Wednesday, January 16, 2013

ಶ್ರೀ ಹರಿಕಥಾಮೃತಸಾರ - 13

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ನಾಮಸ್ಮರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಗುವಾಗ

ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ

ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ

ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು//1//


ಸಾರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ

ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು

ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ

ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ//2//


ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ

ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ

ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು

ಒಂದರೆಕ್ಷಣ ಬಿಟ್ಟಗಲನು ಅವರ//3//


ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು

ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ

ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ

ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು//4//


ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ

ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ

ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ

ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ//5//


ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ

ಪೇಳಿ ಕೇಳಿದರೇನು ದಿನದಿನದಿ

ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು

ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು//6//


ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ

ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ

ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು

ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು//7//


ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ

ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು

ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು

ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು//8//


ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ

ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ

ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ

ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ//9//


ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ

ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು

ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ

ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ//10//


ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು

ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು

ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ

ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ//11//


ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ

ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ

ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ

ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ//12//


ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು

ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ

ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು

ಇತರ ಆಲೋಚನೆಯ ಬಿಟ್ಟು//13//


ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ

ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ

ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು

ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ//14//


ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ

ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು

ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ

ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ//15//


ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ

ತ್ರಿಗುಣದಿ ಬದ್ಧರನು ಮಾಡಿ

ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ

ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ//16//


ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ

ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ

ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ

ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ//17//


ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ

ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ

ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ

ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//18//


ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು

ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ

ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ

ಚರಾಚರಾತ್ಮಕ ಲೋಕಗಳ ಪೊರೆವ//19//


ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು

ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು

ಮದ್ದಾನೆಯಂದದಿ ಸಂಚರಿಸು

ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ//20//


ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ

ವಿರಾಜಿಸುವ ಹರಿ ಮೂರ್ತಿಯನೆ ಭಜಿಸು

ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ

ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ//21//


ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ

ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು

ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು

ತನ್ನಾಮ ರೂಪದಿ ಪ್ರಜರ ಸಂತೈಪ//22//


ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ

ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ

ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ

ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ//23//


ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ

ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ

ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು

ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು//24//


ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ

ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ

ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ

ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ//25//


ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು

ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು

ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ

ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ//26//


ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ

ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ

ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ

ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು//27//


ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ

ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ

ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ

ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು//28//


ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ

ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು

ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ

ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು//29//


ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ

ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ

ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ

ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು//30//


ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ

ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ

ಮಾತುಳಾಂತಕ ಜಾರ ಹೇ ನವನೀತ ಚೋರನೆನಲು

ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು//31//


ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು

ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ

ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ

ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ//32//


ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು

ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು

ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ

ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ//33//


//ಇತಿ ಶ್ರೀ ನಾಮಸ್ಮರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 12

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವಾಸುದೇವನು ಪ್ರಾಣಮುಖ ತತ್ವ ಈಶರಿಂದಲಿ ಸೇವೆ ಕೈಕೊಳುತ

