುರಯುತ ಬುಧನು ತಾನು ಅಭಿಮನ್ಯುವು ಎನಿಸುವ

ಬುಧನಿಗಿಂತ ಅಶ್ವಿನೀ ಭಾರ್ಯ ಶಲ್ಯ ಮಾಗಧರ ಉದರಜ

ಉಷಾ ದೇವಿಗಿಂತಲಿ ಅಧಮನೆನಿಪ ಶನೈಶ್ಚರನು

ಶನಿಗೆ ಅಧಮ ಪುಷ್ಕರ ಕರ್ಮಪನೆನಿಸುವನು ಬುಧರಿಂದ//39//


ಉದ್ವಹಾ ಮರುತಾನ್ವಿತ ವಿರಾಧ ದ್ವಿತೀಯ ಸಂಜಯನು ತುಂಬುರ

ವಿದ್ವದೋತ್ತಮ ಜನ್ಮೇಜಯ ತ್ವಷ್ಟ್ರುಯುತ ಚಿತ್ರರಥ

ಸದ್ವಿನುತ ದಮ ಘೋಷಕ ಕಬಂಧದ್ವಯರು ಗಂಧರ್ವದನು

ಮನುಪದ್ಮಸಂಭವಯುತ ಅಕ್ರೂರ ಕಿಶೋರನೆನಿಸುವನು//40//


ವಾಯುಯುತ ಧೃತರಾಷ್ಟ್ರ ದಿವಿಜರ ಗಾಯಕನು ಧೃತರಾಷ್ಟ್ರ

ನಕ್ರನುರಾಯ ದ್ರುಪದನು ವಹ ವಿಶಿಷ್ಟ ಹೂಹು ಗಂಧರ್ವ

ನಾಯಕ ವಿರಾಟ್ ವಿವಹ ಹಾಹಾಜ್ಞೆಯ

ವಿದ್ಯಾಧರನೆ ಅಜಗರ ತಾ ಯೆನಿಸುವನು ಉಗ್ರಸೇನನೆ ಉಗ್ರಸೇನಾಖ್ಯ//41//


ಬಿಸಜ ಸಂಭವ ಯುಕ್ತ ವಿಶ್ವಾವಸು ಯುಧಾಮನ್ಯು

ಉತ್ತ ಮೌಜಸ ಬಿಸಜ ಮಿತ್ರಾರ್ಯಮ ಯುತ ಪರಾವಸುಯೆನಿಸುತಿಪ್ಪ

ಅಸಮ ಮಿತ್ರಾನ್ವಿತನು ಸತ್ಯಜಿತು ವಸುಧಿಯೊಳು ಚಿತ್ರಸೇನ

ಅಮೃತಾಂಧಸರು ಗಾಯಕರೆಂದು ಕರೆಸುವರು ಆವ ಕಾಲದಲಿ//42//


ಉಳಿದ ಗಂಧರ್ವರುಗಳು ಎಲ್ಲರು ಬಲಿ ಮೊದಲು ಗೋಪಾಲರೆನಿಪರು

ಇಳೆಯೊಳಗೆ ಸೈರೆಂಧ್ರಿ ಪಿಂಗಳೆ ಅಪ್ಸರ ಸ್ತ್ರೀಯಳು

ತಿಲೋತ್ತಮೆಯು ಪೂರ್ವದಲಿ ನಕುಲನ ಲಲನೆ ಪಾರ್ವತಿಯೆನಿಸುವಳು

ಗೋಕುಲದ ಗೋಪಿಯರು ಎಲ್ಲ ಶಬರೀ ಮುಖ್ಯ ಅಪ್ಸರರು//43//


ಕೃಷ್ಣವರ್ತ್ಮನ ಸುತರೊಳಗೆ ಶತದ್ವಾಷ್ಟ ಸಾವಿರ ಸ್ತ್ರೀಯರಲ್ಲಿ

ಪ್ರವಿಷ್ಟಳು ಆಗಿ ರಮಾಂಬ ತತ್ತನ್ನಾಮ ರೂಪದಲಿ ಕೃಷ್ಣ ಮಹಿಷಿಯರೊಳಗಿಪ್ಪಳು

ತ್ವಷ್ಟ್ರು ಪುತ್ರಿ ಕಶೇರು ಇವರೊಳು ಶ್ರೇಷ್ಠಳು ಎನಿಪಳು

ಉಳಿದ ಋಷಿ ಗಣ ಗೋಪಿಕಾ ಸಮರು//44//


ಸೂನುಗಳೆನಿಸುವರು ದೇವ ಕೃಷಾನುವಿಗೆ ಕ್ರಥು ಸಿಂಧು ಶುಚಿ ಪವಮಾನ

ಕೌಶಿಕರೈದು ತುಂಬುರು ಊರ್ವಶೀ ಶತರು ಮೇನಕೀ ಋಷಿ ರಾಯರುಗಳು

ಆಜಾನು ಸುರರಿಗೆ ಸಮರೆನಿಪರು

ಸುರಾಣಕರು ಅನಾಖ್ಯಾತ ದಿವಿಜರ ಜನಕರು ಎನಿಸುವರು//45//


ಪಾವಕರಿಗಿಂತ ಅಧಮರು ಎನಿಸುವ ದೇವ ಕುಲಜ ಆನಾಖ್ಯ ಸುರಗಣ ಕೋವಿದರು

ನಾನಾ ಸುವಿದ್ಯದಿ ಸೋತ್ತಮರ ನಿತ್ಯ ಸೇವಿಪರು ಸದ್ಭಕ್ತಿ ಪೂರ್ವಕ

ಸ್ವವರರಿಗೆ ಉಪದೇಶಿಸುವರು

ನಿರಾವಲಂಬನ ವಿಮಲ ಗುಣಗಳ ಪ್ರತಿ ದಿವಸದಲ್ಲಿ//46//


ಸುರರೊಳಗೆ ವರ್ಣಾಶ್ರಮಗಳೆಂಬ ಎರಡು ಧರ್ಮಗಳಿಲ್ಲ

ತಮ್ಮೊಳು ನಿರುಪಮರೆಂದೆನಿಸಿ ಕೊಂಬರು ತಾರತಮ್ಯದಲಿ

ಗುರು ಸುಶಿಷ್ಯತ್ವವು ಈ ಋಷಿಗಳೊಳಗೆ ಇರುತಿಹುದು

ಆಜಾನ ಸುರರಿಗೆ ಚಿರ ಪಿತೃ ಶತಾಧಮರು ಎನಿಸುವರು ಏಳು ಜನರುಳಿದು//47//


ಚಿರ ಪಿತ್ರುಗಳಿಂದ ಅಧಮ ಗಂಧರ್ವರುಗಳು ಎನಿಪರು

ದೇವನಾಮಕ ಕೊರತೆಯೆನಿಸುವ ಚಕ್ರವರ್ತಿಗಳಿಂದ ಗಂಧರ್ವ

ನರರೊಳು ಉತ್ತಮರೆನಿಸುವರು ಹನ್ನೆರೆಡು ಎಂಭತ್ತೆಂಟು ಗುಣದಲಿ

ಹಿರಿಯರೆನಿಪರು ಕ್ರಮದಿ ದೇವಾವೇಶ ಬಲದಿಂದ//48//


ದೇವತೆಗಳಿಂ ಪ್ರೇಷ್ಯರೆನಿಪರು ದೇವ ಗಂಧರ್ವರುಗಳು

ಇವರಿಂದ ಆವ ಕಾಲಕು ಶಿಕ್ಷಿತರು ನರನಾಮ ಗಂಧರ್ವ

ಕೇವಲ ಅತಿ ಸದ್ಭಕ್ತಿಪೂರ್ವಕ ಯಾವದಿಂದ್ರಿಯಗಳ ನಿಯಾಮಕ

ಶ್ರೀವರನೆಂದರಿದು ಭಜಿಪರು ಮಾನುಷೋತ್ತಮರು//49//


ಬಾದರಾಯಣ ಭಾಗವತ ಮೊದಲಾದ ಶಾಸ್ತ್ರಗಳಲಿ ಬಹುವಿಧ

ದ್ವಾದಶ ದಶ ಸುಪಂಚ ವಿಂಶತಿ ಶತ ಸಹಸ್ರಯುತ ಭೇದಗಳ ಪೇಳಿದನು

ಸೋತ್ತಮ ಆದಿತೇಯ ಆವೇಶ ಬಲದಿ ವಿರೋಧ ಚಿಂತಿಸಬಾರದು

ಇದು ಸಾಧು ಜನ ಸಮ್ಮತವು//50//


ಇವರು ಮುಕ್ತಿ ಯೋಗ್ಯರೆಂಬರು ಶ್ರವಣ ಮನನಾದಿಗಳ

ಪರಮೋತ್ಸವದಿ ಮಾಡುತ ಕೇಳಿ ನಲಿಯುತ

ಧರ್ಮ ಕಾಮಾರ್ಥ ತ್ರಿವಿಧ ಫಲವ ಅಪೇಕ್ಷಿಸದೆ ಶ್ರೀಪವನ ಮುಖ ದೇವಾಂತರಾತ್ಮಕ

ಪ್ರವರತಮ ಶಿಷ್ಟೇಷ್ಟ ದಾಯಕನೆಂದು ಸ್ಮರಿಸುವರು//51//


ನಿತ್ಯ ಸಂಸಾರಿಗಳು ಗುಣ ದೋಷಾತ್ಮಕರು

ಬ್ರಹ್ಮಾದಿ ಜೀವರ ಭೃತ್ಯರೆಂಬರು ರಾಜನ ಉಪಾದಿಯಲಿ ಹರಿಯೆಂಬ

ಕೃತ್ತಿವಾಸನು ಬ್ರಹ್ಮ ಶ್ರೀ ವಿಷ್ಣುತ್ರಯರು ಸಮ

ದುಃಖ ಸುಖೋತ್ಪತ್ತಿ ಮೃತಿ ಭವ ಪೇಳುವರು ಅವತಾರಗಳಿಗೆ ಸದಾ//52//


ತಾರತಮ್ಯ ಜ್ಞಾನವಿಲ್ಲದೆ ಸೂರಿಗಳ ನಿಂದಿಸುತ ನಿತ್ಯದಿ

ತೋರುತಿಪ್ಪರು ಸುಜನರ ಉಪಾದಿಯಲಿ ನರರೊಳಗೆ

ಕ್ರೂರ ಕರ್ಮಾಸಕ್ತರಾಗಿ ಶರೀರ ಪೋಷಣೆ ಗೋಸುಗದಿ

ಸಂಚಾರ ಮಾಳ್ಪರು ಅನ್ಯ ದೇವತೆ ನೀಚರ ಆಲಯದಿ//53//


ದಶ ಪ್ರಮತಿ ಮತಾಬ್ಧಿಯೊಳು ಸುಮನಸರೆನಿಪ ರತ್ನಗಳನು

ಅವಲೋಕಿಸಿ ತೆಗೆದು ಪ್ರಾಕೃತ ಸುಭಾಷಾ ತಂತುಗಳ ರಚಿಸಿ

ಅಸುಪತಿ ಶ್ರೀ ರಮಣನಿಗೆ ಸಮರ್ಪಿಸಿದೆ ಸತ್ಜನರು ಇದನು ಸಂತೋಷಿಸಲಿ

ದೋಷಗಳ ಎಣಿಸದಲೆ ಕಾರುಣ್ಯದಲಿ ನಿತ್ಯ//54//


ನಿರುಪಮನು ಶ್ರೀವಿಷ್ಣು ಲಕ್ಷ್ಮೀ ಸರಸಿಜೋದ್ಭವ ವಾಯು ವಾಣೀ

ಗರುಡ ಷಣ್ಮಹಿಷಿಯರು ಪಾರ್ವತಿ ಶಕ್ರ ಸ್ಮರ ಪ್ರಾಣ ಗುರು

ಬೃಹಸ್ಪತಿ ಪ್ರವಹ ಸೂರ್ಯನು ವರುಣ ನಾರದ ವಹ್ನಿ ಸಪ್ತ ಅಂಗಿರರು

ಮಿತ್ರ ಗಣೇಶ ಪೃಥು ಗಂಗಾ ಸ್ವಾಹಾ ಬುಧನು//55//


ತರಣಿ ತನಯ ಶನೈಶ್ಚರನು ಪುಷ್ಕರನು ಆಜಾನಜ ಚಿರಪಿತರು

ಗಂಧರ್ವರೀರ್ವರು ದೇವ ಮಾನುಷ ಚಕ್ರವರ್ತಿಗಳು

ನರರೊಳುತ್ತಮ ಮಧ್ಯಮ ಅಧಮ ಕರೆಸುವರು ಮಧ್ಯ ಉತ್ತಮರು

ಈರೆರೆಡು ಜನ ಕೈವಲ್ಯ ಮಾರ್ಗಸ್ಥರಿಗೆ ಅನಮಿಪೆ//56//


ಸಾರ ಭಕ್ತಿ ಜ್ಞಾನದಿಂ ಬೃಹತ್ತಾರತಮ್ಯವನು ಅರಿತು ಪಠಿಸುವ

ಸೂರಿಗಳಿಗೆ ಅನುದಿನದಿ ಪುರುಷಾರ್ಥಗಳ ಪೂರೈಸಿ

ಕಾರುಣಿಕ ಮರುತಾಂತರಾತ್ಮಕ ಮಾರಮಣ ಜಗನ್ನಾಥ ವಿಠಲ

ತೋರಿಕೊಂಬನು ಹೃತ್ಕಮಲದೊಳು ಯೋಗ್ಯತೆಯನರಿತು//57//


//ಇತಿ ಶ್ರೀ ಬೃಹತ್ತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

Tuesday, January 22, 2013

ಶ್ರೀ ಹರಿಕಥಾಮೃತಸಾರ - 22

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಭಕ್ತಾಪರಾಧಸಹಿಷ್ಣು ಸಂಧಿ//

//ಶ್ರೀ ಸಕಲದುರಿತ ನಿವಾರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀ ಲಕುಮಿವಲ್ಲಭಗೆ ಸಮ ಕರುಣಾಳುಗಳ ನಾಕಾಣೆನೆಲ್ಲಿ

