Monday, April 27, 2015

ಶ್ರೀನಿವಾಸ ಕಲ್ಯಾಣ

ಇಂದು ವೈಶಾಖ ಶುದ್ಧ ದಶಮಿ. ಕಲಿಯುಗದ ಪ್ರತ್ಯಕ್ಷ ದೈವ, ಭೂವೈಕುಂಠದ ಅಧಿಪತಿ,ಆಪದ್ಬಾಂಧವ,ಅನಾಥರಕ್ಷಕ, ಸಪ್ತಗಿರಿವಾಸ ಶ್ರೀ ಶ್ರೀನಿವಾಸನು ಪದ್ಮಾವತಿಯನ್ನು ಕಲ್ಯಾಣವಾದ ಮಹೋನ್ನತ ದಿನ. ಈ ಸಂದರ್ಭದಲ್ಲಿ ಭಗವಂತನು ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲಿ. ಹರೇ ಶ್ರೀನಿವಾಸ




ಗಂಗಾತೀರದಿ ಋಷಿಗಳು /ಅಂದು ಯಾಗವ ಮಾಡ್ದರು

ಬಂದು ನಾರದ ನಿಂತುಕೊಂಡು /ಯಾರಿಗೆಂದು ಕೇಳಲು

ಅರಿತು ಬರಬೇಕು ಎಂದು/ ಆ ಮುನಿಯು ತೆರಳಿದ..ಭೃಗುಮುನಿಯು ತೆರಳಿದ



ನಂದಗೋಪನ ಮಗನ ಕಂದನ/ ಮಂದಿರಕಾಗೆ ಬಂದನು

ವೇದಗಳನೆ ಓದುತಾ/ ಶ್ರೀ ಹರಿಯನೂ ಕೊಂಡಾಡುತಾ

ಇರುವ ಬೊಮ್ಮನ ನೋಡಿದ/ ಕೈಲಾಸಕ್ಕೆ ಬಂದನು

ಶಂಭುಕಂಠನು ಪಾರ್ವತೀಯೂ/ ಕಲಿತಿರುವುದ ಕಂಡನು

ಸೃಷ್ಟಿಯೊಳಗೆ ನಿನ್ನ ಲಿಂಗ/ ಶ್ರೇಷ್ಟವಾಗಲೆಂದನು

ವೈಕುಂಠಕ್ಕೆ ಬಂದನು/ ವಾರಿಜಾಕ್ಷನ ಕಂಡನು

ಕೆಟ್ಟ ಕೋಪದಿಂದ ಒದ್ದರೆ/ ಎಷ್ಟು ನೊಂದಿತೆನ್ದನು

ತಟ್ಟನೆ ಬಿಸಿನೀರಿನಿಂದ/ ನೆಟ್ಟಗೆ ಪಾದ ತೊಳೆದನು

ಬಂದ ಕಾರ್ಯ ಆಯಿತೆಂದು/ಅಂದು ಮುನಿಯು ತೆರಳಿದ

ಬಂದು ನಿಂದು ಸಭೆಯೊಳಗೆ/ಇಂದಿರೇಶನ ಹೊಗಳಿದ

ಪತಿಯ ಕೂಡೆ ಕಲಹ ಮಾಡಿ/ಕೊಲ್ಹಾಪುರಕ್ಕೆ ಹೋದಳು

ಸತಿಯು ಪೋಗೆ ಪತಿಯು ಹೊರಟು/ ಗಿರಿಗೆ ಬಂದು ಸೇರಿದ

ಹುತ್ತದಲ್ಲೇ ಹತ್ತು ಸಾವಿರ ವರುಷ/ ಗುಪ್ತವಾಗೆ ಇದ್ದನು

ಬ್ರಹ್ಮ ಧೇನುವಾದನು/ ರುದ್ರ ವತ್ಸನಾದನು

ಧೇನು ಮುಂದೆ ಮಾಡಿಕೊಂಡು/ ಗೋಪಿ ಹಿಂದೆ ಬಂದಳು

ಕೋಟಿ ಹೊನ್ನು ಬಾಳುವೋದು / ಕೊಡದ ಹಾಲು ಕರೆವುದು

ಪ್ರೀತಿಯಿಂದಲೇ ತನ್ನ ಮನೆಗೆ/ ತಂದುಕೊಂಡನು ಚೋಳನು

ಒಂದು ದಿವಸ ಕಂದಗ್ಹಾಲು/ ಚೆಂದದಿಂದಲಿ ಕೊಡಲಿಲ್ಲ

ಅಂದು ರಾಯನ ಮಡದಿ ಕೋಪಿಸಿ/ ಬಂದು ಗೋಪನ ಹೊಡೆದಳು

ಧೇನು ಮುಂದೆ ಮಾಡಿಕೊಂಡು/ ಗೋಪ ಹಿಂದೆ ನಡೆದನು

ಕಾಮಧೇನು ಕರೆದ ಹಾಲು/ ಹರಿಯ ಶಿರ್ಕೆ ಬಿದ್ದಿತು

ಇಷ್ಟು ಕಷ್ಟ ಬಂದಿತೆಂದು/ ಪೆಟ್ಟು ಬಡಿಯೆ ಹೋದನು

ಕೃಷ್ಣ ತನ್ನ ಮನದಲ್ಯೋಚಿಸಿ/ ಕೊಟ್ಟ ತನ್ನ ಶಿರವನ್ನು

ಏಳು ತಾಳೆಮರದ ಉದ್ದ/ ಏಕವಾಗಿ ಹರಿಯಿತು

ರಕ್ತವನ್ನು ನೋಡಿ ಗೋಪ/ ಮತ್ತೆ ಸ್ವರ್ಗಕ್ಕೇರಿದ

ಕಷ್ಟವನ್ನು ನೋಡಿ ಗೋವು ಅಷ್ಟು ಬಂದು ಹೇಳಿತು

ತಟ್ಟನೆ ರಾಯ ಎದ್ದು ಗಿರಿಗೆ/ ಬಂದು ಬೇಗ ಸೇರಿದ

ಏನು ಕಷ್ಟ ಇಲ್ಲಿ ಹೀಗೆ/ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ/ ಭ್ರಷ್ಟಪಿಶಾಚಿಯಾಗೆಂದ

ಪೆಟ್ಟು ವೇದನೆ ತಾಳಲಾರದೆ/ ಬ್ರಹಸ್ಪತೀಯ ಕರೆಸಿದ

ಅರುಣ ಉದಯದಲ್ಲೆದ್ದು/ ಔಷಧಕ್ಕೆ ಪೋದನು

ಕ್ರೋಢರೂಪಿಯ ಕಂಡನು/ ಕೂಡಿ ಮಾತನಾಡಿದನು

ಇರುವುದಕ್ಕೆ ಸ್ಥಳವು ಎನಗೆ/ ಏರ್ಪಾಡಾಗಬೇಕೆಂದ

ನೂರು ಪಾದ ಭೂಮಿ ಕೊಟ್ಟರೆ/ ಮೊದಲು ಪೂಜೆ ನಿಮಗೆಂದ

ಪಾಕ ಪಕ್ವ ಮಾಡುವುದಕ್ಕೆ/ ಆಕೆ ಬಕುಳೆ ಬಂದಳು

ಭಾನುಕೋಟಿತೇಜನೀಗ/ ಬೇಟೆಯಾಡ ಹೊರಟನು

ಮಂಡೆ ಬಾಚಿ ದೊಂಡೆ ಹಾಕಿ/ ದುಂಡುಮಲ್ಲಿಗೆ ಮುಡಿದನು

ಹಾರ ಪದಕ ಕೊರಳಲ್ಹಾಕಿ/ ಫಣೆಗೆ ತಿಲಕವಿಟ್ಟನು

ಅ೦ಗುಲಿಗೆ ಉಂಗುರ/ ರಂಗಶೃಂಗಾರವಾದವು

ಪಟ್ಟೆನುಟ್ಟು ಕಚ್ಚೆ ಕಟ್ಟಿ / ಪೀತಾ೦ಬರವ ಹೊದ್ದನು

ಡಾಳು ಕತ್ತಿ ಉಡಿಯಲ್ ಸಿಕ್ಕಿ/ ಜೋಡು ಕಾಲಲ್ಲಿ ಮೆಟ್ಟಿದ

ಕರದಿ ವೀಳ್ಯವನ್ನೇ ಪಿಡಿದು/ ಕನ್ನಡೀಯ ನೋಡಿದ

ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು

ಕನಕಭೂಷಣವಾದ ಕುದುರೆ / ಕಮಲನಾಭ ಏರಿದ

ಕರಿಯ ಹಿಂದೆ ಹರಿಯು ಬರಲು/ ಕಾಂತೆರೆಲ್ಲ ಕಂಡರು

ಯಾರು ಇಲ್ಲಿ ಬರುವರೆಂದು/ ದೂರ ಪೋಗಿರೆಂದರು

ನಾರಿಯರಿರುವ ಸ್ಥಳಕ್ಕೆ/ ಯಾವ ಪುರುಷ ಬರುವನು

ಎಷ್ಟು ಹೇಳೇ ಕೇಳ ಕೃಷ್ಣ / ಕುದುರೆ ಮುಂದೆ ಬಿಟ್ಟನು

ಕೇಶ ಬಿಚ್ಚಿ ವಾಸುದೇವ/ ಶೇಷಗಿರಿಗೆ ಬಂದನು

ಪರಮಾನ್ನ ಮಾಡಿದ್ದೇನೆ/ ಉಣ್ಣು ಬೇಗ ಎಂದಳು

ಅಮ್ಮ ಎನಗೆ ಅನ್ನ ಬೇಡ/ ಎನ್ನ ಮಗನೆ ವೈರಿಯೇ

ಕಣ್ಣಿಲ್ಲಾದ ದೈವ ಅವಳ/ ನಿರ್ಮಾಣವ ಮಾಡಿದ

ಯಾವದೇಶ ಯಾವೋಳಾಕೆ/ ಎನಗೆ ಪೇಳು ಎಂದಳು

ನಾರಾಯಣನ ಪುರಕೆ ಹೋಗಿ / ರಾಮಕೃಷ್ಣರ ಪೂಜಿಸಿ

ಕುಂಜಮಣಿಯ ಕೊರಳಲ್ಹಾಕಿ/ ಕೂಸಿನ್ ಕೊಂಕಳಲೆತ್ತಿದಾ

ಧರಣಿ ದೇವಿಗೆ ಕಣಿಯ ಹೇಳಿ/ ಗಿರಿಗೆ ಬಂದು ಸೇರಿದ

ಕಾಂತೆರೆಲ್ಲ ಕೂಡಿಕೊಂಡು/ ಆಗ ಬಕುಳೆ ಬಂದಳು

ಬನ್ನಿರೆಮ್ಮ ಸದನಕೆನುತ/ ಬಹಳ ಮಾತನಾಡಿದರು

ತಂದೆತಾಯಿ ಬಂಧುಬಳಗ/ಹೊನ್ನು ಹಣ ಉಂಟೆ೦ದರು

ಇಷ್ಟು ಪರಿಯಲ್ಲಿದ್ದವಗೆ/ ಕನ್ನೆ ಯಾಕೆ ದೊರಕಲಿಲ್ಲ

ದೊಡ್ಡವಳಿಗೆ ಮಕ್ಕಳಿಲ್ಲ/ ಮತ್ತೆ ಮಾಡುವೆ ಮಾಡ್ವೆವು

ಬೃಹಸ್ಪತೀಯ ಕರೆಸಿದ/ ಲಗ್ನಪತ್ರಿಕೆ ಬರೆಸಿದ

ಶುಕಾಚಾರ್ಯರ ಕರೆಸಿದ/ ಮದುವೆ ಓಲೆ ಬರೆಸಿದ

ವಲ್ಲಭೇನ ಕರೆವುದಕ್ಕೆ/ ಕೊಲ್ಹಾಪುರಕ್ಕೆ ಹೋದರು

ಗರುಡನ್ ಹೆಗಲನೇರಿಕೊಂಡು/ ಬೇಗ ಹೊರಟುಬಂದರು

ಅಷ್ಟವರ್ಗವನ್ನು ಮಾಡಿ/ ಇಷ್ಟದೇವರ ಪೂಜಿಸಿ

ಲಕ್ಷ್ಮೀಸಹಿತ ಆಕಾಶರಾಜನ/ ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು

ಕಮಲನಾಭಾಗೆ ಕಾಂತಿಮಣಿಯ/ ಕನ್ಯಾದಾನವ ಮಾಡಿದ

ಕಮಲನಾಭ ಕಾಂತೆ ಕೈಗೆ/ ಕಂಕಣವನ್ನೇ ಕಟ್ಟಿದ

ಶ್ರೀನಿವಾಸ ಪದ್ಮಾವತಿಗೆ/ ಮಾಂಗಲ್ಯವನ್ನೇ ಕಟ್ಟಿದ

ಶ್ರೀನಿವಾಸನ ಮದುವೆ ನೋಡೇ/ ಸ್ತ್ರೀಯರೆಲ್ಲರೂ ಬನ್ನಿರೆ

ಪದ್ಮಾವತಿಯ ಮದುವೆ ನೋಡೇ/ ಪದ್ಮಿನಿಯರು ಬನ್ನಿರೆ

ಶಂಕೆಯಿಲ್ಲದೆ ಹಣವ ಸುರಿದು/ ವೆಂಕಟೇಶ ಸಲಹೆನ್ನ

ಕೋಟಿ ತಪ್ಪು ಎನ್ನಲ್ಲುಂಟು/ ಕುಸುಮನಾಭ ಸಲಹೆನ್ನ

ಶಂಕೆ ಇಲ್ಲದೆ ವರವ ಕೊಡುವ/ ವೆಂಕಟೇಶ ಸಲಹೆನ್ನ

ಭಕ್ತಿಯಿಂದಲಿ ಹೇಳ್ ಕೇಳ್ದವರಿಗೆ/ ಮುಕ್ತಿ ಕೊಡುವ ಹಯವದನ

ಜಯ ಜಯ ಶ್ರೀನಿವಾಸನಿಗೆ/ ಜಯ ಜಯ ಪದ್ಮಾವತಿಗೆ

ಒಲಿದಂತಹ ಶ್ರೀಹರಿಗೆ/ ನಿತ್ಯ ಶುಭಮಂಗಳ

ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ/

ಕಲ್ಯಾಣಮೂರುತಿಗೆ/ ನಿತ್ಯ ಜಯಮಂಗಳ//

ಸರ್ವೇಜನಾ ಸುಖಿನೋ ಭವ೦ತು....ಸಮಸ್ತ ಸನ್ಮ೦ಗಳಾನಿ ಭವ೦ತು

Tuesday, April 21, 2015

Monday, April 13, 2015

ಶ್ರೀ ಸೀತಾರಾಮ ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವ

 ಆತ್ಮೀಯ ವಿಪ್ರ ಬಾಂಧವರೇ,

ಇದೇ ಮನ್ಮಥನಾಮ ಸಂವತ್ಸರದ ವೈಶಾಖ ಶುದ್ಧ ಪೂರ್ಣಿಮಾ (೦೩-೦೫-೨೦೧೫ ರಿಂದ ೦೫-೦೫-೨೦೧೫) ರವರೆಗೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹದಿನೈದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಈ ಭಗವತ್ಕಾರ್ಯದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತೇವೆ.

ಹರಿಸರ್ವೋತ್ತಮ...ವಾಯುಜೀವೋತ್ತಮ.