ಈ ಶರೀರದೊಳು ಇಪ್ಪ ಮೂವತ್ತಾರು ಸಾವಿರ ಈ ಸುನಾಡಿಗಳೊಳಗೆ

ಈ ಭೂಮೀ ಸಮೇತ ವಿಹಾರಗೈವ

ಪರ ಈಶನ ಅಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು//1//


ಚರಣಗಳೊಳಿಹ ನಾಡಿಗಳು ಹನ್ನೆರೆಡು ಸಾವಿರ ಮಧ್ಯ ದೇಹದೊಳು ಇರುತಿಹವು ಹದಿನಾಲ್ಕು

ಬಾಹುಗಳೊಳಗೆ ಈರೆರೆಡು ಶಿರದೊಳು ಆರು ಸಹಸ್ರ ಚಿಂತಿಸಿ

ಇರುಳು ಹಗಲು ಅಭಿಮಾನಿ ದಿವಿಜರನರಿತು

ಉಪಾಸನೆಗೈವರು ಇಳೆಯೊಳು ಸ್ವರ್ಗ ವಾಸಿಗಳು//2//


ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀ ರೂಪ

ದೋಷ ವಿರಹಿತ ಎಪ್ಪತ್ತೆರೆಡು ಸಾವಿರ ನಾಡಿಗಳೊಳಗಿದ್ದು

ದ್ರುಹಿಣ ಮೊದಲಾದ ಅಮರಗಣ ಸನ್ಮಹಿಮ

ಸರ್ವ ಪ್ರಾಣಿಗಳ ಮಹಾಮಹಿಮ ಸಂತೈಸುವನು ಸಂತತ ಪರಮ ಕರುಣಾಳು//3//


ನೂರು ವರ್ಷಕೆ ದಿವಸ ಮೂವತ್ತಾರು ಸಾವಿರ ವಹವು

ನಾಡಿ ಶರೀರದೊಳಗೆ ಇನಿತಿಹವು ಎಂದರಿತು ಒಂದು ದಿವಸದಲಿ

ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳ ಅರ್ಚನೆ ತಾ ರಚಿಸಿದವ

ಸತ್ಯ ಸಂಶಯವು ಇಲ್ಲವೆಂದೆಂದು//4//


ಚತುರ ವಿಂಶತಿ ತತ್ತ್ವಗಳು ತತ್ಪತಿಗಳು ಎನಿಸುವ

ಬ್ರಹ್ಮ ಮುಖ ದೇವತೆಗಳು ಅನುದಿನ ಪ್ರತಿ ಪ್ರತಿ ನಾಡಿಗಳೊಳು ಇರುತಿದ್ದು

ಚತುರ ದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ

ಶಾಶ್ವತನ ತತ್ತತ್ ಸ್ಥಾನದಲಿ ನೋಡುತಲೇ ಮೋದಿಪರು//5//


ಸತ್ಯ ಸಂಕಲ್ಪನು ಸದಾ ಎಪ್ಪತ್ತೆರೆಡು ಸಹಸ್ರದೊಳು

ಮೂವತ್ತು ನಾಲ್ಕು ಲಕ್ಷದ ಐವತ್ತಾರು ಸಹಸ್ರ

ಚಿತ್ಪ್ರಕ್ರುತಿಯ ಒಡಗೂಡಿ ಪರಮನು ನಿತ್ಯ ಮಂಗಳಮೂರ್ತಿ

ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ//6//


ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು

ಸರ್ವ ಚೇತನ ಗಣದೊಳಿದ್ದು ಅನವರತ ಸಂತೈಸುವನು ತನ್ನವರ

ಪ್ರಣತ ಕಾಮದ ಭಕ್ತ ಚಿಂತಾಮಣಿ ಚಿದಾನಂದೈಕ ದೇಹನು

ಅಣು ಮಹದ್ಗತನು ಅಲ್ಪರೋಪಾದಿಯಲಿ ನೆಲೆಸಿಪ್ಪ//7//


ಈ ಸುಷುಮ್ನ ಆದಿ ಅಖಿಳ ನಾಡೀ ಕೋಶ ನಾಭೀ ಮೂಲದಲಿ

ವೃಷಣಾ ಸದನ ಮಧ್ಯದಲಿಪ್ಪದು ತುಂದಿ ನಾಮದಲಿ

ಆ ಸರೋಜಾಸನ ಮುಖರು ಮೂಲೇಶನ ಅನಂದಾದಿ ಸುಗುಣ ಉಪಾಸನೆಯ ಗೈವುತಲಿ

ದೇಹದೊಳಗೆ ಇರುತಿಹರು//8//


ಸೂರಿಗಳು ಚಿತ್ತೈಸುವುದು ಭಾಗೀರಥಿಯೆ ಮೊದಲಾದ ತೀರ್ಥಗಳು

ಏರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು

ಈ ರಹಸ್ಯವನು ಅಲ್ಪ ಜನರಿಗೆ ತೋರಿ ಪೇಳದೆ

ನಾಡಿ ನದಿಯೊಳು ಧೀರರು ಅನುದಿನ ಮಜ್ಜನವ ಮಾಡುತಲೇ ಸುಖಿಸುವರು//9//


ತಿಳಿವುದು ಈ ದೇಹದೊಳಗಿಹ ಎಡ ಬಲದ ನಾಡಿಗಳೊಳಗೆ ದಿವಿಜರು

ಜಲಜ ಸಂಭವ ವಾಯು ವಾಣಿ ಆದಿಗಳು ಬಲದಲ್ಲಿ

ಎಲರುಣಿಗ ವಿಹಗ ಇಂದ್ರ ಚಳಿವೆಟ್ಟಳಿಯ ಷಣ್ಮಹಿಶಿಯರು

ವಾರುಣಿ ಕುಲಿಶ ಧರ ಕಾಮಾದಿಗಳು ಎಡ ಭಾಗದೊಳಿಹರು//10//


ಇಕ್ಕಲದೊಳಿಹ ನಾಡಿಯೊಳು ದೇವರ್ಕಳಿಂದ ಒಡನಾಡುತಲಿ

ಪೊಂಬಕ್ಕಿ ದೇರನು ಜೀವರ ಅಧಿಕಾರಾನುಸಾರದಲಿ

ತಕ್ಕ ಸಾಧನವ ಮಾಡಿ ಮಾಡಿಸುತ ಅಕ್ಕರದಿ ಸಂತೈಪ ಭಕ್ತರ

ದಕ್ಕಗೊಡನು ಅಸುರರ್ಗೆ ಸತ್ಪುಣ್ಯಗಳನು ಅಪಹರಿಪ//11//


ತುಂದಿವಿಡಿದು ಆಶಿರದ ಪರಿಯಂತ ಒಂದು ವ್ಯಾಪಿಸಿಹುದು

ತಾವರ ಕಂದನಿಹನು ಅದರೊಳಗೆ ಅದಕೆ ಈರೈದು ಶಾಖೆಗಳು

ಒಂದಧಿಕ ದಶ ಕರಣದೊಳು ಸಂಬಂಧಗೈದಿಹವಲ್ಲಿ

ರವಿ ಶಶಿ ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ//12//


ಪೊಕ್ಕಳದಿವಿಡಿದು ಒಂದೇ ನಾಡಿಯು ಸುಕ್ಕದಲೆ ಧಾರಾಳ ರೂಪದಿ

ಸಿಕ್ಕಿಹುದು ಈ ದೇಹದೊಳಗೆ ಸುಷುಮ್ನ ನಾಮದಲಿ

ರಕ್ಕಸರನು ಒಳ ಪೋಗಗೊಡದೆ ದಶ ದಿಕ್ಕಿನೊಳಗೆ ಸಮೀರ ದೇವನು

ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು//13//


ಇನಿತು ನಾಡೀ ಶಾಖೆಗಳು ತನುವಿನೊಳಗೆ ಇಹವೆಂದರಿದು ಏಕಾತ್ಮನು

ದ್ವಿ ಸಪ್ತತಿ ಸಾವಿರ ಆತ್ಮಕನು ಆಗಿ ನಾಡಿಯೊಳು

ವನಿತೆಯಿಂದ ಒಡಗೂಡಿ ನಾರಾಯಣ ದಿವಾ ರಾತ್ರಿಗಳಲಿ

ಈ ಪರಿ ವನಜಾಂಡದೊಳು ಅಖಿಳ ಜೀವರೊಳಿದ್ದು ಮೋಹಿಸುವ//14//


ದಿನದಿನದಿ ವರ್ಧಿಸುವ ಕುಮುದಾಪ್ತನ ಮಯೂಖದ ಸೊಬಗ

ಗತ ಲೋಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ

ಕುನರಗೆ ಈ ಸುಕಥ ಅಮೃತದ ಭೋಜನದ ಸುಖ ದೊರಕುವುದೇ

ಲಕ್ಷ್ಮೀ ಮನೋಹರನ ಸದ್ಗುಣವ ಕೀರ್ತಿಪ ಭಕುತಗೆ ಅಲ್ಲದಲೆ//15//


ಈ ತನುವಿನೊಳಗಿಹವು ಓತ ಪ್ರೋತ ರೂಪದಿ ನಾಡಿಗಳು

ಪುರುಹೂತ ಮುಖರು ಅಲ್ಲಿಹರು ತಮ್ಮಿಂದ ಅಧಿಕಾರ ಒಡಗೂಡಿ

ಭೀತಿಗೊಳಿಸುತ ದಾನವರ ಸಂಘಾತ ನಾಮಕ ಹರಿಯ ಗುಣ

ಸಂಪ್ರೀತಿಯಲಿ ಸದುಪಾಸನೆಯ ಗೈವುತಲೆ ಮೋದಿಪರು//16//


ಜಲಾಟ ಕುಕ್ಕಾಟ ಖಾಟ ಜೀವರ ಕಳೇವರಗಳೊಳು ಇದ್ದು ಕಾಣಿಸಿಕೊಳದೆ

ತತ್ತದ್ರೂಪ ನಾಮಗಳಿಂದ ಕರೆಸುತಲಿ

ಜಲರುಹೇಕ್ಷಣ ವಿವಿಧ ಕರ್ಮಗಳ ಅನುದಿನದಿ ಮಾಡಿ

ತತ್ತತ್ಫಲಗಳ ಉಣ್ಣದೆ ಸಂಚರಿಸುವನು ನಿತ್ಯ ಸುಖ ಪೂರ್ಣ//17//


ತಿಳಿದುಪಾಸನೆಗೈವುತ ಈಪರಿ ಮಲಿನನಂತಿರು ದುರ್ಜನರ ಕಂಗಳಿಗೆ ಗೋಚರಿಸದೆ

ವಿಪಶ್ಚಿತರ ಒಡವೆ ಗರ್ವಿಸದೆ

ಮಳೆ ಬಿಸಿಲು ಹಸಿ ತೃಷಿ ಜಯಾಜಯ ಖಳರ ನಿಂದ್ಯಾನಿಂದ್ಯ ಭಯಗಳಿಗೆ

ಅಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ//18//


ಕಾನನ ಗ್ರಾಮಸ್ಥ ಸರ್ವ ಪ್ರಾಣಿಗಳು ಪ್ರತಿ ದಿವಸದಲಿ

ಏನೇನು ಮಾಡುವ ಕರ್ಮಗಳು ಹರಿ ಪೂಜೆಯಂದರಿದು ದೇನಿಸುತ

ಸದ್ಭಕ್ತಿಯಲಿ ಪವಮಾನವಂದಿತ ದೇವಾಂತರಾತ್ಮಕ

ಶ್ರೀನಿವಾಸನಿಗೆ ಅರ್ಪಿಸುತ ಮೋದಿಸುತ ನಲಿವುತಿರು//19//


ನೋಕನೀಯನು ಲೋಕದೊಳು ಶುನಿಸೂಕರಾದಿಗಳೊಳಗೆ ನೆಲೆಸಿದ್ದು

ಏಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ

ತಾ ಕರೆಸುತ ಒಳಗಿದ್ದು ತಿಳಿಸದೆ ಶ್ರೀ ಕಮಲಭವ ಮುಖ್ಯ ಸಕಲ

ದಿವೌಕಸಗಣ ಆರಾಧ್ಯ ಕೈಕೊಂಡು ಅನವರತ ಪೊರೆವ//20//


ಇನಿತು ಉಪಾಸನೆಗೈವುತಿಹ ಸಜ್ಜನರು ಸಂಸಾರದಲಿ ಪ್ರತಿಪ್ರತಿ ದಿನಗಳಲಿ

ಏನೇನು ಮಾಡುವುದು ಎಲ್ಲ ಹರಿಪೂಜೆ ಎನಿಸಿಕೊಂಬುದು ಸತ್ಯವು

ಈ ಮಾತಿನಲಿ ಸಂಶಯಪಡುವ ನರನು ಅಲ್ಪನು ಸುನಿಶ್ಚಯ

ಬಾಹ್ಯ ಕರ್ಮವ ಮಾಡಿ ಫಲವೇನು//21//


ಭೋಗ್ಯ ಭೋಕ್ಟ್ರುಗ ಳೊಳಗೆ ಹರಿ ತಾ ಭೋಗ್ಯ ಭೋಕ್ತನು ಎನಿಸಿ

ಯೋಗ್ಯಾಯೋಗ್ಯ ರಸಗಳ ದೇವ ದಾನವ ಗಣಕೆ ಉಣಿಸುವನು

ಭಾಗ್ಯನಿಧಿ ಭಕ್ತರಿಗೆ ಸದ್ವೈರಾಗ್ಯ ಭಕ್ತಿ ಜ್ಞಾನವೀವ

ಅಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲಿ ಕೊಡುತಿಪ್ಪ//22//


ಈ ಚತುರ್ದಶ ಭುವನದೊಳಗೆ ಚರಾಚರಾತ್ಮಕ ಜೀವರಲ್ಲಿ

ವಿರೋಚನಾತ್ಮಜ ವಂಚಕನು ನೆಲೆಸಿದ್ದು ದಿನದಿನದಿ

ಯಾಚಕನುಯೆಂದೆನಿಸಿಕೊಂಬ ಮರೀಚಿರ್ದಮನ ಸುಹಂಸ ರೂಪ

ನಿಷೇಚಕ ಆಹ್ವಯನು ಆಗಿ ಜನರಭಿಲಾಷೆ ಪೂರೈಪ//23//


ಅನ್ನದನ್ನಾದನ್ನಮಯ ಸ್ವಯಂ ಅನ್ನ ಬ್ರಹ್ಮಾದಿ ಅಖಿಳ ಚೇತನಕೆ

ಅನ್ನ ಕಲ್ಪಕನಾಹನು ಅನಿರುದ್ಧಾದಿ ರೂಪದಲಿ

ಅನ್ಯರನು ಅಪೇಕ್ಷಿಸದೆ ಗುಣ ಕಾರುಣ್ಯ ಸಾಗರ ಸೃಷ್ಟಿಸುವನು

ಹಿರಣ್ಯ ಗರ್ಭನೊಳಿದ್ದು ಪಾಲಿಸುವನು ಜಗತ್ರಯವ//24//


ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ ತ್ರಿಪಥಗಾಮಿನಿ ಪಿತ ತ್ರಿವಿಕ್ರಮ

ಕೃಪಣ ವತ್ಸಲ ಕುವಲಯ ದಳ ಶ್ಯಾಮ ನಿಸ್ಸೀಮ

ಅಪರಿಮಿತ ಚಿತ್ಸುಖ ಗುಣಾತ್ಮಕ ವಪುಷ ವೈಕುಂಠ ಆದಿ ಲೋಕಾಧಿಪ

ತ್ರಯೀಮಯ ತನ್ನವರ ನಿಷ್ಕಪಟದಿಂ ಪೊರೆವ//25//


ಲವಣ ಮಿಶ್ರಿತ ಜಲವು ತೋರ್ಪದು ಲವಣದೋಪಾದಿಯಲಿ ಜಿಹ್ವೆಗೆ

ವಿವರಗೈಸಲು ಶಕ್ಯವಾಗುವದೇನೋ ನೋಳ್ಪರಿಗೆ

ಸ್ವವಶ ವ್ಯಾಪಿಯೆನಿಸಿ ಲಕ್ಷ್ಮೀಧವ ಚರಾಚರದೊಳಗೆ ತುಂಬಿಹನು

ಅವಿದಿತನ ಸಾಕಲ್ಯ ಬಲ್ಲವರು ಆರು ಸುರರೊಳಗೆ//26//


ವ್ಯಾಪ್ಯನಂದದಿ ಸರ್ವಜೀವರೊಳಿಪ್ಪ ಚಿನ್ಮಯ ಘೋರ ಭವ

ಸಂತಪ್ಯ ಮಾನರು ಭಜಿಸೆ ಭಕುತಿಯಳಿಂದಲಿ ಇಹಪರದಿ ಪ್ರಾಪ್ಯನಾಗುವನು

ಅವರವಗುಣಗಳ ಒಪ್ಪುಗೊಂಬನು ಭಕ್ತವತ್ಸಲ ತಪ್ಪಿಸುವ

ಜನ್ಮಾದಿ ದೋಷಗಳ ಅವರಿಗೆ ಅನವರತ//27//


ಹಲವು ಬಗೆಯಲಿ ಹರಿಯ ಮನದಲಿ ಒಲಿಸಿ ನಿಲ್ಲಿಸಿ

ಏನು ಮಾಡುವ ಕೆಲಸಗಳು ಅವನಂಘ್ರಿ ಪೂಜೆಗಳು ಎಂದು ನೆನೆವುತಿರು

ಹಲಧರನುಜ ತಾನೇ ಸರ್ವ ಸ್ಥಳಗಳಲಿ ನೆಲೆಸಿದ್ದು

ನಿಶ್ಚಂಚಲ ಭಕುತಿ ಸುಜ್ಞಾನ ಭಾಗ್ಯವ ಕೊಟ್ಟು ಸಂತೈಪ//28//


ದೋಷ ಗಂಧ ವಿದೂರ ನಾನಾ ವೇಷ ಧಾರಕ ಈ ಜಗತ್ರಯ ಪೋಷಕ

ಪುರಾತನ ಪುರುಷ ಪುರುಹೂತ ಮುಖ ವಿನುತ

ಶೇಷವರ ಪರಿಯಂಕ ಶಯನ ವಿಭೀಷಣ ಪ್ರಿಯ ವಿಜಯ ಸಖ

ಸಂತೋಷಬಡಿಸುವ ಜನರಿಗೆ ಇಷ್ಟಾರ್ಥಗಳ ಪೂರೈಸಿ//29//


ಶ್ರೀ ಮಹೀ ಸೇವಿತ ಪದಾಂಬುಜ ಭೂಮ ಸದ್ಭಕ್ತಿ ಐಕ ಲಭ್ಯ

ಪಿತಾಮಹಾದಿ ಅಮರಾಸುರ ಪಾದ ಪಂಕಜ

ವಾಮ ವಾಮನ ರಾಮ ಸಂಸಾರಮಯ ಔಷಧ ಹೇ ಮಮ ಕುಲಸ್ವಾಮಿ

ಸಂತೈಸೆನಲು ಬಂದೊದಗುವನು ಕರುಣಾಳು//30//


ದುನುಜ ದಿವಿಜರೊಳಿದ್ದು ಅವರವರ ಅನುಸರಿಸಿ ಕರ್ಮಗಳ ಮಾಳ್ಪನು

ಜನನ ಮರಣಾದಿ ಅಖಿಳ ದೋಷ ವಿದೂರ

ಎಮ್ಮೊಡನೆ ಜನಿಸುವನು ಜೀವಿಸುವ ಸಂರಕ್ಷಣೆಯ ಮಾಡುವ ಎಲ್ಲ ಕಾಲದಿ

ಧನವ ಕಾಯ್ದಿಹ ಸರ್ಪನಂತೆ ಅನಿಮಿತ್ತ ಬಾಂಧವನು//31//


ಬಿಸರುಹ ಆಪ್ತ ಆಗಸದಿ ತಾನು ಉದಯಿಸಲು ವೃಕ್ಷಂಗಳ ನೆಳಲು ಪಸರಿಸುವವು

ಇಳೆಯೊಳು ಅಸ್ತಮಿಸಲಲ್ಲ ಅಲ್ಲೇ ಲೀನಹವು

ಶ್ವಸನ ಮುಖ್ಯ ಅಮರಾಂತರಾತ್ಮಕನ ಒಷದೊಳು ಇರುತಿಪ್ಪವು

ಈ ಜಗತ್ರಯ ಬಸಿರೊಳು ಇಂಬಿಟ್ಟು ಎಲ್ಲ ಕರ್ಮವ ತೋರ್ಪ ನೋಳ್ಪರಿಗೆ//32//


ತ್ರಿಭುವನ ಐಕ ಆರಾಧ್ಯ ಲಕ್ಷ್ಮೀ ಸುಭುಜ ಯುಗಳ ಆಲಂಗಿತಾಂಗ

ಸ್ವಭು ಸುಖಾತ್ಮ ಸುವರ್ಣವರ್ಣ ಸುಪರ್ಣ ವರವಾಹನ

ಅಭಯದ ಅನಂತಾರ್ಕ ಶಶಿ ಸನ್ನಿಭ ನಿರಂಜನ ನಿತ್ಯದಲಿ ತನಗೆ

ಅಭಿನಮಿಸುವರಿಗೆ ಏವ ಸರ್ವಾರ್ಥಗಳ ತಡೆಯದಲೆ//33//


ಕವಿಗಳಿಂದಲಿ ತಿಳಿದು ಪ್ರಾತಃ ಸವನ ಮಧ್ಯಂ ದಿನವು

ಸಾಯಮ ಸವನಗಳ ವಸು ರುದ್ರರು ಆದಿತ್ಯರೊಳು ರಾಜಿಸುವ

ಪವನನೊಳು ಕೃತಿ ಜಯ ಸುಮಾಯಾಧವನ ಮೂರ್ತಿತ್ರಯವ ಚಿಂತಿಸಿ

ದಿವಸವೆಂಬ ಆಹುತಿಗಳಿಂದ ಅರ್ಚಿಸುತ ಸುಖಿಸುತಿರು//34//


ಚತುರ ವಿಂಶತಿ ಅಬ್ಧ ವಸು ದೇವತೆಗಳೊಳು ಪ್ರದ್ಯುಮ್ನನು ಇಪ್ಪನು

ಚತುರ ಚತ್ವಾರಿಂಶತಿಗಳಲಿ ಸಂಕರುಷಣಾಖ್ಯ

ಹುತವಹ ಅಕ್ಷನೊಳಿಹನು ಮಾಯಪತಿಯು ಹದಿನಾರಧಿಕ

ದ್ವಾತ್ರಿಂಶತಿ ವರುಷಗಳಲಿಪ್ಪನು ಆದಿತ್ಯನೊಳು ಸಿತಕಾಯ//35//


ಷೋಡಶ ಉತ್ತರ ಶತ ವರುಷದಲಿ ಷೋಡಶ ಉತ್ತರ ಶತ ಸುರೂಪದಿ

ಕ್ರೀಡಿಸುವ ವಸು ರುದ್ರರು ಆದಿತ್ಯರೊಳು ಸತಿಸಹಿತ

ವ್ರೀಡವಿಲ್ಲದೆ ಭಜಿಪ ಭಕ್ತರ ಪೀಡಿಸುತ ದುರಿತ ಔಘಗಳ

ದೂರ ಓಡಿಸುತ ಬಳಿಯಲಿ ಬಿಡದೆ ನೆಲೆಸಿಪ್ಪ ಭಯಹಾರಿ//36//


ಮೂರಧಿಕ ಎಂಭತ್ತು ಸಹಸ್ರ ಐನೂರಿಪ್ಪತ್ತು ಎನಿಪ ರೂಪದಿ

ತೋರುತಿಪ್ಪ ದಿವಾ ನಿಶಾಧಿಪರೊಳಗೆ ನಿತ್ಯದಲಿ

ಭಾರತೀ ಪ್ರಾಣರೊಳಗಿದ್ದು ನಿವಾರಿಸುತ ಭಕ್ತರ ದುರಿತ

ಹಿಂಕಾರ ನಿಧನ ಪ್ರಥಮ ರೂಪದಿ ಪಿತೃಗಳನೆ ಪೊರೆವ//37//


ಬುದ್ಧಿ ಪೂರ್ವಕ ಉತ್ತಮೋತ್ತಮ ಶುದ್ಧ ಊರ್ಣ ಅಂಬರವ

ಪಂಕದೊಳು ಅಡ್ಡಿ ತೆಗೆಯಲು ಲೇಪವಾಗುವದೇ ಪರೀಕ್ಷಿಸಲು

ಪದ್ಮನಾಭನು ಸರ್ವಜೀವರೊಳಿದ್ದರೇನು

ಗುಣತ್ರಯಗಳಿಂ ಬದ್ಧನು ಆಗುವನೇನೋ? ನಿತ್ಯ ಸುಖಾತ್ಮ ಚಿನ್ಮಯನು//38//


ಸಕಲ ದೋಷ ವಿದೂರ ಶಶಿ ಪಾವಕ ಸಹಸ್ರ ಅನಂತ ಸೂರ್ಯ ಪ್ರಕಾರ ಸನ್ನಿಭ ಗಾತ್ರ

ಲಕುಮಿ ಕಳತ್ರ ಸುರಮಿತ್ರ

ವಿಖನ ಸಾಂಡದೊಳಿಪ್ಪ ಬ್ರಹ್ಮಾದಿ ಅಖಿಳ ಚೇತನ ಗಣಕೆ

ತಾನೇ ಸಖನು ಎನಿಸಿಕೊಂಡು ಅಕುಟಿಲ ಆತ್ಮಕನು ಇಪ್ಪನು ಅವರಂತೆ//39//


ದೇಶ ಭೇದಗಳಲ್ಲಿ ಇಪ್ಪ ಆಕಾಶದೋಪಾದಿಯಲಿ ಚೇತನ ರಾಶಿಯೊಳು ನೆಲೆಸಿಪ್ಪನು

ಅವ್ಯವಧಾನದಲಿ ನಿರುತ

ಶ್ರೀ ಸಹಿತ ಸರ್ವತ್ರದಿ ನಿರವಾಕಾಶ ಕೊಡುವಂದದಲಿ ಕೊಡುತ

ನಿರಾಶೆಯಲಿ ಸರ್ವಾಂತರಾತ್ಮಕ ಶೋಭಿಸುವ ಸುಖದ//40//


ಶ್ರೀ ವಿರಿಂಚಿ ಆದಿ ಅಮರಗಣ ಸಂಸೇವಿತ ಅಂಘ್ರಿ ಸರೋಜ

ಈ ಜಡ ಜೀವ ರಾಶಿಗಳ ಒಳ ಹೊರಗೆ ನೆಲೆಸಿದ್ದು ನಿತ್ಯದಲಿ

ಸಾವಕಾಶನು ಎನಿಸಿ ತನ್ನ ಕಳೇವರದೊಳು ಇಂಬಿಟ್ಟು ಸಲಹುವ

ದೇವ ದೇವಕೀ ರಮಣ ದಾನವ ಹರಣ ಜಿತಾಮರಣ//41//


ಮಾಸ ಒಂದಕೆ ಪ್ರತಿ ದಿವಸದಲಿ ಶ್ವಾಸಗಳು ಅಹವು

ಅಷ್ಟ ಚತ್ವಾರಿಂಶತಿ ಸಹಸ್ರಾಧಿಕ ಆರು ಸುಲಕ್ಷ ಸಂಖ್ಯೆಯಲಿ

ಹಂಸನಾಮಕ ಹರಿಯ ಷೋಡಶ ಈ ಶತಾಬ್ದದಿ ಭಜಿಸೆ ಒಲಿವ

ದಯಾಸಮುದ್ರ ಕುಚೇಲಗೆ ಒಲಿದಂದದಲಿ ದಿನದಿನದಿ//42//


ಸ್ಥೂಲ ದೇಹದೊಳಿದ್ದು ವರುಷಕೆ ಏಳಧಿಕ ಎಪ್ಪತ್ತು ಲಕ್ಷದ

ಮೇಲೆ ಎಪ್ಪತ್ತಾರು ಸಾವಿರ ಶ್ವಾಸ ಜಪಗಳನು

ಗಾಳಿ ದೇವನು ಕರುಣದಲಿ ಈರೇಳು ಲೋಕದೊಳುಳ್ಳ

ಚೇತನ ಜಾಲದೊಳು ಮಾಡುವನು ತ್ರಿಜಗದ್ವ್ಯಾಪ್ತ ಪರಮಾಪ್ತ//43//


ಈರೆರೆಡು ದೇಹಗಳೊಳಗಿದ್ದು ಸಮೀರ ದೇವನು ಶ್ವಾಸ ಜಪ

ನಾನೂರು ಅಧಿಕವು ಆಗಿಪ್ಪ ಎಂಭತ್ತಾರು ಸಹಸ್ರ ತಾ ರಚಿಸುವನು ದಿವಸ ಒಂದಕೆ

ಮೂರು ವಿಧ ಜೀವರೊಳಗಿದ್ದು

ಖರಾರಿ ಕರುಣಾಬಲವು ಅದೆಂತುಟೊ ಪವನ ರಾಯನೊಳು//44//


ಶ್ರೀಧವ ಜಗನ್ನಾಥ ವಿಠಲ ತಾ ದಯದಿ ವದನದೊಳು ನುಡಿದ ಉಪಾದಿಯಲಿ

ನಾ ನುಡಿದೆನು ಅಲ್ಲದೆ ಕೇಳಿ ಬುಧ ಜನರು

ಸಾಧು ಲಿಂಗ ಪ್ರದರ್ಶಕರು ನಿಷೇಧಗೈಸಿದರೆ ಏನಹುದು

ಎನ್ನಪರಾಧವು ಏನಿದರೊಳಗೆ ಪೇಳ್ವುದು ತಿಳಿದು ಕೋವಿದರು//45//


//ಇತಿ ಶ್ರೀ ನಾಡೀಪ್ರಕರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Tuesday, January 15, 2013

ಶ್ರೀ ಹರಿಕಥಾಮೃತಸಾರ - 11

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದುಕೆಯ ಕಂಟಕಸಿಕ್ತ ಮೊದಲಾದವು ಅನುದಿನ ಬಾಧಿಸುವನೆ

ಏಕಾದಶ ಇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ಸಾದರದಿ ನೆನೆವವನು

ಏನಪರಾಧಗಳ ಮಾಡಿದರು ಸರಿಯೇ

ನಿರೋಧಗೈಸವು ಮೋಕ್ಷಮಾರ್ಗಕೆ ದುರಿತ ರಾಶಿಗಳು//1//


ಹಗಲು ನಂದಾದೀಪದಂದದಿ ನಿಗಮ ವೇದ್ಯನ ಪೂಜಿಸುತ

ಕೈ ಮುಗಿದು ನಾಲ್ಕರೊಳು ಒಂದು ಪುರುಷಾರ್ಥವನು ಬೇಡದಲೇ

ಜಗದುದರ ಕೊಟ್ಟುದನು ಭುಂಜಿಸು ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು

ಭಗವಧೀನವೆಂದು ಅಡಿಗಡಿಗೆ ನೆನೆವುತಿರು//2//


ಅಸ್ವತಂತ್ರನು ಜೀವ ಹರಿ ಸರ್ವ ಸ್ವತಂತ್ರನು ನಿತ್ಯ ಸುಖಮಯ

ನಿ:ಸ್ವ ಬದ್ಧ ಅಲ್ಪಜ್ಞ ಶಕ್ತ ಸದುಃಖ ನಿರ್ವಿಣ್ಣ

ಹ್ರಸ್ವ ದೇಹಿ ಸನಾಥಜೀವನು ವಿಶ್ವ ವ್ಯಾಪಕ ಕರ್ತೃ

ಬ್ರಹ್ಮ ಸರಸ್ವತಿ ಈಶಾದಿ ಅಮರನುತ ಹರಿಯೆಂದು ಕೊಂಡಾಡು//3//


ಮತ್ತೆ ವಿಶ್ವಾದಿ ಎಂಟು ರೂಪ ಒಂಭತ್ತರಿಂದಲಿ ಪೆಚ್ಚಿಸಲು

ಎಪ್ಪತ್ತೆರಡು ರೂಪಗಳು ಅಹವು ಒಂದೊಂದೆ ಸಾಹಸ್ರ

ಪೃಥ್ ಪೃಥಕು ನಾಡಿಗಳೊಳಗೆ ಸರ್ವೋತ್ತಮನ ತಿಳಿಯೆಂದು

ಭೀಷ್ಮನು ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ//4//


ಎಂಟು ಪ್ರಕೃತಿಗಳೊಳಗೆ ವಿಶ್ವಾದಿ ಎಂಟು ರೂಪದಲಿದ್ದು

ಭಕ್ತರ ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ

ನೆಂಟನಂದದಿ ಎಡಬಿಡದೆ ವೈಕುಂಠರಮಣನು

ತನ್ನವರ ನಿಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ//5//


ಸ್ವರಮಣನು ಶಕ್ತಿ ಆದಿ ರೂಪದಿ ಮಾನಿಗಳೊಳಗೆ ನೆಲೆಸಿದ್ದು

ಅರವಿದೂರನು ಸ್ಥೂಲ ವಿಷಯಗಳ ಉಂಡುಣಿಪ ನಿತ್ಯ

ಅರಿಯದಲೆ ನಾನುಂಬೆನು ಎಂಬುವ ನಿರಯಗಳ ಉಂಬುವನು

ನಿಶ್ಚಯ ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು//6//


ಸುರುಚಿರುಚಿರ ಸುಗಂಧ ಸುಚಿಯೆಂದು ಇರುತಿಹನು ಷಡ್ರಸಗಳೊಳು

ಹನ್ನೆರಡು ರೂಪದಲಿ ಇಪ್ಪ ಶ್ರೀ ಭೂ ದುರ್ಗೆಯರ ಸಹಿತ

ಸ್ವರಮಣನು ಎಪ್ಪತ್ತೆರಡು ಸಾವಿರ ಸಮೀರನ ರೂಪದೊಳಗಿದ್ದು

ಉರುಪರಾಕ್ರಮ ಕರ್ತೃ ಎನಿಸುವ ನಾಡಿಯೊಳಗಿದ್ದು//7//


ಸರ್ವತ್ರದಲಿ ನೆನೆವರನು ಅನ್ಯ ಕರ್ಮವ ಮಾಡಿದರು ಸರಿ

ಪುಣ್ಯ ಕರ್ಮಗಳು ಎನಿಸುವವು ಸಂದೇಹವಿನಿತಿಲ್ಲ

ನಿನ್ನ ಸ್ಮರಿಸದೆ ಸ್ನಾನ ಜಪ ಹೋಮ ಅನ್ನ ವಸ್ತ್ರ ಗಜ ಅಶ್ವ ಭೂ ಧನ ಧಾನ್ಯ

ಮೊದಲಾದ ಅಖಿಳ ಧರ್ಮವ ಮಾಡಿ ಫಲವೇನು//8//


ಇಷ್ಟ ಭೋಗ್ಯ ಪದಾರ್ಥದೊಳು ಶಿಪಿವಿಷ್ಟ ನಾಮದಿ ಸರ್ವ ಜೀವರ ತುಷ್ಟಿ ಬಡಿಸುವ

ದಿನದಿನದಿ ಸಂತುಷ್ಟ ತಾನಾಗಿ

ಕೋಷ್ಟದೊಳು ನೆಲೆಸಿದ್ದು ರಸಯಮಯ ಪುಷ್ಟಿಯೈದಿಸುತ ಇಂದ್ರಿಯಗಳೊಳು

ಪ್ರೇಷ್ಟನಾಗಿದ್ದು ಎಲ್ಲ ವಿಷಯಗಳ ಉಂಬ ತಿಳಿಸದಲೆ//9//


ಕಾರಣಾಹ್ವಯ ಜ್ಞಾನ ಕರ್ಮ ಪ್ರೇರಕನು ತಾನಾಗಿ ಕ್ರಿಯೆಗಳ ತೋರುವನು

ಕರ್ಮ ಇಂದ್ರಿಯ ಅಧಿಪರೊಳಗೆ ನೆಲೆಸಿದ್ದು

ಮೂರು ಗುಣಮಯ ದ್ರವ್ಯಗ ತದಾಕಾರ ತನ್ನಾಮದಲಿ ಕರೆಸುವ

ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು//10//


ದ್ರವ್ಯನು ಎನಿಸುವ ಭೂತ ಮಾತ್ರದೊಳು ಅವ್ಯಯನು

ಕರ್ಮ ಇಂದ್ರಿಯಗಳೊಳು ಭವ್ಯ ಸತ್ಕ್ರಿಯನೆನಿಪ ಜ್ಞಾನ ಇಂದ್ರಿಯಗಳೊಳಗಿದ್ದು

ಸ್ತವ್ಯಕಾರಕನು ಎನಿಸಿ ಸುಖಮಯ ಸೇವ್ಯ ಸೇವಕನು ಎನಿಸಿ ಜಗದೊಳು

ಹವ್ಯವಾಹನನು ಅರಣಿಯೊಳಗೆ ಇಪ್ಪಂತೆ ಇರುತಿಪ್ಪ//11//


ಮನವೇ ಮೊದಲಾದ ಇಂದ್ರಿಯಗಳೊಳಗೆ ಅನಿಲದೇವನು ಶುಚಿಯೆನಿಸಿಕೊಂಡು

ಅನವರತ ನೆಲೆಸಿಪ್ಪ ಶುಚಿಷತ್ ಹೋತನೆಂದೆನಿಸಿ ತನುವಿನೊಳಗಿಪ್ಪನು

ಸದಾ ವಾಮನ ಹೃಷೀಕೇಶಾಖ್ಯ ರೂಪದಲಿ

ಅನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ//12//


ಪ್ರೇರಕ ಪ್ರೇರ್ಯರೊಳು ಪ್ರೇರ್ಯ ಪ್ರೇರಕನು ತಾನಾಗಿ

ಹರಿ ನಿರ್ವೈರದಿಂದ ಪ್ರವರ್ತಿಸುವ ತನ್ನಾಮ ರೂಪದಲಿ

ತೋರಿಕೊಳ್ಳದೆ ಸರ್ವರೊಳು ಭಾಗೀರಥೀ ಜನಕನು

ಸಕಲ ವ್ಯಾಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ//13//


ಹರಿಯೆ ಮುಖ್ಯ ನಿಯಾಮಕನು ಎಂದರಿದು ಪುಣ್ಯಾಪುಣ್ಯ ಹರುಷಾಹರುಷ

ಲಾಭಾಲಾಭ ಸುಖದುಃಖಾದಿ ದ್ವಂದ್ವಗಳ

ನಿರುತ ಅವರಂಘ್ರಿಗೆ ಸಮರ್ಪಿಸಿ ನರಕ ಭೂ ಸ್ವರ್ಗಾಪ ವರ್ಗದಿ

ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು//14//


ಮಾಣವಕ ತತ್ಫಲಗಳ ಅನುಸಂಧಾನವಿಲ್ಲದೆ

ಕರ್ಮಗಳ ಸ್ವ ಇಚ್ಚಾನುಸಾರದಿ ಮಾಡಿ ಮೋದಿಸುವಂತೆ

ಪ್ರತಿದಿನದಿ ಜ್ಞಾನ ಪೂರ್ವಕ ವಿಧಿ ನಿಷೇಧಗಳು ಏನು ನೋಡದೆ ಮಾಡು

ಕರ್ಮ ಪ್ರಧಾನ ಪುರುಷೇಶನಲಿ ಭಕುತಿಯ ಮಾಡು ಕೊಂಡಾಡು//15//


ಹಾನಿ ವೃದ್ಧಿ ಜಯಾಪಜಯಗಳು ಏನು ಕೊಟ್ಟುದ ಭುಂಜಿಸುತ

ಲಕ್ಷ್ಮೀ ನಿವಾಸನ ಕರುಣವನೆ ಸಂಪಾದಿಸು ಅನುದಿನದಿ

ಜ್ಞಾನ ಸುಖಮಯ ತನ್ನವರ ಪರಮ ಅನುರಾಗದಿ ಸಂತೈಪ

ದೇಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು//16//


ಆ ಪರಮ ಸಕಲ ಇಂದ್ರಿಯಗಳೊಳು ವ್ಯಾಪಕನು ತಾನಾಗಿ

ವಿಷಯವ ತಾ ಪರಿಗ್ರಹಿಸುವನು ತಿಳಿಸದೆ ಸರ್ವಜೀವರೊಳು

ಪಾಪ ರಹಿತ ಪುರಾಣ ಪುರುಷ ಸಮೀಪದಲಿ ನೆಲೆಸಿದ್ದು

ನಾನಾ ರೂಪಕ ಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ//17//


ಖೇಚರರು ಭೂಚರರು ವಾರಿ ನಿಶಾಚರರೊಳಿದ್ದು ಅವರ ಕರ್ಮಗಳ

ಆಚರಿಸುವನು ಘನ ಮಹಿಮ ಪರಮ ಅಲ್ಪನೋಪಾದಿ

ಗೋಚರಿಸು ಬಹು ಪ್ರಕಾರ ಆಲೋಚನೆಯ ಮಾಡಿದರು ಮನಸಿಗೆ

ಕೀಚಕಾರಿ ಪ್ರೀಯ ಕವಿಜನಗೇಯ ಮಹರಾಯ//18//


ಒಂದೇ ಗೋತ್ರ ಪ್ರವರ ಸಂಧ್ಯಾವಂದನೆಗಳು ಮಾಡಿ

ಪ್ರಾಂತಕೆ ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬoತೆ

ಒಂದೇ ದೇಹದೊಳಿದ್ದು ನಿಂದ್ಯಾನಿಂದ್ಯ ಕರ್ಮವ ಮಾಡಿ ಮಾಡಿಸಿ

ಇಂದಿರೇಶನು ಸರ್ವಜೀವರೊಳು ಈಶನೆನಿಸುವನು//19//


ಕಿಟ್ಟಗಟ್ಟಿದ ಲೋಹ ಪಾವಕ ಸುತ್ತು ವಿಂಗಡ ಮಾಡುವಂತೆ

ಘರಟ್ಟ ವ್ರೀಹಿಗಳು ಇಪ್ಪ ತಂಡುಲ ಕಡೆಗೆ ತೆಗೆವಂತೆ

ವಿಠಲಾ ಎಂದೊಮ್ಮೆ ಮೈಮರೆದು ಅಟ್ಟಹಾಸದಿ ಕರೆಯೆ

ದುರಿತಗಳು ಅಟ್ಟುಳಿಯ ಬಿಡಿಸೆವನ ತನ್ನೊಳಗಿಟ್ಟು ಸಲಹುವನು//20//


ಜಲಧಿಯೊಳಗೆ ಸ್ವೇಚ್ಚಾನುಸಾರದಿ ಜಲಚರ ಪ್ರಾಣಿಗಳು

ತತ್ತತ್ ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ

ನಲ್ಲಿನ ನಾಭನೊಳು ಅಬ್ಜ ಭವ ಮುಪ್ಪೊಳಲ ಉರಿಗಮೈಗಣ್ಣ ಮೊದಲಾದ

ಹಲವು ಜೀವರಗಣವು ವರಿಸುತಿಹುದು ನಿತ್ಯದಲಿ//21//


ವಾಸುದೇವನು ಒಳಹೊರಗೆ ಅವಕಾಶದನು ತಾನಾಗಿ

ಬಿಂಬ ಪ್ರಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ

ಈ ಸಮನ್ವಯವೆಂದೆನಿಪ ಸದುಪಾಸನವಗೈವವನು

ಮೋಕ್ಷ ಅನ್ವೇಷಿಗಳೊಳುತ್ತಮನು ಜೀವನ್ಮುಕ್ತನ ಅವನಿಯೊಳು//22//


ಭೋಗ್ಯ ವಸ್ತುಗಳೊಳಗೆ ಯೋಗ್ಯಾಯೋಗ್ಯ ರಸಗಳನರಿತು

ಯೋಗ್ಯಾಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸು ಅನುದಿನದಿ

ಭಾಗ್ಯ ಬಡತನ ಬರಲು ಹಿಗ್ಗದೆ ಕುಗ್ಗಿ ಸೊರಗದೆ

ಸದ್ಭಕ್ತಿ ವೈರಾಗ್ಯಗಳನೆ ಮಾಡು ನೀ ನಿರ್ಭಾಗ್ಯನೆನಿಸದಲೆ//23//


ಸ್ಥಳ ಜಲಾದ್ರಿಗಳಲ್ಲಿ ಜನಿಸುವ ಫಲ ಸುಪುಷ್ಪಜ ಗಂಧರಸ

ಶ್ರೀ ತುಳಸಿ ಮೊದಲಾದ ಅಖಿಳ ಪೂಜಾ ಸಾಧನ ಪದಾರ್ಥ

ಹಲವು ಬಗೆಯಿಂದ ಅರ್ಪಿಸುತ ಬಾಂಬೊಳೆಯ ಜನಕಗೆ

ನಿತ್ಯಾನಿತ್ಯದಿ ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು//24//


ಶ್ರೀಕರನ ಸರ್ವತ್ರದಲಿ ಅವಲೋಕಿಸುತ ಗುಣ ರೂಪ ಕ್ರಿಯ

ವ್ಯತಿರೇಕ ತಿಳಿಯದಲೆ ಅನ್ವಯಿಸು ಬಿಂಬನಲಿ ಮರೆಯದಲೆ

ಸ್ವೀಕರಿಸುವನು ಕರುಣದಿಂದ ನಿರಾಕರಿಸದೆ ಕೃಪಾಳು

ಭಕ್ತರ ಶೋಕಗಳ ಪರಿಹರಿಸಿ ಸುಖವಿತ್ತು ಅನವರತ ಪೊರೆವ//25//


ಇನಿತು ವ್ಯತಿರೇಕ ಅನ್ವಯಗಳು ಎಂದೆನಿಪ ಪೂಜಾ ವಿಧಿಗಳನೆ ತಿಳಿದು

ಅನಿಮಿಷ ಈಶನ ತೃಪ್ತಿ ಪಡಿಸುತಲಿರು ನಿರಂತರದಿ

ಘನ ಮಹಿಮ ಕೈಕೊಂಡು ಸ್ಥಿತಿ ಮೃತಿ ಜನುಮಗಳ ಪರಿಹರಿಸಿ

ಸೇವಕ ಜನರೊಳಿಟ್ಟು ಆನಂದ ಪಡಿಸುವ ಭಕ್ತವತ್ಸಲನು//26//


ಜಲಜನಾಭನಿಗೆ ಎರಡು ಪ್ರತಿಮೆಗಳು ಇಳೆಯೊಳಗೆ ಜಡ ಚೇತನಾತ್ಮಕ

ಚಲದೊಳು ಇರ್ಬಗೆ ಸ್ತ್ರೀ ಪುರುಷ ಭೇದದಲಿ ಜಡದೊಳಗೆ ತಿಳಿವುದು ಆಹಿತ ಪ್ರತಿಮೆ

ಸಹಜ ಆಚಲಗಳು ಎಂದು ಇರ್ಬಗೆ ಪ್ರತೀಕದಿ

ಲಲಿತ ಪಂಚತ್ರಯ ಸುಗೋಳಕವ ಅರಿತು ಭಜಿಸುತಿರು//27//


ವಾರಿಜಾಸನ ವಾಯುವೀಂದ್ರ ಉಮಾರಮಣ ನಾಕೇಶ ಸಮರ ಅಹಂಕಾರಿಕ

ಪ್ರಾಣಾದಿಗಳು ಪುರುಷರ ಕಳೇವರದಿ

ತೋರಿಕೊಳದೆ ಅನಿರುದ್ಧ ದೋಷ ವಿದೂರ ನಾರಾಯಣನ ರೂಪ

ಶರೀರಮಾನಿಗಳು ಆಗಿ ಭಜಿಸುತ ಸುಖವ ಕೊಡುತಿಹರು//28//


ಸಿರಿ ಸರಸ್ವತಿ ಭಾರತೀ ಸೌಪರಣೀ ವಾರುಣಿ ಪಾರ್ವತೀ ಮುಖರು ಇರುತಿಹರು

ಸ್ತ್ರೀಯರೊಳಗೆ ಅಬಿಮಾನಿಗಳು ತಾವೆನಿಸಿ

ಅರುಣ ವರ್ಣ ನಿಭಾಂಗ ಶ್ರೀ ಸಂಕರುಷಣ ಪ್ರದ್ಯುಮ್ನ ರೂಪಗಳ

ಇರುಳು ಹಗಲು ಉಪಾಸನವ ಗೈವುತಲೆ ಮೋದಿಪರು//29//


ಕೃತ ಪ್ರತೀಕದಿ ಟಂಕಿ ಭಾರ್ಗವ ಹುತವಹ ಅನಿಲ ಮುಖ್ಯ ದಿವಿಜರು

ತುತಿಸಿಕೊಳುತ ಅಭಿಮಾನಿಗಳು ತಾವಾಗಿ ನೆಲೆಸಿದ್ದು

ಪ್ರತಿ ದಿವಸ ಶ್ರೀ ತುಳಸಿ ಗಂಧಾಕ್ಷತೆ ಕುಸುಮ ಫಲ ದೀಪ ಪಂಚಾಮೃತದಿ

ಪೂಜಿಪ ಭಕುತರಿಗೆ ಕೊದುತಿಹನು ಪುರುಷಾರ್ಥ//30//


ನಗಗಳ ಅಭಿಮಾನಿಗಳು ಎನಿಪ ಸುರರುಗಳು

ಸಹಜ ಅಚಲಗಳಿಗೆ ಮಾಣಿಗಳು ಎನಿಸಿ ಶ್ರೀ ವಾಸುದೇವನ ಪೂಜಿಸುತಲಿ ಇಹರು

ಸ್ವಾಗತ ಭೇದ ವಿವರ್ಜಿತನ ನಾಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ

ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ//31//


ಆವ ಕ್ಷೇತ್ರಕೆ ಪೋದರೇನು? ಇನ್ನಾವ ತೀರ್ಥದಿ ಮುಳುಗಲೇನು?

ಇನ್ನಾವ ಜಪ ತಪ ಹೋಮ ದಾನವ ಮಾಡಿ ಫಲವೇನು?

ಶ್ರೀವರ ಜಗನ್ನಾಥ ವಿಠಲ ಈ ವಿಧದಿ ಜಂಗಮ ಸ್ಥಾವರ ಜೀವರೊಳು

ಪರಿಪೂರ್ಣನೆಂದು ಅರಿಯದಿಹ ಮಾನವನು//32//


//ಇತಿ ಶ್ರೀ ಸ್ಥಾವರಜಂಗಮ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 10

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಸರ್ವಪ್ರತೀಕ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ

ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ

ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ

ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1//


ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು

ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು

ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ

ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ//2//


ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು

ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು

ಅವರುಂಬ ಓದನವೇ ನೈವೇದ್ಯ

ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ//3//


ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು

ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು

ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು

ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ//4//

 
ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು

ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು

ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ

ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು//5//


ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ

ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು

ತಿಳಿದಿಹ ಸೂರಿಗಳು ದೇವತೆಗಳು

ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ//6//


ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು

ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ

ನೆಲೆಗೊಂಡು ಈವರು ಅಖಿಳಾರ್ಥಗಳನು

ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು//7//


ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ

ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ

ವಿಧಿ ನಿಷೇಧಗಳು ಆಚರಿಸುವರು ಬುಧರು

ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ//8//


ಕಲಿಯೆ ಮೊದಲಾದ ಅಖಿಳ ದಾನವರೊಳಗೆ

ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ

ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ

ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ//9//


ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?

ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?

ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ

ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು//10//


ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ

ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು

ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ

ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ//11//


ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ

ಜಲಕೆದುರು ಈಸಿದರೆ ಕೈಸೋತು ಮುಳುಗುವ

ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು

ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು//12//


ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ

ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ

ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ

ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು//13//


ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು

ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು

ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು

ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು//14//


ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು

ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು

ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ

ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು//15//


ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು

ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು

ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು

ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು//16//


ಏನು ಕೇಳಿದರೇನು ನೋಡಿದರೇನು ಓದಿದರೇನು

ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ

ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು

ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ//17//


ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ

ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ

ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು

ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು//18//


ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ

ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು

ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ

ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ//19//


ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು

ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ

ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ

ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು//20//


ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ

ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ

ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ

ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ//21//


ಲೋಕವಾರ್ತೆಯು ಇದಲ್ಲ ಪರ ಲೋಕೈಕನಾಥನ ವಾರ್ತೆ ಕೇಳ್ವರೆ

ಕಾಕುಮನುಜರಿಗೆ ಪರಿಮಳವು ಷಟ್ಪದ ಸ್ವೀಕರಿಸುವಂದದಲಿ

ಜಲಚರ ಭೇಕ ಬಲ್ಲುದೆ? ಇದರ ರಸ ಹರಿ ಭಕುತಗಲ್ಲದಲೆ//22//


ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ

ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ

ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ

ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ//23//


ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ

ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ

ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ

ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ//24//


ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ

ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ

ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ

ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ//25//


//ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, January 9, 2013

ಶ್ರೀ ಹರಿಕಥಾಮೃತಸಾರ - 9

//ಶ್ರೀ ಗುರುಭ್ಯೋ ನಮಃ//
 
//ಪರಮ ಗುರುಭ್ಯೋ ನಮಃ//
 
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
 
ಶ್ರೀ ಜಗನ್ನಾಥದಾಸ ವಿರಚಿತ
 
ಶ್ರೀ ಹರಿಕಥಾಮೃತಸಾರ
 
//ಶ್ರೀ ವರ್ಣಪ್ರಕ್ರಿಯ ಸಂಧಿ//
 
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
 
ಹರಿಯೆ ಪಂಚಾಶದ್ವರ್ಣ ಸುಸ್ವರವು ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ಇರುವ
ತನ್ನಾಮ ರೂಪಗಳರಿತು ಉಪಾಸನೆಗೈವರು ಇಳೆಯೊಳು
ಸುರರೆ ಸರಿ ನರರಲ್ಲ ಅವರು ಆಡುವುದೇ ವೇದಾರ್ಥ//1//
 
ಈಶನಲಿ ವಿಜ್ಞಾನ ಭಗವದ್ದಾಸರಲಿ ಸದ್ಭಕ್ತಿ ವಿಷಯ ನಿರಾಶೆ
ಮಿಥ್ಯಾ ವಾದದಲಿ ಪ್ರದ್ವೇಷ ನಿತ್ಯದಲಿ ಈ ಸಮಸ್ತ ಪ್ರಾಣಿಗಳಲಿ
ರಮೇಶನು ಇಹನೆಂದು ಅರಿದು ಅವರ ಅಭಿಲಾಷೆಗಳ ಪೂರೈಸುವುದೆ
ಮಹಾಯಜ್ಞೆ ಹರಿಪೂಜೆ//2//
 
ತ್ರಿದಶ ಏಕಾತ್ಮಕನು ಎನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರು ಎನಿಸುವ ಮುಖ್ಯ ಪ್ರಾಣ ಆದಿತ್ಯರೊಳು ನೆಲೆಸಿ
ವಿದಿತನಾಗಿದ್ದು ಅನವರತ ನಿರವಧಿಕ ಮಹಿಮನು
ಸಕಲ ವಿಷಯವ ನಿಧನ ನಾಮಕ ಸಂಕರುಷಣ ಅಹ್ವಯನು ಸ್ವೀಕರಿಪ//3//
 
ದೈಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು
ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ
ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ
ಅಹರ್ ಅಹರ್ ಭಗವಂತಗರ್ಪಿಸು ಪರಮ ಭಕುತಿಯಲಿ//4//
 
ಮೂರುವಿಧ ಕರ್ಮಗಳ ಒಳಗೆ ಕಂಸಾರಿ ಭಾರ್ಗವ ಹಯವದನ
ಸಂಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ
ಸೂರಿ ಮಾನವ ದಾನವರೊಳು ವಿಕಾರ ಶೂನ್ಯನು ಮಾಡಿ ಮಾಡಿಸಿ
ಸಾರಭೋಕ್ತನು ಸ್ವೀಕರಿಸಿ ಕೊಡುತ ಇಪ್ಪ ಜೀವರಿಗೆ//5//
 
ಅನಳ ಪಕ್ವವ ಗೈಸಿದ ಅನ್ನವ ಅನಳನೊಳು ಹೋಮಿಸುವ ತೆರದಂತೆ
ಅನಿಮಿಶೇಷನು ಮಾಡಿ ಮಾಡಿಸಿದಖಿಳ ಕರ್ಮಗಳ ಮನವಚನ ಕಾಯದಲಿ ತಿಳಿದು
ಅನುದಿನದಿ ಕೊಡು ಶಂಕಿಸದೆ ವೃಜಿನ ಅರ್ದನ
ಸದಾ ಕೈಕೊಂಡು ಸಂತೈಸುವನು ತನ್ನವರ//6//
 
ಕುದುರೆ ಬಾಲದ ಕೊನೆಯ ಕೂದಲು ತುದಿ ವಿಭಾಗವ ಮಾಡಿ ಶತವಿಧವು
ಅದರೊಳೊಂದನು ನೂರು ಭಾಗವ ಮಾಡಲು ಎಂತಿಹುದೋ
ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ
ತೃಣಾಂತ ಜೀವರೊಳಧಿಕ ನ್ಯೂನತೆಯಿಲ್ಲವು ಎಂದಿಗೂ ಜೀವ ಪರಮಾಣು//7//
 
ಜೀವನ ಅಂಗುಷ್ಠ ಆಗ್ರಾ ಮೂರುತಿ ಜೀವನ ಅಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು
ಎವಮಾದಿ ಅನಂತ ರೂಪದಿ ಯಾವತ್ ಅವಯವಗಳೊಳು ವ್ಯಾಪಿಸಿ ಕಾವ
ಕರುಣಾಳುಗಳ ದೇವನು ಈ ಜಗತ್ರಯವ//8//
 
ಬಿಂಬ ಜೀವ ಅಂಗುಷ್ಠ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂಕ್ಷ್ಮ ಅಂಬರದಿ
ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ
ಎಂಬರು ಈತಗೆ ಕೋವಿದರು ವಿಶ್ವಂಭರಾತ್ಮಕ ಪ್ರಾಜ್ಞ
ಭಟಕ ಕುಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು//9//
 
ಪುರುಷನಾಮಕ ಸರ್ವ ಜೀವರೊಳಿರುವ ದೇಹ ಆಕಾರ ರೂಪದಿ
ಕರುಣ ನಿಯಾಮಕ ಹೃಷೀಕಪನು ಇಂದ್ರಿಯಂಗಳಲಿ
ತುರಿಯ ನಾಮಕ ವಿಶ್ವ ತಾ ಹನ್ನೆರಡು ಬೆರಳುಳಿದು ಉತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವರಿಯಾ ನಾಡಿಯೊಳಗಿಪ್ಪ//10//
 
ವ್ಯಾಪಕನು ತಾನಾಗಿ ಜೀವ ಸ್ವರೂಪ ದೇಹದ ಒಳಹೊರಗೆ ನಿರ್ಲೇಪನು ಆಗಿಹ
ಜೀವಕೃತ ಕರ್ಮಗಳನು ಆಚರಿಸಿ
ಶ್ರೀ ಪಯೋಜಭವ ಈರರಿಂದ ಪ್ರದೀಪವರ್ಣ ಸ್ವಮೂರ್ತಿ ಮಧ್ಯಗ ತಾ ಪೊಳೆವ
ವಿಶ್ವಾದಿ ರೂಪದಿ ಸೇವೆ ಕೈಕೊಳುತ//11//
 
ಗರುಡ ಶೇಷ ಭವಾದಿ ನಾಮವ ಧರಿಸಿ ಪವನ
ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ
ಸರಸಿಜಾಸನ ವಾಣಿ ಭಾರತಿ ಭರತನಿಂದ ಒಡಗೂಡಿ
ಲಿಂಗದಿ ಇರುತಿಹನು ಮಿಕ್ಕ ಆದಿತೇಯರಿಗೆ ಇಲ್ಲವು ಆಸ್ಥಾನ//12//
 
ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಚೆಯಲಿ
ಕೇವಲ ಜಡ ಪ್ರಕೃತಿಯಿದಕೆ ಅಧಿದೇವತೆಯು ಮಹಾಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು//13//
 
ಆರಧಿಕ ದಶಕಳೆಗಳು ಉಳ್ಳ ಶರೀರವು ಅನಿರುದ್ಧಗಳ ಮಧ್ಯದಿ ಸೇರಿ ಇಪ್ಪದು
ಜೀವ ಪರಮಾಚ್ಚಾದಿಕ ದ್ವಯವು
ಬಾರದಂದದಿ ದಾನವರನು ಅತಿ ದೂರಗೈಸುತ ಶ್ರೀಜನಾರ್ಧನ
ಮೂರು ಗುಣದೊಳಗಿಪ್ಪನು ಎಂದಿಗು ತ್ರಿವೃತುಯೆಂದೆನಿಸಿ//14//
 
ರುದ್ರ ಮೊದಲಾದ ಅಮರರಿಗೆ ಅನಿರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರು ಅಲ್ಲಿಂದ ಇತ್ತ ಸ್ಥೂಲದಲಿ ಕ್ರುದ್ಧ ಅಖಿಲ ದಿವಿಜರು
ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸಮೃದ್ಧಿಗಳನು
ಆಚರಿಸುವರು ಪ್ರಾಣೇಶನ ಆಜ್ಞೆಯಲಿ//15//
 
ಮಹಿಯೊಳಗೆ ಸುಕ್ಷೇತ್ರ ತೀರ್ಥವು ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕ ತ್ರಯ ಧರ್ಮಕರ್ಮಗಳ
ದ್ರುಹಿಣ ಮೊದಲಾದ ಅಮರರು ಎಲ್ಲರ ವಹಿಸಿಸ್ ಗುಣಗಳನು ಅನುಸರಿಸಿ
ಸನ್ನಿಹಿತರು ಆಗಿದ್ದು ಎಲ್ಲರೊಳು ಮಾಡುವರು ವ್ಯಾಪಾರ//16//
 
ಕೇಶ ಸಾಸಿರ ವಿಧ ವಿಭಾಗವಗೈಸಲು ಎನತು ಅನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದು ಈ ದೇಹಮಧ್ಯದಲಿ
ಆ ಸುಷುಮ್ನಕೆ ವಜ್ರಕಾರ್ಯ ಪ್ರಕಾಶಿನೀ ವೈದ್ಯುತಿಗಳಿಹವು
ಪ್ರದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ//17//
 
ಆ ನಳಿನ ಭವ ನಾಡಿಯೊಳಗೆ ತ್ರಿಕೋಣ ಚಕ್ರವು ಇಪ್ಪುದು
ಅಲ್ಲಿ ಕೃಶಾನು ಮಂಡಲ ಮಧ್ಯಗನು ಸಂಕರುಷಣ ಆಹ್ವಯನು
ಹೀನ ಪಾಪಾತ್ಮಕ ಪುರುಷನ ದಹಾನ ಗೈಸುತ ದಿನದಿನದಿ
ವಿಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣಿ//18//
 
ಮಧ್ಯ ನಾಡಿಯ ಮಧ್ಯದಲಿ ಹೃತ್ಪದ್ಮ ಮೂಲದಿ ಮೂಲಪತಿ ಪದಪದ್ಮ
ಮೂಲದಲಿ ಇಪ್ಪ ಪವನನ ಪಾದಮೂಲದಲಿ ಹೊಂದಿಕೊಂಡಿಹ ಜೀವ
ಲಿಂಗಾನಿರುದ್ಧ ದೇಹ ವಿಶಿಷ್ಟನಾಗಿ
ಕಪರ್ದಿ ಮೊದಲಾದ ಅಮರರು ಎಲ್ಲರು ಕಾದುಕೊಂಡಿಹರು//19//
 
ನಾಳ ಮಧ್ಯದಲಿ ಇಪ್ಪ ಹೃತ್ಕೀಲಾಲಜದೊಳಿಪ್ಪ ಅಷ್ಟದಳದಿ
ಕುಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು
ಕಾಲ ಕಾಲಗಳಲ್ಲಿ ಯೆಣ್ದೆಸೆ ಪಾಲಕರ ಕೈಸೇವೆಗೊಳುತ ಕೃಪಾಳು
ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ//20//
 
ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನ ಅರ್ದನ ಅಮಲ ಜಲಾಶಯ ಆಲಯ
ಹಯವದನ ಶ್ರೀಕಪಿಲ ನರಸಿಂಹ
ಈ ಸುರೂಪದಿ ಅವರವರ ಸಂತೋಷ ಬಡಿಸುತ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನು ಎಂದೆನಿಸಿ//21//
 
ಸುರಪನ ಆಲಯಕೆ ಐದಿದರೆ ಮನವು ಎರಗುವುದು ಸತ್ಪುಣ್ಯ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರೆ ಆಲಸ್ಯ ಹಸಿ ತೃಷೆಯು
ತರಣಿ ತನಯ ನಿಕೇತನದಿ ಸಂಭರಿತ ಕೋಪಾಟೋಪ ತೋರುವುದು
ಅರವಿದೂರನು ನಿರ್ಋತಿಯಲಿರೆ ಪಾಪಗಳ ಮಾಳ್ಪ//22//
 
ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ
ಹಿಮಕರ ಧನಾಧಿಪರಲ್ಲಿ ಧರ್ಮದ ಜನಿಸುವುದು
ಹರನ ಮಂದಿರದಲ್ಲಿ ಗೋ ಧನ ಧರಣಿ ಕನ್ಯಾದಾನಗಳು
ಒಂದರಘಳಿಗೆ ತಡೆಯದಲೇ ಕೊಡುತಿಹ ಚಿತ್ತ ಪುಟ್ಟುವುದು//23//
 
ಹೃದಯದೊಳಗೆ ವಿರಕ್ತಿ ಕೇಸರಕೆ ಒದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬಾರೆ ಜಾಗ್ರತೆಯು ಪುಟ್ಟುವುದು
ಸುದರುಶನ ಮೊದಲಾದ ಅಷ್ಟ ಆಯುಧವ ಪಿಡಿದು
ದಿಶಾಧಿಪತಿಗಳ ಸದನದಲಿ ಸಂಚರಿಸುತ ಈಪರಿ ಬುದ್ಧಿಗಳ ಕೊಡುವ//24//
 
ಸೂತ್ರನಾಮಕ ಪ್ರಾಣಪತಿ ಗಾಯತ್ರಿ ಸಂಪ್ರತಿಪಾದ್ಯನು ಆಗಿ ಈ ಗಾತ್ರದೊಳು ನೆಲೆಸಿರಲು
ತಿಳಿಯದೆ ಕಂಡ ಕಂಡಲ್ಲಿ ಧಾತ್ರಿಯೊಳು ಸಂಚರಿಸಿ
ಪುತ್ರ ಕಳತ್ರ ಸಹಿತ ಅನುದಿನದಿ
ತೀರ್ಥಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು//25//
 
ನಾರಸಿಂಹ ಸ್ವರೂಪದೊಳಗೆ ಶರೀರ ನಾಮದಿ ಕರೆಸುವನು
ಹದಿನಾರು ಕಳೆಗಳು ಉಳ್ಳ ಲಿಂಗದಿ ಪುರುಷ ನಾಮಕನು
ತೋರುವನು ಅನಿರುದ್ಧದೊಳು ಶಾಂತೀರಮಣ ಅನಿರುದ್ಧ ರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು//26//
 
ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜನವು ಅಸ್ಥಿಗಳು
ಇದರೊಳಗೆ ಏಕ ಊನ ಪಂಚಾಶತ್ ಮರುದ್ಗಣವು
ನಿಧನ ಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತ
ಒಂಭತ್ತಧಿಕ ನಾಲ್ವತ್ತು ಎನಿಪ ರೂಪದಿ ಧಾತುಗಳೊಳಿಪ್ಪ//27//
 
ಸಪ್ತಧಾತುಗಳ ಒಳ ಹೊರಗೆ ಸಂತಪ್ತ ಲೋಹಗತ ಅಗ್ನಿಯಂದದಿ
ಸಪ್ತ ಸಾಮಗನು ಇಪ್ಪ ಅನ್ನಮಯಾದಿ ಕೋಶದೊಳು
ಲಿಪ್ತನಾಗದೆ ತತ್ತತ್ತಾಹ್ವಯ ಕ್ಲುಪ್ತಭೋಗವ ಕೊಡುತ
ಸ್ವಪ್ನ ಸುಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ//28//
 
ತೀವಿಕೊಂಡಿಹವು ಅಲ್ಲಿ ಮಜ್ಜ ಕಳೇವರದಿ ಅಂಗುಳಿಯ ಪರ್ವದ ಟಾವಿನಲಿ
ಮುನ್ನೂರು ಅರವತ್ತು ಎನಿಪ ತ್ರಿಸ್ಥಳದಿ
ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ
ದೇವತೆಗಳ ಒಡಗೂಡಿ ಕ್ರೀಡಿಸುವನು ರಮಾರಮಣ//29//
 
ಕೀಟ ಪೇಶಸ್ಕಾರ ನೆನವಿಲಿ ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನು ಐದಿಯಾಡುವ ತೆರದಿ
ಭಕುತಿಯಲಿ ಕೈಟಭಾರಿಯ ಧ್ಯಾನದಿಂದ ಭವಾಟವಿಯನು ಅತಿ ಶೀಘ್ರದಿಂದಲಿ ದಾಟಿ
ಸಾರೂಪ್ಯವನು ಐದುವರು ಅಲ್ಪ ಜೀವಿಗಳು//30//
 
ಈ ಪರೀ ದೇಹದೊಳು ಭಗವದ್ರೂಪಗಳ ಮರೆಯದಲೆ ಮನದಿ
ಪದೊಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ
ಗೋಪತಿ ಜಗನ್ನಾಥ ವಿಠಲ ಸಮೀಪಗನು ತಾನಾಗಿ
ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ//31//
 
//ಇತಿ ವರ್ಣಪ್ರಕ್ರಿಯ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 8

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಾತೃಕಾ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ

ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ

ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ

ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ//1//


ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು

ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ

ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ

ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು//2//


ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ

ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ

ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ

ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ//3//


ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು

ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ

ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ

ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ//4//


ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು

ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು

ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ

ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ//5//


ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ

ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ

ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ

ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು//6//


ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ

ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ

ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು

ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು//7//


ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ

ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ

ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು

ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು//8//


ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ

ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು

ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ

ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ//9//


ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ

ಆ ಜಮದಗ್ನಿ ನಾಮಗಳಿಂದ ಕರೆಸುತಲಿ

ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು

ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ//10//


ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ

ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ

ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ

ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ//11//


ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ

ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು

ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು

ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ//12//


ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ

ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು

ಹತ್ತೊಂಭತ್ತು ಮೊಗ ತೈಜಸನು

ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ//13//


ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ

ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ

ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ

ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ//14//


ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು

ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ

ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು

ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ//15//


ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ

ತಾಮರಸ ಭವ ವಾಸುದೇವರು ಮಸ್ತಕದೊಳಿಹರು

ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ

ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ//16//


"ವಿಶೇಷ - ಈ ಮನದೊಳಿಹ ವಿಷ್ಣು (ಅಹಂಕಾರಿಕ ಪ್ರಾಣನ ದೇವತೆ)

ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ

ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ

ಸತತ ಸುಲೀಲೆಗೈಯುತಲಿ ಇಪ್ಪ

ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು//17//


ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ

ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು

ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು

ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು//18//


ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ

ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ

ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ

ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು//19//


ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ

ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ

ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ

ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು//20//


ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ

ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ

ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ

ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ//21//


ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ

ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು

ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ

ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ//22//


ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು

ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ

ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ

ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ//23//


ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ

ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ

ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು

ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ//24//


ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ

ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ

ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ

ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು//25//


ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ

ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ

ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು

ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ//26//


ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು

ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು

ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ

ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು//27//


ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ

ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ

ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ

ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು//28//


ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು

ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ

ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ

ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು//29//


ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ

ತದಭಿಮಾನಿಗಳು ಎಂದೆನಿಸಿಕೊಂಬ

ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು

ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ//30//


ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ

ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು

ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ

ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು//31//


ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ

ಪೂಜಿಸುತ ನೋಡುತ ಸುಖಿಸುತಿರು ಬಿಡದೆ

ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ

ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು//32//


//ಇತಿ ಶ್ರೀ ಮಾತೃಕಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು