Monday, November 12, 2012

ವಿಜಯ ಕವಚ

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ


ದುರಿತ ತರಿದು ಪೊರೆವ ವಿಜಯ ಗುರುಗಳೆ೦ಬರ//



ದಾಸರಾಯನ ದಯವ ಸೂಸಿ ಪಡೆದನ/

ದೋಷರಹಿತನ ಸಂತೋಷಭರಿತನ//



ಜ್ಞಾನವಂತನ ಬಲು ನಿಧಾನಿ ಶಾಂತನ/

ಮಾನ್ಯವಂತನ ಬಹುವದಾನ್ಯದಾತನ //



ಹರಿಯ ಭಜಿಸುವ ನರಹರಿಯ ಯಜಿಸುವ/

ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ//



ಮೋದಭರಿತನ ಪಂಚಭೇದವರಿತನ/

ಸಾಧುಚರಿತನ ಮನೋವಿಷಾದ ಮರೆತನ//



ಇವರ ನಂಬಿದ ಜನಕೆ ಭಾವವಿದೆಂಬುದು/

ಹವನವಾಗದೋ ನಮ್ಮವರ ಮತವಿದು//



ಪಾಪಕೋಟಿಯ ರಾಶಿ ಲೇಪವಾಗದು/

ತಾಪ ಕಳೆವನು ಬಲು ದಯಾಪಯೋನಿಧಿ//



ಪವನ ರೂಪದಿ ಹರಿಯ ಸ್ತವನ ಮಾಡಿದ/

ಭುವನ ಬೇಡಿದ ಮಾಧವನ ನೋಡಿದ//



ರಂಗನೆಂದನ ಭಾವವು ಹಿಂಗಿತೆಂದನ/

ಮಂಗಳಾ೦ಗನ ಅಂತರಂಗವರಿತನ//



ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ/

ಸೂಸಿ ಪಡೆದನ ಉಲ್ಲಾಸತನದಲಿ//



ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ/

ಶಾಂತಗುರುಗಳ ಪಾದವನ್ನು ನಂಬಿರೋ//



ಖೇದವಾಗದೋ ನಿಮಗೆ ಮೋದವಾಹುದೋ/

ಆದಿದೇವನ ಸುಪ್ರಸಾದವಾಹುದೋ//



ತಾಪ ತಡೆವನು ಬಂದ ಪಾಪ ಕಡಿವನು/

ಶ್ರೀಪತಿಯ ಪಾದ ಸಮೀಪವಿಡುವನು//



ವೇದ ಓದಲು ಬರಿದೆ ವಾದ ಮಾಡಲು/

ಹಾದಿ ದೊರೆಯದು ಬುಧರ ಪಾದ ನಂಬದೆ//



ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ/

ರಂಗನೊಲಿಯನು ಭಕ್ತರ ಸಂಗ ದೊರಕದೆ//



ಲೆಕ್ಕವಿಲ್ಲದ ದೇಶ ತುಕ್ಕಿ ಬಂದರು/

ದುಃಖವಲ್ಲದೆ ಲೇಶ ಭಕ್ತಿ ದೊರಕದು//



ದಾನಮಾಡಲು ದಿವ್ಯ ಗಾನ ಪಾಡಲು/

ಜ್ಞಾನ ದೊರೆಯದೋ ಇವರಧೀನವಾಗದೆ//



ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ/

ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ//



ಪೂಜೆ ಮಾಡಲು ಕಂಡ ಗೋಜು ಬೀಳಲು/

ಬೀಜ ಮಾತಿನ ಫಲ ಸಹಜ ದೊರಕದು//



ಸುರರು ಎಲ್ಲರೂ ಇವರ ಕರವ ಪಿಡಿವರೋ/

ತರಳರಂದದಿ ಹಿಂದೆ ತಿರುಗುತಿಪ್ಪರೋ//



ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ/

ಅಹೋರಾತ್ರಿಲಿ ಸುಖವ ಕೊಡುವುದು//



ವ್ಯಾಧಿ ಬಾರದೋ ದೇಹ ಭಾದೆ ತಟ್ಟದೋ/

ಆದಿದೇವನ ಸುಪ್ರಸಾದವಾಹುದೋ//



ಪತಿತಪಾಮರ ಮಂದಮತಿಯ ನಾ ಬಲು/

ಸ್ತುತಿಸಲಾಪನೆ ಇವರ ಅತಿಶಯಂಗಳ//



ಕರುಣದಿಂದಲಿ ಎಮ್ಮ ಪೊರೆವನಲ್ಲದೆ/

ದುರಿತಕೋಟಿಯ ಬೇಗ ತರಿವ ದಯದಲಿ//



ಮಂದಮತಿಗಳು ಇವರ ಚಂದವರಿಯದೆ/

ನಿಂದಿಸುವರೋ ಭವದ ಬಂಧ ತಪ್ಪದೋ//



ಇಂದಿರಾಪತಿ ಇವರ ಮುಂದೆ ಕುಣಿವನೋ/

ಅಂದವಚನವ ನಿಜಕೆ ತಂದು ತೋರ್ಪನು//



ಉದಯಕಾಲದಿ ಈ ಪದವ ಪಠಿಸಲು/

ಮದದನಾದರು ಜ್ಞಾನ ಉದಯವಾಹುದೋ//



ಸಟೆಯಿದಲ್ಲವೋ ವ್ಯಾಸ ವಿಠಲ ಬಲ್ಲನೋ/

ಪಠಿಸಬಹುದಿದು ಕೇಳಿ ಕುಟಿಲರಹಿತರು//

Wednesday, November 7, 2012

ಎದ್ದು ಬರುತಾರೆ ನೋಡೇ

ಎದ್ದು ಬರುತಾರೆ ನೋಡೇ


ತಾವೆದ್ದು ಬರುತಾರೆ ನೋಡೇ//



ಮುದ್ದು ವೃಂದಾವನ ಮಧ್ಯದೊಳಗಿಂದ

ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ//



ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು

ಚೆಲುವ ಮುಖದೊಳು ಪೊಳೆವ ದಂತಗಳಿಂದ//



ಹೃದಯಸದನದಲಿ ಪದುಮನಾಭನ ಭಜಿಸಿ

ಮುದಮನದಿಂದ ನಿತ್ಯ ಸದಮಲರೂಪ ತಾಳಿ//



ದಾತ ಗುರು ಜಗನಾಥವಿಠಲನ

ಪ್ರೀತಿಯ ಪಡಿಸುತ ದೂತರ ಪೊರೆಯುತ//

Monday, November 5, 2012

ಎನಗೂ ಆಣೆ ರಂಗ ನಿನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ


ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ//



ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ, ರಂಗ

ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ//



ತನುಮನಧನದಲಿ ವಂಚಕನಾದರೆ ನಿನಗೆ ಆಣೆ, ರಂಗ

ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ//



ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ, ರಂಗ

ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ//



ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ, ರಂಗ

ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ//



ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ, ರಂಗ

ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ//

Friday, November 2, 2012

ಶ್ರೀ ಗಂಧದ ಅಲಂಕಾರ





ವಿಜಯದಶಮಿ ಪ್ರಯುಕ್ತ ಮಾರಂಡಹಳ್ಳಿಯ ಮುಖ್ಯಪ್ರಾಣದೇವರು ಮತ್ತು ವರದರಾಜಸ್ವಾಮಿಗೆ ಮೊಟ್ಟ ಮೊದಲ ಬಾರಿಗೆ ನಡೆದ ಶ್ರೀ ಗಂಧದ ಅಲಂಕಾರ

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು//



ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ

ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಟವಾಗಿ ಮಾಡುತಿಹಳು//



ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು

ಚಿತ್ರಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು//



ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ

ಗರುಡಗಮನನಾದ ಪುರಂದರವಿಠಲನ ಸೇವಿಸುತಿಹಳು//

Tuesday, October 30, 2012

ಹನುಮ ನಮ್ಮ ತಾಯಿ ತಂದೆ


ಹನುಮ ನಮ್ಮ ತಾಯಿ ತಂದೆ,

ಭೀಮ ನಮ್ಮ ಬಂಧು ಬಳಗ

ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ//



ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ

ಆಯಾಸವಿಲ್ಲದೆ ಸಂಜೀವನವ ತಂದೆ,

ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ

ರಘು ರಾಯನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ//



ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ

ಬಂದ ಬಂದ ದುರಿತಗಳ ಪರಿಹರಿಸಿ

ಅಂಧಕಜಾತಕರ ಕೊಂದು ನಂದ ಕಂದಾರ್ಪನೆಂದು

ಗೋವಿಂದನಂಘ್ರಿಗಳೇ ಸಾಕ್ಷಿ ದ್ವಾಪರ ಯುಗದಿ//



ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ

ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ

ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದ ಪರಮಾತ್ಮ

ಗತಿ ಪುರಂದರವಿಠಲನೆ ಸಾಕ್ಷಿ ಕಲಿಯುಗದಲಿ//

Friday, October 19, 2012

ಆಯುಧ ಪೂಜೆ ಹಾಗೂ ವಿಜಯದಶಮಿ

ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ0ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತದೆ

"ಆಯುಧ ಪೂಜೆ" ದಸರಾದಲ್ಲಿ ಆಚರಿಸಲ್ಪಡುವ ಒಂದು ಮುಖ್ಯ ಹಬ್ಬ. ಒಂಭತ್ತನೇ ದಿವಸ ಅoದರೆ ನವಮಿಯಂದು ಈ ಹಬ್ಬವನ್ನು ಆಚರಿಸಲ್ಪಡುತ್ತದೆ. ಇದಕ್ಕೆ ಇರುವ ಮತ್ತೊ೦ದು ಹೆಸರು "ಮಹಾನವಮಿ".

ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಮರಳಿ ಬರುವಾಗ "ಶಮೀ ವೃಕ್ಷ"ದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ದಿವಸವಾದ್ದರಿಂದ ಇದಕ್ಕೆ "ಆಯುಧ ಪೂಜೆ" ಎಂಬ ಹೆಸರು ಬಂದಿತು.

ಇದೆ ಪ್ರತೀಕದಂತೆ ರಾಜ ಮಹಾರಾಜರುಗಳು ತಮ್ಮನ್ನು ಸಂರಕ್ಷಿಸುತ್ತಿದ್ದ ಶಸ್ತ್ರಗಳನ್ನು, ಆಯುಧಗಳನ್ನು ಪೂಜೆ ಸಲ್ಲಿಸುತ್ತಿದ್ದರು.

ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರು ತಾವು ದಿನಬಳಕೆಯಲ್ಲಿ ಬಳಸುವ ವಸ್ತುಗಳು, ಯಂತ್ರಗಳು, ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.

ಇದೆ ಸಂದರ್ಭದಲ್ಲಿ "ಶಮೀ ವೃಕ್ಷ"ಕ್ಕೂ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಲ್ಲಿದೆ.

ಆಯುಧ ಪ್ರಾರ್ಥನ -
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |


ವಿಜಯ ದಶಮಿ
ಆಶ್ವಯುಜ ಮಾಸ ಶುಕ್ಲ ಪಕ್ಷ ದಶಮಿಯಂದು ಆಚರಿಸುವ ಹಬ್ಬಕ್ಕೆ "ವಿಜಯ ದಶಮಿ" ಎಂದು ಕರೆಯುತ್ತಾರೆ.

ಇದೇ ದಿವಸ ಶ್ರೀಹರಿಯ ಆಜ್ಞೆಯಂತೆ "ವಾಯುದೇವರು" "ಮಧ್ವಾಚಾರ್ಯ"ರಾಗಿ ಅವತರಿಸಿದ ದಿವವಾದ್ದರಿಂದ ಈ ದಿನವನ್ನು "ಮಧ್ವ ಜಯಂತಿ" ಎಂದೂ ಕರೆಯುತ್ತಾರೆ.

ಹಿಂದೂ ಪುರಾಣಗಳ ಪ್ರಕಾರ ವಿಜಯ ದಶಮಿಯ ಮಹತ್ವಗಳು ಈ ಕೆಳಕಂಡಂತೆ ಇವೆ

೧) ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಹನುಮಂತ ಮತ್ತು ಸುಗ್ರೀವರ ನೇತೃತ್ವದ ವಾನರ ಸೈನ್ಯದೊಂದಿಗೆ  ಲಂಕೆಗೆ ಹೋಗಿ ಸೀತಾಮಾತೆಯ ರೂಪದಲ್ಲಿದ್ದ ವೇದವತಿಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿದ ದಿವಸ. ಇದರ ಪ್ರತೀಕವಾಗಿ ಇಂದೂ ಸಹ ವಿಜಯ ದಶಮಿಯಂದು ಹಲವೆಡೆ ರಾವಣ, ಕುಂಭಕರ್ಣ ಹಾಗು ಮೇಘನಾಥನ ಪ್ರತಿಕೃತಿಗಳನ್ನು ದಹಿಸಿ ಸಂಭ್ರಮಿಸುತ್ತಾರೆ.


೨) ದುರ್ಗಾದೇವಿ/ಚಾಮುಂಡೇಶ್ವರಿ ಇದೇ ದಿವಸ ಮಹಿಷಾಸುರನನ್ನು ಸಂಹರಿಸಿದ ದಿವಸ. ಮಹಿಷನ ರೂಪದಲ್ಲಿದ್ದ ಅಸುರನು ಒಮ್ಮೆ ದೇವಲೋಕಕ್ಕೆ ನುಗ್ಗಿ ಸ್ವರ್ಗಾಧಿಪತಿಯನ್ನು ಮತ್ತು  ಇತರೆ ದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ ಲಕ್ಷ್ಮಿ ದೇವಿಯು ದುರ್ಗಾದೇವಿ/ ಚಾಮುಂಡೇಶ್ವರಿಯ ಅವತಾರವೆತ್ತಿ ಒಂಭತ್ತು ದಿವಸಗಳ ಕಾಲ ಅವನ ಜೊತೆ ಸೆಣಸಿ ಹತ್ತನೇ ದಿವಸ  ಆ ಮಹಿಷನನ್ನು ಮತ್ತು ಅವನ ಜೊತೆ ಇತರ ಅಸುರನನ್ನು ಸಂಹರಿಸಿದ ದಿವಸ. ಆದ್ದರಿಂದ ಈ ದಿವಸವನ್ನು "ವಿಜಯ ದಶಮಿ" ಎಂದು ಆಚರಿಸುತ್ತಾರೆ.

೩) ಅಜ್ಞಾತವಾಸದ ಬಳಿಕ ಪಾಂಡವರು ತಾವು "ಶಮೀ ವೃಕ್ಷ" ದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಮರಳಿ ಪಡೆದು, ವಿರಾಟನಗರದ  ಮೇಲೆ ದಂಡೆತ್ತಿ ಬಂದ ಕೌರವರ ವಿರುದ್ಧ ಜಯಗಳಿಸಿದ ದಿವಸ.

ಇದೇ ಸಂದರ್ಭದಲ್ಲಿ ಶಮೀ ವೃಕ್ಷ/ ಬನ್ನಿ ವೃಕ್ಷವನ್ನು ವಿಶೇಷವಾಗಿ ಪೂಜಿಸಲ್ಪಡುತ್ತದೆ. ಶಮೀ ವೃಕ್ಷದ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಹಂಚಿಕೊಳ್ಳುತ್ತಾರೆ. ಇದರ ಹಿನ್ನಲೆ ನಮ್ಮನ್ನು ತ್ರೇತಾಯುಗಕ್ಕೆ ಕರೆದೊಯ್ಯುತ್ತದೆ.

ಹಿಂದೆ ತ್ರೇತಾಯುಗದಲ್ಲಿ ಅಯೋಧ್ಯನಗರದಲ್ಲಿ "ಕೌಸ್ತ "ಎಂಬ ಬ್ರಾಹ್ಮಣ ವಿದ್ಯಾರ್ಥಿಯು "ವರಂತನು" ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಿದ್ಯಾಭ್ಯಾಸ ಮುಗಿದ ಬಳಿಕ ಕೌಸ್ತನು ಗುರುವಿನ ಬಳಿ ಬಂದು ಗುರುಗಳೇ ನಾನು ಗುರುದಕ್ಷಿಣೆ ನೀಡಬೇಕು ಎಂದಿದ್ದೇನೆ. ತಾವು ತಮಗೆ ಏನು ಬೇಕು ಎಂದು ತಿಳಿಸಿದರೆ ಅದನ್ನು ತಂದು ಅರ್ಪಿಸುವೆ ಎಂದನು.

ಮೊದಲಿಗೆ ಗುರುಗಳು ನಾನು ಯಾವುದೇ ದಕ್ಷಿಣೆಯನ್ನು ಅಪೇಕ್ಷಿಸದೆ ನಿನಗೆ ವಿದ್ಯಾಭ್ಯಾಸ ನೀಡಿದ್ದೇನೆ. ನನಗೆ ಏನೂ ಬೇಡ ಎಂದರು. ಆದರೆ ಕೌಸ್ತನು ಇಲ್ಲ ತಾವು ಸ್ವೀಕರಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಅವನಿಗೆ ಬುದ್ಧಿ ಕಲಿಸಲು ಗುರುಗಳು ತನಗೆ ೧೪೦ ಬಂಗಾರದ ನಾಣ್ಯಗಳನ್ನು ನೀಡಬೇಕು ಎಂದು ಕೇಳಿದರು. ತಾವು ಕಲಿಸಿದ ೧೪೦ ವಿಷಯಗಳಿಗೆ ಒಂದೊಂದು ಬಂಗಾರದ ನಾಣ್ಯ ಎಂದು ತಿಳಿಸಿದರು.

ಇದನ್ನು ನಿರೀಕ್ಷಿಸಿರದ ಕೌಸ್ತನು ಕಂಗಾಲಾಗಿ ಶ್ರೀರಾಮಚಂದ್ರನ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿ ತನಗೆ ೧೪೦ ನಾಣ್ಯಗಳು ಬೇಕೆಂದು ಕೇಳಿದನು. ಆಗ ಶ್ರೀರಾಮಚಂದ್ರನು ತನಗೆ ಪ್ರಿಯವಾದ ಶಮೀ ವೃಕ್ಷದ  ಬಳಿ ಕೌಸ್ತನಿಗೆ ನಿಂತಿರಲು ಹೇಳಿದನು. ಕೌಸ್ತನು ಮೂರು ದಿವಸಗಳ ಕಾಲ ಅಲ್ಲೇ ನಿಂತಿದ್ದನು. ನಂತರ ಶ್ರೀರಾಮಚಂದ್ರನು ಸಂಪತ್ತಿನ ಅಧಿಪತಿ ಕುಬೇರನಿಗೆ ತಿಳಿಸಿ ಆ ಶಮೀ ವೃಕ್ಷದ ಎಲೆಗಳನ್ನು ಬಂಗಾರದ ನಾಣ್ಯಗಳಾಗಿ ಪರಿವರ್ತಿಸಿದನು.

ಇದರಿಂದ ಸಂತಸಗೊಂಡ ಕೌಸ್ತನು ಗುರುಗಳು ಕೇಳಿದಷ್ಟು ನಾಣ್ಯಗಳನ್ನು ಅವರಿಗೆ ಕೊಟ್ಟು ಮಿಕ್ಕ ನಾಣ್ಯಗಳನ್ನು ದಾನ ಮಾಡಿದನು.

ಅಂದಿನಿಂದ ಶಮೀ/ಬನ್ನಿ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಪೂಜಿಸುತ್ತಾರೆ.

"ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ/
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯವಾದಿನೀ"

ಸರ್ವರಿಗೂ ನವರಾತ್ರಿ, ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ಚಿತ್ರ ಕೃಪೆ - ಅಂತರ್ಜಾಲ