ಕುಚೇಲನ ಅವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ

ಕೇಳಿದಾಕ್ಷಣ ವಸ್ತ್ರಗಳ ಪಾಂಚಾಲಿಗಿತ್ತನು

ದೈತ್ಯನುದರವ ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ//1//


ದೇವಶರ್ಮಾಹ್ವಾಯ ಕುಟುಂಬಕೆ ಜೀವನೋಪಾಯವನು ಕಾಣದೆ

ದೇವ ದೇವ ಶರಣ್ಯ ರಕ್ಷಿಸು ರಕ್ಷಿಸೆನೆ ಕೇಳಿ ತಾ ಒಲಿದು ಪಾಲಿಸಿದ ಸೌಖ್ಯ

ಕೃಪಾವಲೋಕನದಿಂದ ಈತನ ಸೇವಿಸದೆ

ಸೌಖ್ಯಗಳ ಬಯಸುವರು ಅಲ್ಪ ಮಾನವರು//2//


ಶ್ರೀನಿವಾಸನ ಪೋಲ್ವ ಕರುಣಿಗಳು ಈ ನಳಿನಜಾಂಡದೊಳು ಕಾಣೆ

ಪ್ರವೀಣರಾದವರು ಅರಸಿ ನೋಳ್ಪುದು ಶೃತಿಪುರಾಣದೊಳು

ದ್ರೋಣ ಭೀಷ್ಮ ಕೃಪಾದಿಗಳು ಕುರು ಸೇನೆಯೊಳಗಿರೆ

ಅವರ ಅವಗುಣಗಳು ಏನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯ//3//


ಚಂಡ ವಿಕ್ರಮ ಚಕ್ರ ಶಂಖವ ತೋಂಡಮಾನ ನೃಪಾಲಗಿತ್ತನು

ಭಾಂಡಕಾರಕ ಭೀಮನ ಮೃದ ಆಭರಣಗಳಿಗೊಲಿದ

ಮಂಡೆ ಒಡೆದ ಆಕಾಶರಾಯನ ಹೆಂಡತಿಯ ನುಡಿ ಕೇಳಿ ಮಗಳಿಗೆ ಗಂಡನೆನಿಸಿದ

ಗಹನ ಮಹಿಮ ಗದಾಬ್ಜಧರಪಾಣಿ//4//


ಗೌತಮನ ನಿಜಪತ್ನಿಯನು ಪುರುಹೂತನು ಐದಿರೆ ಕಾಯ್ದ

ವೃತ್ರನ ಘಾತಿಸಿದ ಪಾಪವನು ನಾಲ್ಕು ವಿಭಾಗ ಮಾಡಿದನು

ಶಾತಕುಂಭಾತ್ಮಕ ಕಿರೀಟವ ಕೈತವದಿ ಕದ್ದೊಯ್ದ ಇಂದ್ರಾರಾತಿ ಬಾಗಿಲ ಕಾಯ್ದ

ಭಕ್ತತ್ವೇನ ಸ್ವೀಕರಿಸಿ//5//


ನಾರನಂದ ವ್ರಜದ ಸ್ತ್ರೀಯರ ಜಾರಕರ್ಮಕೊಲಿದ

ಅಜ ಸುಕುಮಾರನು ಎನಿಸಿದ ನಂದಗೋಪಗೆ ನಳಿನಭವ ಜನಕ

ವೈರವರ್ಜಿತ ದೈತ್ಯರನ ಸಂಹಾರ ಮಾಡಿದ

ವಿಪಗಮನ ಪೆಗಲೇರಿದನು ಗೋಪಾಲಕರ ವೃಂದಾವನದೊಳಂದು//6//


ಶ್ರೀಕರಾರ್ಚಿತ ಪಾದಪಲ್ಲವ ಗೋಕುಲದ ಗೊಲ್ಲತಿಯರ ಒಲಿಸಿದ

ಪಾಕಶಾಸನ ಪೂಜ್ಯ ಗೋ ಗೋವತ್ಸಗಳ ಕಾಯ್ದ

ನೀಕರಿಸಿ ಕುರುಪತಿಯ ಭೋಜನ ಸ್ವೀಕರಿಸಿದನು ವಿದುರನೌತನ

ಬಾಕುಲಿಕನಂದದಲಿ ತೋರಿದ ಭಕ್ತವತ್ಸಲನು//7//


ಪುತ್ರನೆನಿಸಿದ ಗೋಪಿದೇವಿಗೆ ಭರ್ತೃವೆನಿಸಿದ ವೃಜದನಾರಿಯರ ಉತ್ರಲಾಲಿಸಿ

ಪರ್ವತವ ನೆಗದಿಹ ಕೃಪಾಸಾಂದ್ರ

ಶತ್ರುತಾಪನ ಯಜ್ಞ ಪುರುಷನ ಪುತ್ರಿಯರ ತಂದಾಳ್ದ

ತ್ರಿಜಗತ್ಧಾತ್ರ ಮಂಗಳಗಾತ್ರ ಪರಮ ಪವಿತ್ರ ಸುರಮಿತ್ರ//8//


ರುಪನಾಮ ವಿಹೀನ ಗರ್ಗಾರೋಪಿತ ಸುನಾಮದಲಿ ಕರೆಸಿದ

ವ್ಯಾಪಕ ಪರಿಚ್ಚಿನ್ನ ರೂಪದಿ ತೋರ್ದ ಲೋಗರಿಗೆ

ದ್ವಾಪರಾಂತ್ಯದಿ ದೈತ್ಯರನು ಸಂತಾಪಗೊಳಿಸುವೆನೆಂದು

ಶ್ವೇತದ್ವೀಪ ಮಂದಿರನು ಅವತರಿಸಿ ಸಲಹಿದನು ತನ್ನವರ//9//


ಶ್ರೀ ವಿರಿಂಚಾದಿ ಅಮರನುತ ನಾನಾವತಾರವ ಮಾಡಿ ಸಲಹಿದ

ದೇವತೆಗಳನು ಋಷಿಗಳನು ಕ್ಷಿತಿಪರನು

ಮಾನವರ ಸೇವೆಗಳ ಕೈಕೊಂಡು ಫಲಗಳನೀವ

ನಿತ್ಯಾನಂದಮಯ ಸುಗ್ರೀವ ಧ್ರುವ ಮೊದಲಾದ ಭಕ್ತರಿಗಿತ್ತ ಪುರುಷಾರ್ಥ//10//


ದುಷ್ಟ ದಾನವಹರಣ ಸರ್ವೋತ್ಕೃಷ್ಟ ಸದ್ಗುಣ ಭರಿತ ಭಕ್ತ ಅಭೀಷ್ಟದಾಯಕ

ಭಯವಿನಾಶನ ವಿಗತ ಭಯಶೋಕ

ನಷ್ಟ ತುಷ್ಟಿಗಳಿಲ್ಲ ಸೃಷ್ಟಿ ಆದಿ ಅಷ್ಟ ಕರ್ತನಿಗೆ ಆವ ಕಾಲದಿ

ಹೃಷ್ಟನಾಗುವ ಸ್ಮರಣೆ ಮಾತ್ರದಿ ಹೃದ್ಗುಹ ನಿವಾಸಿ//11//


ಹಿಂದೆ ಪ್ರಳಯ ಉದಕದಿ ತಾವರೆ ಕಂದ ನಂಜಿಸಿ ಕಾಯ್ದ

ತಲೆಯಲಿ ಬಾಂದೊರೆಯ ಪೊತ್ತವಗೆ ಒಲಿದು ಪರ್ಯಂಕ ಪದವಿತ್ತ

ವಂದಿಸಿದ ವೃಂದಾರಕರ ಸತ್ವೃಂದಕೆ ಉಣಿಸಿದ ಸುಧೆಯ

ಕರುಣಾ ಸಿಂಧು ಕಮಲಾಕಾಂತ ಬಹು ನಿಶ್ಚಿಂತ ಜಯವಂತ//12//


ಸತ್ಯಸಂಕಲ್ಪ ಅನುಸಾರ ಪ್ರವರ್ತಿಸುವ ಪ್ರಭು ತನಗೆ ತಾನೆ ಭೃತ್ಯನೆನಿಸುವ

ಭೋಕ್ತ್ರು ಭೋಗ್ಯ ಪದಾರ್ಥದೊಳಗಿದ್ದು ತತ್ತದಾಹ್ವಯನಾಗಿ ತರ್ಪಕ

ತೃಪ್ತಿ ಪಡಿಸುವ ತತ್ವ ಪತಿಗಳ

ಮತ್ತರಾದ ಅಸುರರ್ಗೆ ಅಸಮೀಚೀನ ಫಲವೀವ//13//


ಬಿಟ್ಟಿಗಳ ನೆವದಿಂದಡಾಗಲಿ ಪೊಟ್ಟೆಗೋಸುಗವಾದಡಾಗಲಿ

ಕೆಟ್ಟರೋಗ ಪ್ರಯುಕ್ತವಾಗಲಿ ಅಣಕದಿಂದೊಮ್ಮೆ ನಿಟ್ಟುಸಿರಿನಿಂ ಬಾಯ್ದೆರೆದು

ಹರಿ ವಿಠಲಾ ಸಲಹೆಂದೆನಲು ಕೈಗೊಟ್ಟು ಕಾವ

ಕೃಪಾಳು ಸಂತತ ತನ್ನ ಭಕುತರನು//14//


ಈ ವಸುಂಧರೆಯೊಳಗೆ ಶ್ರೀ ಭೂದೇವಿಯ ಅರಸನ ಸುಗುಣ ಕರ್ಮಗಳ

ಆವ ಬಗೆಯಿಂದ ಆದಡಾಗಲಿ ಕೀರ್ತಿಸಿದ ನರರ

ಕಾವ ಕಮಲದಳಾಯತಾಕ್ಷ ಕೃಪಾವ ಲೋಕನದಿಂದ

ಕಪಿ ಸುಗ್ರೀವಗೆ ಒಲಿದಂದದಲಿ ಒಲಿದಭಿಲಾಷೆ ಪೂರೈಪ//15//


ಚೇತನಂತರ್ಯಾಮಿ ಲಕ್ಷ್ಮೀನಾಥ ಕರ್ಮಗಳ ಅನುಸರಿಸಿ

ಜನಿತೋಥ ವಿಷ್ಣೋಯೆಂಬ ಶ್ರುತಿ ಪ್ರತಿಪಾದ್ಯ ಯೆಮ್ಮೊಡನೆ ಜಾತನಾಗುವ ಜನ್ಮರಹಿತ

ಆಕೂತಿನಂದನ ಭಕ್ತರಿಂದ ಆಹೂತನಾಗಿ

ಮನೋರಥವ ಬೇಡಿಸಿಕೊಳದೀವ//16//


ನ್ರುಷತುಯೆನಿಸುವ ಮನುಜರೊಳು ಸುರ ಋಷಭ ಇಂದ್ರಿಯಗಳೊಳು

ತತ್ತತ್ವಿಷಯಗಳ ಭುಂಜಿಸುವ ಹೋತಾಹ್ವಯನು ತಾನಾಗಿ

ಮೃಷರಹಿತ ವೇದದೊಳು ಋತಸತು ಪೆಸರಿನಿಂದಲಿ ಕರೆಸುವ

ಜಗತ್ಪ್ರಸವಿತ ನಿರಂತರದಿ ಸಂತೈಸುವನು ಭಕುತರನು//17//


ಅಬ್ಜ ಭವ ಪಿತ ಜಲಧರಾದ್ರಿಯೊಳು ಅಬ್ಜ ಗೋಜಾದ್ರಿಜನೆನಿಸಿ

ಜಲದುಬ್ಬಳೀ ಪೀಯೂಷ ದಾವರೆ ಶ್ರೀಶಶಾಂಕದೊಳು

ಕಬ್ಬು ಕದಳಿ ಲತಾ ತೃಣ ದ್ರುಮ ಹೆಬ್ಬುಗೆಯ ಮಾಡುತಿಹ ಗೋಜನು

ಇಬ್ಬಗೆ ಪ್ರತೀಕ ಮಣಿಮೃಗ ಸೃಜಿಪ ಅದ್ರಿಜನು//18//


ಶ್ರುತಿವಿನುತ ಸರ್ವತ್ರದಲಿ ಭಾರತಿ ರಮಣನೊಳಗಿದ್ದು

ತಾ ಶುಚಿಷತುಯೆನಿಸಿ ಜಡ ಚೇತನರನ ಪವಿತ್ರ ಮಾಡುತಿಹ

ಅತುಳ ಮಹಿಮ ಅನಂತ ರೂಪ ಅಚ್ಯುತನೆನಿಸಿ ಚಿತ್ದೇಹದೊಳು

ಪ್ರಾಕೃತ ಪುರುಷನಂದದಲಿ ನಾನಾ ಚೇಷ್ಟೆಗಳ ಮಾಳ್ಪ//19//


ಅತಿಥಿಯೆನಿಸುವ ಅನ್ನಮಯ ಬಾರತಿ ರಮಣನೊಳು

ಪ್ರಾಣಮಯ ಪ್ರಾಕೃತ ವಿಷಯ ಚಿಂತನೆಯ ಮಾಡಿಸುವನು

ಮನೋಮಯನುಯತನ ವಿಜ್ಞಾನಮಯ ಬರಲದ ಜತನ ಮಾಡಿಸಿ

ಆತ್ಮ ಜಾಯಾ ಸುತರ ಸಂಗದಿ ಸುಖವನೀವ ಆನಂದಮಯನೆನಿಸಿ//20//


ಇನಿತು ರೂಪಾತ್ಮನಿಗೆ ದೋಷಗಳೆನಿತು ಬಪ್ಪವು ಪೇಳಿರೈ

ಬ್ರಾಹ್ಮಣ ಕುಲೋತ್ತಮರು ಆದವರು ನಿಷ್ಕಪಟ ಬುದ್ಧಿಯಲಿ

ಗುಣನಿಯಾಮಕ ತತ್ತದಾಹ್ವಯನೆನಿಸಿ ಕಾರ್ಯವ ಮಾಳ್ಪದೇವನ

ನೆನೆದ ಮಾತ್ರದಿ ದೋಷರಾಶಿಗಳು ಎಲ್ಲ ಕೆಡುತಿಹವು//21//


ಕುಸ್ಥನೆನಿಸುವ ಭೂಮಿಯೊಳು ಆಶಸ್ಥನೆನಿಸುವ ದಿಗ್ವಲಯದೊಳು

ಖಸ್ಥನೆನಿಪ ಆಕಾಶದೊಳು ಒಬ್ಬೊಬ್ಬರೊಳಗೆ ಇದ್ದು ವ್ಯಸ್ತನೆನಿಸುವ

ಸರ್ವರೊಳಗೆ ಸಮಸ್ತನೆನಿಸುವ ಬಳಿಯಲಿದ್ದು ಉಪಸ್ಥನೆನಿಪ

ವಿಶೋಧನ ವಿಶುದ್ಧಾತ್ಮ ಲೋಕದೊಳು//22//


ಜ್ಞಾನದನುಯೆಂದೆನಿಪ ಶಾಸ್ತ್ರದಿ ಮಾನದನುಯೆಂದೆನಿಪ ವಸನದಿ

ದಾನಶೀಲ ಸುಬುದ್ಧಿಯೊಳಗೆ ಅವದಾನ್ಯನೆನಿಸುವನು

ವೈನತೇಯ ಅವರೂಥ ತತ್ತತ್ಸ್ಥಾನದಲಿ ತತ್ತತ್ ಸ್ವಭಾವಗಳ ಅನುಸಾರ

ಚರಿತ್ರೆ ಮಾಡುತ ನಿತ್ಯನೆಲೆಸಿಪ್ಪ//23//


ಗ್ರಾಮಪನೊಳು ಅಗ್ರಣಿಯೆನಿಸುವನು ಗ್ರಾಮಿಣೀಯೆನಿಸುವರು ಜನರೊಳು

ಗ್ರಾಮ ಉಪಗ್ರಾಮಗಳೊಳಗೆ ಶ್ರೀಮಾನ್ಯನೆನಿಸುತಿಪ್ಪ

ಶ್ರೀ ಮನೋರಮ ತಾನೇ ಯೋಗಕ್ಷೇಮ ನಾಮಕನಾಗಿ ಸಲಹುವ

ಈ ಮಹಿಮೆ ಮಿಕ್ಕಾದ ದೇವರಿಗುಂಟೆ ಲೋಕದೊಳು//24//


ವಿಜಯಸಾರಥಿಯೆಂದು ಗರುಡಧ್ವಜನ ಮೂರ್ತಿಯ ಭಕ್ತಿಪೂರ್ವಕ ಭಜಿಸುತಿಪ್ಪ ಮಹಾತ್ಮರಿಗೆ

ಸರ್ವತ್ರದಲಿ ಒಲಿದು

ವಿಜಯದನು ತಾನಾಗಿ ಸಲಹುವ ಭುಜಗ ಭೂಷಣ ಪೂಜ್ಯ ಚರಣಾಂಬುಜ

ವಿಭೂತಿದ ಭುವನ ಮೋಹನರೂಪ ನಿರ್ಲೇಪ//25//


ಅನಭಿಮತ ಕರ್ಮಪ್ರವಹದೊಳಗೆ ಅನಿಮಿಷಾದಿ ಸಮಸ್ತ ಚೇತನ ಗಣವಿಹುದು

ತತ್ಫಲಗಳ ಉಣ್ಣದೆ ಸೃಷ್ಟಿಸಿದ ಮುನ್ನ

ವನಿತೆಯಿಂದ ಒಡಗೂಡಿ ಕರುಣಾವನಧಿ ನಿರ್ಮಿಸೆ

ತಮ್ಮತಮ್ಮಯ ಅನುಚಿತೋಚಿತ ಕರ್ಮಫಲಗಳ ಉಣುತ ಚರಿಸುವರು//26//


ಝಲ್ಲಡಿಯ ನೆಳಲಂತೆ ತೋರ್ಪುದು ಎಲ್ಲ ಕಾಲದಿ ಭವದ ಸೌಖ್ಯವು

ಎಲ್ಲಿ ಪೊಕ್ಕರು ಬಿಡದು ಬೆಂಬತ್ತಿಹುದು ಜೀವರಿಗೆ

ಒಲ್ಲೆನೆಂದರೆ ಬಿಡದು ಹರಿ ನಿರ್ಮಾಲ್ಯ ನೈವೇದ್ಯವನು ಭುಂಜಿಸಿ

ಬಲ್ಲವರ ಕೂಡಾಡು ಭವ ದುಃಖಗಳ ನೀಡಾಡು//27//


ಕುಟ್ಟಿ ಕೊಯ್ದಿದನು ಅಟ್ಟು ಇಟ್ಟು ಅದಸುಟ್ಟು ಕೊಟ್ಟದ ಮುಟ್ಟಲು

ಅಘ ಹಿಟ್ಟಿಟ್ಟು ಮಾಳ್ಪದು ವಿಠಲುಂಡುಚ್ಚಿಷ್ಟ

ಸಜ್ಜನರ ಬಿಟ್ಟು ತನ್ನಯ ಹೊಟ್ಟೆಗೋಸುಗ ಥಟ್ಟನೆ ಉಣುತಿಹ ಕೆಟ್ಟ ಮನುಜರ

ಕಟ್ಟಿವೈದು ಯಮಪಟ್ಟಣದೊಳು ಒತ್ತಟ್ಟಲೆ ಇಡುತಿಹನು//28//


ಜಾಗುಮಾಡದೆ ಭೋಗದಾಸೆಯ ನೀಗಿ ಪರಮಾನುರಾಗದಿಂದಲಿ

ಭೋಗೀಶಯನನ ಆಗರದ ಹೆಬ್ಬಾಗಿಲಲಿ ನಿಂದು

ಕೂಗುತಲಿ ಶಿರಬಾಗಿ ಕರುಣಾ ಸಾಗರನೆ ಭವರೋಗ ಭೇಷಜ ಕೈಗೊಡು ಎಂದನೆ

ಬೇಗನೆ ಒದಗುವ ಭಾಗವತರಸ//29//


ಏನು ಕರುಣವೋ ತನ್ನವರಲಿ ದಯಾನಿಧಿಗೆ

ಸದ್ಭಕ್ತ ಜನರು ಅತಿ ಹೀನ ಕರ್ಮವ ಮಾಡಿದರು ಸರಿ ಸ್ವೀಕರಿಸಿ ಪೊರೆವ

ಪ್ರಾಣಹಿಂಸ ಲುಬ್ದಕಗೆ ಸುಜ್ಞಾನ ಭಕ್ತಿಗಳಿತ್ತು

ದಶರಥ ಸೂನು ವಾಲ್ಮೀಕಿ ಋಷಿಯ ಮಾಡಿದ ಪರಮ ಕರುಣಾಳು//30//


ಮೂಢ ಮಾನವ ಎಲ್ಲಕಾಲದಿ ಬೇಡಿಕೊಂಬ ಇನಿತೆಂದು ದೈನ್ಯದಿ

ಬೇಡದಂದದಿ ಮಾಡು ಪುರುಷಾರ್ಥಗಳ ಸ್ವಪ್ನದಲಿ

ನೀಡುವರೆ ನಿನ್ನ ಅಮಲಗುಣ ಕೊಂಡಾಡಿ ಹಿಗ್ಗುವ ಭಾಗವತರ ಒಡನೆ

ಆಡಿಸೆನ್ನನು ಜನ್ಮಜನ್ಮಗಳಲಿ ದಯದಿಂದ//31//


ಚತುರವಿಧ ಪುರುಷಾರ್ಥ ರೂಪನು ಚತುರ ಮೂರ್ತಿ ಆತ್ಮಕನಿರಲು

ಮತ್ತೆ ಇತರ ಪುರುಷಾರ್ಥಗಳ ಬಯಸುವರೆನು ಬಲ್ಲವರು

ಮತಿ ವಿಹೀನರು ಅಲ್ಪ ಸುಖ ಶಾಶ್ವತವೆಂದರಿದು ಅನುದಿನದಿ

ಗಣಪತಿಯೇ ಮೊದಲಾದ ಅನ್ಯ ದೇವತೆಗಳನೆ ಭಜಿಸುವರು//32//


ಒಮ್ಮಿಗಾದರು ಜೀವರೊಳು ವೈಷಮ್ಯ ದ್ವೇಷ ಅಸೂಯವಿಲ್ಲ

ಸುಧರ್ಮ ನಾಮಕ ಸಂತೈಸುವನು ಸರ್ವರನು ನಿತ್ಯ

ಬ್ರಹ್ಮ ಕಲ್ಪಾಂತದಲಿ ವೇದಾಗಮ್ಯ ಶ್ರೀ ಜಗನ್ನಾಥ ವಿಠಲ

ಸುಮ್ಮನೀವನು ತ್ರಿವಿಧರಿಗೆ ಅವರವರ ನಿಜಗತಿಯ//33//


//ಇತಿ ಶ್ರೀ ಭಕ್ತಾಪರಾಧಸಹಿಷ್ಣು ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 21

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಕರ್ಮ ವಿಮೋಚನ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮೂಲ ನಾರಾಯಣನು ಮಾಯಾ ಲೋಲ ಅನಂತ ಅವತಾರ ನಾಮಕ

ವ್ಯಾಳ ರೂಪ ಜಯಾ ರಮಣನ ಆವೆಶನು ಎನಿಸುವನು

ಲೀಲೆಗೈವ ಅನಂತ ಚೇತನ ಜಾಲದೊಳು ಪ್ರದ್ಯುಮ್ನ

ಬ್ರಹ್ಮಾಂಡ ಆಲಯದ ಒಳ ಹೊರಗೆ ನೆಲೆಸಿಹ ಶಾಂತಿ ಅನಿರುದ್ಧ//1//

ಐದು ಕಾರಣ ರೂಪ ಇಪ್ಪತ್ತೈದು ಕಾರ್ಯಗಳು ಎನಿಸುವವು

ಆರೈದು ರೂಪದಿ ರಮಿಸುತಿಪ್ಪನು ಈ ಚರಾಚರದಿ

ಭೇದ ವರ್ಜಿತ ಮೂರ್ಜಗದ್ಜನ್ಮಾದಿ ಕಾರಣ ಮುಕ್ತಿದಾಯಕ

ಸ್ವಉದರದೊಳಿಟ್ಟು ಎಲ್ಲರನು ಸಂತೈಪ ಸರ್ವಜ್ಞ//2//


ಕಾರ್ಯ ಕಾರಣ ಕರ್ತೃಗಳೊಳು ಸ್ವಭಾರ್ಯರಿಂದ ಒಡಗೂಡಿ

ಕಪಿಲಾಚಾರ್ಯ ಕ್ರೀಡಿಸುತಿಪ್ಪ ತನ್ನೊಳು ತಾನೆ ಸ್ವೇಚ್ಚೆಯಲಿ

ಪ್ರೇರ್ಯನು ಅಲ್ಲೇ ರಮಾಬ್ಜ ಭವರು ಆರ್ಯ ರಕ್ಷಿಸಿ ಶಿಕ್ಷಿಸುವನು

ಸ್ವವೀರ್ಯದಿಂದಲಿ ದಿವಿಜ ದಾನವ ತತಿಯ ದಿನದಿನದಿ//3//


ಈ ಸಮಸ್ತ ಜಗತ್ತಿನೊಳಗೆ ಆಕಾಶದೊಳು ಇರುತಿಪ್ಪ

ವ್ಯಾಪ್ತಾವೇಶ ಅವತಾರಾಂತರಾತ್ಮಕನಾಗಿ ಪರಮಾತ್ಮ

ನಾಶ ರಹಿತ ಜಗತ್ತಿನೊಳಗೆ ಅವಕಾಶದನು ತಾನಾಗಿ

ಯೋಗೀಶಾಶಯ ಸ್ಥಿತ ತನ್ನೊಳು ಎಲ್ಲರನಿಟ್ಟು ಸಲಹುವನು//4//


ದಾರು ಪಾಷಾಣಗತ ಪಾವಕ ಬೇರೆ ಬೇರೆ ಇಪ್ಪಂತೆ

ಕಾರಣ ಕಾರ್ಯಗಳ ಒಳಗಿದ್ದು ಕಾರಣ ಕಾರ್ಯನು ಎಂದೆನಿಸಿ

ತೋರಿಕೊಳ್ಳದೆ ಎಲ್ಲರೊಳು ವ್ಯಾಪಾರ ಮಾಡುವ

ಯೋಗ್ಯತೆಗಳ ಅನುಸಾರ ಫಲಗಳ ಉಣಿಸಿ ಸಂತೈಸುವ ಕೃಪಾಸಾಂದ್ರ//5//


ಊರ್ಮಿಗಳೊಳಿಪ್ಪ ಕರ್ಮ ವಿಕರ್ಮ ಜನ್ಯ ಫಲ ಅಫಲಂಗಳ

ನಿರ್ಮಲಾತ್ಮನು ಮಾಡಿ ಮಾಡಿಸಿ ಉಂಡು ಉಣಿಸುತಿಪ್ಪ

ನಿರ್ಮಮ ನಿರಾಮಯ ನಿರಾಶ್ರಯ ಧರ್ಮವಿತು ಧರ್ಮಾತ್ಮ ಧರ್ಮಗ

ದುರ್ಮತೀ ಜನರ ಒಲ್ಲನು ಅಪ್ರತಿಮಲ್ಲ ಶ್ರೀನಲ್ಲ//6//


ಜಲದ ವಡಬಾನಳಗಳು ಅಂಬುಧಿ ಜಲವನು ಉಂಬುವವು

ಅಬ್ದ ಮಳೆಗರೆದಿಳಿಗೆ ಶಾಂತಿಯನೀವುದು ಅನಲನು ತಾನೇ ಭುಂಜಿಪುದು

ತಿಳಿವುದು ಈ ಪರಿಯಲ್ಲಿ ಲಕ್ಷ್ಮೀ ನಿಲಯ ಗುಣ ಕೃತ ಕರ್ಮಜ

ಫಲಾಫಲಗಳು ಉಂಡು ಉಣಿಸುವನು ಸಾರವಾಗ ಸರ್ವ ಜೀವರಿಗೆ//7//


ಪುಸ್ತಕಗಳ ಅವಲೋಕಿಸುತ ಮಂತ್ರ ಸ್ತುತಿಗಳ ಅನಲೇನು

ರವಿಯ ಉದಯಾಸ್ತಮಯ ಪರ್ಯಂತ ಜಪಗಳ ಮಾಡಿ ಫಲವೇನು

ಹೃಸ್ಥ ಪರಮಾತ್ಮನೆ ಸಮಸ್ತ ಅವಸ್ಥೆಗಳೊಳಿದ್ದು ಎಲ್ಲರೊಳಗೆ

ನಿರಸ್ತಕಾಮನು ಮಾಡಿ ಮಾಡಿಪನು ಎಂದು ತಿಳಿಯದವ//8//


ಮದ್ಯ ಭಾಂಡವ ದೇವ ನದಿಯೊಳಗೆ ಅದ್ದಿ ತೊಳೆಯಲು ನಿತ್ಯದಲಿ

ಪರಿಶುದ್ಧವು ಅಹುದೆ ಎಂದಿಗಾದರು

ಹರಿ ಪದಾಬ್ಜಗಳ ಬುದ್ಧಿ ಪೂರ್ವಕ ಭಜಿಸದವಗೆ ವಿರುದ್ಧವು ಎನಿಸುವವೆಲ್ಲ

ಕರ್ಮ ಸಮೃದ್ಧಿಗಳು ದುಃಖವನೆ ಕೊಡುತಿಹವು ಅಧಮ ಜೀವರಿಗೆ//9//


ಭಕ್ತಿ ಪೂರ್ವಕವಾಗಿ ಮುಕ್ತಾಮುಕ್ತ ನಿಯಾಮಕನ

ಸರ್ವೋದ್ರಿಕ್ತ ಮಹಿಮೆಗಳ ಅನವರತ ಕೊಂಡಾಡು ಮರೆಯದಲೆ

ಸಕ್ತನಾಗದೆ ಲೋಕವಾರ್ತೆ ಪ್ರಸಕ್ತಿಗಳನು ಈಡಾಡಿ

ಶೃತಿ ಸ್ಮೃತಿ ಉಕ್ತ ಕರ್ಮವ ಮಾಡುತಿರು ಹರಿಯಾಜ್ಞೆಯೆಂದರಿದು//10//


ಲೋಪವಾದರು ಸರಿಯೇ ಕರ್ಮಜ ಪಾಪಪುಣ್ಯಗಳು ಎರಡು ನಿನ್ನನು ಲೇಪಿಸವು

ನಿಷ್ಕಾಮಕನು ನೀನಾಗಿ ಮಾಡುತಿರೆ

ಸೌಪರಣಿ ವರವಹನ ನಿನ್ನ ಮಹಾಪರಾಧಗಳ ಎಣಿಸದಲೆ

ಸ್ವರ್ಗಾಪವರ್ಗವ ಕೊಟ್ಟು ಸಲಹುವ ಸತತ ಸುಖಸಾಂದ್ರ//11//


ಸ್ವರತ ಸುಖಮಯ ಸುಲಭ ವಿಶ್ವಂಭರ ವಿಷೋಕ ಸುರಾಸುರಾರ್ಚಿತ ಚರಣ ಯುಗ

ಚಾರು ಅಂಗ ಶಾರ್ನ್ಗ ಶರಣ್ಯ ಜಿತಮನ್ಯು

ಪರಮ ಸುಂದರ ತರ ಪರಾತ್ಪರ ಶರಣ ಜನ ಸುರಧೇನು ಶಾಶ್ವತ ಕರುಣಿ

ಕಂಜದಳಾಕ್ಷಕಾಯೆನೆ ಕಂಗೊಳಿಪ ಶೀಘ್ರ//12//


ನಿರ್ಮಮನು ನೀನಾಗಿ ಕರ್ಮ ವಿಕರ್ಮಗಳು ನಿರಂತರದಿ

ಸುಧರ್ಮ ನಾಮಕಗೆ ಅರ್ಪಿಸುತ ನಿಷ್ಕಲುಷ ನೀನಾಗು

ಭರ್ಮ ಗರ್ಭನ ಜನಕ ದಯದಲಿ ದುರ್ಮತಿಗಳನು ಕೊಡದೆ

ತನ್ನಯ ಹರ್ಮ್ಯದೊಳಗಿಟ್ಟು ಎಲ್ಲ ಕಾಲದಿ ಕಾವ ಕೃಪೆಯಿಂದ//13//


ಕಲ್ಪಕಲ್ಪದಿ ಶರಣ ಜನ ವರಕಲ್ಪವೃಕ್ಷನು

ತನ್ನ ನಿಜ ಸಂಕಲ್ಪದ ಅನುಸಾರದಲಿ ಕೊಡುತಿಪ್ಪನು ಫಲಾಫಲವ

ಅಲ್ಪಸುಖದ ಅಪೇಕ್ಷೆಯಿಂದ ಅಹಿತಲ್ಪನ ಆರಾಧಿಸದಿರು ಎಂದಿಗು

ಶಿಲ್ಪಗನ ಕೈ ಸಿಕ್ಕ ಶಿಲೆಯಂದದಲಿ ಸಂತೈಪ//14//


ದೇಶ ಭೇದ ಆಕಾಶದಂದದಿ ವಾಸುದೇವನು ಸರ್ವ ಭೂತ ನಿವಾಸಿಯೆನಿಸಿ

ಚರಾಚರಾತ್ಮಕನು ಎಂದು ಕರೆಸುವನು

ದ್ವೇಷ ಸ್ನೇಹ ಉದಾಸೀನಗಳಿಲ್ಲ ಈ ಶರೀರಗಳೊಳಗೆ

ಅವರ ಉಪಾಸನಗಳಂದದಲಿ ಫಲವೀವನು ಪರಬ್ರಹ್ಮ್ಹ//15//


ಸಂಚಿತಾಗಾಮಿಗಳ ಕರ್ಮ ವಿರಿಂಚಿ ಜನಕನ ಭಜಿಸೆ ಕೆಡುವವು

ಮಿಂಚಿನಂದದಿ ಪೊಳೆವ ಪುರುಷೋತ್ತಮ ಹೃದಯ ಅಂಬರದಿ

ವಂಚಿಸುವ ಜನರೊಲ್ಲ ಶ್ರೀವತ್ಸಾಂಚಿತ ಸುಸದ್ವಕ್ಷ

ತಾ ನಿಷ್ಕಿಂಚನ ಪ್ರಿಯ ಸುರಮುನಿಗೇಯ ಶುಭಕಾಯ//16//


ಕಾಲದ್ರವ್ಯ ಸುಕರ್ಮ ಶುದ್ಧಿಯ ಪೇಳುವರು ಅಲ್ಪರಿಗೆ

ಅವು ನಿರ್ಮೂಲ ಗೈಸುವವು ಅಲ್ಲ ಪಾಪಗಳ ಎಲ್ಲ ಕಾಲದಲಿ

ತೈಲ ಧಾರೀಯಂತ ಅವನ ಪದ ಓಲೈಸಿ ತುತಿಸದಲೆ ನಿತ್ಯದಿ

ಬಾಲಿಷರು ಕರ್ಮಗಳೆ ತಾರಕವೆಂದು ಪೇಳುವರು//17//


ಕಮಲಸಂಭವ ಶರ್ವ ಶಕ್ರಾದಿ ಅಮರರೆಲ್ಲರು

ಇವನ ದುರತಿಕ್ರಮ ಮಹಿಮೆಗಳ ಮನವಚನದಿಂ ಪ್ರಾಂತಗಾಣದಲೆ

ಶ್ರಮಿತರಾಗಿ ಪದಾಬ್ಜ ಕಲ್ಪದ್ರುಮದ ನೆಳಲ ಆಶ್ರಯಿಸಿ

ಲಕ್ಷ್ಮೀ ರಮಣ ಸಂತೈಸೆಂದು ಪ್ರಾರ್ಥಿಪರು ಅತಿ ಭಕುತಿಯಿಂದ//18//


ವಾರಿಚರವು ಎನಿಸುವವು ದರ್ದುರ ತಾರಕಗಳೆಂದರಿದು

ಭೇಕವನು ಏರಿ ಜಲಧಿಯ ದಾಟುವೆನೆಂಬುವನ ತೆರದಂತೆ

ತಾರತಮ್ಯ ಜ್ಞಾನ ಶೂನ್ಯರು ಸೂರಿಗಮ್ಯನ ತಿಳಿಯಲರಿಯದೆ

ಸೌರಶೈವ ಮತಾನುಗರ ಅನುಸರಿಸಿ ಕೆಡುತಿಹರು//19//


ಕ್ಷೋಣಿಪತಿ ಸುತನೆನಿಸಿ ಕೈದುಗ್ಗಾಣಿಗೊಡ್ಡುವ ತೆರದಿ

ಸುಮನಸ ಧೇನು ಮನೆಯೊಳಗಿರಲು ಗೋಮಯ ಬಯಸುವಂದದಲಿ

ವೇಣುಗಾನಪ್ರಿಯನ ಅಹಿಕ ಸುಖಾನುಭವ ಬೇಡದಲೆ

ಲಕ್ಷ್ಮೀ ಪ್ರಾಣನಾಥನ ಪಾದ ಭಕುತಿಯ ಬೇಡು ಕೊಂಡಾಡು//20//


ಕ್ಷುಧೆಯ ಗೋಸುಗ ಪೋಗಿ ಕಾನನ ಬದರಿ ಫಲಗಳ ಅಪೇಕ್ಷೆಯಿಂದಲಿ

ಪೊದೆಯೊಳಗೆ ಸಿಗ ಬಿದ್ದು ಬಾಯ್ದೆರೆದವನ ತೆರದಂತೆ

ವಿಧಿಪಿತನ ಪೂಜಿಸದೆ ನಿನ್ನಯ ಉದರ ಗೋಸುಗ

ಸಾಧುಲಿಂಗ ಪ್ರದರ್ಶಕರ ಆರಾಧಿಸುತ ಬಳಲದಿರು ಭವದೊಳಗೆ//21//


ಜ್ಞಾನ ಜ್ಞೇಯ ಜ್ಞಾತೃವೆಂಬ ಅಭಿಧಾನದಿಂ ಬುದ್ಧಾದಿಗಳ ಅಧಿಷ್ಠಾನದಲಿ ನೆಲೆಸಿದ್ದು

ಕರೆಸುತ ತತ್ತದಾಹ್ವಯದಿ

ಭಾನುಮಂಡಲಗ ಪ್ರದರ್ಶಕ ತಾನೆನಿಸಿ ವಶನಾಗುವನು

ಶುಕ ಶೌನಕಾದಿ ಮುನೀಂದ್ರ ಹೃದಯಾಕಾಶಗತ ಚಂದ್ರ//22//


ಉದಯ ವ್ಯಾಪಿಸಿ ದರ್ಶ ಪೌರ್ಣಿಮ ಅಧಿಕ ಯಾಮವು ಶ್ರವಣ ಅಭಿಜಿತು

ಸದನವೈದಿರೆ ಮಾಳ್ಪ ತೆರದಂದದಲಿ ಹರಿಸೇವೆ

ವಿಧಿ ನಿಷೇಧಗಳು ಏನು ನೋಡದೆ ವಿಧಿಸುತಿರು

ನಿತ್ಯದಲಿ ತನ್ನಯ ಸದನದೊಳಗಿಂಬಿಟ್ಟು ಸಲಹುವ ಭಕ್ತವತ್ಸಲನು//23//


ನಂದಿವಾಹನ ರಾತ್ರಿ ಸಾಧನೆ ಬಂದ ದ್ವಾದಶಿ ಪೈತೃಕ ಸಂಧಿಸಿಹ ಸಮಯದಲಿ

ಶ್ರವಣವ ತ್ಯಜಿಸುವಂತೆ ಸದಾ

ನಿಂದ್ಯರಿಂದಲಿ ಬಂದ ದ್ರವ್ಯವ ಕಣ್ದೆರೆದು ನೋಡದಲೆ

ಶ್ರೀಮದಾನಂದತೀರ್ಥ ಅಂತರ್ಗತನ ಸರ್ವತ್ರ ಭಜಿಸುತಿರು//24//


ಶ್ರೀ ಮನೋರಮ ಮೇರು ತ್ರಿಕಕುದ್ಧಾಮ ಸತ್ಕಲ್ಯಾಣಗುಣ ನಿಸ್ಸೀಮ

ಪಾವನನಾಮ ದಿವಿಜೋದ್ಧಾಮ ರಘುರಾಮ

ಪ್ರೇಮಪೂರ್ವಕ ನಿತ್ಯ ತನ್ನ ಮಹಾ ಮಹಿಮೆಗಳ ತುತಿಸುವರಿಗೆ

ಸುಧಾಮಗೆ ಒಲಿದಂದದಲಿ ಅಖಿಳಾರ್ಥಗಳ ಕೊಡುತಿಪ್ಪ//25//


ತಂದೆ ತಾಯ್ಗಳ ಕುರುಹನರಿಯದ ಕಂದ ದೇಶಾಂತರದೊಳಗೆ ತನ್ನಂದದಲಿ

ಇಪ್ಪವರ ಜನನೀ ಜನಕರನು ಕಂಡು

ಹಿಂದೆಯೆನ್ನನು ಪಡೆದ ಅವರು ಈ ಯಂದದಲಿಪ್ಪರೋ ಅಲ

ನಾನು ಅವರ ಎಂದು ಕಾಣುವೆನೆನುತ ಹುಡುಕುವ ತೆರದಿ ಕೋವಿದರು//26//


ಶ್ರುತಿ ಪುರಾಣ ಸಮೂಹದೊಳು ಭಾರತ ಪ್ರತಿ ಪ್ರತಿ ಪದಗಳೊಳು

ನಿರ್ಜಿತನ ಗುಣ ರೂಪಗಳ ಪುಡುಕುತ ಪರಮ ಹರುಷದಲಿ

ಮತಿಮತರು ಪ್ರತಿದಿವಸ ಸಾರಸ್ವತ ಸಮುದ್ರದಿ

ಶಫರಿಯಂದದಿ ಸತತ ಸಂಚರಿಸುವರು ಕಾಣುವ ಲವಲವಿಕೆಯಿಂದ//27//


ಮತ್ಸ್ಯಕೇತನ ಜನಕ ಹರಿ ಶ್ರೀವತ್ಸ ಲಾಂಛನ ನಿಜ ಶರಣ ಜನವತ್ಸಲ

ವರಾರೋಹ ವೈಕುಂಠಆಲಯ ನಿವಾಸಿ

ಚಿತ್ಸುಖಪ್ರದ ಸಲಹೆನಲು ಗೋವತ್ಸ ಧ್ವನಿಗೊದಗುವ ತೆರದಿ

ಪರಮೋತ್ಸಾಹದಿ ಬಂದೊದಗವುನು ನಿರ್ಮತ್ಸರರ ಬಳಿಗೆ//28//


ಸೂರಿಗಳಿಗೆ ಸಮೀಪಗ ದುರಾಚಾರಿಗಳಿಗೆ ಎಂದೆಂದು ದೂರಾದ್ದೂರತರ

ದುರ್ಲಭನು ಎನಿಸುವನು ದೈತ್ಯ ಸಂತತಿಗೆ

ಸಾರಿ ಸಾರಿಗೆ ನೆನೆವವರ ಸಂಸಾರವೆಂಬ ಮಹೋರಗಕೆ ಸರ್ವಾರಿಯೆನಿಸಿ

ಸದಾ ಸುಸೌಖ್ಯವನು ಈವ ಶರಣರಿಗೆ//29//


ಚಕ್ರ ಶಂಖ ಗದಾಬ್ಜಧರ ದುರತಿಕ್ರಮ ದುರಾವಾಸ

ವಿಧಿ ಶಿವ ಶಕ್ರ ಸೂರ್ಯಾದ್ಯ ಅಮರ ಪೂಜ್ಯ ಪದಾಬ್ಜ ನಿರ್ಲಜ್ಜ

ಶುಕ್ರ ಶಿಷ್ಯರ ಅಶ್ವಮೇಧಾ ಪ್ರಕ್ರಿಯವ ಕೆಡಿಸಿ

ಅಬ್ಜಜಾಂಡವ ಅತಿಕ್ರಮಿಸಿ ಜಾಹ್ನವಿಯ ಪಡೆದ ತ್ರಿವಿಕ್ರಮಾಹ್ವಯನು//30//


ಶಕ್ತರೆನಿಸುವರೆಲ್ಲ ಹರಿ ವ್ಯತಿರಿಕ್ತ ಸುರಗಣದೊಳಗೆ

ಸರ್ವೋದ್ರಿಕ್ತನು ಎನಿಸುವ ಸರ್ವರಿಂದಲಿ ಸರ್ವ ಕಾಲದಲಿ

ಭಕ್ತಿ ಪೂರ್ವಕವಾಗಿ ಅನ್ಯ ಪ್ರಸಕ್ತಿಗಳ ನೀಡಾಡಿ

ಪರಮಾಸಕ್ತನು ಆಗಿರು ಹರಿಕಥಾಮೃತ ಪಾನ ವಿಷಯದಲಿ//31//


ಪ್ರಣತ ಕಾಮದ ಭಕ್ತ ಚಿಂತಾಮಣಿ ಮಣಿಮಯಾಭರಣ ಭೂಷಿತ

ಗುಣಿ ಗುಣ ತ್ರಯ ದೂರ ವರ್ಜಿತ ಗಹನ ಸನ್ಮಹಿಮ

ಎಣಿಸ ಭಕ್ತರ ದೋಷಗಳ ಕುಂಭಿಣಿಜೆಯಾಣ್ಮ ಶರಣ್ಯ

ರಾಮಾರ್ಪಣವೆನಲು ಕೈಕೊಂಡ ಶಬರಿಯ ಫಲವ ಪರಮಾತ್ಮ//32//


ಬಲ್ಲೆನೆಂಬುವರಿಲ್ಲವು ಈತನ ಒಲ್ಲೆನೆಂಬುವರಿಲ್ಲ

ಲೋಕದೊಳಿಲ್ಲದಿಹ ಸ್ಥಳವಿಲ್ಲವೈ ಅಜ್ಞಾತ ಜನರಿಲ್ಲ

ಬೆಲ್ಲದಚ್ಚಿನ ಬೊಂಬೆಯಂದದಿ ಎಲ್ಲರೊಳಗಿರುತಿಪ್ಪ

ಶ್ರೀಭೂ ನಲ್ಲ ಇವಗೆ ಎಣೆಯಿಲ್ಲ ಅಪ್ರತಿಮಲ್ಲ ಜಗಕೆಲ್ಲ//33//


ಶಬ್ದ ಗೋಚರ ಶಾರ್ವರೀಕರ ಅಬ್ದ ವಾಹನನನುಜ

ಯದುವಂಶಾಬ್ಧಿ ಚಂದ್ರಮ ನಿರುಪಮ ಸುನಿಸ್ಸೀಮ ಸಮಿತಸಮ

ಲಬ್ಧನಾಗುವ ತನ್ನವಗೆ ಪ್ರಾರಬ್ಧ ಕರ್ಮಗಳ ಉಣಿಸಿ ತೀವ್ರದಿ

ಕ್ಷುಬ್ಧ ಪಾವಕನಂತೆ ಬಿಡದಿಪ್ಪನು ದಯಾಸಾಂದ್ರ//34//


ಶ್ರೀ ವಿರಿಂಚಿ ಆದಿ ಅಮರ ವಂದಿತ ಈ ವಸುಂಧರೆಯೊಳಗೆ

ದೇವಕಿ ದೇವಿ ಜಠರದೊಳು ಅವತರಿಸಿದನು ಅಜನು ನರರಂತೆ

ರೇವತೀ ರಮಣ ಅನುಜನು ಸ್ವಪದಾವಲಂಬಿಗಳನು ಸಲಹಿ

ದೈತ್ಯಾವಳಿಯ ಸಂಹರಿಸಿದ ಜಗನ್ನಾಥ ವಿಠಲನು//35//


//ಇತಿ ಶ್ರೀ ಕರ್ಮವಿಮೋಚನ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Monday, January 21, 2013

ಶ್ರೀ ಹರಿಕಥಾಮೃತಸಾರ - 20

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಆರೋಹಣ ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭಕ್ತರೆನಿಸುವ ದಿವ್ಯ ಪುರುಷರ ಉಕ್ತಿ ಲಾಲಿಸಿ ಪೇಳ್ದ

