Tuesday, January 15, 2013

ಶ್ರೀ ಹರಿಕಥಾಮೃತಸಾರ - 10

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಸರ್ವಪ್ರತೀಕ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ

ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ

ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ

ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1//


ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು

ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು

ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ

ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ//2//


ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು

ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು

ಅವರುಂಬ ಓದನವೇ ನೈವೇದ್ಯ

ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ//3//


ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು

ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು

ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು

ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ//4//

 
ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು

ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು

ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ

ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು//5//


ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ

ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು

ತಿಳಿದಿಹ ಸೂರಿಗಳು ದೇವತೆಗಳು

ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ//6//


ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು

ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ

ನೆಲೆಗೊಂಡು ಈವರು ಅಖಿಳಾರ್ಥಗಳನು

ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು//7//


ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ

ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ

ವಿಧಿ ನಿಷೇಧಗಳು ಆಚರಿಸುವರು ಬುಧರು

ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ//8//


ಕಲಿಯೆ ಮೊದಲಾದ ಅಖಿಳ ದಾನವರೊಳಗೆ

ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ

ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ

ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ//9//


ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?

ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?

ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ

ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು//10//


ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ

ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು

ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ

ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ//11//


ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ

ಜಲಕೆದುರು ಈಸಿದರೆ ಕೈಸೋತು ಮುಳುಗುವ

ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು

ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು//12//


ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ

ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ

ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ

ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು//13//


ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು

ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು

ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು

ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು//14//


ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು

ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು

ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ

ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು//15//


ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು

ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು

ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು

ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು//16//


ಏನು ಕೇಳಿದರೇನು ನೋಡಿದರೇನು ಓದಿದರೇನು

ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ

ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು

ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ//17//


ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ

ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ

ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು

ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು//18//


ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ

ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು

ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ

ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ//19//


ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು

ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ

ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ

ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು//20//


ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ

ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ

ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ

ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ//21//


ಲೋಕವಾರ್ತೆಯು ಇದಲ್ಲ ಪರ ಲೋಕೈಕನಾಥನ ವಾರ್ತೆ ಕೇಳ್ವರೆ

ಕಾಕುಮನುಜರಿಗೆ ಪರಿಮಳವು ಷಟ್ಪದ ಸ್ವೀಕರಿಸುವಂದದಲಿ

ಜಲಚರ ಭೇಕ ಬಲ್ಲುದೆ? ಇದರ ರಸ ಹರಿ ಭಕುತಗಲ್ಲದಲೆ//22//


ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ

ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ

ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ

ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ//23//


ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ

ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ

ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ

ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ//24//


ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ

ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ

ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ

ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ//25//


//ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, January 9, 2013

ಶ್ರೀ ಹರಿಕಥಾಮೃತಸಾರ - 9

//ಶ್ರೀ ಗುರುಭ್ಯೋ ನಮಃ//
 
//ಪರಮ ಗುರುಭ್ಯೋ ನಮಃ//
 
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
 
ಶ್ರೀ ಜಗನ್ನಾಥದಾಸ ವಿರಚಿತ
 
ಶ್ರೀ ಹರಿಕಥಾಮೃತಸಾರ
 
//ಶ್ರೀ ವರ್ಣಪ್ರಕ್ರಿಯ ಸಂಧಿ//
 
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
 
ಹರಿಯೆ ಪಂಚಾಶದ್ವರ್ಣ ಸುಸ್ವರವು ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ಇರುವ
ತನ್ನಾಮ ರೂಪಗಳರಿತು ಉಪಾಸನೆಗೈವರು ಇಳೆಯೊಳು
ಸುರರೆ ಸರಿ ನರರಲ್ಲ ಅವರು ಆಡುವುದೇ ವೇದಾರ್ಥ//1//
 
ಈಶನಲಿ ವಿಜ್ಞಾನ ಭಗವದ್ದಾಸರಲಿ ಸದ್ಭಕ್ತಿ ವಿಷಯ ನಿರಾಶೆ
ಮಿಥ್ಯಾ ವಾದದಲಿ ಪ್ರದ್ವೇಷ ನಿತ್ಯದಲಿ ಈ ಸಮಸ್ತ ಪ್ರಾಣಿಗಳಲಿ
ರಮೇಶನು ಇಹನೆಂದು ಅರಿದು ಅವರ ಅಭಿಲಾಷೆಗಳ ಪೂರೈಸುವುದೆ
ಮಹಾಯಜ್ಞೆ ಹರಿಪೂಜೆ//2//
 
ತ್ರಿದಶ ಏಕಾತ್ಮಕನು ಎನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರು ಎನಿಸುವ ಮುಖ್ಯ ಪ್ರಾಣ ಆದಿತ್ಯರೊಳು ನೆಲೆಸಿ
ವಿದಿತನಾಗಿದ್ದು ಅನವರತ ನಿರವಧಿಕ ಮಹಿಮನು
ಸಕಲ ವಿಷಯವ ನಿಧನ ನಾಮಕ ಸಂಕರುಷಣ ಅಹ್ವಯನು ಸ್ವೀಕರಿಪ//3//
 
ದೈಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು
ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ
ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ
ಅಹರ್ ಅಹರ್ ಭಗವಂತಗರ್ಪಿಸು ಪರಮ ಭಕುತಿಯಲಿ//4//
 
ಮೂರುವಿಧ ಕರ್ಮಗಳ ಒಳಗೆ ಕಂಸಾರಿ ಭಾರ್ಗವ ಹಯವದನ
ಸಂಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ
ಸೂರಿ ಮಾನವ ದಾನವರೊಳು ವಿಕಾರ ಶೂನ್ಯನು ಮಾಡಿ ಮಾಡಿಸಿ
ಸಾರಭೋಕ್ತನು ಸ್ವೀಕರಿಸಿ ಕೊಡುತ ಇಪ್ಪ ಜೀವರಿಗೆ//5//
 
ಅನಳ ಪಕ್ವವ ಗೈಸಿದ ಅನ್ನವ ಅನಳನೊಳು ಹೋಮಿಸುವ ತೆರದಂತೆ
ಅನಿಮಿಶೇಷನು ಮಾಡಿ ಮಾಡಿಸಿದಖಿಳ ಕರ್ಮಗಳ ಮನವಚನ ಕಾಯದಲಿ ತಿಳಿದು
ಅನುದಿನದಿ ಕೊಡು ಶಂಕಿಸದೆ ವೃಜಿನ ಅರ್ದನ
ಸದಾ ಕೈಕೊಂಡು ಸಂತೈಸುವನು ತನ್ನವರ//6//
 
ಕುದುರೆ ಬಾಲದ ಕೊನೆಯ ಕೂದಲು ತುದಿ ವಿಭಾಗವ ಮಾಡಿ ಶತವಿಧವು
ಅದರೊಳೊಂದನು ನೂರು ಭಾಗವ ಮಾಡಲು ಎಂತಿಹುದೋ
ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ
ತೃಣಾಂತ ಜೀವರೊಳಧಿಕ ನ್ಯೂನತೆಯಿಲ್ಲವು ಎಂದಿಗೂ ಜೀವ ಪರಮಾಣು//7//
 
ಜೀವನ ಅಂಗುಷ್ಠ ಆಗ್ರಾ ಮೂರುತಿ ಜೀವನ ಅಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು
ಎವಮಾದಿ ಅನಂತ ರೂಪದಿ ಯಾವತ್ ಅವಯವಗಳೊಳು ವ್ಯಾಪಿಸಿ ಕಾವ
ಕರುಣಾಳುಗಳ ದೇವನು ಈ ಜಗತ್ರಯವ//8//
 
ಬಿಂಬ ಜೀವ ಅಂಗುಷ್ಠ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂಕ್ಷ್ಮ ಅಂಬರದಿ
ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ
ಎಂಬರು ಈತಗೆ ಕೋವಿದರು ವಿಶ್ವಂಭರಾತ್ಮಕ ಪ್ರಾಜ್ಞ
ಭಟಕ ಕುಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು//9//
 
ಪುರುಷನಾಮಕ ಸರ್ವ ಜೀವರೊಳಿರುವ ದೇಹ ಆಕಾರ ರೂಪದಿ
ಕರುಣ ನಿಯಾಮಕ ಹೃಷೀಕಪನು ಇಂದ್ರಿಯಂಗಳಲಿ
ತುರಿಯ ನಾಮಕ ವಿಶ್ವ ತಾ ಹನ್ನೆರಡು ಬೆರಳುಳಿದು ಉತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವರಿಯಾ ನಾಡಿಯೊಳಗಿಪ್ಪ//10//
 
ವ್ಯಾಪಕನು ತಾನಾಗಿ ಜೀವ ಸ್ವರೂಪ ದೇಹದ ಒಳಹೊರಗೆ ನಿರ್ಲೇಪನು ಆಗಿಹ
ಜೀವಕೃತ ಕರ್ಮಗಳನು ಆಚರಿಸಿ
ಶ್ರೀ ಪಯೋಜಭವ ಈರರಿಂದ ಪ್ರದೀಪವರ್ಣ ಸ್ವಮೂರ್ತಿ ಮಧ್ಯಗ ತಾ ಪೊಳೆವ
ವಿಶ್ವಾದಿ ರೂಪದಿ ಸೇವೆ ಕೈಕೊಳುತ//11//
 
ಗರುಡ ಶೇಷ ಭವಾದಿ ನಾಮವ ಧರಿಸಿ ಪವನ
ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ
ಸರಸಿಜಾಸನ ವಾಣಿ ಭಾರತಿ ಭರತನಿಂದ ಒಡಗೂಡಿ
ಲಿಂಗದಿ ಇರುತಿಹನು ಮಿಕ್ಕ ಆದಿತೇಯರಿಗೆ ಇಲ್ಲವು ಆಸ್ಥಾನ//12//
 
ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಚೆಯಲಿ
ಕೇವಲ ಜಡ ಪ್ರಕೃತಿಯಿದಕೆ ಅಧಿದೇವತೆಯು ಮಹಾಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು//13//
 
ಆರಧಿಕ ದಶಕಳೆಗಳು ಉಳ್ಳ ಶರೀರವು ಅನಿರುದ್ಧಗಳ ಮಧ್ಯದಿ ಸೇರಿ ಇಪ್ಪದು
ಜೀವ ಪರಮಾಚ್ಚಾದಿಕ ದ್ವಯವು
ಬಾರದಂದದಿ ದಾನವರನು ಅತಿ ದೂರಗೈಸುತ ಶ್ರೀಜನಾರ್ಧನ
ಮೂರು ಗುಣದೊಳಗಿಪ್ಪನು ಎಂದಿಗು ತ್ರಿವೃತುಯೆಂದೆನಿಸಿ//14//
 
ರುದ್ರ ಮೊದಲಾದ ಅಮರರಿಗೆ ಅನಿರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರು ಅಲ್ಲಿಂದ ಇತ್ತ ಸ್ಥೂಲದಲಿ ಕ್ರುದ್ಧ ಅಖಿಲ ದಿವಿಜರು
ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸಮೃದ್ಧಿಗಳನು
ಆಚರಿಸುವರು ಪ್ರಾಣೇಶನ ಆಜ್ಞೆಯಲಿ//15//
 
ಮಹಿಯೊಳಗೆ ಸುಕ್ಷೇತ್ರ ತೀರ್ಥವು ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕ ತ್ರಯ ಧರ್ಮಕರ್ಮಗಳ
ದ್ರುಹಿಣ ಮೊದಲಾದ ಅಮರರು ಎಲ್ಲರ ವಹಿಸಿಸ್ ಗುಣಗಳನು ಅನುಸರಿಸಿ
ಸನ್ನಿಹಿತರು ಆಗಿದ್ದು ಎಲ್ಲರೊಳು ಮಾಡುವರು ವ್ಯಾಪಾರ//16//
 
ಕೇಶ ಸಾಸಿರ ವಿಧ ವಿಭಾಗವಗೈಸಲು ಎನತು ಅನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದು ಈ ದೇಹಮಧ್ಯದಲಿ
ಆ ಸುಷುಮ್ನಕೆ ವಜ್ರಕಾರ್ಯ ಪ್ರಕಾಶಿನೀ ವೈದ್ಯುತಿಗಳಿಹವು
ಪ್ರದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ//17//
 
ಆ ನಳಿನ ಭವ ನಾಡಿಯೊಳಗೆ ತ್ರಿಕೋಣ ಚಕ್ರವು ಇಪ್ಪುದು
ಅಲ್ಲಿ ಕೃಶಾನು ಮಂಡಲ ಮಧ್ಯಗನು ಸಂಕರುಷಣ ಆಹ್ವಯನು
ಹೀನ ಪಾಪಾತ್ಮಕ ಪುರುಷನ ದಹಾನ ಗೈಸುತ ದಿನದಿನದಿ
ವಿಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣಿ//18//
 
ಮಧ್ಯ ನಾಡಿಯ ಮಧ್ಯದಲಿ ಹೃತ್ಪದ್ಮ ಮೂಲದಿ ಮೂಲಪತಿ ಪದಪದ್ಮ
ಮೂಲದಲಿ ಇಪ್ಪ ಪವನನ ಪಾದಮೂಲದಲಿ ಹೊಂದಿಕೊಂಡಿಹ ಜೀವ
ಲಿಂಗಾನಿರುದ್ಧ ದೇಹ ವಿಶಿಷ್ಟನಾಗಿ
ಕಪರ್ದಿ ಮೊದಲಾದ ಅಮರರು ಎಲ್ಲರು ಕಾದುಕೊಂಡಿಹರು//19//
 
ನಾಳ ಮಧ್ಯದಲಿ ಇಪ್ಪ ಹೃತ್ಕೀಲಾಲಜದೊಳಿಪ್ಪ ಅಷ್ಟದಳದಿ
ಕುಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು
ಕಾಲ ಕಾಲಗಳಲ್ಲಿ ಯೆಣ್ದೆಸೆ ಪಾಲಕರ ಕೈಸೇವೆಗೊಳುತ ಕೃಪಾಳು
ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ//20//
 
ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನ ಅರ್ದನ ಅಮಲ ಜಲಾಶಯ ಆಲಯ
ಹಯವದನ ಶ್ರೀಕಪಿಲ ನರಸಿಂಹ
ಈ ಸುರೂಪದಿ ಅವರವರ ಸಂತೋಷ ಬಡಿಸುತ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನು ಎಂದೆನಿಸಿ//21//
 
ಸುರಪನ ಆಲಯಕೆ ಐದಿದರೆ ಮನವು ಎರಗುವುದು ಸತ್ಪುಣ್ಯ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರೆ ಆಲಸ್ಯ ಹಸಿ ತೃಷೆಯು
ತರಣಿ ತನಯ ನಿಕೇತನದಿ ಸಂಭರಿತ ಕೋಪಾಟೋಪ ತೋರುವುದು
ಅರವಿದೂರನು ನಿರ್ಋತಿಯಲಿರೆ ಪಾಪಗಳ ಮಾಳ್ಪ//22//
 
ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ
ಹಿಮಕರ ಧನಾಧಿಪರಲ್ಲಿ ಧರ್ಮದ ಜನಿಸುವುದು
ಹರನ ಮಂದಿರದಲ್ಲಿ ಗೋ ಧನ ಧರಣಿ ಕನ್ಯಾದಾನಗಳು
ಒಂದರಘಳಿಗೆ ತಡೆಯದಲೇ ಕೊಡುತಿಹ ಚಿತ್ತ ಪುಟ್ಟುವುದು//23//
 
ಹೃದಯದೊಳಗೆ ವಿರಕ್ತಿ ಕೇಸರಕೆ ಒದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬಾರೆ ಜಾಗ್ರತೆಯು ಪುಟ್ಟುವುದು
ಸುದರುಶನ ಮೊದಲಾದ ಅಷ್ಟ ಆಯುಧವ ಪಿಡಿದು
ದಿಶಾಧಿಪತಿಗಳ ಸದನದಲಿ ಸಂಚರಿಸುತ ಈಪರಿ ಬುದ್ಧಿಗಳ ಕೊಡುವ//24//
 
ಸೂತ್ರನಾಮಕ ಪ್ರಾಣಪತಿ ಗಾಯತ್ರಿ ಸಂಪ್ರತಿಪಾದ್ಯನು ಆಗಿ ಈ ಗಾತ್ರದೊಳು ನೆಲೆಸಿರಲು
ತಿಳಿಯದೆ ಕಂಡ ಕಂಡಲ್ಲಿ ಧಾತ್ರಿಯೊಳು ಸಂಚರಿಸಿ
ಪುತ್ರ ಕಳತ್ರ ಸಹಿತ ಅನುದಿನದಿ
ತೀರ್ಥಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು//25//
 
ನಾರಸಿಂಹ ಸ್ವರೂಪದೊಳಗೆ ಶರೀರ ನಾಮದಿ ಕರೆಸುವನು
ಹದಿನಾರು ಕಳೆಗಳು ಉಳ್ಳ ಲಿಂಗದಿ ಪುರುಷ ನಾಮಕನು
ತೋರುವನು ಅನಿರುದ್ಧದೊಳು ಶಾಂತೀರಮಣ ಅನಿರುದ್ಧ ರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು//26//
 
ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜನವು ಅಸ್ಥಿಗಳು
ಇದರೊಳಗೆ ಏಕ ಊನ ಪಂಚಾಶತ್ ಮರುದ್ಗಣವು
ನಿಧನ ಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತ
ಒಂಭತ್ತಧಿಕ ನಾಲ್ವತ್ತು ಎನಿಪ ರೂಪದಿ ಧಾತುಗಳೊಳಿಪ್ಪ//27//
 
ಸಪ್ತಧಾತುಗಳ ಒಳ ಹೊರಗೆ ಸಂತಪ್ತ ಲೋಹಗತ ಅಗ್ನಿಯಂದದಿ
ಸಪ್ತ ಸಾಮಗನು ಇಪ್ಪ ಅನ್ನಮಯಾದಿ ಕೋಶದೊಳು
ಲಿಪ್ತನಾಗದೆ ತತ್ತತ್ತಾಹ್ವಯ ಕ್ಲುಪ್ತಭೋಗವ ಕೊಡುತ
ಸ್ವಪ್ನ ಸುಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ//28//
 
ತೀವಿಕೊಂಡಿಹವು ಅಲ್ಲಿ ಮಜ್ಜ ಕಳೇವರದಿ ಅಂಗುಳಿಯ ಪರ್ವದ ಟಾವಿನಲಿ
ಮುನ್ನೂರು ಅರವತ್ತು ಎನಿಪ ತ್ರಿಸ್ಥಳದಿ
ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ
ದೇವತೆಗಳ ಒಡಗೂಡಿ ಕ್ರೀಡಿಸುವನು ರಮಾರಮಣ//29//
 
ಕೀಟ ಪೇಶಸ್ಕಾರ ನೆನವಿಲಿ ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನು ಐದಿಯಾಡುವ ತೆರದಿ
ಭಕುತಿಯಲಿ ಕೈಟಭಾರಿಯ ಧ್ಯಾನದಿಂದ ಭವಾಟವಿಯನು ಅತಿ ಶೀಘ್ರದಿಂದಲಿ ದಾಟಿ
ಸಾರೂಪ್ಯವನು ಐದುವರು ಅಲ್ಪ ಜೀವಿಗಳು//30//
 
ಈ ಪರೀ ದೇಹದೊಳು ಭಗವದ್ರೂಪಗಳ ಮರೆಯದಲೆ ಮನದಿ
ಪದೊಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ
ಗೋಪತಿ ಜಗನ್ನಾಥ ವಿಠಲ ಸಮೀಪಗನು ತಾನಾಗಿ
ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ//31//
 
//ಇತಿ ವರ್ಣಪ್ರಕ್ರಿಯ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 8

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಾತೃಕಾ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ

ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ

ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ

ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ//1//


ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು

ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ

ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ

ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು//2//


ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ

ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ

ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ

ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ//3//


ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು

ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ

ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ

ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ//4//


ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು

ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು

ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ

ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ//5//


ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ

ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ

ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ

ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು//6//


ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ

ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ

ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು

ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು//7//


ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ

ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ

ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು

ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು//8//


ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ

ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು

ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ

ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ//9//


ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ

ಆ ಜಮದಗ್ನಿ ನಾಮಗಳಿಂದ ಕರೆಸುತಲಿ

ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು

ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ//10//


ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ

ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ

ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ

ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ//11//


ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ

ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು

ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು

ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ//12//


ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ

ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು

ಹತ್ತೊಂಭತ್ತು ಮೊಗ ತೈಜಸನು

ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ//13//


ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ

ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ

ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ

ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ//14//


ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು

ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ

ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು

ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ//15//


ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ

ತಾಮರಸ ಭವ ವಾಸುದೇವರು ಮಸ್ತಕದೊಳಿಹರು

ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ

ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ//16//


"ವಿಶೇಷ - ಈ ಮನದೊಳಿಹ ವಿಷ್ಣು (ಅಹಂಕಾರಿಕ ಪ್ರಾಣನ ದೇವತೆ)

ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ

ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ

ಸತತ ಸುಲೀಲೆಗೈಯುತಲಿ ಇಪ್ಪ

ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು//17//


ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ

ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು

ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು

ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು//18//


ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ

ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ

ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ

ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು//19//


ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ

ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ

ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ

ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು//20//


ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ

ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ

ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ

ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ//21//


ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ

ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು

ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ

ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ//22//


ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು

ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ

ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ

ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ//23//


ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ

ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ

ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು

ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ//24//


ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ

ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ

ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ

ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು//25//


ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ

ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ

ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು

ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ//26//


ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು

ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು

ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ

ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು//27//


ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ

ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ

ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ

ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು//28//


ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು

ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ

ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ

ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು//29//


ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ

ತದಭಿಮಾನಿಗಳು ಎಂದೆನಿಸಿಕೊಂಬ

ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು

ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ//30//


ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ

ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು

ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ

ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು//31//


ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ

ಪೂಜಿಸುತ ನೋಡುತ ಸುಖಿಸುತಿರು ಬಿಡದೆ

ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ

ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು//32//


//ಇತಿ ಶ್ರೀ ಮಾತೃಕಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Monday, January 7, 2013

ಶ್ರೀ ಹರಿಕಥಾಮೃತಸಾರ - 7

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಪಂಚತನ್ಮಾತ್ರ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ

ಒಂದಧಿಕ ಪಂಚಾಶತ್ ವರಣ ವೇದ್ಯ

ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ

ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ//1//


ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು

ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ

ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ

ಲೋಕದೊಳು ಸರ್ವತ್ರ ಬೆಳಗುವನು//2//


ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ

ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ

ಈ ವಿಧ ಚತು: ಸ್ಥಾನದಲಿ ಶಾಂತೀವರನ ಈರೆರಡು ರೂಪದಿ ಭಾವಿಸುವುದು

ಏಕ ಊನ ವಿಂಶತಿ ಮೂರ್ತಿ ಸರ್ವತ್ರ//3//


ಕಲುಷವಿಲ್ಲದ ದರ್ಪಣದಿ ಪ್ರತಿಫಲಿಸಿ ಸರ್ವ ಪದಾರ್ಥಗಳು ಕಂಗೊಳಿಸುವಂದದಲಿ

ಬಿಂಬ ಜಡ ಚೇತನಗಳೊಳಗಿದ್ದು

ಪೊಳೆವ ಬಹುರೂಪದಲಿ ಸಜ್ಜನರೊಳಗೆ ಮನದರ್ಪಣದಿ ತಾ

ನಿಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ//4//


ಈ ಶರೀರ ಚತುಷ್ಟಯಗಳು ಕೋಶ ಧಾತುಗ ಭಾರತಿಪ ಪ್ರಾಣೇಶನು

ಇಪ್ಪತ್ತೊಂದು ಸಾವಿರದ ಆರುನೂರೆನಿಪ ಶ್ವಾಸ ರೂಪಕ ಹಂಸ

ಭಾಸ್ಕರ ಭೇಶರೊಳಗಿದ್ದು ಅವರ ಕೈವಿಡಿದು

ಈ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು//5//


ಶಿರಗಳೈದು ಐದೆರೆಡು ಬಾಹುಗಳು ಎರಡು ಪಾದಗಳು

ಒಂದು ಮಧ್ಯ ಉದರದಿ ಶೋಭಿಪ ವಾಕ್ಮನೋಮಯನೆನಿಸಿ ನಿತ್ಯದಲಿ

ಕರಣ ಧಾತುಗಳಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲಿ ಇಪ್ಪ

ಅರವಿದೂರನು ಭಾರತ ಪ್ರತಿಪಾದ್ಯನು ಎನಿಸಿ//6//


ಈರೆರೆಡು ದೇಹ ಊರ್ಮಿ ಭೂತಗಳಾರು ಅಧಿಕ ದಶ ಋಗ್ವಿನುತ

ಲಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತು ಷಷ್ಠಿ ಕಲಾಧಾರಕನು ತಾನಾಗಿ

ಬ್ರಹ್ಮಪುರಾರಿ ಮುಖ್ಯರೊಳಿದ್ದು ಸತತ ವಿಹಾರ ಮಾಳ್ಪನು

ಚತುಷ್ಪಾದ ಆಹ್ವಯದಿ ಲೋಕದೊಳು//7//


ತೃಣ ಮೊದಲು ಬ್ರಹ್ಮ ಅಂತ ಜೀವರ ತನುಗಳ ತ್ರಯಗಳಲಿ

ನಾರಾಯಣನ ಸಾವಿರದೈನೂರಿಪ್ಪತ್ತು ಮೇಲೆ ಆರು

ಗಣನೆ ಮಾಳ್ಪುದು ಬುಧರು ರೂಪವ

ಘ್ರುಣಿ ಸೂರ್ಯ ಆದಿತ್ಯ ನಾಮಗಳು ಅನುದಿನದಿ ಜಪಿಸುವರಿಗೆ ಈವ ಆರೋಗ್ಯ ಸಂಪದವ//8//


ಐದು ನೂರು ಎಪ್ಪತ್ತು ನಾಲ್ಕು ಅಧಿಭೌತಿಕದಲಿ ತಿಳಿವುದು

ಐದೆರೆಡು ಶತ ಏಕ ವಿಂಶತಿ ರೂಪವು ಆಧ್ಯಾತ್ಮ

ಭೇದಗಳು ಇನ್ನೂರು ಮೂವತ್ತಾದ ಮೇಲೆ ಒಂದಧಿಕ ಮೂರ್ತಿಗಳು

ಆದರದಲಿ ಅಧಿದೈವದೊಳು ಚಿಂತಿಪುದು ಭೂಸುರರು//9//


ಸುರುಚಿ ಶಾರ್ವರೀಕರನು ಎನಿಸಿ ಸಂಕರುಷಣ ಪ್ರದ್ಯುಮ್ನ

ಶಶಿ ಭಾಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ಕರೆಸಿಕೊಂಬನು

ಅಹಃ ಸಂವತ್ಸರನೆನಿಪನು ವಿಶಿಷ್ಟ ನಾಮದಲಿ ಅರಿತವರಿಗೆ

ಆರೋಗ್ಯ ಭಾಗ್ಯವನು ಈವ ಆನಂದಮಯ//10//


ಏಕ ಪಂಚಾಶತ್ ವರಣ ಗತ ಮಾಕಳತ್ರನು ಸರ್ವರೊಳಗ

ಅವ್ಯಾಕೃತ ಆಕಾಶಾಂತ ವ್ಯಾಪಿಸಿ ನಿಗಮತತಿಗಳು ವ್ಯಾಕರಣ ಭಾರತ

ಮುಖಾದಿ ಅನೇಕ ಶಾಸ್ತ್ರ ಪುರಾಣ ಭಾಷ್ಯ ಅನೀಕಗಳ ಕಲ್ಪಿಸಿ

ಮನೋ ವಾಙ್ಮಯನೆನಿಸಿಕೊಂಬ//11//


ಭಾರಭೃತ್ ನಾಮಕನ ಸಾವಿರದ ಆರುನೂರ ಇಪ್ಪತ್ತನಾಲ್ಕು ಮೂರುತಿಗಳು

ಚರಾಚರದಿ ಸರ್ವತ್ರ ತುಂಬಿಹವು

ಆರು ನಾಲ್ಕು ಜಡಗಳಲಿ ಹದಿನಾರು ಚೇತನಗಳಲಿ ಚಿಂತಿಸೆ

ತೋರಿಕೊಂಬನು ತನ್ನ ರೂಪವ ಸಕಲ ಟಾವಿನಲಿ//12//


ಮಿಸುಣಿ ಮೇಲಿಹ ಮಣಿಯವೊಳ್ ರಾಜಿಸುವ ಬ್ರಹ್ಮಾದಿಗಳ ಮನದಲಿ

ಬಿಸಿಜಜಾಂಡ ಅಧಾರಕನು ಅಧೇಯನೆಂದೆನಿಸಿ

ದ್ವಿಶತ ನಾಲ್ವತ್ತೆರಡು ರೂಪದಿ ಶಶಿಯೊಳು ಇಪ್ಪನು

ಶಶದೊಳಗೆ ಶೋಭಿಸುವ ನಾಲ್ವತ್ತೆರಡು ಅಧಿಕ ಶತ ರೂಪದಲಿ ಬಿಡದೆ//13//


ಎರಡು ಸಾವಿರದ ಎಂಟು ರೂಪವನರಿತು ಸರ್ವ ಪದಾರ್ಥದಲಿ

ಶ್ರೀ ವರನ ಪೂಜೆಯ ಮಾಡು ವಾರಗಳ ಬೇಡು ಕೊಂಡಾಡು

ಬರಿದೆ ಜಲದೊಳು ಮುಳುಗಿ ಬಿಸಿಲೊಳು ಬೆರಳನು ಎಣಿಸಿದರೇನು

ಸದ್ಗುರು ಹಿರಿಯರ ಅನುಸರಿಸಿ ಇದರ ಮರ್ಮವನ್ನು ಅರಿಯದಿಹ ನರನು//14//


ಮತ್ತೆ ಚಿತ್ದೇಹದೊಳಗೆ ಎಂಭತ್ತು ಸಾವಿರದ ಏಳು ನೂರ ಇಪ್ಪತ್ತೈದು

ನರಸಿಂಹ ರೂಪದಲಿದ್ದು

ಜೀವರಿಗೆ ನಿತ್ಯದಲಿ ಹಗಲು ಇರಲು ಬಪ್ಪ ಅಪಮೃತ್ಯುವಿಗೆ ತಾ ಮೃತ್ಯುವೆನಿಸುವ

ಭೃತ್ಯ ವಾತ್ಸಲ ಭಯವಿನಾಶನ ಭಾಗ್ಯ ಸಂಪನ್ನ//15//


ಜ್ವರನೊಳು ಇಪ್ಪತ್ತೇಳು ಹರನೊಳಗೆ ಇರುವನು ಇಪ್ಪತ್ತೆಂಟು ರೂಪದಿ

ಎರಡು ಸಾವಿರದ ಎಂಟು ನೂರಿಪ್ಪತ್ತೇಳು ಅಧಿಕ ಜ್ವರಹರ ಆಹ್ವಯ

ನಾರಸಿಂಹನ ಸ್ಮರಣೆಮಾತ್ರದಿ ದುರಿತ ರಾಶಿಗಳು ಇರದೇ ಪೋಪವು

ತರಣಿ ಬಿಂಬವ ಕಂಡ ಹಿಮದಂತೆ//16//


ಮಾಸ ಪರಿಯಂತರವು ಬಿಡದೆ ನೃಕೇಸರಿಯ ಶುಭನಾಮ ಮಂತ್ರ

ಜಿತಾಸನದಲಿ ಏಕಾಗ್ರ ಚಿತ್ತದಿ ನಿಷ್ಕಪಟದಿಂದ ಬೇಸರದೆ ಜಪಿಸಲು

ವೃಜಿನಗಳ ನಾಶಗೈಸಿ

ಮನೋರಥಗಳ ಪರೇಶ ಪಾರ್ಟಿಯ ಮಾಡಿ ಕೊಡುವನು ಕಡೆಗೆ ಪರಗತಿಯ//17//


ಚತುರ ಮೂರ್ತ್ಯಾತ್ಮಕ ಹರಿಯು ತ್ರಿಂಶತಿ ಸುರೂಪದಿ ಬ್ರಹ್ಮನೊಳು

ಮಾರುತನೊಳು ಇಪ್ಪತ್ತೇಳು ರೂಪದೊಳು ಇಪ್ಪ ಪ್ರದ್ಯುಮ್ನ

ಸುತರೊಳು ಇಪ್ಪತ್ತೈದು ಹದಿನೆಂಟು ಅತುಳ ರೂಪಗಳ ಅರಿತು

ವತ್ಸರ ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ//18//


ನೂರು ವರುಷಕೆ ದಿವಸ ಮೂವತ್ತಾರು ಸಾವಿರ ವಹವು

ನಾಡಿ ಶರೀರದೊಳಗೆ ಇನಿತು ಇಹವು ಸ್ತ್ರೀಪುಂಭೇದದಲಿ

ಹರಿಯ ಈರಧಿಕ ಎಪ್ಪತ್ತು ಸಾವಿರ ಮೂರುತಿಗಳನೆ ನೆನೆದು

ಸರ್ವಾಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು//19//


ಕಾಲಕರ್ಮಗುಣ ಸ್ವಭಾವಗಳ ಆಲಯನು ತಾನಾಗಿ ಲಕ್ಷ್ಮೀಲೋಲ

ತತ್ತದ್ರೂಪ ನಾಮಡಿ ಕರೆಸುತ ಒಳಗಿದ್ದು

ಲೀಲೆಯಿಂದಲಿ ಸರ್ವಜೀವರ ಪಾಲಿಸುವ ಸಂಹರಿಪ ಸೃಷ್ಟಿಪ

ಮೂಲ ಕಾರಣ ಪ್ರಕೃತಿ ಗುಣ ಕಾರ್ಯಗಳ ಮನೆಮಾಡಿ//20//


ತಿಲಜವರ್ತಿಗಳ ಅನುಸರಿಸಿ ಪ್ರಜ್ವಲಿಸಿ ದೀಪಗಳು

ಆಲಯದ ಕತ್ತಲೆಯ ಭಂಗಿಸಿ ತದ್ಗತಾರ್ಥವ ತೋರುವಂದದಲಿ

ಜಲರುಹೇಕ್ಷಣ ತನ್ನವರ ಮನದೊಳಗೆ

ಭಕ್ತಿ ಜ್ಞಾನ ಕರ್ಮಕೆ ಒಲಿದು ಪೊಳೆವುತ ತೋರುವನು ಗುಣ ರೂಪ ಕ್ರಿಯೆಗಳನು//21//


ಆವ ದೇಹವ ಕೊಡಲಿ ಹರಿ ಮತ್ತಾವ ಲೋಕದೊಳು ಇಡಲಿ

ತಾ ಮತ್ತಾವ ದೇಶದೊಳು ಇಡಲಿ ಆವಾವಸ್ಥೆಗಳು ಬರಲಿ

ಈ ವಿಧದಿ ಜಡ ಚೇತನದೊಳು ಪರಾವರೇಶನ ರೂಪ ಗುಣಗಳ ಭಾವಿಸುತ

ಸುಜ್ಞಾನ ಭಕುತಿಯ ಬೇಡು ಕೊಂಡಾಡು//22//


ಒಂದರೊಳಗೊಂದು ಬೆರದಿಹವು ಇಂದಿರೇಶನ ರೂಪಗಳ ಮನಬಂದ ತೆರದಲಿ

ಚಿಂತಿಸಿದಕೆ ಅನುಮಾನವಿನಿತಿಲ್ಲ

ಸಿಂಧು ರಾಜನೊಳು ಅಂಬರ ಆಲಯ ಬಂಧಿಸಲು

ಪ್ರತಿ ತಂತುಗಳೊಳು ಉದಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ//23//


ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು ಒಂದು ದೇಶದಿ ಪೊಂದಿ ಇಪ್ಪವು

ಅಜಾಂಡ ಅನಂತಾನಂತ ಕೋಟಿಗಳು

ಹಿಂದೆ ಮಾರ್ಕಾಂಡೆಯ ಕಾಣನೆ ಒಂದು ರೂಪದಿ ಸೃಷ್ಟಿ ಪ್ರಳಯಗಳು

ಇಂದಿರೇಶನೊಳು ಏನಿದು ಅಚ್ಚರಿ ಅಪ್ರಮೇಯ ಸದಾ//24//


ಒಂದು ಅನಂತಾನಂತ ರೂಪಗಳು ಒಂದೇ ರೂಪದೊಳು ಇಹವು ಲೋಕಗಳು ಒಂದೇ ರೂಪದಿ

ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ

ಒಂದೇ ಕಾಲಡಿ ಮಾಡಿ ತಿಳಿಸದೆ ಸಂದಣಿಸಿ ಕೊಂಡಿಪ್ಪ ಜಗದೊಳು

ನಂದ ನಂದನ ರಣದೊಳು ಇಂದ್ರ ಆತ್ಮಜಗೆ ತೋರಿಸನೆ//25//


ಶ್ರೀರಮೇಶನ ಮೂರ್ತಿಗಳು ನವ ನಾರಿ ಕುಂಜರದಂತೆ ಏಕಾಕಾರ ತೋರ್ಪವು

ಅವಯವಾಹ್ವಾಯ ಅವಯಗಳಲ್ಲಿ

ಬೇರೆಬೇರೆ ಕಂಗೊಳಿಸುವ ಶರೀರದೊಳು ನಾನಾ ಪ್ರಕಾರ

ವಿಕಾರಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು//26//


ವಾರಿಜಭವಾಂಡದೊಳು ಲಕ್ಷ್ಮೀನಾರಸಿಂಹನ ರೂಪಗುಣಗಳು

ವಾರಿಧಿಯೊಳಿಹ ತೆರಗಳಂದದಿ ಸಂದಣಿಸಿ ಇಹವು

ಕಾರಣಾoಶಾವೇಶ ವ್ಯಾಪ್ತಾವತಾರ ಕಾರ್ಯಾವ್ಯಕ್ತವ್ಯಕ್ತವು

ಈರೈದು ವಿಭೂತಿ ಅಂತರ್ಯಾಮಿ ರೂಪಗಳು//27//


ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು ಚೇತನಾಚೇತನ

ಜಗತ್ತಿನೊಳು ಅನುದಿನದಲು ಆಡುವನು ಸುಖಪೂರ್ಣ

ದಣಿವಿಕೆಯು ಇವಗಿಲ್ಲ ಬಹು ಕಾರುಣಿಕ ಅನಂತಾನಂತ ಜೀವರ ಗಣದೊಳು

ಏಕಾಂಶ ಅಂಶ ರೂಪದಿ ನಿಂತು ನೇಮಿಸುವ//28//


ಜೀವ ಜೀವರ ಭೇದ ಜಡ ಜಡ ಜೀವ ಜಡ

ಜಡ ಜೀವರಿಂದಲಿ ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು

ಲಕ್ಷ್ಮೀ ಮೂವರಿಂದಲಿ ಪದ್ಮಜಾಂದದಿ ತಾ ವಿಲಕ್ಷಣಳು ಎನಿಸುತಿಪ್ಪಳು

ಸಾ ಅಧಿಕಸಮ ಶೂನ್ಯಳು ಎಂದರಿತು ಈರ್ವರನು ಭಜಿಸು//29//


ಆದಿತೇಯರು ತಿಳಿಯದಿಹ ಗುಣ ವೇದಮಾನಿಗಳು ಎಂದೆನಿಪ ವಾಣಿ ಆದಿಗಳು ಬಲ್ಲರು

ಅವರು ಅರಿಯದ ಗುಣಂಗಳನು ವೇಧ ಬಲ್ಲನು

ಬೊಮ್ಮನು ಅರಿಯದ ಅಗಾಧ ಗುಣಗಳು ಲಕುಮಿ ಬಲ್ಲಳು

ಶ್ರೀಧರ ಒಬ್ಬನು ಉಪಾಸ್ಯ ಸದ್ಗುಣಪೂರ್ಣ ಹರಿಯೆಂದು//30//


ಇಂತ ಅನಂತಾನಂತ ಗುಣಗಳ ಪ್ರಾಂತಗಾಣದೆ ಮಹಾಲಕುಮಿ

ಭಗವಂತಗೆ ಆಭರಣ ಆಯುಧ ಅಂಬರ ಆಲಯಗಳಾಗಿ

ಸ್ವಾಂತದಲಿ ನೆಲೆಗೊಳಿಸಿ ಪರಮ ದುರಂತ ಮಹಿಮನ ದೌತ್ಯಕರ್ಮ

ನಿರಂತರದಿ ಮಾಡುತಲಿ ತದಧೀನತ್ವಯೈದಿಹಳು//31//


ಪ್ರಳಯ ಜಲಧಿಯೊಳು ಉಳ್ಳ ನಾವೆಯು ಹೊಲಬುಗಾಣದೆ ಸುತ್ತುವಂದದಿ

ಜಲರುಹೇಕ್ಷಣನ ಅಮಲ ಗುಣರೂಪಗಳ ಚಿಂತಿಸುತ

ನೆಲೆಯಗಾಣದೆ ಮಹಾಲಕುಮಿ ಚಂಚಲವನು ಐದಿಹಳು

ಅಲ್ಪ ಜೀವರಿಗೆ ಅಳವಡುವದೇನು ಇವನ ಮಹಿಮೆಗಳು ಈ ಜಗತ್ರಯದಿ//32//


ಶ್ರೀನಿಕೇತನ ಸಾತ್ವತಾಂಪತಿ ಜ್ಞಾನ ಗಮ್ಯ ಗಯಾಸುರ ಅರ್ದನ ಮೌನಿಕುಲ ಸನ್ಮಾನ್ಯ

ಮಾನದ ಮಾತುಳ ದ್ವ್ಹಂಸಿ

ದೀನಜನ ಮಂದಾರ ಮಧುರಿಪು ಪ್ರಾಣದ ಜಗನ್ನಾಥ ವಿಠಲ

ತಾನೇ ಗತಿಯೆಂದು ಅನುದಿನದಿ ನಂಬಿದವರ ಪೊರೆವ//33//


//ಇತಿ ಶ್ರೀ ಪಂಚತನ್ಮಾತ್ರ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Friday, January 4, 2013

ಶ್ರೀ ಹರಿಕಥಾಮೃತಸಾರ - 6

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಪಂಚಮಹಾಯಜ್ಞ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ

ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು

ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ

ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ//1//


ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು

ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ

ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ

ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು//2//


ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು

ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾವಿಸುವುದು ಅಂಗಾರ ಸಿಡಿಲೆಂದು

ಈ ವಿಧ ಅಗ್ನಿಯೊಳು ಅಬ್ಧಿ ಜಾತನ ಕೋವಿದರು ಹೋಮಿಸುವರು ಅನುದಿನ

ಪರಮ ಭಕುತಿಯಲಿ//3//


ಧರಣಿಯೆಂಬುದೇ ಅಗ್ನಿ ಸಂವತ್ಸರವೇ ಸಮಿಧೆ ವಿಹಾಯಸವೇ ಪೊಗೆ

ಇರಳು ಉರಿ ದಿಶ ಅಂಗಾರ ಅವಾಂತರ ದಿಗ್ವಲಯ ಕಿಡಿಯು

ವರುಷವೆಂಬ ಆಹುತಿಗಳಿಂದಲಿ ಹರಿಯ ಮೆಚ್ಚಿಸಿ

ಸಕಲರೊಳಗೆ ಅಧ್ವರಿಯನಾಗಿರು ಸರ್ವ ರೂಪಾತ್ಮಕನ ಚಿಂತಿಸುತ//4//


ಪುರುಷ ಶಿಖಿ ವಾಕ್ಸಮಿಧೆ ಧೂಮವು ಪರಣ ಅರ್ಚಿಯು ಜಿಹ್ವೆ ಶ್ರೋತ್ರಗಳು ಎರಡು ಕಿಡಿಗಳು

ಲೋಚನಗಳು ಅಂಗಾರವೆನಿಸುವುವು

ನಿರುತ ಭುಂಜಿಸುವನ್ನ ಯದುಕುಲವರನಿಗೆ ಅವದಾನಗಳೆಂದು

ಈ ಪರಿ ಸಮರ್ಪಣೆಗೈಯೆ ಕೈಗೊಂಡು ಅನುದಿನದಿ ಪೊರೆವ//5//


ಮತ್ತೆ ಯೋಷ ಅಗ್ನಿಯೊಳು ತಿಳಿವುದು ಉಪಸ್ಥ ತತ್ತ್ವವೆ ಸಮಿಧೆ

ಕಾಮೋತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ

ತತ್ಪ್ರವೇಶ ಅಂಗಾರ ಕಿಡಿಗಳು ಉತ್ಸಹ ಉತ್ಸರ್ಜನವೆ

ಪುರುಷೋತ್ತಮನಿಗೆ ಅವದಾನವನೆ ಕೈಕೊಂಡು ಮನ್ನಿಸುವ//6//


ಐದಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪತ್ತೈದು ರೂಪಗಳ

ಅನುದಿನದಿ ನೆನೆವರಿಗೆ ಜನ್ಮಗಳ ಐದಿಸನು ನಳಿನಾಕ್ಷ

ರಣದೊಳು ಮೈದುನನ ಕಾಯ್ದಂತೆ ಸಲಹುವ

ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು//7//


ಪಂಚನಾರೀ ತುರಗದಂದದಿ ಪಂಚರೂಪಾತ್ಮಕನು ತಾ ಷಟ್ಪoಚ ರೂಪವ ಧರಿಸಿ

ತತ್ತನ್ನಾಮದಿಂ ಕರೆಸಿ

ಪಂಚ ಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ

ಪಂಚ ವಿಧ ಜೀವರಿಗೆ ಕೊಟ್ಟು ಅಲ್ಲಲ್ಲೆ ರಮಿಸುವನು//8//


ವಿಧಿ ಭವಾದಿ ಸಮಸ್ತ ಜೀವರ ಹೃದಯದೊಳಗೆ ಏಕಾತ್ಮನೆನಿಸುವ ಪದುಮನಾಭನು

ಅಚ್ಯುತಾನಂತಾದಿರೂಪದಲಿ

ಅಧಿಸುಭೂತಾಧ್ಯಾತ್ಮವ ಅಧಿದೈವದೊಳು ಕರೆಸುವ

ಪ್ರಾಣನಾಗಾಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು//9//


ಈರೈದು ಸಾವಿರದ ಇಪ್ಪತ್ತು ಆರಧಿಕ ಮುನ್ನೂರು ರೂಪಗಳ

ಈರೆರೆಡು ಸ್ಥಾನದಲಿ ಚಿಂತಿಪುದು ಅನುದಿನದಿ ಬುಧರು

ನೂರಿಪ್ಪತ್ತೇಳು ಅಧಿಕ ಮೂರಾರುಸಾವಿರ ರೂಪದಿಂ

ದಶ ಮಾರುತರೊಳಿದ್ದು ಅವರವರ ಪೆಸರಿಂದ ಕರೆಸುವನು//10//


ಚಿತ್ತೈಸುವುದು ಎಂಟಧಿಕ ಇಪ್ಪತ್ತು ಸಾವಿರ ನಾಲ್ಕು ಶತದ ಇಪ್ಪತ್ತಮೂರು ಸುಮೂರ್ತಿಗಳು

ಅಹವಲ್ಲೇ ಪರಿಯಂತ

ಹತ್ತು ನಾಲ್ಕು ರೂಪಗಳ ನೆರೆಬಿತ್ತವರೀಪರಿ ತಿಳಿದು

ಪುರುಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು//11//


ಈರೆರೆಡು ಶತದ್ವಿಷ್ಟ ಅಧಿಕ ಹದಿನಾರು ಸಾವಿರ ರೂಪ ಸರ್ವ ಶರೀರದೊಳು

ಶಬ್ಧಾದಿಗಳ ಅಧಿಷ್ಠಾನದೊಳಗೆ ಇಪ್ಪ

ಮಾರುತನು ನಾಗಾದಿ ರೂಪದಿ

ಮೂರನೇ ಗುಣಮಾನಿ ಶ್ರೀ ದುರ್ಗಾರಮಣ ವಿದ್ಯಾಕುಮೋಹವ ಕೊಡುವ ಕರಣಕ್ಕೆ//12//


ಐದವಿದ್ಯೆಗಳೊಳಗೆ ಇಹ ನಾಗಾದಿಗಳ ಅಧಿಷ್ಠಾನದಲಿ ಲಕ್ಷ್ಮೀಧವನು

ಕೃದ್ಧೋಲ್ಕ ಮೊದಲಾದ ಐದು ರೂಪಗಳ ತಾ ಧರಿಸಿ

ಸಜ್ಜನರ ಅವಿದ್ಯವ ಛೇದಿಸುವ ತಾಮಸರಿಗೆ ಅಜ್ಞಾನಾದಿಗಳ ಕೊಟ್ಟು

ಅವರವರ ಸಾಧನವ ಮಾಡಿಸುವ//13//


ಗೋವುಗಳೊಳು ಉದ್ಗೀಥನಿಹ ಪ್ರಸ್ಥಾವ ಹಿಂಕಾರ ಎರಡೂ ರೂಪದಿ ಅವ್ಯಾಜಗಳೊಳಿಹನು

ಪ್ರತಿಹಾರಾಹ್ವ ಹಯಗಳೊಳು

ಜೀವನಪ್ರದ ನಿಧನ ಮನುಜರೊಳು ಈ ವಿಧದೊಳಿಹ ಪಂಚ ಸಾಮವ

ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ//14//


ಯುಗ ಚತುಷ್ಟಯಗಳಲಿ ತಾನಿದ್ದು ಯುಗ ಪ್ರವರ್ತಕ ಧರ್ಮ ಕರ್ಮಗಳಿಗೆ ಪ್ರವರ್ತಕ

ವಾಸುದೇವಾದಿ ಈರೆರೆಡು ರೂಪ ತೆಗೆದುಕೊಂಡು

ಯುಗಾದಿ ಕೃತು ತಾ ಯುಗ ಪ್ರವರ್ತಕಯೆನಿಸಿ

ಧರ್ಮ ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ//15//


ತಲೆಯೊಳಿಹ ನಾರಾಯಣನು ಗಂಟಲಡಿ ಒಡಲೊಳು ವಾಸುದೇವನು

ಬಲದಲಿಹ ಪ್ರದ್ಯುಮ್ನ ಎಡ ಭಾಗದಲಿ ಅನಿರುದ್ಧ

ಕೆಳಗಿನ ಅಂಗದಿ ಸಂಕರುಷಣನ ತಿಳಿದು

ಈ ಪರಿ ಸಕಲ ದೇಹಗಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು//16//


ತನು ವಿಶಿಷ್ಟದಿ ಇಪ್ಪ ನಾರಾಯಣನು ಕಟಿ ಪಾದ ಅಂತ ಸಂಕರುಷಣನು

ಶಿರ ಜಘನ ಅಂತವಾಗಿಹ ವಾಸುದೇವಾಖ್ಯ

ಅನಿಮಿಷ ಈಷ ಅನಿರುದ್ಧ ಪ್ರದ್ಯುಮ್ನನ್ನು ಎಡದಿ ಬಲ ಭಾಗದಿ

ಚಿಂತನೆಯ ಮಾಳ್ಪರಿಗೆ ಉಂಟೆ ಮೈಲಿಗೆ ವಿಧಿ ನಿಷೇಧಗಳು//17//


ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ

ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳು ಇಪ್ಪ ವಾಮನನು

ವಿದಿತ ನೇತ್ರದಿ ತ್ರಿವಿಕ್ರಮನು ತ್ವಕ್ದೇಶದೊಳಗಿಹ

ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ//18//


ಮನದೊಳಿಹ ಗೋವಿಂದ ಮಾಧವ ಧನಪ ಸಖ ತತ್ವದೊಳು

ನಾರಾಯಣ ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು

ಇನಿತು ರೂಪವ ದೇಹದೊಳು ಚಿಂತನೆಯ ಗೈವ ಮಹಾತ್ಮರು

ಇಳೆಯೊಳು ಮನುಜರು ಅವರಲ್ಲ ಅಮರರೇ ಸರಿ ಹರಿಕೃಪಾಬಲದಿ//19//


ನೆಲದೊಳು ಇಪ್ಪನು ಕೃಷ್ಣ ರೂಪದಿ ಜಲದೊಳು ಇಪ್ಪನು ಹರಿಯೆನಿಸಿ

ಶಿಖಿಯೊಳಗೆ ಇಪ್ಪನು ಪರಶುರಾಮ ಉಪೆನ್ದ್ರನು ಎಂದೆನಿಸಿ ಎಲ್ಲರೊಳು ಇಪ್ಪನು ಜನಾರ್ಧನನು

ಬಾಂದಲದೊಳು ಅಚ್ಯುತ ಗಂಧ ನರಹರಿ

ಪೊಳೆವ ಅಧೋಕ್ಷಜ ರಸಗಳೊಳು ರಸರೂಪ ತಾನಾಗಿ//20//


ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ

ಶಬ್ಧದಿ ವ್ಯಾಪಿಸಿಹ ಪ್ರದ್ಯುಮ್ನ ಉಪಸ್ಥದಿ ವಾಸುದೇವನಿಹ

ತಾ ಪೊಳೆವ ಪಾಯುಸ್ಥನಾಗಿ ಜಯಾಪತಿಯು ಸಂಕರುಷಣನು

ಸುಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ//21//


ಚತುರ ವಿಂಶತಿ ತತ್ತ್ವದೊಳು ಶ್ರೀಪತಿಯೆ ಅನಿರುದ್ಧಾದಿ ರೂಪದಿ

ವಿದಿತನಾಗಿದ್ದು ಅಖಿಲ ಜೀವರ ಸಂಹನನದೊಳಗೆ

ಪ್ರತತಿಯಂದದಿ ಸುತ್ತು ಸುತ್ತುತ ಪಿತೃಗಳಿಗೆ ತರ್ಪಕನೆನಿಸಿಕೊಂಡು

ಅತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು//22//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹನ್ನೊಂದು ನೂರೈವತ್ತೆರಡು ರೂಪ

ವಿತತನಾಗಿದ್ದೆಲ್ಲ ಜೀವರ ಜತನ ಮಾಡುವ ಗೋಸುಗ

ಜಗತ್ಪತಿಗೆ ಏನಾದರೂ ಪ್ರಯೋಜನವಿಲ್ಲವಿದರಿಂದ//23//


ಇಂದಿರಾಧವ ಶಕ್ತಿ ಮೊದಲಾದ ಒಂದಧಿಕದಶ ರೂಪದಿಂದಲಿ

ಪೊಂದಿಹನು ಸಕಲ ಇಂದ್ರಿಯಗಳಲ್ಲಿ ಪುರುಷನಾಮಕನು

ಸುಂದರಪ್ರದ ಪೂರ್ಣಜ್ಞಾನಾನಂದಮಯ

ಚಿತ್ದೇಹದೊಳು ತಾನೊಂದರೆಕ್ಷಣ ವಗಲದಲೆ ಪರಮಾಪ್ತನು ಆಗಿಪ್ಪ//24//


ಆರಧಿಕ ದಶ ರೂಪದಿಂದಲಿ ತೋರುತ ಇಪ್ಪನು ವಿಶ್ವ

ಲಿಂಗಶರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು

ಮೂರೈದು ರೂಪಗಳ ಧರಿಸುತಲಿ ಈರೈದು ಕರಣದೊಳು ಮಾತ್ರದಿ

ಖೈರ ಶಿಖಿ ಜಲ ಭೂಮಿಯೊಳಗಿಹನು ಆತ್ಮನಾಮದಲಿ//25//


ಮನದೊಳು ಅಹಂಕಾರದೊಳು ಚಿಂತನೆಯ ಮಾಳ್ಪುದು ಅಂತರಾತ್ಮನ

ಘನ ಸುತತ್ತ್ವದಿ ಪರಮನ ಅವ್ಯಕ್ತದಲಿ ಜ್ಞಾನಾತ್ಮ

ಇನಿತು ಪಂಚಾಶಯ್ವರಣ ವೇದ್ಯನ ಅಜಾದ್ಯೈವತ್ತು ಮೂರ್ತಿಗಳನು

ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು//26//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹದಿಮೂರು ಸಾವಿರದ ಎಂಟು ನೂರಧಿಕ ಚತುರ ವಿಂಶತಿ ರೂಪದಿಂದಲಿ

ವಿತತನಾಗಿದ್ದು ಎಲ್ಲರೊಳು

ಪ್ರಾಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು//27//


ಕೇಶವಾದಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ

ವೇದವ್ಯಾಸ ಅನಿರುದ್ಧಾದಿ ರೂಪಗಳು ಆರು ಋತುಗಳಲಿ

ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮ ಧರ್ಮ ನಿರಾಶೆಯಿಂದಲಿ ಮಾಡು

ಕರುಣವ ಬೇಡು ಕೊಂಡಾಡು//28//


ಲೋಷ್ಠ ಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದ ಅಖಿಳ ಜಡ

ಪರಮೇಷ್ಠಿ ಮೊದಲಾದ ಅಖಿಳ ಚೇತನರೊಳಗೆ ಅನುದಿನವು

ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾಗಿದ್ದು ಎಲ್ಲರಿಗೆ

ಸರ್ವೇಷ್ಟ ಆದಾಯಕ ಸಂತೈಸುವನು ಸರ್ವ ಜೀವರನು//29//


ವಾಸುದೇವಾನಿರುದ್ಧ ರೂಪದಿ ಪುಂ ಶರೀರದೊಳಿಹನು ಸರ್ವದ

ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ

ದ್ವಾಸುಪರ್ಣ ಶ್ರುತಿ ವಿನುತ ಸರ್ವಸುನಿಲ ನಾರಾಯಣನ

ಸದುಪಾಸನೆಯ ಗೈವರರು ಜೀವನ್ಮುಕ್ತರು ಎನಿಸುವರು//30//


ತನ್ನನಂತ ಅನಂತ ರೂಪ ಹಿರಣ್ಯ ಗರ್ಭಾದಿಗಳೊಳಗೆ

ಕಾರುಣ್ಯ ಸಾಗರ ಹರಹಿ ಅವರವರ ಅಖಿಳ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ

ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ//31//


ಸಾಗರದೊಳಿಹ ನದಿಯ ಜಲ ಭೇದ ಆಗಸದೊಳು ಇಪ್ಪ ಅಬ್ದ ಬಲ್ಲವು

ಕಾಗೆ ಗುಬ್ಬಿಗಳು ಅರಿಯ ಬಲ್ಲವೇ ನದಿಯ ಜಲಸ್ಥಿತಿಯ

ಭೋಗಿವರ ಪರಿಯಂಕ ಶಯನನೊಳು ಈ ಗುಣತ್ರಯ ಬದ್ಧ ಜಗವಿಹುದು

ಆಗಮಜ್ಞರು ತಿಳಿವರು ಅಜ್ಞಾನಿಗಳಿಗೆ ಅಳವಡದು//32//


ಕರಣ ಗುಣ ಭೂತಗಳೊಳಗೆ ತದ್ವರನೆನಿಪ ಬ್ರಹ್ಮಾದಿ ದಿವಿಜರೊಳರಿತು

ರೂಪ ಚತುಷ್ಟಯಗಳ ಅನುದಿನದಿ ಸರ್ವತ್ರ ಸ್ಮರಿಸುತ ಅನುಮೋದಿಸುತ ಹಿಗ್ಗುತ

ಪರವಶದಿ ಪಾಡುವರಿಗೆ ತನ್ನಿರವ ತೋರಿಸಿ

ಭವವಿಮುಕ್ತರ ಮಾಡಿ ಪೋಷಿಸುವ//33//


ಮೂಲರೂಪನು ಮನದೊಳಿಹ ಶ್ರವಣ ಆಲಿಯೊಳಗಿಹ ಮತ್ಸ್ಯ

ಕೂರ್ಮನು ಕೋಲರೂಪನು ತ್ವಕ್ರಸನದೊಳಗೆ ಇಪ್ಪ ನರಸಿಂಹ

ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ

ವಾಲಿಭಂಜನ ಹಸ್ತದೊಳು ಪಾದ ಶ್ರೀ ಕೃಷ್ಣ//34//


ಜಿನ ವಿಮೋಹಕ ಬುದ್ಧ ಪಾಯುಗ ದನುಜ ಭಂಜನ ಕಲ್ಕಿ ಮೇಡ್ರದಿ

ಇನಿತು ದಶ ರೂಪಗಳ ದಶ ಕರಣಂಗಳಲಿ ತಿಳಿದು

ಅನುಭವಿಪ ವಿಷಯಂಗಳು ಕೃಷ್ಣಾರ್ಪಣವೆನಲು ಕೈಕೊಂಬ

ವೃಜಿನ ಅರ್ದನ ವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//35//


//ಇತಿ ಶ್ರೀ ಪಂಚಮಹಾಯಜ್ಞ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Thursday, January 3, 2013

ಶ್ರೀ ಹರಿಕಥಾಮೃತಸಾರ - 5

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವಿಭೂತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ

ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ

ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ

ಬಗೆಗಳನು ಅರಿತು ಬುಧರಿಂದ//1//


ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು

ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು

ತತ್ತತ್ ಸ್ಥಾನದಲಿ ವೆಗ್ಗಳಿಸಿ

ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು//2//


ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ

ಗೃಹಸ್ಥ ವಟು ಯಜಮಾನ ಸ್ವಪರ ಜನ

ಪೃಥಿವಿ ಜಲ ಶಿಖಿ ಪವನ ತಾರಾಪಥ ನವಗ್ರಹ ಓಗ ಕರಣ ಭತಿಥಿ

ಸಿತ ಅಸಿತ ಪಕ್ಷ ಸಂಕ್ರಮಣ ಅವನ ಅಧಿಷ್ಠಾನ//3//


ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ

ಲಕ್ಷ್ಮೀ ಧವನು ಪ್ರತಿದಿನದಿ ಶಾಲಗ್ರಾಮದೊಳಗೆ ಇಪ್ಪ

ಐದು ಸಾವಿರ ಮೇಲೆ ಮೂವತ್ತು ಐದಧಿಕ ಐನೂರು ರೂಪದಿ

ಭೂಧರಗಳಾಭಿಮಾನಿ ದಿವಿಜರೊಳು ಇಪ್ಪನು ಅನವರತ//4//


ಶ್ರೀರಮಣ ಪ್ರತಿಮೆಗಳೊಳಗೆ ಹದಿಮೂರಧಿಕವಾಗಿಪ್ಪ ಮೇಲೆ

ಐನೂರು ರೂಪವ ಧರಿಸಿ ಇಪ್ಪನು ಆಹಿತ ಅಚಲದಿ

ದಾರುಮಥನವ ಗೈಯೈ ಪಾವಕ ತೋರುವಂತೆ

ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾ ಕಾಲದಲಿ ನೋಳ್ಪರಿಗೆ//5//


ಕರಣ ನಿಯಾಮಕನು ತಾನು ಉಪಕರಣದೊಳಗೆ ಐವತ್ತೆರಡು ಸಾವಿರದ

ಹದಿನಾಲ್ಕು ಅಧಿಕ ಶತ ರೂಪಗಳನು ಧರಿಸಿ

ಇರುತಿಹನು ತದ್ರೂಪ ನಾಮಗಳ ಅರಿತು ಪೂಜಿಸುತಿಹರ ಪೂಜೆಯ ನಿರುತ ಕೈಕೊಂಬ

ತೃಷಾರ್ತನು ಜಲವ ಕೊಂಬಂತೆ//6//


ಬಿಂಬರೂಪನು ಈ ತೆರದಿ ಜಡಪೊಂಬಸಿರ ಮೊದಲಾದ ಸುರರೊಳಗೆ ಇಂಬುಗೊಂಡಿಹನೆಂದು

ಅರಿದು ಧರ್ಮಾರ್ಥ ಕಾಮಗಳ ಹಂಬಲಿಸದೆ ಅನುದಿನದಿ

ವಿಶ್ವಕುಟುಂಬಿ ಕೊಟ್ಟ ಕಣ ಅನ್ನಕುತ್ಸಿತ ಕಂಬಳಿಯೇ

ಸೌಭಾಗ್ಯವೆಂದು ಅವನ ಅಂಘ್ರಿಗಳ ಭಜಿಸು//7//


ವಾರಿಯೊಳಗಿಪ್ಪತ್ತು ನಾಲ್ಕು ಮೂರೆರೆಡು ಸಾವಿರದ ಮೇಲೆ ಮುನ್ನೂರು ಹದಿನೇಳು ಎನಿಪ

ರೂಪವು ಶ್ರೀತುಳಸಿದಳದಿ

ನೂರು ಅರವತ್ತೊಂದು ಪುಷ್ಪದಿ ಮೂರಧಿಕ ದಶ ದೀಪದೊಳು

ನಾನೂರು ಮೂರು ಸುಮೂರ್ತಿಗಳು ಗಂಧದೊಳಗೆ ಇರುತಿಹವು//8//


ಅಷ್ಟದಳ ಸದ್ಹೃದಯ ಕಮಲ ಅಧಿಷ್ಠಿತನು ತಾನಾಗಿ ಸರ್ವ ಉತ್ಕ್ರುಷ್ಟಮಹಿಮನು

ದಳಗಳಲಿ ಸಂಚರಿಸುತ ಒಳಗಿದ್ದು

ದುಷ್ಟರಿಗೆ ದುರ್ಬುದ್ಧಿ ಕರ್ಮ ವಿಶಿಷ್ಟರಿಗೆ ಸುಜ್ಞಾನ ಧರ್ಮ

ಸುಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ//9//


ವಿತ್ತದೇಹಾಗಾರ ದಾರಾಪತ್ಯ ಮಿತ್ರಾದಿಗಳೊಳಗೆ

ಗುಣಚಿತ್ತಬುದ್ಧಿ ಆದಿ ಇಂದ್ರಿಯಗಳೊಳು ಜ್ಞಾನ ಕರ್ಮದೊಳು

ತತ್ತದಾಹ್ವಯನಾಗಿ ಕರೆಸುತ ಸಂಕಲ್ಪ ಅನುಸಾರದಿ

ನಿತ್ಯದಲಿ ತಾ ಮಾಡಿ ಮಾಡಿಪನು ಎಂದು ಸ್ಮರಿಸುತಿರು//10//


ಭಾವದ್ರವ್ಯಕ್ರಿಯೆಗಳು ಎನಿಸುವ ಈ ವಿಧ ಅದ್ವೈತ ತ್ರಯಂಗಳ

ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ

ತಾವಕನು ತಾನೆಂದು ಪ್ರತಿದಿನ ಸೇವಿಸುವ ಭಕ್ತರಿಗೆ

ತನ್ನನೀವ ಕಾವ ಕೃಪಾಳು ಕರಿವರಗೊಲಿದ ತೆರದಂತೆ//11//


ಬಾಂದಳವೆ ಮೊದಲಾದುದರೊಳು ಒಂದೊಂದರಲಿ ಪೂಜಾ ಸುಸಾಧನವೆಂದೆನಿಸುವ

ಪದಾರ್ಥಗಳು ಬಗೆಬಗೆಯ ನೂತನದಿ ಸಂದಣಿಸಿ ಕೊಂಡಿಹವು

ಧ್ಯಾನಕೆ ತಂದಿನಿತು ಚಿಂತಿಸಿ ಸದಾ ಗೋವಿಂದನ ಅರ್ಚಿಸಿ

ನೋಡು ನಲಿನಲಿದಾಡು ಕೊಂಡಾಡು//12//


ಜಲಜನಾಭನ ಮೂರ್ತಿ ಮನದಲಿ ನೆಲೆಗೊಳಿಸಿ ನಿಶ್ಚಲ ಭಕುತಿಯಲಿ

ಚಳಿ ಬಿಸಿಲು ಮಳೆ ಗಾಳಿಗಳ ನಿಂದಿಸದೆ ನಿತ್ಯದಲಿ

ನೆಲೆದೊಳಿಹ ಗಂಧವೇ ಸುಗಂಧವು ಜಲವೆ ರಸ ರೂಪವೆ ಸುದೀಪವು

ಎಲರು ಚಾಮರ ಶಭ್ಧ ವಾದ್ಯಗಳು ಅರ್ಪಿಸಲು ಒಲಿವ//13//


ಗೋಳಕಗಳು ರಮಾ ರಮಣನ ನಿಜ ಆಲಯಗಳು

ಅನುದಿನದಿ ಸಂಪ್ರಕ್ಷಾಲನೆಯೆ ಸಮ್ಮಾರ್ಜನವು ಕರುಣಗಳೆ ದೀಪಗಳು

ಸಾಲು ತತ್ತತ್ ವಿಷಯಗಳ ಸಮ್ಮೇಳನವೇ ಪರಿಯಂಕ

ತತ್ಸುಖದ ಏಳಿಗೆಯೆ ಸುಪ್ಪತ್ತಿಗೆ ಆತ್ಮನಿವೇದನೆ ವಸನ//14//


ಪಾಪಕರ್ಮವು ಪಾದುಕೆಗಳ ಅನುಲೇಪನವು ಸತ್ಪುಣ್ಯ ಶಾಸ್ತ್ರ ಆಲಾಪನವೆ ಶ್ರೀತುಳಸಿ

ಸುಮನೋವೃತ್ತಿಗಳೆ ಸುಮನ

ಕೋಪಧೂಪವು ಭಕ್ತಿ ಭೂಷಣ

ವ್ಯಾಪಿಸಿದ ಸದ್ಬುದ್ಧಿ ಛತ್ರವು ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ//15//


ಮನ ವಚನ ಕಾಯಿಕ ಪ್ರದಕ್ಷಿಣೆ ಅನುದಿನದಿ ಸರ್ವತ್ರ ವ್ಯಾಪಕ ವನರುಹೇಕ್ಷಣಗೆ

ಅರ್ಪಿಸುತ ಮೋದಿಸುತಲಿರು ಸತತ

ಅನುಭವಕೆ ತಂದುಕೋ ಸಕಲ ಸಾಧನಗಳೊಳಗೆ ಇದೆ ಮುಖ್ಯ

ಪಾಮರ ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗೆ ಅಲ್ಲದಲೆ//16//


ಚತುರ ವಿಧ ಪುರುಷಾರ್ಥ ಪಡೆವರೆ ಚತುರದಶಲೋಕಗಳ ಮಧ್ಯದೊಳು

ಇತರ ಉಪಾಯಗಳು ನೋಡಲು ಸಕಲ ಶಾಸ್ತ್ರದಲಿ

ಸತತ ವಿಷಯ ಇಂದ್ರಿಯಗಳಲಿ ಪ್ರವಿತತನೆನಿಸಿ ರಾಜಿಸುವ ಲಕ್ಷ್ಮೀಪತಿಗೆ

ಸರ್ವ ಸಮರ್ಪಣೆಯೇ ಮಹಾಪೂಜೆ ಸದುಪಾಯ//17//


ಗೋಳಕವೇ ಕುಂಡ ಅಗ್ನಿ ಕರಣವು ಮೇಲೊದಗಿ ಬಹುವಿಷಯ ಸಮಿಧೆಯು

ಗಾಳಿ ಯತ್ನವು ಕಾಮ ಧೂಪವು ಸನ್ನಿಧಾನ ಅರ್ಚಿ

ಮೇಳನವೇ ಪ್ರಜ್ವಾಲೆ ಕಿಡಿಗಳು ತೂಳಿದ ಆನಂದಗಳು

ತತ್ತತ್ಕಾಲ ಮಾತುಗಳು ಎಲ್ಲ ಮಂತ್ರ ಅಧ್ಯಾತ್ಮ ಯಜ್ಞವಿದು//18//


ಮಧು ವಿರೋಧಿಯ ಪಟ್ಟಣಕೆ ಪೂರ್ವದ ಕವಾಟಗಳು ಅಕ್ಷಿನಾಸಿಕವದನ

ಶ್ರೋತೃಗಳು ಎರಡು ದಕ್ಷಿಣ ಉತ್ತರದ್ವಾರ

ಗುದೋಪಸ್ಥಗಳು ಎರಡು ಪಶ್ಚಿಮ ಕದಗಳು ಎನಿಪವು

ಷಟ್ ಸರೋಜವೆ ಸದನ ಹೃದಯವೇ ಮಂಟಪ ತ್ರಿಗುಣoಗಳೆ ಕಲಶ//19//


ಧಾತುಗಳೇ ಸಪ್ತ ಆವರಣ ಉಪವೀಧಿಗಳೇ ನಾಡಿಗಳು ಮದಗಳು ಯೂಥಪಗಳು

ಸುಷುಮ್ನನಾಡಿಯೇ ರಾಜಪಂಥಾನ

ಈ ತನೂರುಹಗಳೇ ವನಂಗಳು ಮಾತರಿಶ್ವನು ಪಂಚರೂಪದಿ

ಪಾತಕಿಗಳೆಂಬ ಅರಿಗಳನು ಸಂಹರಿಪ ತಳವಾರ//20//


ಇನ ಶಶಾಂಕಾದಿಗಳು ಲಕ್ಷ್ಮೀವನಿತೆ ಅರಸನ ದ್ವಾರ ಪಾಲಕರೆನಿಸುತ ಇಪ್ಪರು

ಮನದ ವೃತ್ತಿಗಳೇ ಪದಾತಿಗಳು

ಅನುಭವಿಪ ವಿಷಯoಗಳೇ ಪಟ್ಟಣಕೆ ಬಪ್ಪ ಪಸಾರಗಳು

ಜೀವನೇ ಸುವರ್ತಕ ಕಷ್ಟಗಳ ಕೈಕೊಂಬ ಹರಿ ತಾನು//21//


ಉರುಪರಾಕ್ರಮನ ಅರಮನಿಗೆ ದಶಕರಣಗಳೆ ಕನ್ನಡಿಯ ಸಾಲುಗಳು

ಅರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು

ಮರಳಿ ಬೀಸುವ ಶ್ವಾಸಗಳು ಚಾಮರ ವಿಲಾಸಿನಿ ಬುದ್ಧಿ

ದಾಮೋದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು//22//


ಮಾರಮಣನ ಅರಮನೆಗೆ ಸುಮಹಾ ದ್ವಾರವೆನಿಸುವ ವದನಕೆ

ಒಪ್ಪುವ ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು

ಊರಿ ನಡೆವ ಅಂಘ್ರಿಗಳು ಜಂಘೆಗಳು ಊರು ಮಧ್ಯ ಉದರ ಶಿರಗಳು

ಆಗಾರದ ಉಪ್ಪರಿಗೆಗಳು ಕೋಶಗಳು ಐದು ಕೋಣೆಗಳು//23//


ಈ ಶರೀರವೇ ರಥ ಪಟಾಕ ಸುವಾಸಗಳು ಪುಂಡ್ರಗಳು ಧ್ವಜ

ಸಿಂಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ಪಾಶ

ಗುಣ ದಂಡತ್ರಯಗಳು ಶುಭಾಶುಭದ್ವಯ ಕರ್ಮ ಚಕ್ರ

ಮಹಾಸಮರ್ಥ ಅಶ್ವಗಳು ದಶಕರಣoಗಳು ಎನಿಸುವುವು//24//


ಮಾತರಿಶ್ವನು ದೇಹರಥದೊಳು ಸೂತನಾಗಿಹ ಸರ್ವಕಾಲದಿ

ಶ್ರೀತರುಣಿ ವಲ್ಲಭ ರಥಿಕನು ಎಂದರಿದು ನಿತ್ಯದಲಿ

ಪ್ರೀತಿಯಿಂದಲಿ ಪೋಷಿಸುತ ವಾತಾತಪ ಆದಿಗಳಿಂದ ಅವಿರತ

ಈ ತನುವಿನೊಳು ಮಮತೆ ಬಿಟ್ಟವನೇ ಮಹಾಯೋಗಿ//25//


ಭವವೆನಿಪ ವನಧಿಯೊಳು ಕರ್ಮ ಪ್ರವಹದೊಳು ಸಂಚರಿಸುತಿಹ

ದೇಹವೆ ಸುನಾವೆಯ ಮಾಡಿ ತನ್ನವರಿಂದ ಒಡಗೂಡಿ

ದಿವಸ ದಿವಸಗಳಲ್ಲಿ ಲಕ್ಷ್ಮೀಧವನು ಕ್ರೀಡಿಪನು ಎಂದು ಚಿಂತಿಸೆ

ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವ ಈವ//26//


ಆಪಣಾಲಯಗಳ ಪದಾರ್ಥವು ಸ್ತ್ರೀಪುರುಷರ ಇಂದ್ರಿಯಗಳಲಿ

ದೀಪ ಪಾವಕರೊಳಗೆ ಇದುವ ತೈಲಾದಿ ದ್ರವ್ಯಗಳ

ಆ ಪರಮಗೆ ಅವದಾನವು ಎಂದು ಪದೇಪದೇ ಮರೆಯದಲೆ ಸ್ಮರಿಸುತ

ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ//27//


ವಾರಿಜ ಭವಾಂಡವೆ ಸುಮಂಟಪ ಮೇರುಗಿರಿ ಸಿಂಹಾಸನವು ಭಾಗೀರಥಿಯೇ ಮಜ್ಜನವು

ದಿಕ್ವಸ್ತ್ರಗಳು ನುಡಿ ಮಂತ್ರ

ಭೂರುಹಜ ಫಲಪುಷ್ಪ ಗಂಧ ಸಮೀರ ಶಶಿ ರವಿ ದೀಪ

ಭೂಷಣ ತಾರಕಗಳು ಎಂದು ಅರ್ಪಿಸಲು ಕೈಕೊಂಡು ಮನ್ನಿಸುವ//28//


ಭೂಸುರರೊಳು ಇಪ್ಪ ಅಬ್ಜಭವನನೊಳು ವಾಸುದೇವನು

ವಾಯುಖಗಪ ಸದಾಶಿವ ಅಹಿಪ ಇಂದ್ರನು ವಿವಸ್ವಾನ್ ನಾಮಕ ಸೂರ್ಯ

ಭೇಶಕಾಮ ಅಮರಾಸ್ಯ ವರುಣಾದಿ ಸುರರು ಕ್ಷತ್ರಿಯರೊಳು ಇಪ್ಪರು

ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು//29//


ಮೀನ ಕೇತನ ತನಯ ಪ್ರಾಣಾಪಾನ ವ್ಯಾನೋದಾನ ಮುಖ್ಯ ಏಕ ಊನ ಪಂಚಾಶತ್

ಮರುದ್ಗಣ ರುದ್ರ ವಸುಗಣರು

ಮೇನಕಾತ್ಮಜ ಕುವರ ವಿಶ್ವಕ್ಸೇನ ಧನಪಾದಿ ಅನಿಮಿಷರನು

ಸದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯುಮ್ನ//30//


ಇರುತಿಹರು ನಾಸತ್ಯ ದಸ್ರರು ನಿರಋತಿಯು ಯಮಧರ್ಮ ಕಿಂಕರರು ಮೇದಿನಿ

ಕಾಲಮೃತ್ಯು ಶನೈಶ್ಚರಾದಿಗಳು

ಕರೆಸಿಕೊಂಬರು ಶೂದ್ರರೆಂದು ಅನವರತ

ಶೂದ್ರರೊಳಿಪ್ಪರು ಇವರೊಳಗೆ ಅರವಿದೂರ ಅನಿರುದ್ಧನು ಇಹನೆಂದರಿದು ಮನ್ನಿಪುದು//31//


ವೀತಭಯ ನಾರಾಯಣ ಚತುಷ್ಪಾತು ತಾನು ಎಂದೆನಿಸಿ

ತತ್ತತ್ ಜಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ

ಚೇತನರ ಒಳಹೊರಗೆ ಓತಪ್ರೋತನಾಗಿದ್ದು ಎಲ್ಲರಿಗೆ

ಸಂಪ್ರೀತಿಯಲಿ ಧರ್ಮಾರ್ಥ ಕಾಮಾದಿಗಳ ಕೊಡುತಿಹನು//32//


ನಿಧನ ಧನದ ವಿಧಾತ ವಿಗತಾಭ್ಯಧಿಕ ಸಮಸಮವರ್ತಿ ಸಾಮಗ

ತ್ರಿದಶ ಗಣಸಂಪೂಜ್ಯ ತ್ರಿಕಕುತ್ ಧಾಮ ಶುಭನಾಮ

ಮಧುಮಥನ ಭೃಗುರಾಮ ಘೋಟಕ ವದನ

ಸರ್ವ ಪದಾರ್ಥದೊಳು ತುದಿ ಮೊದಲು ತುಂಬಿಹನು ಎಂದು ಚಿಂತಿಸು ಬಿಂಬರೂಪದಲಿ//33//


ಕನ್ನಡಿಯ ಕೈವಿಡಿದು ನೋಡಲು ತನ್ನ ಇರವು ಸವ್ಯಾಪಸವ್ಯದಿ ಕಣ್ಣಿಗೆ ಒಪ್ಪುವ ತೆರದಿ

ಅನಿರುದ್ಧನಿಗೆ ಈ ಜಗವು ಭಿನ್ನ ಭಿನ್ನವೆ ತೋರುತಿಪ್ಪುದು

ಜನ್ಯವಾದುದರಿಂದ ಪ್ರತಿಬಿಂಬನ್ನ

ಮಯಗಾನು ಎಂದರಿದು ಪೂಜಿಸಲು ಕೈಕೊಂಬ//34//


ಬಿಂಬರೆನಿಪರು ಸ್ವೋತ್ತಮರು ಪ್ರತಿಬಿಂಬರೆನಿಪರು ಸ್ವ ಅವರರು

ಪ್ರತಿಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು

ಸಂಭ್ರಮದಿ ಪಾಡುತಲಿ ನೋಡುತ ಉಂಬುದು ಉಡುವುದು ಇಡುವುದು ಕೊಡುವುದು ಎಲ್ಲ

ಅಂಬುಜಾoಬುಕನ ಅಂಘ್ರಿ ಪೂಜೆಗಳು ಎಂದು ನಲಿದಾಡು//35//


ನದಿಯ ಜಲ ನದಿಗೆ ಎರೆವ ತೆರೆದಂದದಲಿ

ಭಗವತ್ ದತ್ತ ಧರ್ಮಗಳು ಉದಧಿಶಯನನಿಗೆ ಅರ್ಪಿಸುತ ವ್ಯಾವೃತ್ತ ನೀನಾಗಿ

ವಿಧಿ ನಿಷೇಧಾದಿಗಳಿಗೆ ಒಳಗಾಗದಲೆ ನೋಡುತ

ದರ್ವಿಯಂದದಿ ಪದುಮನಾಭನ ಸಕಲ ಕರ್ಮಗಳಲಿ ನೆನೆವುತಿರು//36//


ಅರಿಯದಿರ್ದರು ಎಮ್ಮೊಳಿದ್ದು ಅನವರತ ವಿಷಯಗಳ ಉಂಬ

ಜ್ಞಾನ ಉತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ

ಸರಿತು ಕಾಲಪ್ರವಹಗಳು ಕಂಡರೆಯು ಸರಿ ಕಾಣದಿರೆ ಪರಿವವು

ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು//37//


ಏನು ಮಾಡುವ ಕರ್ಮಗಳು ಲಕ್ಷ್ಮೀ ನಿವಾಸನಿಗೆ ಅರ್ಪಿಸು

ಅನುಸಂಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ

ಮಾನನಿಧಿ ಕೈಕೊಂಡು ಸುಖವಿತ್ತು ಅನತರ ಸಂತೈಪ

ತೃಣ ಜಲ ಧೇನು ತಾನುಂಡು ಅನವರತ ಪಾಲ್ಗರೆವ ತೆರದಂತೆ//38//


ಪೂರ್ವ ದಕ್ಷಿಣ ಪಶ್ಚಿಮ ಉತ್ತರ ಪಾರ್ವತೀಪತಿ ಅಗ್ನಿವಾಯು ಸುಶಾರ್ವರೀಚರ

ದಿಗ್ವಲಯದೊಳು ಹಂಸನಾಮಕನು

ಸರ್ವಕಾಲದಿ ಸರ್ವರೊಳು ಸುರ ಸಾರ್ವಭೌಮನು ಸ್ವೇಚ್ಛೆಯಲಿ

ಮತ್ತೋರ್ವರಿಗೆ ಗೋಚರಿಸದ ಅವ್ಯಕ್ತ ಆತ್ಮನು ಎಂದೆನಿಪ//39//


ಪರಿ ಇಡಾವತ್ಸರನು ಸಂವತ್ಸರದೊಳು ಅನಿರುದ್ಧಾದಿ ರೂಪವ ಧರಿಸಿ

ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ

ಇರುತಿಹ ಜಗನ್ನಾಥ ವಿಠಲ ಸ್ಮರಿಸುವವರನು ಸಂತೈಪನು ಎಂದು

ಉರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು//40//


//ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು