Wednesday, November 28, 2012

Tuesday, November 27, 2012

ವಂದಿಪೆ ನಿನಗೆ ಗಣನಾಥ

ವಂದಿಪೆ ನಿನಗೆ ಗಣನಾಥ


ಮೊದಲ್ವೊಂದಿಪೆ ನಿನಗೆ ಗಣನಾಥ//



ಬಂದ ವಿಘ್ನ ಕಳಿಯೋ ಗಣನಾಥ

ಮೊದಲ್ವೊಂದಿಪೆ ನಿನಗೆ ಗಣನಾಥ//



ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ

ಸಂದ ರಣದಲ್ಲಿ ಗಣನಾಥ//



ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು

ಸಾಧಿಸಿದ ರಾಜ್ಯ ಗಣನಾಥ//



ಮಂಗಳಮೂರುತಿ ಗುರು ರಂಗ ವಿಠಲನ ಪಾದ

ಹಿಂಗದೆ ಪಾಲಿಸೋ ಗಣನಾಥ//

Thursday, November 22, 2012

ವೀರ ಹನುಮ ಬಹು ಪರಾಕ್ರಮಾ

ವೀರ ಹನುಮ ಬಹು ಪರಾಕ್ರಮಾ


ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ//



ರಾಮ ದೂತನೆನೆಸಿಕೊಂಡೆ ನೀ

ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ

ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು

ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ//



ಗೋಪಿಸುತನ ಪಾದಪೂಜಿಸಿ

ಗದೆಯ ಧರಿಸಿ ಬಕಾಸುರನ ಸಂಹರಿಸಿದೆ

ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ//



ಮಧ್ಯಗೆಹನಲ್ಲಿ ಜನಿಸಿ ನೀ

ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ

ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ

ಸಜ್ಜನರ ಪೊರೆವ ಮುದ್ದು ಪುರಂದರ ವಿಠಲನ ದಾಸ//

Monday, November 19, 2012

ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ

ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ


ಪಂಕಜನಾಭ ಪರಮಪವಿತ್ರ ಶಂಕರ ಮಿತ್ರನೇ ಬಾರೋ//



ಮುದ್ದು ಮುಖದ ಮಗುವೆ ನಿನಗೆ ಮುದ್ದು ಕೊಡುವೆನು ಬಾರೋ

ನಿರ್ದಯವೆಕೋ ನಿನ್ನೊಳಗೆ ನಾನು ಒಂದಿದ್ದೇನೋ ಬಾರೋ//



ಮಂದರಗಿರಿಯನೆತ್ತಿದಾ ನಂದಮೂರ್ತಿಯೇ ಬಾರೋ

ನಂದಕನಂದ ಗೋವಿಂದ ಮುಕುಂದ ಇಂದಿರಶಯನನೆ ಬಾರೋ//



ಕಾಮನಯ್ಯ ಕರುಣಾಳೊ ಶ್ಯಾಮಲ ವರ್ಣನೆ ಬಾರೋ

ಕೊಮಲಾಂಗ ಶ್ರೀ ಪುರಂದರ ವಿಠಲನೆ ಬಾರೋ||

Thursday, November 15, 2012

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ


ಪಂಕಜ ನೇತ್ರಂ ಪರಮ ಪವಿತ್ರಂ

ಶಂಖ ಚಕ್ರಧರ ಚಿನ್ಮಯ ರೂಪಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಂ

ತುಂಬುರು ನಾರದ ಗಾನ ವಿಲೋಲಂ

ಅಂಬುದಿಶಯನಂ ಆತ್ಮಾಭಿರಾಮಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಪಾಹಿ ಪಾಂಡವ ಪಕ್ಷಂ ಕೌರವ ಮದಹರಣಂ

ಬಹು ಪರಾಕ್ರಮ ಪೂರ್ಣಂ

ಅಹಲ್ಯ ಶಾಪ ಭಯ ನಿವಾರಣಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಸಕಲ ವೇದ ವಿಚಾರಂ ಸರ್ವಜೀವನ ಕರಂ

ಮಕರ ಕುಂಡಲಧರ ಮದನ ಗೋಪಾಲಂ

ಭಕ್ತಪೋಷಕ ಶ್ರೀ ಪುರಂದರ ವಿಠಲ೦

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//

Monday, November 12, 2012

ವಿಜಯ ಕವಚ

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ


ದುರಿತ ತರಿದು ಪೊರೆವ ವಿಜಯ ಗುರುಗಳೆ೦ಬರ//



ದಾಸರಾಯನ ದಯವ ಸೂಸಿ ಪಡೆದನ/

ದೋಷರಹಿತನ ಸಂತೋಷಭರಿತನ//



ಜ್ಞಾನವಂತನ ಬಲು ನಿಧಾನಿ ಶಾಂತನ/

ಮಾನ್ಯವಂತನ ಬಹುವದಾನ್ಯದಾತನ //



ಹರಿಯ ಭಜಿಸುವ ನರಹರಿಯ ಯಜಿಸುವ/

ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ//



ಮೋದಭರಿತನ ಪಂಚಭೇದವರಿತನ/

ಸಾಧುಚರಿತನ ಮನೋವಿಷಾದ ಮರೆತನ//



ಇವರ ನಂಬಿದ ಜನಕೆ ಭಾವವಿದೆಂಬುದು/

ಹವನವಾಗದೋ ನಮ್ಮವರ ಮತವಿದು//



ಪಾಪಕೋಟಿಯ ರಾಶಿ ಲೇಪವಾಗದು/

ತಾಪ ಕಳೆವನು ಬಲು ದಯಾಪಯೋನಿಧಿ//



ಪವನ ರೂಪದಿ ಹರಿಯ ಸ್ತವನ ಮಾಡಿದ/

ಭುವನ ಬೇಡಿದ ಮಾಧವನ ನೋಡಿದ//



ರಂಗನೆಂದನ ಭಾವವು ಹಿಂಗಿತೆಂದನ/

ಮಂಗಳಾ೦ಗನ ಅಂತರಂಗವರಿತನ//



ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ/

ಸೂಸಿ ಪಡೆದನ ಉಲ್ಲಾಸತನದಲಿ//



ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ/

ಶಾಂತಗುರುಗಳ ಪಾದವನ್ನು ನಂಬಿರೋ//



ಖೇದವಾಗದೋ ನಿಮಗೆ ಮೋದವಾಹುದೋ/

ಆದಿದೇವನ ಸುಪ್ರಸಾದವಾಹುದೋ//



ತಾಪ ತಡೆವನು ಬಂದ ಪಾಪ ಕಡಿವನು/

ಶ್ರೀಪತಿಯ ಪಾದ ಸಮೀಪವಿಡುವನು//



ವೇದ ಓದಲು ಬರಿದೆ ವಾದ ಮಾಡಲು/

ಹಾದಿ ದೊರೆಯದು ಬುಧರ ಪಾದ ನಂಬದೆ//



ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ/

ರಂಗನೊಲಿಯನು ಭಕ್ತರ ಸಂಗ ದೊರಕದೆ//



ಲೆಕ್ಕವಿಲ್ಲದ ದೇಶ ತುಕ್ಕಿ ಬಂದರು/

ದುಃಖವಲ್ಲದೆ ಲೇಶ ಭಕ್ತಿ ದೊರಕದು//



ದಾನಮಾಡಲು ದಿವ್ಯ ಗಾನ ಪಾಡಲು/

ಜ್ಞಾನ ದೊರೆಯದೋ ಇವರಧೀನವಾಗದೆ//



ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ/

ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ//



ಪೂಜೆ ಮಾಡಲು ಕಂಡ ಗೋಜು ಬೀಳಲು/

ಬೀಜ ಮಾತಿನ ಫಲ ಸಹಜ ದೊರಕದು//



ಸುರರು ಎಲ್ಲರೂ ಇವರ ಕರವ ಪಿಡಿವರೋ/

ತರಳರಂದದಿ ಹಿಂದೆ ತಿರುಗುತಿಪ್ಪರೋ//



ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ/

ಅಹೋರಾತ್ರಿಲಿ ಸುಖವ ಕೊಡುವುದು//



ವ್ಯಾಧಿ ಬಾರದೋ ದೇಹ ಭಾದೆ ತಟ್ಟದೋ/

ಆದಿದೇವನ ಸುಪ್ರಸಾದವಾಹುದೋ//



ಪತಿತಪಾಮರ ಮಂದಮತಿಯ ನಾ ಬಲು/

ಸ್ತುತಿಸಲಾಪನೆ ಇವರ ಅತಿಶಯಂಗಳ//



ಕರುಣದಿಂದಲಿ ಎಮ್ಮ ಪೊರೆವನಲ್ಲದೆ/

ದುರಿತಕೋಟಿಯ ಬೇಗ ತರಿವ ದಯದಲಿ//



ಮಂದಮತಿಗಳು ಇವರ ಚಂದವರಿಯದೆ/

ನಿಂದಿಸುವರೋ ಭವದ ಬಂಧ ತಪ್ಪದೋ//



ಇಂದಿರಾಪತಿ ಇವರ ಮುಂದೆ ಕುಣಿವನೋ/

ಅಂದವಚನವ ನಿಜಕೆ ತಂದು ತೋರ್ಪನು//



ಉದಯಕಾಲದಿ ಈ ಪದವ ಪಠಿಸಲು/

ಮದದನಾದರು ಜ್ಞಾನ ಉದಯವಾಹುದೋ//



ಸಟೆಯಿದಲ್ಲವೋ ವ್ಯಾಸ ವಿಠಲ ಬಲ್ಲನೋ/

ಪಠಿಸಬಹುದಿದು ಕೇಳಿ ಕುಟಿಲರಹಿತರು//

Wednesday, November 7, 2012

ಎದ್ದು ಬರುತಾರೆ ನೋಡೇ

ಎದ್ದು ಬರುತಾರೆ ನೋಡೇ


ತಾವೆದ್ದು ಬರುತಾರೆ ನೋಡೇ//



ಮುದ್ದು ವೃಂದಾವನ ಮಧ್ಯದೊಳಗಿಂದ

ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ//



ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು

ಚೆಲುವ ಮುಖದೊಳು ಪೊಳೆವ ದಂತಗಳಿಂದ//



ಹೃದಯಸದನದಲಿ ಪದುಮನಾಭನ ಭಜಿಸಿ

ಮುದಮನದಿಂದ ನಿತ್ಯ ಸದಮಲರೂಪ ತಾಳಿ//



ದಾತ ಗುರು ಜಗನಾಥವಿಠಲನ

ಪ್ರೀತಿಯ ಪಡಿಸುತ ದೂತರ ಪೊರೆಯುತ//

Monday, November 5, 2012

ಎನಗೂ ಆಣೆ ರಂಗ ನಿನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ


ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ//



ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ, ರಂಗ

ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ//



ತನುಮನಧನದಲಿ ವಂಚಕನಾದರೆ ನಿನಗೆ ಆಣೆ, ರಂಗ

ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ//



ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ, ರಂಗ

ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ//



ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ, ರಂಗ

ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ//



ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ, ರಂಗ

ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ//

Friday, November 2, 2012

ಶ್ರೀ ಗಂಧದ ಅಲಂಕಾರ





ವಿಜಯದಶಮಿ ಪ್ರಯುಕ್ತ ಮಾರಂಡಹಳ್ಳಿಯ ಮುಖ್ಯಪ್ರಾಣದೇವರು ಮತ್ತು ವರದರಾಜಸ್ವಾಮಿಗೆ ಮೊಟ್ಟ ಮೊದಲ ಬಾರಿಗೆ ನಡೆದ ಶ್ರೀ ಗಂಧದ ಅಲಂಕಾರ

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು//



ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ

ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಟವಾಗಿ ಮಾಡುತಿಹಳು//



ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು

ಚಿತ್ರಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು//



ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ

ಗರುಡಗಮನನಾದ ಪುರಂದರವಿಠಲನ ಸೇವಿಸುತಿಹಳು//