ಮುಕ್ತಾಮುಕ್ತ ಜೀವರ ತಾರತಮ್ಯವ ಮುನಿಪ ಶಾಂಡಿಲ್ಯ//


ಸ್ಥಾವರರ ನೋಡಲ್ಕೆ ತೃಣ ಕ್ರಿಮಿ ಜೀವರೋತ್ತಮ

ಕ್ರಿಮಿಗಳಿಂದಲಿ ಆವಿ ಗೋ ಗಜ ವ್ಯಾಘ್ರಗಳಿಂದ ಶೂದ್ರಾದಿ ಮೂವರು ಉತ್ತಮ

ಕರ್ಮಿಕರ ಭೂ ದೇವರು ಉತ್ತಮ ಕರ್ಮಿ ನೋಡಲು ಕೋವಿದ ಉತ್ತಮ

ಕವಿಗಳಿಂದಲಿ ಕ್ಷಿತಿಪರು ಉತ್ತಮರು//1//


ಧರಣಿಪರ ನೋಡಲ್ಕೆ ನರ ಗಂಧರ್ವರು ಉತ್ತಮ

ದೇವ ಗಂಧರ್ವರ ಗುಣೋತ್ತಮರು ಇವರಿಗಿಂತ ಶತೋನಶತಕೋಟಿ ಪರಮ ಋಷಿಗಳು

ಅಪ್ಸರ ಸ್ತ್ರೀಯರು ಸಮಾನರು ಇವರಿಗಿಂತಲಿ

ಚಿರಪಿತೃಗಳು ಉತ್ತಮರು ಚಿರನಾಮಕ ಪಿತೃಗಳಿಂದ//2//


ಎರಡೈದು ಎಂಭತ್ತು ಋಷಿ ತುಂಬರ ಶತ ಊರ್ವಶಿ ಅಪ್ಸರ ಸ್ತ್ರೀಯರು

ಶತಾಜನಜರು ಉತ್ತರ ಚಿರ ಪಿತೃಗಳಿಂದ

ಅವರರು ಊರ್ವಶಿಗಿಂತ ವೈಶ್ವಾನರನ ಸುತರು ಈರೆಂಟು ಸಾವಿರ

ಹರದಿಯರೊಳು ಉತ್ತಮ ಕಶೇರು ಎಪ್ಪತ್ತನಾಲ್ಕು ಜನ//3//


ಸರಿಯೆನಿಪರು ವ್ರಜೌಕಸ ಸ್ತ್ರೀಯರು ಸುರಾಸ್ಯಾತ್ಮಜರಿಗಿಂ ಪುಷ್ಕರನು

ಕರ್ಮಪ ಪುಷ್ಕರನಿಗೆ ಶನೈಶ್ಚರ ಉತ್ತಮನು

ತರಣಿಜನಿಗೆ ಉತ್ತಮಳು ಉಷ ಅಶ್ವಿನಿ ಸುರಾಸಿಗೆ ಉತ್ತಮ ಜಲಪ ಬುಧ

ಶರಧಿಜಾತ್ಮಜಗೆ ಉತ್ತಮ ಸ್ವಹ ದೇವಿಯೆನಿಸುವಳು//4//


ಅನಳ ಭಾರ್ಯಳಿಗಿಂತ ಅನಾಖ್ಯಾತ ಅನಿಮಿಷ ಉತ್ತಮರು

ಇವರಿಗಿಂತಲಿ ಘನಪ ಪರ್ಜನ್ಯ ಅನಿರುದ್ಧನ ಸ್ತ್ರೀ ಉಷಾದೇವಿ

ದ್ಯುನದಿ ಸಂಜ್ಞಾ ಶಾಮಲಾ ರೋಹಿಣಿಗಳು ಆರ್ವರು ಸಮಾನ

ಅನಾಖ್ಯಾತ ಅನಿಮಿಷ ಉತ್ತಮರು ಇವರಿಗಿಂತಲಿ ನೂರು ಕರ್ಮಜರು//5//


ಪೃಥು ನಹುಷ ಶಶಿಬಿಂದು ಪ್ರಿಯವ್ರತ ಪರೀಕ್ಷಿತ ನೃಪರು

ಭಾಗೀರಥಿಯ ನೋಡಲ್ಕೆ ಅಧಿಕ ಬಲ್ಯಾದಿ ಇಂದ್ರ ಸಪ್ತಕರು

ಪಿತೃಗಳು ಏಳು ಎಂಟಧಿಕ ಅಪ್ಸರ ಸತಿಯರು ಈರೈದೊಂದು ಮನಸುಗಳು

ದಿತಿಜ ಗುರು ಚಾವನ ಉಚಿತ್ಥ್ಯರು ಕರ್ಮಜರು ಸಮಾರು//6//


ಧನಪ ವಿಶ್ವಕ್ಸೇನ ಗಣಪಾ ಅಶ್ವಿನಿಗಳು ಎಂಭತ್ತೈದು ಶೇಷರಿಗೆ

ಎಣೆಯೆನಿಸುವರು ಮಿತ್ರ ತಾರಾ ನಿರ್ಋತಿ ಪ್ರಾವಹಿ ಗುಣಗಳಿಂದ

ಐದಧಿಕ ಎಂಭತ್ತು ಎನಿಪ ಶೇಷರಿಗೆ ಉತ್ತಮರು

ಸನ್ಮುನಿ ಮರೀಚಿ ಪುಲಸ್ತ್ಯ ಪುಲಹಾ ಕ್ರತು ವಸಿಷ್ಠ ಮುಖ//7//


ಅತ್ರಿ ಅಂಗಿರರು ಏಳು ಬ್ರಹ್ಮನ ಪುತ್ರರು ಇವರಿಗೆ ಸಮರು

ವಿಶ್ವಾಮಿತ್ರ ವೈವಸ್ವತನು ಈಶ ಆವೇಶ ಬಲದಿಂದ

ಮಿತ್ರಗಿಂತ ಉತ್ತಮರು ಸ್ವಾಹಾ ಭರ್ತೃ ಭೃಗುವು ಪ್ರಸೂತಿ

ವಿಶ್ವಾಮಿತ್ರ ಮೊದಲಾದವರಿಗಿಂತಲಿ ಮೂವರು ಉತ್ತಮರು//8//


ನಾರದ ಉತ್ತಮನು ಅಗ್ನಿಗಿಂತಲಿ ವಾರಿನಿಧಿ ಪಾದ ಉತ್ತಮನು

ಯಮ ತಾರಕ ಈಶ ದಿವಾಕರರು ಶತರೂಪರೋತ್ತಮರು

ವಾರಿಜಾಪ್ತನಿಗಿಂತ ಪ್ರವಹಾ ಮಾರುತೋತ್ತಮ

ಪ್ರವಹಗಿಂತಲಿ ಮಾರಪುತ್ರ ಅನಿರುದ್ಧ ಗುರುಮನುದಕ್ಷ ಶಚಿ ರತಿಯು//9//


ಆರು ಜನರುಗಳಿಂದಲಿ ಅಹಂಕಾರಿಕ ಪ್ರಾಣ ಉತ್ತಮ

ಅಖಿಳ ಶರೀರಮಾಣಿ ಪ್ರಾಣಗಿಂತಲಿ ಕಾಮ

ಇಂದ್ರರಿಗೆ ಗೌರಿ ವಾರುಣಿ ಖಗಪ ರಾಣಿಗೆ ಶೌರಿ ಮಹಿಷಿಯರೊಳಗೆ

ಜಾಂಬವತೀ ರಮಾಯುತಳು ಆದ ಕಾರಣ ಅಧಿಕಲು ಎನಿಸುವಳು//10//


ಹರ ಫಣಿಪ ವಿಹಗ ಇಂದ್ರ ಮೂವರು ಹರಿ ಮಡದಿಯರಿಗುತ್ತಮ

ಸೌಪರಣಿ ಪತಿಗುತ್ತಮರು ಭಾರತಿ ವಾಣಿ ಈರ್ವರಿಗೆ

ಮರುತ ಬ್ರಹ್ಮರು ಉತ್ತಮರು ಇಂದಿರೆಯು ಪರಮ ಉತ್ತಮಳು

ಲಕ್ಷ್ಮಿಗೆ ಸರಿಯೆನಿಸುವರು ಇಲ್ಲವು ಎಂದಿಗು ದೇಶ ಕಾಲದೊಳು//11//


ಶ್ರೀ ಮುಕುಂದನ ಮಹಿಳೆ ಲಕುಮಿ ಮಹಾ ಮಹಿಮೆಗೆ ಏನೆಂಬೆ

ಬ್ರಹ್ಮ ಈಶ ಅಮರೇಂದ್ರರ ಸೃಷ್ಟಿ ಸ್ಥಿತಿ ಲಯಗೈಸಿ

ಅವರವರ ಧಾಮಗಳ ಕಲ್ಪಿಸಿ ಕೊಡುವಳು ಅಜರಾಮರಣಳಾಗಿದ್ದು

ಸರ್ವ ಸ್ವಾಮಿ ಮಮ ಗುರುವೆಂದು ಉಪಾಸನೆ ಮಾಳ್ಪಳು ಅಚ್ಯುತನ//12//


ಈಸು ಮಹಿಮೆಗಳುಳ್ಳ ಲಕ್ಷ್ಮಿ ಪರೇಶನ ಅನಂತಾನಂತ ಗುಣದೊಳು

ಲೇಶ ಲೇಶಕೆ ಸರಿಯೆನಿಸುವಳು ಅವಾವ ಕಾಲದಲಿ

ದೇಶ ಕಾಲಾತೀತ ಲಕ್ಷ್ಮಿಗೆ ಕೇಶವನ ವಕ್ಷ ಸ್ಥಳವೆ ಅವಕಾಶವಾಯಿತು

ಇವನ ಮಹಿಮೆಗೆ ವ್ಯಾಪ್ತಿಗೆ ಎಣೆಯುಂಟೆ//13//


ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು

ಒಂದು ದೇಶದಿ ಪೊಂದಿಕೊಂಡಿಹರು ಅಜಭವಾದಿ ಸಮಸ್ತ ಜೀವಗಣ

ಸಿಂಧು ಸಪ್ತ ದ್ವೀಪ ಮೇರು ಸುಮಂದರಾದಿ ಆದ್ರಿಗಳು

ಬ್ರಹ್ಮ ಪುರಂದರಾದಿ ಸಮಸ್ತ ಲೋಕ ಪರಾಲಯಗಳೆಲ್ಲ//14//


ಸರ್ವ ದೇವೋತ್ತಮನು ಸರ್ವಗ ಸರ್ವಗುಣ ಸಂಪೂರ್ಣ ಸರ್ವದ

ಸರ್ವ ತಂತ್ರ ಸ್ವತಂತ್ರ ಸರ್ವಾಧಾರ ಸರ್ವಾತ್ಮ

ಸರ್ವತೋಮುಖ ಸರ್ವನಾಮಕ ಸರ್ವಜನ ಸಂಪೂಜ್ಯ ಶಾಶ್ವತ

ಸರ್ವ ಕಾಮದ ಸರ್ವ ಸಾಕ್ಷಿಗ ಸರ್ವಜಿತ್ಸರ್ವ//15//


ತಾರತಮ್ಯ ಆರೋಹಣವ ಬರೆದು ಆರು ಪಠಿಸುವರೋ ಅವರ

ಲಕ್ಷ್ಮೀ ನಾರಸಿಂಹ ಸಮಸ್ತ ದೇವ ಗಣ ಅಂತರಾತ್ಮಕನು

ಪೂರೈಸುವ ಮನೋರಥಂಗಳ ಕಾರುಣಿಕ ಕೈವಲ್ಯ ದಾಯಕ

ದೂರಗೈಪ ಸಮಸ್ತ ದುರಿತವ ವೀತ ಶೋಕ ಸುಖ//16//


ಪ್ರಣತ ಕಾಮದನ ಅಂಘ್ರಿ ಸಂದರ್ಶನದ ಅಪೇಕ್ಷೆಯ ಉಳ್ಳವಗೆ

ನಿಚ್ಚಣಿಕೆಯೆನಿಪುದು ಜಡ ಮೊದಲು ಬ್ರಹ್ಮಾಂಡ ತರತಮವು

ಮನವಚನದಿಂ ಸ್ಮರಿಸುವರ ಭವವನಧಿ ಶೋಷಿಸಿ ಪೋಗುವುದು

ಕಾರಣವು ಎನಿಸುವುದು ಜ್ಞಾನ ಭಕ್ತಿ ವಿರಕ್ತಿ ಸಂಪದಕೆ//17//


ಅನಳನೊಳು ಹೋಮಿಸುವ ಹರಿಚಂದನವೆ ಮೊದಲಾದ ಅದರ ಸುವಾಸನೆಯು

ಪ್ರತ್ಪ್ರತ್ಯೇಕ ತೋರ್ಪುದು ಎಲ್ಲ ಕಾಲದಲಿ

ದನುಜ ಮಾನವ ದಿವಿಜರ ಅವರವರ ಅನುಚಿತೋಚಿತ ಕರ್ಮ

ವೃಜಿನ ಅರ್ದನನು ವ್ಯಕ್ತಿಯ ಮಾಳ್ಪ ತ್ರಿಗುಣಾತೀತ ವಿಖ್ಯಾತ//18//


ಭಕ್ತವತ್ಸಲ ಭಾಗ್ಯ ಪುರುಷ ವಿವಿಕ್ತ ವಿಶ್ವಾಧಾರ

ಸರ್ವೋದೃಕ್ತ ದೃಷ್ಟಾದೃಷ್ಟ ದುರ್ಗಮ ದುರ್ವಿಭಾವ್ಯ ಸ್ವಹಿ

ಶಕ್ತ ಶಾಶ್ವಿತ ಸಕಲ ವೇದೈಕ ಉಕ್ತ ಮಾನದ ಮಾನ್ಯ ಮಾಧವ

ಸೂಕ್ತ ಸೂಕ್ಷ್ಮ ಸ್ಥೂಲ ಶ್ರೀ ಜಗನ್ನಾಥ ವಿಠಲನು//19//


//ಇತಿ ಶ್ರೀ ಆರೋಹಣ ತಾರತಮ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು



ಶ್ರೀ ಹರಿಕಥಾಮೃತಸಾರ - 19

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಗುಣತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀಧರಾ ದುರ್ಗಾ ಮನೋರಮ ವೇಧಮುಖ ಸುಮನಸ ಗಣ ಸಮಾರಾಧಿತ ಪದಾಂಬುಜ

ಜಗದಂತರ್ ಬಹಿರ್ವ್ಯಾಪ್ತ

ಗೋಧರ ಫಣಿಪ ವರಾತಪತ್ರ ನಿಷೇಧ ಶೇಷ ವಿಚಿತ್ರ ಕರ್ಮ

ಸುಬೋಧ ಸುಖಮಯ ಗಾತ್ರ ಪರಮ ಪವಿತ್ರ ಸುಚರಿತ್ರ//1//


ನಿತ್ಯ ನಿರ್ಮಲ ನಿಗಮ ವೇದಯ ಉತ್ಪತ್ತಿ ಸ್ಥಿತಿ ಲಯ ದೂರವರ್ಜಿತ

ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣ ಸೇವ್ಯ

ಸತ್ಯಕಾಮ ಸ=ಶರಣ್ಯ ಶಾಶ್ವತ ಭೃತ್ಯವತ್ಸಲ ಭಯ ನಿವಾರಣ

ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ//2//


ಪರಮ ಪುರುಷನ ರೂಪ ಗುಣವ ಅನುಸರಿಸಿ ಕಾಂಬಳು ಪ್ರವಹದಂದದಿ

ನಿರುಪಮಳು ನಿರ್ದುಷ್ಟ ಸುಖ ಸಂಪೂರ್ಣಳು ಎನಿಸುವಳು

ಹರಿಗೆ ಧಾಮತ್ರಯಳು ಎನಿಸಿ ಆಭರಣ ವಸನ ಆಯುಧಗಳು ಆಗಿದ್ದು

ಅರಿಗಳನು ಸಂಹರಿಸುವಳು ಅಕ್ಷರಳು ಎನಿಸಿಕೊಂಡು//3//


ಈತಗಿಂತ ಅನಂತ ಗುಣದಲಿ ಶ್ರೀ ತರುಣಿ ತಾ ಕಡಿಮೆಯೆನಿಪಳು

ನಿತ್ಯಮುಕ್ತಳು ನಿರ್ವಿಕಾರಳು ತ್ರಿಗುಣ ವರ್ಜಿತಳು

ಧೌತ ಪಾಪ ವಿರಿಂಚಿ ಪವನರ ಮಾತೆಯೆನಿಪ ಮಹಾಲಕುಮಿ

ವಿಖ್ಯಾತಳು ಆಗಿಹಳು ಎಲ್ಲ ಕಾಲದಿ ಶ್ರುತಿ ಪುರಾಣದೊಳು//4//


ಕಮಲ ಸಂಭವ ಪವನರೀರ್ವರು ಸಮರು ಸಮವರ್ತಿಗಳು

ರುದ್ರಾದಿ ಅಮರಗಣ ಸೇವಿತರು ಅಪರಬ್ರಹ್ಮ ನಾಮಕರು

ಯಮಳರಿಗೆ ಮಹಾಲಕ್ಷ್ಮಿ ತಾನುತ್ತಮಳು ಕೋಟಿ ಸಜಾತಿ ಗುಣದಿಂದ

ಅಮಿತ ಸುವಿಜಾತಿ ಅಧಮರು ಎನಿಪರು ಬ್ರಹ್ಮ ವಾಯುಗಳು//5//


ಪತಿಗಳಿಂದ ಸರಸ್ವತೀ ಭಾರತಿಗಳು ಅಧಮರು ನೂರು ಗುಣ ಪರಿಮಿತ ವಿಜಾತಿ ಅವರರು

ಬಲ ಜ್ಞಾನಾದಿ ಗುಣದಿಂದ ಅತಿಶಯರು ವಾಗ್ದೇವಿ ಶ್ರೀ ಭಾರತಿಗೆ

ಪದಪ್ರಯುಕ್ತ ವಿಧಿ ಮಾರುತರವೋಳ್ ಚಿಂತಿಪುದು

ಸದ್ಭಕ್ತಿಯಲಿ ಕೋವಿದರು//6//


ಖಗಪ ಫಣಿಪತಿ ಮ್ರುಡರು ಸಮ ವಾಣಿಗೆ ಶತಗುಣ ಅವರರು ಮೂವರು

ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ

ನಗಧರನ ಷಣ್ಮ ಹಿಷಿಯರು ಪನ್ನಗ ವಿಭೂಷಣಗೈದು

ಮೇನಕಿ ಮಗಳು ವಾರುಣಿ ಸೌಪರ್ಣಿಗಳಿಗೆ ಅಧಿಕವು ಎರಡು ಗುಣ//7//


ಗರುಡ ಶೇಷ ಮಹೇಷರಿಗೆ ಸೌಪರಣಿ ವಾರುಣಿ ಪಾರ್ವತಿ ಮೂರರು ದಶಾಧಮ

ವಾರುಣಿಗೆ ಕಡಿಮೆ ಎನಿಸುವಳು ಗೌರೀ

ಹರನ ಮಡದಿಗೆ ಹತ್ತು ಗುಣದಲಿ ಸುರಪ ಕಾಮರು ಕಡಿಮೆ

ಇಂದ್ರಗೆ ಕೊರತೆಯೆನಿಸುವ ಮನ್ಮಥನು ಪದದಿಂದಲಿ ಆವಾಗ//8//


ಈರೈದು ಗುಣ ಕಡಿಮೆ ಅಹಂಕಾರಿಕ ಪ್ರಾಣನು ಮನೋಜ ನಗಾರಿಗಳಿಗೆ

ಅನಿರುದ್ಧ ರತಿ ಮನು ದಕ್ಷ ಗುರು ಶಚಿಯು ಆರು ಜನ ಸಮ

ಪ್ರಾಣನಿಂದಲಿ ಹೌರಗ ಎನಿಪರು ಹತ್ತು ಗುಣದಲಿ

ಮಾರಜಾದ್ಯರಿಗೆ ಐದು ಗುಣದಿಂದ ಅಧಮ ಪ್ರವಹಾಖ್ಯ//9//


ಗುಣದ್ವಯದಿಂ ಕಡಿಮೆ ಪ್ರವಹಗೆ ಿನ ಶಶಾಂಕಯಮ ಸ್ವಯಂಭುವ ಮನು ಮಡದಿ ಶತರೂಪ

ನಾಲ್ವರು ಪಾದ ಪಾದಾರ್ಧ ವನಧಿ ನೀಚ

ಪಾದಾರ್ಧ ನಾರದ ಮುನಿಗೆ ಭೃಗು ಅಗ್ನಿ ಪ್ರಸೂತಿಗಳು

ಎನಿಸುವರು ಪಾದಾರ್ಧ ಗುಣದಿಂದ ಅಧಮರಹುದೆಂದು//10//


ಹುತವಹಗೆ ದ್ವಿಗುಣ ಅಧಮರು ವಿಧಿಸುತ ಮರೀಚಾದಿಗಳು

ವೈವಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ ಗುಣಾಧಮನು

ವ್ರತಿವರ ಜಗನ್ಮಿತ್ರ ವರ ನಿರ್ಋತಿ ಪ್ರಾವಹಿ ತಾರರಿಗೆ

ಕಿಂಚಿತ್ ಗುಣ ಅಧಮ ಧನಪ ವಿಶ್ವಕ್ಸೇನರು ಎನಿಸುವರು//11//


ಧನಪ ವಿಶ್ವಕ್ಸೇನ ಗೌರೀ ತನಯರಿಗೆ ಉಕ್ತ ಇತರರು ಸಮರೆನಿಸುವರು

ಎಂಭತ್ತೈದು ಜನ ಶೇಷ ಶತರೆಂದು

ದಿನಪರಾರು ಏಳಧಿಕ ನಾಲ್ವತ್ತನಿಲರು ಏಳು ವಸು

ರುದ್ರರೀರೈದು ಅನಿತು ವಿಶ್ವೇ ದೇವ ಋಭು ಅಶ್ವಿನೀ ಪಿತೃ ಧರಣೀ//12//


ಇವರಿಗಿಂತಲಿ ಕೊರತೆಯೆನಿಪರು ಚ್ಯವನ ಸನಕಾದಿಗಳು

ಪಾವಕ ಕವಿ ಉಚಿಥ್ಥ್ಯ ಜಯಂತ ಕಶ್ಯಪ ಮನುಗಳು ಎಕದಶ

ಧ್ರುವ ನಹುಷ ಶಶಿಬಿಂದು ಹೈಹಯ ದೌಷ್ಯಂತಿ ವಿರೋಚನನ ನಿಜ ಕುವರ

ಬಲಿ ಮೊದಲಾದ ಸಪ್ತ ಇಂದ್ರರು ಕಕುತ್ಸ್ಥ ಗಯ//13//


ಪೃಥು ಭರತ ಮಾಂಧಾತ ಪ್ರಿಯವ್ರತ ಮರುತ ಪ್ರಹ್ಲಾದ ಸುಪರೀಕ್ಷಿತ

ಹರಿಶ್ಚಂದ್ರ ಅಂಬರೀಷ ಉತ್ತನಪಾದ ಮುಖ

ಶತ ಸುಪುಣ್ಯ ಶ್ಲೋಕರು ಗದಾ ಭ್ರುತಗೆ ಅಧಿಷ್ಠಾನರು

ಸುಪ್ರಿಯವ್ರತಗೆ ದ್ವಿಗುಣ ಅಧಮರು ಕರ್ಮಜರು ಎಂದು ಕರೆಸುವರು//14//


ನಳಿನಿ ಸಂಜ್ಞಾ ರೋಹಿಣೀ ಶ್ಯಾಮಲ ವಿರಾಟ್ ಪರ್ಜನ್ಯರು ಅಧಮರು

ಯಲರು ಮಿತ್ರನ ಮಡದಿ ದ್ವಿಗುಣ ಅಧಮಳು ಬಾಂಬೊಳಗೆ

ಜಲ ಮಯ ಬುಧ ಅಧಮನು ದ್ವಿಗುಣದಿ ಕೆಳಗೆನಿಸುವಳು ಉಷಾ

ಶನೈಶ್ಚರಳಿಗೆ ಈರು ಗುಣಾಧಮರು ಉಷಾ ದೇವಿ ದ್ಯಸಿಯಿಂದಾ//15//


ಎರಡು ಗುಣ ಕರ್ಮಾಧಿಪತಿ ಪುಷ್ಕರ ಕಡಿಮೆ

ಆಜಾನು ದಿವಿಜರು ಚಿರ ಪಿತೃಗಳಿಂದ ಉತ್ತಮರು ಕಿಂಕರರು ಪುಷ್ಕರಗೆ

ಸುರಪನಾಲಯ ಗಾಯಕ ಉತ್ತಮ ಎರಡೈದು ಗುಣದಿಂದಾಧಮ

ತುಂಬುರಗೆ ಸಮ ನೂರುಕೋಟಿ ಋಷಿಗಳು ನೂರುಜನರುಳಿದು//16//


ಅವರವರ ಪತ್ನಿಯರು ಅಪ್ಸರ ಯುವತಿಯರು ಸಮ

ಉತ್ತಮರನುಳಿದು ಅವರರೆನಿಪರು ಮನುಜ ಗಂಧರ್ವರು ದ್ವಿಷಡ್ಗುಣದಿ

ಕುವಲಯಾಧಿಪರು ಈರು ಐದು ಗುಣ ಅವನಿಪ ಸ್ತ್ರೀಯರು

ದಶೋತ್ತರ ನವತಿ ಗುಣದಿಂದ ಅಧಮರು ಎನಿಪರು ಮಾನುಷೋತ್ತಮರು//17//


ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರು

ರಜಸ್ಸತ್ವ ಅಧಿಕಾರಿಗಳು ಭಗವದ್ಭಕ್ತರು ಎನಿಸುವರು

ನಿತ್ಯ ಬದ್ಧರು ರಜೋರಜರು ಉತ್ಪತ್ತಿ ಭೂಸ್ವರ್ಗದೊಳು

ನರಕದಿ ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು//18//


ತಮಸ್ಸಾತ್ವಿಕರು ಎನಿಸಿಕೊಂಬರು ಅಮಿತನ ಆಖ್ಯಾತ ಅಸುರರ ಗಣ

ತಮೋ ರಾಜಸರು ಎನಿಸಿಕೊಂಬರು ದೈತ್ಯ ಸಮುದಾಯ

ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣ ಪೂರ್ಣ

ಸರ್ವಾಧಮರೊಳು ಅಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ//19//


ಇವನ ಪೋಲುವ ಪಾಪಿ ಜೀವರು ಭುವನ ಮೂವರೊಳಿಲ್ಲ ನೋಡಲು

ನವ ವಿಧ ದ್ವೇಷಗಳಿಗೆ ಆಕಾರನು ಎನಿಸಿಕೊಳುತಿಪ್ಪ

ಬವರದೊಳು ಬಂಗಾರದೊಳು ನಟ ಯುವತಿ ದ್ಯೂತಾ ಪೇಯ ಮೃಷದೊಳು

ಕವಿಸಿ ಮೋಹದಿ ಕೆಡಿಸುವನುಯೆಂದರಿದು ತ್ಯಜಿಸುವದು//20//


ತ್ರಿವಿಧ ಜೀವ ಪ್ರತತಿಗಳ ಸಗ್ಗ ಆವೊಳೆಯಾಣ್ಮ ಆಲಯನು ನಿರ್ಮಿಸಿ

ಯುವತಿಯರೊಡಗೂಡಿ ಕ್ರೀಡಿಸುವನು ಕೃಪಾಸಾಂದ್ರ

ದಿವಿಜ ದಾನವ ತಾರತಮ್ಯದ ವಿವರ ತಿಳಿವ ಮಹಾತ್ಮರಿಗೆ

ಬಾನ್ನವಿರ ಸಖ ತಾನೊಲಿದು ಉದ್ಧರಿಸುವನು ದಯದಿಂದ//21//


ದೇವ ದೈತ್ಯರ ತಾರತಮ್ಯವು ಪಾವಮಾನಿ ಮತಾನುಗರಿಗೆ ಇದು ಕೇವಲ ಅವಶ್ಯಕವು

ತಿಳಿವುದು ಸರ್ವ ಕಾಲದಲಿ

ದಾವಶಿಖಿ ಪಾಪಾಟವಿಗೆ ನವ ನಾವೆಯೆನಿಪುದು ಭವ ಸಮುದ್ರಕೆ

ಪಾವಟಿಗೆ ವೈಕುಂಠ ಲೋಕಕೆ ಇದೆಂದು ಕರೆಸುವುದು//22//


ತಾರತಮ್ಯ ಜ್ಞಾನ ಮುಕ್ತಿ ದ್ವಾರವು ಎನಿಪುದು ಭಕ್ತ ಜನರಿಗೆ ತೋರಿ ಪೇಳಿ

ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು

ಕ್ರೂರ ಮಾನವರಿಗಿದು ಕರ್ಣ ಕಟೋರವು ಎನಿಪುದು

ನಿತ್ಯದಲಿ ಅಧಿಕಾರಿಗಳಿಗಿದನ ಅರುಪುವುದು ದುಸ್ತರ್ಕಿಗಳ ಬಿಟ್ಟು//23//


ಹರಿಸಿರಿವಿರಿಂಚಿ ಈರಭಾರತಿ ಗರುಡ ಫಣಿ ಪತಿ ಷಣ್ಮಹಿಷಿಯರು

ಗಿರಿಜನಾಕ ಈಶ ಸ್ಮರ ಪ್ರಾಣ ಅನಿರುದ್ಧ ಶಚೀದೇವೀ

ಗುರು ರತೀ ಮನು ದಕ್ಷ ಪ್ರವಹಾ ಮರುತ ಮಾನವಿ ಯಮ ಶಶಿ ದಿವಾಕರ

ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ//24//


ವ್ರತತಿಜಾಸನ ಪುತ್ರರೆನಿಸುವ ವ್ರತಿವರ ಮರೀಚಿ ಅತ್ರಿ

ವೈವಸ್ವತನು ತಾರಾ ಮಿತ್ರ ನಿರ್ಋತಿ ಪ್ರವಹ ಮಾರುತನ ಸತಿ

ಧನ ಈಶ ಅಶ್ವಿನಿಗಳ ಈರ್ಗಣಪತಿಯು ವಿಶ್ವಕ್ಸೇನ ಶೇಷನು ಶತರು

ಮನುಗಳು ಉಚಿಥ್ಯ ಛಾವಣ ಮುನಿಗಳಿಗೆ ನಮಿಪೆ//25//


ಶತ ಸುಪುಣ್ಯ ಶ್ಲೋಕರು ಎನಿಸುವ ಕ್ಷಿತಿಪರಿಗೆ ನಮಿಸುವೆನು

ಬಾಗೀರಥಿ ವಿರಾಟ್ ಪರ್ಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾಹುತ ವಹನ ಮಹಿಳಾ

ಬುಧ ಉಷಾ ಕ್ಷಿತಿ ಶನೈಶ್ಚರ ಪುಷ್ಕರರಿಗೆ

ಆನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು//26//


ನೂರಧಿಕವು ಆಗಿಪ್ಪ ಮತ್ತೆ ಹದಿನಾರು ಸಾವಿರ ನಂದ ಗೋಪ ಕುಮಾರನ

ಅರ್ಧಾಂಗಿಯರು ಅಗಸ್ತ್ಯ ಆದೇ ಮುನೀಶ್ವರರು

ಊರ್ವಶೀ ಮೊದಲಾದ ಅಪ್ಸರ ನಾರಿಯರು ಶತ ತುಂಬುರರು

ಕಂಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ//27//


ಪಾವನರು ಶುಚಿ ಶುದ್ಧ ನಾಮಕ ದೇವತೆಗಳು ಆಜಾನ ಚಿರ ಪಿತೃ

ದೇವ ನರ ಗಂಧರ್ವರು ಅವನಿಪ ಮಾನುಷೋತ್ತಮರು

ಈ ವಸುಮತಿಯೊಳು ಉಳ್ಳ ವೈಷ್ಣವರ ಅವಳಿಯೊಳು ಇಹನೆಂದು

ನಿತ್ಯಡಿ ಸೇವಿಪುದು ಸಂತೋಷದಿಂ ಸರ್ವ ಪ್ರಕಾರದಲಿ//28//


ಮಾನುಷೋತ್ತಮರನ ವಿಡಿದು ಚತುರಾನನ ಅಂತ ಶತ ಉತ್ತಮತ್ವ

ಕ್ರಮೇಣ ಚಿಂತಿಪ ಭಕ್ತರಿಗೆ ಚತುರ ವಿಧ ಪುರುಷಾರ್ಥ

ಶ್ರೀನಿಧಿ ಜಗನ್ನಾಥ ವಿಠಲ ತಾನೇ ಒಲಿದು ಈವನು

ನಿರಂತರ ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ//29//


//ಇತಿ ಶ್ರೀ ಗುಣತಾರತಮ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು