Wednesday, December 19, 2012

ಶ್ರೀ ಹರಿಕಥಾಮೃತಸಾರ - 2

//ಶ್ರೀ ಗುರುಭ್ಯೋ ನಮಃ//


//ಪರಮ ಗುರುಭ್ಯೋ ನಮಃ//


//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//


ಶ್ರೀ ಜಗನ್ನಾಥದಾಸ ವಿರಚಿತ


ಶ್ರೀ ಹರಿಕಥಾಮೃತಸಾರ


//ಕರುಣಾ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು

ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು

ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ

ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ//1//


ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು

ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು

ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ

ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು//2//


ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ

ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ

ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ

ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ//3//


ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ

ಜನರೊಳಗಿದ್ದು ಜನಿಸುವ ಜಗದುದರ ತಾನು

ಘನಮಹಿಮ ಗಾಂಗೇಯನುತ ಗಾಯನವ ಕೇಳುತ

ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ//4//


ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ

ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ

ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು

ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//5//


 
ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು

ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ

ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ

ಇತ್ತಪನು ಸ್ವರ್ಗಾದಿ ಭೋಗಗಳ//6//


ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು

ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ

ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ

ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ //7//


ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ

ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ

ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು

ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ//8//


ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು

ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ

ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು

ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ//9//


ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ

ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ

ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ//10//


ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ

ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ

ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ

ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು//11//


ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ

ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ

ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ

ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು//12//


ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ

ಅನುದಿನದಿ ನೋಡುತ ಸುಖಿಸುವಂದದಿ

ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ

ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ//13//


ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ

ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು

ತಾಳ ತನ್ನವರಲ್ಲಿ ಮಾಡ್ವ ಅವಹೇಳನವ

ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ//14//


ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ

ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ

ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ

ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ//15//


ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ

ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ

ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ

ಮತ್ತೆ ಅವರನು ಇಟ್ಟು ಆನಂದ ಬಡಿಸುವನು//16//


ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ

ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು

ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು

ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ//17//


ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ

ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ

ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ

ಇವನ ಮಾಯವ ಗೆಲುವನಾವನು ಈ ಜಗತ್ರಯದಿ//18//


ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು

ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ

ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ

ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ//19//


ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು

ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ

ಅಂಗೋಪಾಂಗಗಳಲಿ ಇಪ್ಪ

ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು//20//


ಕಾಮಧೇನು ಸುಕಲ್ಪತರು ಚಿಂತಾಮಣಿಗಳು

ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ

ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು//21//


ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು

ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ

ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು

ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ//22//


ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ

ಅತಿಸುಂದರಕೆ ಸುಂದರ ರಸಕೆ ರಸರೂಪ

ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ

ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ//23//


ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ

ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ

ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು

ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು//24//


ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು

ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ

ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ

ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ//25//


ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ

ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ

ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ

ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ //26//


ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ

ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು

ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ//27//


ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ

ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು

ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ

ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ//28//


ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ

ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ

ಪರಮಕರುಣ ಮಹೋದಧಿಯು ತನ್ನವರು ಮಾಡ್ದ

ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು//29//


ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ

ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ

ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ

ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ//30//


ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ

ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ

ಸಾಮಸನ್ನುತ ಸಕಲ ಗುಣಗಣಧಾಮ

ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ//31//


//ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು


Monday, December 17, 2012

ಶ್ರೀ ಹರಿಕಥಾಮೃತಸಾರ - 1

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಂಗಳಾಚರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜ

ಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತ

ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ

ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ//1//


ಜಗದುದರನ ಅತಿ ವಿಮಲ ಗುಣರೂಪಗಳನು ಆಲೋಚನದಿ

ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ

ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ

ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು//2//


ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯ

ಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖಸರೋಜೇನ

ಗರುಡ ಶೇಷ ಶಶಾಂಕದಳ ಶೇಖರರ ಜನಕ ಜಗದ್ಗುರುವೇ

ತ್ವಚ್ಚರಣಗಳಿಗೆ ಅಭಿವಂದಿಸುವೆ ಪಾಲಿಪುದು ಸನ್ಮತಿಯ//3//


ಆರುಮೂರೆರೆಡೊoದು ಸಾವಿರ ಮೂರೆರೆಡು ಶತಶ್ವಾಸ ಜಪಗಳ

ಮೂರು ವಿಧ ಜೀವರೊಳಗೆ ಅಬ್ಜಜಕಲ್ಪ ಪರಿಯಂತ ತಾ ರಚಿಸಿ

ಸತ್ವರಿಗೆ ಸುಖ ಸಂಸಾರ ಮಿಶ್ರರಿಗೆ ಅಧಮಜನರಿಗೆ

ಅಪಾರ ದುಃಖಗಳ ಈವ ಗುರು ಪವಮಾನ ಸಲಹೆಮ್ಮ//4//


ಚತುರವದನನ ರಾಣಿ ಅತಿರೋಹಿತ ವಿಮಲಾ ವಿಜ್ಞಾನಿ

ನಿಗಮ ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ

ನತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ ತುತಿಪುದಕೆ

ಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ//5//


ಕೃತಿರಮಣ ಪ್ರದ್ಯುಮ್ನನಂದನೆ ಚತುರವಿಂಶತಿ

ದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ

ಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿ

ಭಾಗವತ ಭಾರತ ಪುರಾಣ ರಹಸ್ಯ ತತ್ವಗಳು ಅರುಪು ಕರುಣದಲಿ //6//


ವೇದಪೀಠ ವಿರಿಂಚಿ ಭವ ಶುಕ್ರ ಆದಿಸುರ ವಿಜ್ಞಾನದಾಯಕ

ಮೋದ ಚಿನ್ಮಯ ಗಾತ್ರ ಲೋಕಪವಿತ್ರ ಸುಚರಿತ್ರ

ಛೇದ ಭೇದ ವಿಷಾದ ಕುಟಿಲಾಂತಾದಿ ಮಧ್ಯ ವಿದೂರ

ಆದಾನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ//7//


ಕ್ಷಿತಿಯೊಳಗೆ ಮಣಿಮಂತ ಮೊದಲಾದ ಅತಿ ದುರಾತ್ಮರು

ಒಂದಧಿಕ ವಿಂಶತಿ ಕುಭಾಷ್ಯವ ರಚಿಸೆ

ನಡುಮನೆಯೆಂಬ ಬ್ರಾಹ್ಮಣನ ಸತಿಯ ಜಠರದೊಳು ಅವತರಿಸಿ ಭಾರತೀರಮಣ

ಮಧ್ವಭಿದಾನದಿ ಚತುರದಶ ಲೋಕದಲಿ ಮೆರೆದ ಅಪ್ರತಿಮಗೆ ವಂದಿಸುವೆ//8//


ಪಂಚಭೇದಾತ್ಮಕ ಪ್ರಪಂಚಕೆ ಪಂಚರೂಪಾತ್ಮಕನೆ ದೈವಕ

ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ

ಪಂಚವಿಂಶತಿ ತತ್ವ ತರತಮ ಪಂಚಿಕೆಗಳನು ಪೇಳ್ದ

ಭಾವೀ ವಿರಿಂಚಿಯೆನಿಪ ಆನಂದತೀರ್ಥರ ನೆನೆವೆನನುದಿನವು//9//


ವಾಮದೇವ ವಿರಿಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ

ಸೋಮಸೂರ್ಯಾನಲ ವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಲವ//10//


ಕೃತ್ತಿವಾಸನೆ ಹಿಂದೆ ನೀ ನಾಲ್ವತ್ತು ಕಲ್ಪಸಮೀರನಲಿ ಶಿಷ್ಯತ್ವವಹಿಸಿ

ಅಖಿಳ ಆಗಮಾರ್ಥಗಳೋದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು

ಆದಿತ್ಯರೊಳಗೆ ಉತ್ತಮನೆನಿಸಿ

ಪುರುಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ//11//


ಪಾಕಶಾಸನ ಮುಖ್ಯ ಸಕಲ ದಿವೌಕಸರಿಗೆ ಅಭಿನಮಿಪೆ

ಋಷಿಗಳಿಗೆ ಏಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ

ಆ ಕಮಲನಾಭದಿ ಯತಿಗಳಾನೀಕಕಾನಮಿಸುವೆನು ಬಿಡದೆ

ರಮಾಕಳತ್ರನ ದಾಸವರ್ಗಕೆ ನಮಿಪೆನು ಅನವರತ//12//


ಪರಿಮಳವು ಸುಮನದೊಳಗೆ ಅನಲನು ಅರಣಿಯೊಳಗೆ ಇಪ್ಪಂತೆ

ದಾಮೋದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ಇರುತಿಹ

ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷುಜೀವರು

ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು//13//


//ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು





Thursday, December 13, 2012

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ


ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ//



ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ

ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ//



ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ

ಇಂದ್ರಕನ್ನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲ ತೂಗಿರೆ//



ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕುಂತಳೆಯರು ತೂಗಿರೆ

ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ//



ಸಾಸಿರನಾಮನೆ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ

ಲೇಸಾಗಿ ಮಡುವಿನೊಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ//



ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ ತರಳನ ತೊಟ್ಟಿಲ ತೂಗಿರೆ

ಸಿರಿದೇವಿರಮಣನೆ ಪುರಂದರವಿಠಲನೆ ಕರುಣದಿ ಮಲಗೆಂದು ತೂಗಿರೆ//

Tuesday, December 4, 2012

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ


ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ//



ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ

ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ

ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ

ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ//



ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ

ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ

ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ

ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ//



ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ

ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ

ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ

ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲಕಾಣಮ್ಮ//