Thursday, January 16, 2014

ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ

ರಾಗ : ಶಂಕರಾಭರಣ
ತಾಳ : ಅಟ್ಟತಾಳ

ನರಸಿಂಹ ಪಾಹೀ ಲಕ್ಷ್ಮೀ ನರಸಿಂಹ ।ಪ।

ನರಸಿಂಹ ನಮಿಪೆ ನಾ ನಿನ್ನ । ಚಾರುಚರಣಕಮಲಕೆ ನೀ ಎನ್ನ।
ಕರವ ಪಿಡಿದು ನಿಜ ಶರಣನೆಂದೆನಿಸು ।
ಭಾಸುರ ಕರುಣಾಂಬುಧೆ ಗರುಡವಾಹನ - ಲಕ್ಷ್ಮೀ ।।ಅ ಪ ।।

ತರಳ ಪ್ರಹ್ಲಾದನ ನುಡಿಯ ಕೇಳಿ ।
ತ್ವರಿತದಿ ಬಂದ್ಯೋ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರಲರಿಯೆ।
ಎಂದೆಂದು ಕೆಂಗಿಡಿಯ ಅಹಭರದಿಂದುಗುಳುತ ಬೊಬ್ಬಿರುದಿ ಬೆಂಬತ್ತಿ
ಕರ್ಬುರಕಶ್ಯಪುವಿನ ಹಿಂಗರುಳ ಪಿಡಿದ ಲಕ್ಷ್ಮೀ ।। ೧ ।।

ಪ್ರಳಯಾಂಬುನಿಧಿಘನಘೋಶದಂತೆ
ಘುಳುಘುಳಿಸುತಲಿ ಪ್ರದೋಷ ಕಾಲ ತಿಳಿದು
ದೈತ್ಯನ ಅತಿರೋಷದಿಂದ ಅಪ್ಪಳಿಸಿ ಮೇದಿನಿಗೆ ನಿರ್ದೋಷ
ಅಹ ಸೆಳೆ ಸೆಳೆಯುತ ಚರ್ಮಸುಲಿದು ಕೆನ್ನೆತ್ತರೋಕುಳಿಯಾಡಿದೆ
ದಿಶಾವಳಿಗಳೊಳಗೆ - ಲಕ್ಷ್ಮೀ ।। ೨ ।।

ಕ್ರೂರದೈತ್ಯನ ದೋರೆಗರುಳ ತೆಗೆದ್ಹಾರ ಮಾಡಿದೆ
ನಿಜಕೊರಳ ಕಂಡು ವಾರಿಜಾಸನ ಮುಖ್ಯರರಳ
ಪುಷ್ಪಸಾರಗರೆದು ವೇಗ ತರಳ
ಅಹ ಧೀರಪ್ರಹ್ಲಾದನ ತೋರಿತ್ವದಂಘ್ರಿ
ಸರೋರುಹವನು ಸಾರ್ದರೋ ಕಾರುಣ್ಯನಿಧೆ - ಲಕ್ಷ್ಮೀ ।। ೩ ।।

ಜಯಜಯ ದೇವವರೇಣ್ಯ ಮಹದ್ಭಯ
ನಿವಾರಣನೆ ಅಗಣ್ಯ ಗುಣಾಶ್ರಯ ಘೋರ
ದುರಿತಾರಣ್ಯ ಧನಂಜಯ ಜಗದೇಕಶರಣ್ಯ
ಅಹ ಲಯವಿವರ್ಜಿತ ಲೋಕತ್ರಯವ್ಯಾಪ್ತ
ನಿಜಭಕ್ತಪ್ರಿಯ ಘೋರಾಮಯಹರ ದಯಮಾಡು - ಲಕ್ಷ್ಮೀ ।। ೪ ।।

ಕುಟಿಲದವೇಷದವ ನೀನಲ್ಲ ನಿನ್ನಾರ್ಭಟಕಂಜಿದರು ಸುರರೆಲ್ಲ
ನರನಟನೆ ತೋರಿದ್ಯೋ ಲಕ್ಷ್ಮೀನಲ್ಲ
ನಾಪಾಸಟಿ ಕಾಣೆನಪ್ರತಿಮಲ್ಲ
ಅಹ ವಟಪತ್ರಶಯನ ಧೂರ್ಜಟಿವಂದ್ಯ
ಜಗನ್ನಾಥವಿಠಲ ಕೃತಾಂಜಲಿಪುಟದಿ ಬೇಡುವೆ - ಲಕ್ಷ್ಮೀ ।। ೫ ।। 

No comments:

Post a Comment