Monday, April 30, 2012

ಶ್ರೀ ಶ್ರೀನಿವಾಸ ಕಲ್ಯಾಣ



ಇ೦ದು ವೈಶಾಖ ಶುದ್ಧ ದಶಮಿ. ಇ೦ದು ಶ್ರೀನಿವಾಸ ದೇವರು ಪದ್ಮಾವತಿ ಅಮ್ಮನವರನ್ನು ಕಲ್ಯಾಣವಾದ ಮ೦ಗಳ ದಿನ. ಈ ಸ೦ದರ್ಭದಲ್ಲಿ. ಶ್ರೀ ವಾದಿರಾಜರು ರಚಿಸಿರುವ ಪದ್ಯ ರೂಪದ ಶ್ರೀನಿವಾಸ ಕಲ್ಯಾಣ.



ಗಂಗಾತೀರದಿ ಋಷಿಗಳು /ಅಂದು ಯಾಗವ ಮಾಡ್ದರು

ಬಂದು ನಾರದ ನಿಂತುಕೊಂಡು /ಯಾರಿಗೆಂದು ಕೇಳಲು

ಅರಿತು ಬರಬೇಕು ಎಂದು/ ಆ ಮುನಿಯು ತೆರಳಿದ..ಭೃಗುಮುನಿಯು ತೆರಳಿದ



ನಂದಗೋಪನ ಮಗನ ಕಂದನ/ ಮಂದಿರಕಾಗೆ ಬಂದನು

ವೇದಗಳನೆ ಓದುತಾ/ ಶ್ರೀ ಹರಿಯನೂ ಕೊಂಡಾಡುತಾ

ಇರುವ ಬೊಮ್ಮನ ನೋಡಿದ/ ಕೈಲಾಸಕ್ಕೆ ಬಂದನು

ಶಂಭುಕಂಠನು ಪಾರ್ವತೀಯೂ/ ಕಲಿತಿರುವುದ ಕಂಡನು

ಸೃಷ್ಟಿಯೊಳಗೆ ನಿನ್ನ ಲಿಂಗ/ ಶ್ರೇಷ್ಟವಾಗಲೆಂದನು

ವೈಕುಂಠಕ್ಕೆ ಬಂದನು/ ವಾರಿಜಾಕ್ಷನ ಕಂಡನು

ಕೆಟ್ಟ ಕೋಪದಿಂದ ಒದ್ದರೆ/ ಎಷ್ಟು ನೊಂದಿತೆನ್ದನು

ತಟ್ಟನೆ ಬಿಸಿನೀರಿನಿಂದ/ ನೆಟ್ಟಗೆ ಪಾದ ತೊಳೆದನು

ಬಂದ ಕಾರ್ಯ ಆಯಿತೆಂದು/ಅಂದು ಮುನಿಯು ತೆರಳಿದ

ಬಂದು ನಿಂದು ಸಭೆಯೊಳಗೆ/ಇಂದಿರೇಶನ ಹೊಗಳಿದ

ಪತಿಯ ಕೂಡೆ ಕಲಹ ಮಾಡಿ/ಕೊಲ್ಹಾಪುರಕ್ಕೆ ಹೋದಳು

ಸತಿಯು ಪೋಗೆ ಪತಿಯು ಹೊರಟು/ ಗಿರಿಗೆ ಬಂದು ಸೇರಿದ

ಹುತ್ತದಲ್ಲೇ ಹತ್ತು ಸಾವಿರ ವರುಷ/ ಗುಪ್ತವಾಗೆ ಇದ್ದನು

ಬ್ರಹ್ಮ ಧೇನುವಾದನು/ ರುದ್ರ ವತ್ಸನಾದನು

ಧೇನು ಮುಂದೆ ಮಾಡಿಕೊಂಡು/ ಗೋಪಿ ಹಿಂದೆ ಬಂದಳು

ಕೋಟಿ ಹೊನ್ನು ಬಾಳುವೋದು / ಕೊಡದ ಹಾಲು ಕರೆವುದು

ಪ್ರೀತಿಯಿಂದಲೇ ತನ್ನ ಮನೆಗೆ/ ತಂದುಕೊಂಡನು ಚೋಳನು

ಒಂದು ದಿವಸ ಕಂದಗ್ಹಾಲು/ ಚೆಂದದಿಂದಲಿ ಕೊಡಲಿಲ್ಲ

ಅಂದು ರಾಯನ ಮಡದಿ ಕೋಪಿಸಿ/ ಬಂದು ಗೋಪನ ಹೊಡೆದಳು

ಧೇನು ಮುಂದೆ ಮಾಡಿಕೊಂಡು/ ಗೋಪ ಹಿಂದೆ ನಡೆದನು

ಕಾಮಧೇನು ಕರೆದ ಹಾಲು/ ಹರಿಯ ಶಿರ್ಕೆ ಬಿದ್ದಿತು

ಇಷ್ಟು ಕಷ್ಟ ಬಂದಿತೆಂದು/ ಪೆಟ್ಟು ಬಡಿಯೆ ಹೋದನು

ಕೃಷ್ಣ ತನ್ನ ಮನದಲ್ಯೋಚಿಸಿ/ ಕೊಟ್ಟ ತನ್ನ ಶಿರವನ್ನು

ಏಳು ತಾಳೆಮರದ ಉದ್ದ/ ಏಕವಾಗಿ ಹರಿಯಿತು

ರಕ್ತವನ್ನು ನೋಡಿ ಗೋಪ/ ಮತ್ತೆ ಸ್ವರ್ಗಕ್ಕೇರಿದ

ಕಷ್ಟವನ್ನು ನೋಡಿ ಗೋವು ಅಷ್ಟು ಬಂದು ಹೇಳಿತು

ತಟ್ಟನೆ ರಾಯ ಎದ್ದು ಗಿರಿಗೆ/ ಬಂದು ಬೇಗ ಸೇರಿದ

ಏನು ಕಷ್ಟ ಇಲ್ಲಿ ಹೀಗೆ/ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ/ ಭ್ರಷ್ಟಪಿಶಾಚಿಯಾಗೆಂದ

ಪೆಟ್ಟು ವೇದನೆ ತಾಳಲಾರದೆ/ ಬ್ರಹಸ್ಪತೀಯ ಕರೆಸಿದ

ಅರುಣ ಉದಯದಲ್ಲೆದ್ದು/ ಔಷಧಕ್ಕೆ ಪೋದನು

ಕ್ರೋಢರೂಪಿಯ ಕಂಡನು/ ಕೂಡಿ ಮಾತನಾಡಿದನು

ಇರುವುದಕ್ಕೆ ಸ್ಥಳವು ಎನಗೆ/ ಏರ್ಪಾಡಾಗಬೇಕೆಂದ

ನೂರು ಪಾದ ಭೂಮಿ ಕೊಟ್ಟರೆ/ ಮೊದಲು ಪೂಜೆ ನಿಮಗೆಂದ

ಪಾಕ ಪಕ್ವ ಮಾಡುವುದಕ್ಕೆ/ ಆಕೆ ಬಕುಳೆ ಬಂದಳು

ಭಾನುಕೋಟಿತೇಜನೀಗ/ ಬೇಟೆಯಾಡ ಹೊರಟನು

ಮಂಡೆ ಬಾಚಿ ದೊಂಡೆ ಹಾಕಿ/ ದುಂಡುಮಲ್ಲಿಗೆ ಮುಡಿದನು

ಹಾರ ಪದಕ ಕೊರಳಲ್ಹಾಕಿ/ ಫಣೆಗೆ ತಿಲಕವಿಟ್ಟನು

ಅ೦ಗುಲಿಗೆ ಉಂಗುರ/ ರಂಗಶೃಂಗಾರವಾದವು

ಪಟ್ಟೆನುಟ್ಟು ಕಚ್ಚೆ ಕಟ್ಟಿ / ಪೀತಾ೦ಬರವ ಹೊದ್ದನು

ಡಾಳು ಕತ್ತಿ ಉಡಿಯಲ್ ಸಿಕ್ಕಿ/ ಜೋಡು ಕಾಲಲ್ಲಿ ಮೆಟ್ಟಿದ

ಕರದಿ ವೀಳ್ಯವನ್ನೇ ಪಿಡಿದು/ ಕನ್ನಡೀಯ ನೋಡಿದ

ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು

ಕನಕಭೂಷಣವಾದ ಕುದುರೆ / ಕಮಲನಾಭ ಏರಿದ

ಕರಿಯ ಹಿಂದೆ ಹರಿಯು ಬರಲು/ ಕಾಂತೆರೆಲ್ಲ ಕಂಡರು

ಯಾರು ಇಲ್ಲಿ ಬರುವರೆಂದು/ ದೂರ ಪೋಗಿರೆಂದರು

ನಾರಿಯರಿರುವ ಸ್ಥಳಕ್ಕೆ/ ಯಾವ ಪುರುಷ ಬರುವನು

ಎಷ್ಟು ಹೇಳೇ ಕೇಳ ಕೃಷ್ಣ / ಕುದುರೆ ಮುಂದೆ ಬಿಟ್ಟನು

ಕೇಶ ಬಿಚ್ಚಿ ವಾಸುದೇವ/ ಶೇಷಗಿರಿಗೆ ಬಂದನು

ಪರಮಾನ್ನ ಮಾಡಿದ್ದೇನೆ/ ಉಣ್ಣು ಬೇಗ ಎಂದಳು

ಅಮ್ಮ ಎನಗೆ ಅನ್ನ ಬೇಡ/ ಎನ್ನ ಮಗನೆ ವೈರಿಯೇ

ಕಣ್ಣಿಲ್ಲಾದ ದೈವ ಅವಳ/ ನಿರ್ಮಾಣವ ಮಾಡಿದ

ಯಾವದೇಶ ಯಾವೋಳಾಕೆ/ ಎನಗೆ ಪೇಳು ಎಂದಳು

ನಾರಾಯಣನ ಪುರಕೆ ಹೋಗಿ / ರಾಮಕೃಷ್ಣರ ಪೂಜಿಸಿ

ಕುಂಜಮಣಿಯ ಕೊರಳಲ್ಹಾಕಿ/ ಕೂಸಿನ್ ಕೊಂಕಳಲೆತ್ತಿದಾ

ಧರಣಿ ದೇವಿಗೆ ಕಣಿಯ ಹೇಳಿ/ ಗಿರಿಗೆ ಬಂದು ಸೇರಿದ

ಕಾಂತೆರೆಲ್ಲ ಕೂಡಿಕೊಂಡು/ ಆಗ ಬಕುಳೆ ಬಂದಳು

ಬನ್ನಿರೆಮ್ಮ ಸದನಕೆನುತ/ ಬಹಳ ಮಾತನಾಡಿದರು

ತಂದೆತಾಯಿ ಬಂಧುಬಳಗ/ಹೊನ್ನು ಹಣ ಉಂಟೆ೦ದರು

ಇಷ್ಟು ಪರಿಯಲ್ಲಿದ್ದವಗೆ/ ಕನ್ನೆ ಯಾಕೆ ದೊರಕಲಿಲ್ಲ

ದೊಡ್ಡವಳಿಗೆ ಮಕ್ಕಳಿಲ್ಲ/ ಮತ್ತೆ ಮಾಡುವೆ ಮಾಡ್ವೆವು

ಬೃಹಸ್ಪತೀಯ ಕರೆಸಿದ/ ಲಗ್ನಪತ್ರಿಕೆ ಬರೆಸಿದ

ಶುಕಾಚಾರ್ಯರ ಕರೆಸಿದ/ ಮದುವೆ ಓಲೆ ಬರೆಸಿದ

ವಲ್ಲಭೇನ ಕರೆವುದಕ್ಕೆ/ ಕೊಲ್ಹಾಪುರಕ್ಕೆ ಹೋದರು

ಗರುಡನ್ ಹೆಗಲನೇರಿಕೊಂಡು/ ಬೇಗ ಹೊರಟುಬಂದರು

ಅಷ್ಟವರ್ಗವನ್ನು ಮಾಡಿ/ ಇಷ್ಟದೇವರ ಪೂಜಿಸಿ

ಲಕ್ಷ್ಮೀಸಹಿತ ಆಕಾಶರಾಜನ/ ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡಿಗೆ/ ಕಮಲನಾಭ ತೊಟ್ಟನು

ಕಮಲನಾಭಾಗೆ ಕಾಂತಿಮಣಿಯ/ ಕನ್ಯಾದಾನವ ಮಾಡಿದ

ಕಮಲನಾಭ ಕಾಂತೆ ಕೈಗೆ/ ಕಂಕಣವನ್ನೇ ಕಟ್ಟಿದ

ಶ್ರೀನಿವಾಸ ಪದ್ಮಾವತಿಗೆ/ ಮಾಂಗಲ್ಯವನ್ನೇ ಕಟ್ಟಿದ

ಶ್ರೀನಿವಾಸನ ಮದುವೆ ನೋಡೇ/ ಸ್ತ್ರೀಯರೆಲ್ಲರೂ ಬನ್ನಿರೆ

ಪದ್ಮಾವತಿಯ ಮದುವೆ ನೋಡೇ/ ಪದ್ಮಿನಿಯರು ಬನ್ನಿರೆ

ಶಂಕೆಯಿಲ್ಲದೆ ಹಣವ ಸುರಿದು/ ವೆಂಕಟೇಶ ಸಲಹೆನ್ನ

ಕೋಟಿ ತಪ್ಪು ಎನ್ನಲ್ಲುಂಟು/ ಕುಸುಮನಾಭ ಸಲಹೆನ್ನ

ಶಂಕೆ ಇಲ್ಲದೆ ವರವ ಕೊಡುವ/ ವೆಂಕಟೇಶ ಸಲಹೆನ್ನ

ಭಕ್ತಿಯಿಂದಲಿ ಹೇಳ್ ಕೇಳ್ದವರಿಗೆ/ ಮುಕ್ತಿ ಕೊಡುವ ಹಯವದನ

ಜಯ ಜಯ ಶ್ರೀನಿವಾಸನಿಗೆ/ ಜಯ ಜಯ ಪದ್ಮಾವತಿಗೆ

ಒಲಿದಂತಹ ಶ್ರೀಹರಿಗೆ/ ನಿತ್ಯ ಶುಭಮಂಗಳ

ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ/

ಕಲ್ಯಾಣಮೂರುತಿಗೆ/ ನಿತ್ಯ ಜಯಮಂಗಳ//

ಸರ್ವೇಜನಾ ಸುಖಿನೋ ಭವ೦ತು....ಸಮಸ್ತ ಸನ್ಮ೦ಗಳಾನಿ ಭವ೦ತು

Thursday, April 26, 2012

Tuesday, April 24, 2012

ದ್ರೌಪದಿ‍


ದ್ರುಪದ ರಾಜ ದ್ರೋಣಾಚಾರ್ಯರ ಮೇಲಿನ ದ್ವೇಷಕ್ಕೆ ಅವರನ್ನು ಕೊಲ್ಲುವಂಥ ಮಗನನ್ನು ಹುಟ್ಟಿಸಲು ಹಾಗೆಯೇ ಅರ್ಜುನನ ಪರಾಕ್ರಮ ಕಂಡು ಅರ್ಜುನನನ್ನು ಅಳಿಯನಾಗಿ ಮಾಡಿಕೊಳ್ಳಲು ಒಬ್ಬಳು ಮಗಳನ್ನು ಹುಟ್ಟಿಸಬೇಕು ಎಂದು ನಿರ್ಧರಿಸಿಕೊಂಡು ವಿಶೇಷ ಯಾಗ ಮಾಡಲು ನಿರ್ಧರಿಸಿದ. ಯಾಗ ಮಾಡಿಸುವುದರಲ್ಲಿ ನಿಷ್ಣಾತರಾಗಿದ್ದ ಯಾಜ - ಉಪಯಾಜರ ಬಳಿ ಹೋಗಿ ನಿಮಗೆ ಹತ್ತು ಕೋಟಿ ಗೋವುಗಳನ್ನು ನೀಡುತ್ತೇನೆ. ನನಗೊಂದು ಅದ್ಭುತ ಯಾಗ ಮಾಡಿಸಬೇಕು ಎಂದು ಕೇಳಿಕೊಂಡನು. ಅದೇ ರೀತಿ ಯಾಜ - ಉಪಯಾಜರು ಬಂದು ಆ ಯಾಗವನ್ನು ಮಾಡಿದರು. ಯಜ್ಞ ಮುಗಿದ ಮೇಲೆ ಆ ಯಜ್ಞದ ಶೇಷವನ್ನು ದ್ರುಪದನ ಮಡದಿ ಸ್ವೀಕರಿಸಬೇಕು. ಆ ಶೇಷವನ್ನು ನೀಡಲು ಒಂದು ಮಹೂರ್ತ ನಿಗದಿ ಪಡಿಸಿದ್ದರು. ಇನ್ನೇನು ಆ ಮಹೂರ್ತ ಸಮೀಪಿಸುತ್ತಿದ್ದಂತೆ ಯಾಜ ಉಪಯಾಜರು ದ್ರುಪದ ರಾಜನನ್ನು ಕೇಳಿದರು ಎಲ್ಲಿ ನಿನ್ನ ಮಡದಿ ಎಂದು. ಇಲ್ಲಿ ದ್ರುಪದನ ಮಡದಿ ಅಹಂಕಾರದಿಂದ ನಾವು ಅವರಿಗೆ ಹತ್ತು ಕೋಟಿ ಗೋವುಗಳನ್ನು ನೀಡುತ್ತಿದ್ದೇವೆ ಆದ್ದರಿಂದ ನಾನ್ಯಾಕೆ ಅವರು ಹೇಳಿದ ಸಮಯಕ್ಕೆ ಹೋಗಬೇಕು. ಸ್ವಲ್ಪ ಹೊತ್ತು ಕಾಯಲಿ ನಂತರದಲ್ಲಿ ಹೋಗುತ್ತೇನೆ ಎಂದುಕೊಂಡಳು. ಆದರೆ ಯಾಜ ಉಪಯಾಜರು ಆ ರೀತಿ ಕಾಯುವ ಪಂಡಿತರು ಆಗಿರಲಿಲ್ಲ. ಮಹೂರ್ತ ಸಮಯ ಬಂದಾಗ ಯಾಜ ಉಪಯಾಜರು ಆ ಯಜ್ಞದ ಶೇಷವನ್ನು ಮಂತ್ರ ಹೇಳಿ ಆ ಯಜ್ಞ ಕುಂಡದಲ್ಲೇ ಹಾಕಿಬಿಟ್ಟರು. ಯಜ್ಞ ಕುಂಡದಲ್ಲಿ ಹಾಕಿದ ತಕ್ಷಣ ಅದರಿಂದ ಅಗ್ನಿಯ ತೇಜಸ್ಸನ್ನು ಹೊಂದಿದ, ಅದೇ ವರ್ಚಸ್ಸಿನಿಂದ ಕೂಡಿದ ಒಬ್ಬ ವ್ಯಕ್ತಿ ಕಿವಿಯಲ್ಲಿ ಕುಂಡಲ, ಶಿರದಲ್ಲಿ ಕಿರೀಟ, ಕೈಯಲ್ಲಿ ಧನಸ್ಸನ್ನು ಹಿಡಿದು ರಥದಲ್ಲಿ ಕುಳಿತು ಅಗ್ನಿಯೇ ಒಂದು ಅಂಶವಾಗಿ ಮೇಲೆ ಬಂದ. ಅವನಿಗೆ ದೃಷ್ಟದ್ಯುಮ್ನ ಎಂದು ನಾಮಕರಣ ಮಾಡಿದರು. ನಂತರದಲ್ಲಿ ಅಲ್ಲೇ ಯಜ್ಞ ಕುಂಡದ ಪಕ್ಕ ಇದ್ದ ವೇದಿ (ಪವಿತ್ರ ಜಾಗ) ಯಿಂದ ಭಾರತಿ ದೇವಿಯೇ ದ್ರೌಪದಿ ರೂಪದಲ್ಲಿ ಮೇಲೆ ಬಂದರು. ದ್ರೌಪದಿ ದೇವಿ ಅದ್ಭುತ ಸೌಂದರ್ಯದಿಂದ ಕೂಡಿದ್ದಳು. ದ್ರೌಪದಿಯಲ್ಲಿ ಶಚಿ ದೇವಿ, ಶ್ಯಾಮಲಾ ದೇವಿ, ಉಷಾ ದೇವಿ, ಪಾರ್ವತಿ ದೇವಿಯ ಅಂಶಗಳು ಕೂಡಿದ್ದವು. ದ್ರೌಪದಿ ದೇವಿ ವರ್ಣದಲ್ಲಿ ಕಪ್ಪಿದ್ದರಿಂದ "ಕೃಷ್ಣಾ" ಎಂದು. ದ್ರುಪದನ ಮಗಳಾದ್ದರಿಂದ "ದ್ರೌಪದಿ" ಎಂಬ ಹೆಸರಿತ್ತು. ಮತ್ತೊಂದು ಹೆಸರು "ಯಾಜ್ಞ ಶೇಣಿ", ಮತ್ತೊಂದು ಹೆಸರು "ಪಾರ್ಶತಿ", ಪಾಂಚಾಲ ದೇಶದ ರಾಣಿ ಆದ್ದರಿಂದ "ಪಾಂಚಾಲಿ" ಎಂದು ಕೂಡ ಕರೆಯುತ್ತಿದ್ದರು. ದ್ರೌಪದಿ ದೇವಿ ಹುಟ್ಟುವಾಗಲೇ ನವ ತರುಣಿಯಾಗಿ, ಮುಪ್ಪಿಲ್ಲದೆ, ಸರ್ವಜ್ಞಾನಿಯಾಗಿ ಹುಟ್ಟಿದ್ದರು. ದ್ರೌಪದಿ ದೇವಿಯ ದೇಹದಲ್ಲಿ ಶಚಿ ದೇವಿ, ಶ್ಯಾಮಲಾ ದೇವಿ, ಉಷಾದೇವಿ, ಹಾಗೂ ಪಾರ್ವತಿ ದೇವಿಯ ಅಂಶಗಳು ಬರಲು ಕಾರಣವೇನೆಂದರೆ ಒಮ್ಮೆ ಇಂದ್ರನ ಹೆಂಡತಿಯಾದ ಶಚಿ ದೇವಿ, ಯಮದೇವರ ಹೆಂಡತಿಯಾದ ಶ್ಯಾಮಲಾ ದೇವಿ, ಅಶ್ವಿನಿ ದೇವತೆಯರ ಪತ್ನಿಯಾದ ಉಷಾದೇವಿ, ಹಾಗೂ ರುದ್ರದೇವರ ಪತ್ನಿಯಾದ ಪಾರ್ವತಿ ದೇವಿ ನಾಲ್ವರೂ ಸೇರಿ ಒಂದು ದೇಹದಲ್ಲಿ ಪ್ರವೇಶಿಸಿ ಬ್ರಹ್ಮ ದೇವರಿಗೆ ತಮ್ಮ ಗುರುತು ಸಿಗುವುದೋ ಇಲ್ಲವೋ ಎಂದು ಪರೀಕ್ಷಿಸಲು ಅವರ ಮುಂದೆ ಹೋಗುತ್ತಿದ್ದರು. ನಮ್ಮನ್ನು ಯಾವ ದೇಹದಿಂದ ಗುರುತು ಹಿಡಿಯುತ್ತಾರೋ ನೋಡೋಣ ಎಂದು ಎರಡು ಬಾರಿ ಅವರ ಮುಂದೆ ಹೋದರು. ಆಗ ಕಂಡೂ ಕಾಣದಂತೆ ಸುಮ್ಮನಿದ್ದ ಬ್ರಹ್ಮದೇವರು ಮೂರನೇ ಬಾರಿ ಬಂದಾಗ ಕೋಪಗೊಂಡು ಅವರಿಗೆ ಶಾಪ ಕೊಟ್ಟು ಬಿಟ್ಟರು. ನೀವು ನಾಲ್ಕು ಜನ ಒಂದೇ ದೇಹದಲ್ಲಿ ಸೇರಿಕೊಂಡು ನನ್ನನ್ನು ಪರೀಕ್ಷೆ ಮಾಡಲು ಬರುತ್ತೀರಾ, ನೀವು ಇದೆ ರೀತಿ ನಾಲ್ಕು ಜನ ಒಂದೇ ದೇಹದಲ್ಲಿ ಸೇರಿಕೊಂಡು ಮೂರು ಬಾರಿ ಭೂಮಿಯಲ್ಲಿ ಹುಟ್ಟಿರಿ ಎಂದು ಬಿಟ್ಟರು. ಮತ್ತೊಮ್ಮೆ ಇದೆ ನಾಲ್ಕು ಜನ ಬ್ರಹ್ಮ ದೇವರ ಸಭೆಯಲ್ಲಿ ಅವರವರ ಪತಿಯರೊಂದಿಗೆ ವಿಲಾಸದಲ್ಲಿ ತೊಡಗಿದ್ದರು. ಇದರಿಂದ ಕುಪಿತಗೊಂಡ ಬ್ರಹ್ಮದೇವರು ಮತ್ತೊಮ್ಮೆ ಶಪಿಸಿಬಿಟ್ಟರು. ನಿಮಗೆ ಮತ್ತೊಮ್ಮೆ ಮನುಷ್ಯ ಜನ್ಮ ಬಂದು ಅದರಲ್ಲಿ ನಿಮ್ಮ ನಿಯತ ಪತಿಯರನ್ನು ಬಿಟ್ಟು ಅನ್ಯ ಪುರುಷರ ಸಂಪರ್ಕ ಆಗಿಬಿಡಲಿ ಎಂದು ಬಿಟ್ಟರು. ನಂತರದಲ್ಲಿ ಈ ನಾಲ್ವರೂ ಸೇರಿ ಆಲೋಚಿಸಿದರು. ನಾವುಗಳು ನಾಲ್ಕು ಬಾರಿ ಮನುಷ್ಯ ಜನ್ಮ ಪಡೆಯಬೇಕು ಅದೂ ಅಲ್ಲದೆ ನಾಲ್ಕನೇ ಜನ್ಮದಲ್ಲಿ ನಮ್ಮ ನಿಯತ ಪತಿಯರನ್ನು ಬಿಟ್ಟು ಪರ ಪುರುಷರ ಸಂಪರ್ಕ ಮಾಡಬೇಕು. ತಮ್ಮ ಪಾತಿವ್ರತ್ಯ ರಕ್ಷಣೆ ಆಗಬೇಕು ಆದ್ದರಿಂದ ಭಾರತೀ ದೇವಿಯ ಬಳಿ ಬಂದು ಒಂದು ಸಾವಿರ ವರ್ಷ ಅವರ ಸೇವೆ ಮಾಡಿ ಅವರಿಗೆ ನಡೆದ ವಿಷಯವನ್ನು ತಿಳಿಸಿ ನಮಗೆ ಪಾತಿವ್ರತ್ಯ ರಕ್ಷಣೆ ಬೇಕು. ಆದ್ದರಿಂದ ನಾವು ಹುಟ್ಟುವಾಗ ನಮ್ಮೊಡನೆ ನೀವು ಹುಟ್ಟಬೇಕು ಎಂದು ಕೇಳಿಕೊಂಡರು. ಏಕೆಂದರೆ ನೀವು ವಾಯುದೇವರ ಪತ್ನಿ ಆದ್ದರಿಂದ ನಾವು ಮನುಷ್ಯ ಜನ್ಮ ತಾಳಿದಾಗ ಯಾರಿಂದಲೂ ನಮಗೆ ತೊಂದರೆ ಆಗುವುದಿಲ್ಲ. ಆದ್ದರಿಂದ ನಮ್ಮ ನಾಲ್ಕೂ ಜನ್ಮದಲ್ಲೂ ನೀವು ನಮ್ಮೊಡನೆ ಇರಬೇಕು ಎಂದು ಕೇಳಿದಾಗ ಭಾರತೀ ದೇವಿ ಒಪ್ಪಿಕೊಂಡರು. ಅದೇ ರೀತಿ ತ್ರೇತಾಯುಗದಲ್ಲಿ ಒಬ್ಬ ಬ್ರಾಹ್ಮಣನ ಮಗಳ ರೂಪದಲ್ಲಿ ಈ ಐವರು ಜನಿಸಿದರು. ಅವಳ ಹೆಸರು ವಿಪ್ರಕನ್ಯ. ವಿಪ್ರಕನ್ಯ ರುದ್ರದೇವರನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಚಿ ದೇವಿ, ಶ್ಯಾಮಲಾ ದೇವಿ, ಉಷಾ ದೇವಿ, ಪಾರ್ವತಿ ದೇವಿ ಯರು ತಮ್ಮ ತಮ್ಮ ನಿಯತ ಪತಿಯರೇ ತಮಗೆ ಪತಿಯಾಗಲೆಂದು ರುದ್ರದೇವರನ್ನು ತಪಸ್ಸು ಮಾಡುತ್ತಾರೆ. ಭಾರತೀ ದೇವಿಯರು ಶ್ರೀಹರಿ ಪ್ರೀತನಾಗಲೆಂದು ತಪಸ್ಸು ಮಾಡುತ್ತಾರೆ. ಆಗ ರುದ್ರ ದೇವರು ಪ್ರತ್ಯಕ್ಷರಾಗಿ ನಿಮ್ಮ ನಾಲ್ಕು ಜನ್ಮಗಳಲ್ಲಿ ಯಾವುದಾದರೊಂದು ಜನ್ಮದಲ್ಲಿ ನಿಮ್ಮ ನಿಮ್ಮ ನಿಯತ ಪತಿಯರೇ ನಿಮಗೆ ಪತಿಯರಾಗುತ್ತಾರೆ ಎಂದು ವರವನ್ನು ಕೊಟ್ಟರು. ನಂತರದಲ್ಲಿ ವಿಪ್ರಕನ್ಯ ತನ್ನ ದೇಹವನ್ನು ಪರಿತ್ಯಾಗ ಮಾಡಿ ಎರಡನೆಯ ಜನ್ಮ ಪಡೆಯುತ್ತಾರೆ. ಎರಡನೇ ಜನ್ಮದಲ್ಲಿ ನಳ ರಾಜನಿಗೆ ಮಗಳಾಗಿ ಹುಟ್ಟಿ "ನಳ ನಂದಿನಿ" ಎಂಬ ನಾಮದಿಂದ ಕರೆಯಲ್ಪಡುತ್ತಿದ್ದಳು. ಆ ಜನ್ಮದಲ್ಲೂ ಪತಿಯ ಯೋಗ ಆಗದೆ ಆ ದೇಹವನ್ನೂ ಪರಿತ್ಯಾಗ ಮಾಡಿ ಮೂರನೇ ಜನ್ಮದಲ್ಲಿ ಇಂದ್ರಸೇನೆ ಯಾಗಿ ಜನ್ಮ ಪಡೆಯುತ್ತಾರೆ. ಮೂರನೇ ಜನ್ಮದಲ್ಲಿ ಮುದ್ಗಲ ಋಷಿಗಳು ಇಂದ್ರಸೇನೆಯನ್ನು ಮದುವೆಯಾಗುತ್ತಾರೆ. ಮುದ್ಗಲ ಋಷಿಗಳು ಹಿಂದೊಮ್ಮೆ ಬ್ರಹ್ಮ ದೇವರ ಸಭೆಯಲ್ಲಿ ಬ್ರಹ್ಮನನ್ನು ಅಪಹಾಸ ಮಾಡಿಬಿಟ್ಟರು. ಅದರಿಂದ ಕುಪಿತಗೊಂಡ ಬ್ರಹ್ಮ ದೇವರು ಮುಂದೆ ನಿನಗೆ ನಿನಗಿಂತ ಉನ್ನತ ಮಟ್ಟದ ದೇವತೆಯರೊಂದಿಗೆ ಸಂಪರ್ಕವಾಗಲಿ ಎಂದು ಶಪಿಸಿಬಿಟ್ಟರು. ಆಗ ಮುದ್ಗಲ ಋಷಿಗಳು ನಾನೊಬ್ಬ ಅಧಮ ನನಗಿಂತ ಉನ್ನತ ಮಟ್ಟದವರ ಜೊತೆ ಸಂಪರ್ಕ ಅತಿ ಘೋರ ಅಪರಾಧ ಹಾಗೂ ಮಹಾ ಪಾಪ ಆಗುತ್ತದೆ ಎಂದು ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದಾಗ ಬ್ರಹ್ಮ ದೇವರು ಮುದ್ಗಲ ಋಷಿಗಳಿಗೆ ಸಮಾಧಾನ ಮಾಡಿ ನೀನೇನು ಯೋಚಿಸಬೇಡ. ಶಾಪವಂತೂ ಕೊಟ್ಟಿದ್ದೇನೆ, ಆದರೆ ನೀನು ಆ ದೇವತೆಗಳ ಸಂಪರ್ಕ ಮಾಡಿದಾಗ ನಿನ್ನೊಳಗೆ ವಾಯುದೇವರ ಪ್ರವೇಶ ಆಗುತ್ತದೆ. ಅದರಿಂದ ನಿನಗೇನೂ ದೋಷ ಬರುವುದಿಲ್ಲ ಎಂದು ವರ ಕೊಟ್ಟರು. ಇಂದ್ರಸೇನೆಯನ್ನು ಮದುವೆ ಆದಾಗ ಮುದ್ಗಲ ಋಷಿಗಳಲ್ಲಿ ವಾಯುದೇವರು ಪ್ರವೇಶಿಸಿದ್ದರು. ಆಗ ಅವರು ಭಾರತೀ ದೇವಿಯರೊಂದಿಗೆ ಮಾತ್ರ ರಮಿಸುತ್ತಿದ್ದರು. ಉಳಿದ ದೇವತೆಗಳು ಸುಪ್ತಾವಸ್ಥೆಯಲ್ಲಿ ಇರುತ್ತಿದ್ದರು. ಒಂದೇ ದೇಹದಲ್ಲಿ ನಾಲ್ಕು ದೇವತೆಗಳೂ ಇದ್ದರೂ ಅವರಿಗೆ ವಾಯು ದೇವರ ಸ್ಪರ್ಶ ಯಾವುದೇ ದೋಷ ತರುತ್ತಿರಲಿಲ್ಲ. ನಂತರದಲ್ಲಿ ವಾಯುದೇವರು ಮುದ್ಗಲ ಋಷಿಯ ದೇಹವನ್ನು ಬಿಟ್ಟು ಹೊರಡುವಾಗ ಮುದ್ಗಲ ಋಷಿಗಳು ಇಂದ್ರಸೇನೆಯನ್ನು ಬಿಟ್ಟು ಕಾಡಿನಲ್ಲಿ ತಪಸ್ಸಿಗೆ ಹೊರಟು ಬಿಟ್ಟರು. ಆಗ ಇಂದ್ರಸೇನೆಯೂ ರುದ್ರ ದೇವರನ್ನು ಕುರಿತು ತಪಸ್ಸು ಮಾಡುತ್ತಾಳೆ. ಆಗ ರುದ್ರ ದೇವರು ಪ್ರತ್ಯಕ್ಷರಾದಾಗ ಇಂದ್ರಸೇನೆ ನಮಗೆ ನಮ್ಮ ನಿಯತ ಪತಿಯೋಗ ಆಗಬೇಕು ಎಂದು ಕೇಳಿದಾಗ ಐದು ಸಲ 'ಪತಿಂ ದೇಹಿ" ಎಂದು ಸ್ವರ ಆಚೆ ಬಂತು. ಆಗ ರುದ್ರ ದೇವರು 'ಪತಿಂ ಪ್ರಾಪ್ಸಸಿ' ಎಂದು ಐದು ಬಾರಿ ಹೇಳಿ ಬಿಟ್ಟರು. ಇಂದ್ರಸೇನೆ ಇದೇನಿದು ನಾನು ಒಂದೇ ದೇಹ ಆದರೆ ಐದು ಗಂಡಂದಿರನ್ನು ವರ ಕೊಟ್ಟು ಬಿಟ್ಟೆಯಲ್ಲ ರುದ್ರ ದೇವ ಎಂದು ರೋಧಿಸುತ್ತಿದ್ದಾಗ ಅಲ್ಲಿಗೆ ಇಂದ್ರ ದೇವರು ಬಂದು ಯಾಕೆ ಹೀಗೆ ರೋಧಿಸುತ್ತಿದ್ದೀರ ಎಂದು ಕೇಳಿದಾಗ ಇಂದ್ರಸೇನೆ ವಟು ರೂಪಿಯಾಗಿದ್ದ ರುದ್ರದೇವರನ್ನು ತೋರಿಸಿ ನಾನು ಪತಿಯನ್ನು ಕರುಣಿಸು ಎಂದು ಬೇಡಿದರೆ ಐದು ಜನರನ್ನು ಕರುಣಿಸಿಬಿಟ್ಟ ಎಂದಳು. ಆಗ ಇಂದ್ರ ವಟು ರೂಪದಲ್ಲಿರುವುದು ರುದ್ರ ದೇವರು ಎಂದು ತಿಳಿಯದೆ ಯಾಕೆ ನೀನು ಹೀಗೆ ಮಾಡಿದೆ ಎಂದು ಕೋಪದಿಂದ ಕೇಳಿದಾಗ ರುದ್ರ ದೇವರು ನನ್ನನ್ನೇ ಪ್ರಶ್ನಿಸುತ್ತೀಯ ಅವಳು ಐದು ಬಾರಿ ಕೇಳಿದ್ದಕ್ಕೆ ನಾನು ಐದು ಬಾರಿ ವರ ಕೊಟ್ಟೆ ಎಂದು ನೀನು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿ ಅವಳನ್ನೇ ಮದುವೆ ಆಗು ಎಂದು ಶಪಿಸಿ ಬಿಟ್ಟರು. ಅಷ್ಟೇ ಅಲ್ಲದೆ ರುದ್ರದೇವರು ಇಂದ್ರನಿಗೆ ಒಂದು ಸುಳ್ಳು ಹೇಳಿದರು. ಅಲ್ಲಿ ನೋಡು ಅಲ್ಲಿ ಇರುವ ಪರ್ವತದ ಕೆಳಗೆ ನನ್ನ ವಿರೋಧ ಮಾಡಿದವರೆಲ್ಲ ಹೇಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಹೋಗಿ ನೋಡು ಎಂದು ಬಿಟ್ಟರು. ಅಲ್ಲಿ ಬಂದು ಇಂದ್ರ ಆ ಪರ್ವತ ಕಿತ್ತು ನೋಡಿದಾಗ ಅಲ್ಲಿ ಯಮದೇವರು, ವಾಯುದೇವರು ಹಾಗೂ ಅಶ್ವಿನಿ ದೇವತೆಗಳು ಏನೋ ಚಿಂತನೆ ನಡೆಸುತ್ತಿದ್ದರು. ಇಂದ್ರ ಅದನ್ನು ನೋಡಿ ರುದ್ರ ದೇವರ ಮಾತು ನಿಜ ಎಂದು ಇಂದ್ರ ಸುಮ್ಮನಾಗಿ ನಂತರದಲ್ಲಿ ಅರ್ಜುನನಾಗಿ ಅವತರಿಸಿದ. ಇದನ್ನು ನೋಡಿ ಬ್ರಹ್ಮ ದೇವರು ರುದ್ರ ದೇವರಿಗೆ ಇಂದ್ರನಿಗೆ ಸುಳ್ಳು ಹೇಳಿದ್ದೀಯ ಎಂದು ನೀನು ಅಶ್ವತ್ಥಾಮನಾಗಿ ಹುಟ್ಟು ಹಾಗೆ ಅರ್ಜುನನಿಂದ ಸೋಲನುಭವಿಸು. ಅಷ್ಟೇ ಅಲ್ಲದೆ ನಾನು ಇಂದ್ರಸೆನೆಗೆ ಪೂರ್ವದಲ್ಲಿ ನಿಮ್ಮ ನಿಯತ ಪತ್ನಿಯರ ಯೋಗ ಆಗದಿರಲಿ ಎಂದು ಶಾಪ ಕೊಟ್ಟಿದ್ದೆ. ಆದರೆ ನೀನು ಅದನ್ನು ಮೀರಿ ಅವರವರ ಪತಿಯ ಯೋಗ ಆಗಲಿ ಎಂದು ವರ ಕೊಟ್ಟು ಬಿಟ್ಟೆ. ಆದ್ದರಿಂದ ಈ ವರ ಸತ್ಯವಾಗಲಿ ಆದರೆ ನಿನ್ನ ಪಾಲಿಗೆ ಸುಳ್ಳಾಗಲಿ ಎಂದು ಶಪಿಸಿಬಿಟ್ಟರು. ಇಂದ್ರಸೇನೆಯ ದೇಹದಲ್ಲಿ ಶಚಿ,ಶ್ಯಾಮಲಾ, ಭಾರತಿ,ಉಷಾ ಹಾಗೂ ಪಾರ್ವತಿ ದೇವಿಯರು ಇದ್ದಾರೆ. ಮುಂದಿನ ಜನ್ಮದಲ್ಲಿ ಎಲ್ಲರಿಗೂ ಅವರವರ ನಿಯತ ಪತಿ ಸಿಗುತ್ತಾರೆ ಆದರೆ ನಿನಗೆ ಮಾತ್ರ ಪಾರ್ವತಿ ಸಿಗುವುದಿಲ್ಲ. ನೀನು ಅಶ್ವತ್ಥಾಮನಾಗಿ ಬ್ರಹ್ಮಚಾರಿಯಾಗೆ ಉಳಿಯುತ್ತೀಯ ಎಂದರು. ಹಾಗೆಯೇ ನಿನಗೆ ಮದುವೆಯ ಭಾಗ್ಯವೇ ಇಲ್ಲದೆ ಚಿರಂಜೀವಿ ಆಗಿ ಇದ್ದುಬಿಡು ಎಂದು ಮತ್ತೊಂದು ಶಾಪವನ್ನು ಕೊಟ್ಟರು. ನಂತರದಲ್ಲಿ ಇಂದ್ರಸೇನೆಯ ದೇಹವನ್ನೂ ಪರಿತ್ಯಾಗ ಮಾಡಿ ನಾಲ್ಕನೇ ಜನ್ಮದಲ್ಲಿ ದ್ರೌಪದಿಯಾಗಿ ಜನ್ಮ ತಾಳಿದಳು. ಮುಂದೆ ರುದ್ರ ದೇವರ ವರದಂತೆ ಇಂದ್ರನ ರೂಪದಲ್ಲಿದ್ದ ಅರ್ಜುನನನ್ನು ದ್ರೌಪದಿಯ ದೇಹದಲ್ಲಿದ್ದ ಶಚಿದೇವಿ ಮದುವೆ ಆದರೆ, ಯುಧಿಷ್ಠಿರನ ರೂಪದಲ್ಲಿದ್ದ ಯಮದೇವರನ್ನು ಶ್ಯಾಮಲಾ ದೇವಿ ಮದುವೆ ಆದರೆ, ಭೀಮಸೇನನ ರೂಪದಲ್ಲಿದ್ದ ವಾಯುದೇವರನ್ನು ಭಾರತಿ ದೇವಿ ಮದುವೆ ಆದರೆ, ನಕುಲ ಸಹದೇವರ ರೂಪದಲ್ಲಿದ್ದ ಅಶ್ವಿನಿ ದೇವತೆಯರನ್ನು ಉಷಾ ದೇವಿ ಮದುವೆ ಆಗುತ್ತಾರೆ. ಬ್ರಹ್ಮ ದೇವರ ಶಾಪದಿಂದ ಪಾರ್ವತಿ ದೇವಿ ಮಾತ್ರ ಮದುವೆ ಇರದೇ ಹಾಗೆ ಇದ್ದು ಬಿಡುತ್ತಾರೆ. ಒಂದು ದೇವತೆ ಸಂಸಾರದಲ್ಲಿದ್ದಾಗ ಉಳಿದ ದೇವತೆಯರು ಸುಪ್ತಾವಸ್ಥೆಯಲ್ಲಿ ಇರುತ್ತಿದ್ದರು

Wednesday, April 18, 2012

ಪೃಥೆ

ಶೂರಸೇನ ರಾಜ ತನಗೆ ಮಗಳಾಗಿ ಹುಟ್ಟಿದ ಪೃಥೆಯನ್ನು ಕುಂತಿಭೋಜರಾಜನಿಗೆ ಮಕ್ಕಳಿಲ್ಲದ ಕಾರಣ ಅವನಿಗೆ ಕೊಟ್ಟಿದ್ದ. ಕುಂತಿಭೋಜರಾಜ ಪೃಥೆಯನ್ನು ಯಾವುದೇ ಲೋಪವಿಲ್ಲದೆ ಚೆನ್ನಾಗಿ ಸಾಕುತ್ತಿದ್ದನು. ಪೃಥೆ ಬಹಳ ರೂಪವಂತೆ, ಗುಣವಂತೆ, ಶೀಲವಂತೆ ಆಗಿದ್ದಳು. ಬಾಲ್ಯದಿಂದ ಕುಂತಿಭೋಜರಾಜನ ಮನೆಯಲ್ಲಿ ಬೆಳೆದಿದ್ದರಿಂದ ಪೃಥೆಗೆ ಕುಂತಿ ಎಂಬ ಹೆಸರು ಬಂದಿತು.

ಒಮ್ಮೆ ಕುಂತಿಭೋಜರಾಜನ ಮನೆಗೆ ದೂರ್ವಾಸ ಮುನಿಗಳು ಆಗಮಿಸಿ ಸ್ವಲ್ಪ ದಿವಸ ರಾಜಾಶ್ರಯದಲ್ಲಿ ಇರುತ್ತೇವೆಂದು ತಿಳಿಸಿದರು. ಆಗ ಕುಂತಿಭೋಜರಾಜ ನನ್ನದೊಂದು ನಿರ್ಬಂಧ ಇದೆ ಅದಕ್ಕೆ ಒಪ್ಪುವುದಾದರೆ ನೀವು ಖಂಡಿತ ಇರಬಹುದು. ಅದೇನೆಂದರೆ ನೀವು ಇರುವಷ್ಟು ದಿವಸ ನಿಮ್ಮ ಸೇವೆಗೆ ನನ್ನ ಸಾಕು ಮಗಳಾದ ಕುಂತಿಯನ್ನು ಬಿಡುತ್ತೇನೆ. ಅವಳು ಇನ್ನು ಚಿಕ್ಕು ಹುಡುಗಿ. ನೀವು ಮೊದಲೇ ಕೋಪಿಷ್ಟರು. ತಿಳಿದೋ ತಿಳಿಯದೆಯೋ ಆಕೆಯಿಂದ ಏನಾದರೂ ತಪ್ಪಾದರೆ ನೀವು ಆಕೆಗೆ ಶಪಿಸಬಾರದು. ಈ ನಿರ್ಬಂಧಕ್ಕೆ ಒಪ್ಪಿಗೆ ಇದ್ದರೆ ನೀವು ಇಲ್ಲಿ ತಂಗಬಹುದು. ಅದಕ್ಕೆ ದೂರ್ವಾಸರು ಸಮ್ಮತಿ ಸೂಸಿ ಕುಂತಿಭೋಜರಾಜನ ಮನೆಯಲ್ಲಿ ವಾಸಿಸುತ್ತಿದ್ದರು.

ಹದಿಮೂರು ವರ್ಷಗಳ ಕಾಲ ಕುಂತಿಭೋಜರಾಜನ ಮನೆಯಲ್ಲಿ ತಂಗಿದ್ದ ದೂರ್ವಾಸರಿಗೆ ಕುಂತಿದೇವಿ ಕಾಯಾ ವಾಚಾ ಮನಸಾ ತನ್ನ ಸೇವೆಯನ್ನು ಸಲ್ಲಿಸಿದಳು. ಕುಂತಿದೆವಿಯ ಸೇವೆಯಿಂದ ಪ್ರೀತರಾದ ದೂರ್ವಾಸ ಮುನಿಗಳು ಅಲ್ಲಿಂದ ಹೊರಡುವಾಗ ಕುಂತಿ ನಿನಗೊಂದು ಅಪೂರ್ವವಾದ ಮಂತ್ರವನ್ನು ಉಪದೇಶಿಸುತ್ತೇನೆ. ನಿನಗೇನಾದರೂ ಸಹಾಯ ಬೇಕಿದ್ದಲ್ಲಿ ಈ ಮಂತ್ರವನ್ನು ಪಠಿಸಿ ಯಾವ ದೇವತೆಯನ್ನು ಕರೆದರೂ ಅವರು ಕೂಡಲೇ ಪ್ರತ್ಯಕ್ಷರಾಗುತ್ತಾರೆ. ನಿನಗೇನೂ ವರ ಬೇಕೋ ಬೇಡಿಕೊಳ್ಳಬಹುದು ಎಂದು ಅಲ್ಲಿಂದ ಹೊರಟರು.

ಒಮ್ಮೆ ಕುಂತಿದೇವಿ ಋತುಮತಿಯಾಗಿದ್ದಳು. ಆಗ ಋತು ಸ್ನಾನ ಮಾಡಿ ಆಚೆ ಬಂದಾಗ ಅಂತರಿಕ್ಷದಲ್ಲಿ ಸೂರ್ಯನನ್ನು ಕಂಡು ಕುಂತಿದೇವಿಗೆ ಒಂದು ದುರ್ಬುದ್ಧಿ ಬಂದಿತು. ಹೇಗಿದ್ದರೂ ದೂರ್ವಾಸರು ಮಂತ್ರ ಉಪದೇಶ ಮಾಡಿದ್ದರೆ. ಯಾಕೆ ಒಮ್ಮೆ ಆ ಮಂತ್ರವನ್ನು ಪರೀಕ್ಷಿಸಬಾರದು ಎಂಬ ದುರ್ಬುದ್ಧಿ ಬಂದಿದ್ದೆ ತಡ ಮಂತ್ರವನ್ನು ಪಠಿಸಿ ಸೂರ್ಯದೇವನನ್ನು ಆಹ್ವಾನಿಸಿ ಬಿಟ್ಟಳು. ತಟ್ಟನೆ ಸೂರ್ಯದೇವ ಪ್ರತ್ಯಕ್ಷ ಆಗಿಬಿಟ್ಟ. ಕುಂತಿದೇವಿಗೆ ಇದರಿಂದ ಆಘಾತವಾಗಿ ನಾನು ಸುಮ್ಮನೆ ಪರೀಕ್ಷಿಸಲು ಕರೆದಿದ್ದು ದಯವಿಟ್ಟು ಹೊರಟು ಹೋಗು ಎಂದು ಕಳಕಳಿಯಿಂದ ಬೇಡಿಕೊಂಡಳು. ಎಷ್ಟು ಬೇಡಿದರೂ ಸೂರ್ಯದೇವ ಸುಮ್ಮನೆ ಹಿಂದಿರುಗಲು ಸಮ್ಮತಿಸದೆ ಕುಂತಿದೇವಿಯೊಂದಿಗೆ ಸೇರಿ ಗರ್ಭಧಾರಣೆ ಮಾಡಿ ಹೋಗಿಬಿಟ್ಟ. ಹೋಗುವ ಮುನ್ನ ಸೂರ್ಯದೇವ ಕುಂತಿಯನ್ನು ಕುರಿತು ಹೇಳುತ್ತಾನೆ. ಕುಂತಿ ನೀನು ನನ್ನನ್ನು ಆಹ್ವಾನ ಮಾಡಿದ್ದರಿಂದಲೇ ನಾನು ಬಂದಿದ್ದು. ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ. ನಿನಗೊಂದು ವರ ಕೊಡುತ್ತೇನೆ. ಮುಂದೆ ಮತ್ತೆ ನಿನಗೆ ಕನ್ಯತ್ವ ಬರುತ್ತದೆ. ಆಗ ನೀನು ಯಾರನ್ನು ಬೇಕಾದರೂ ಮದುವೆ ಆಗಬಹುದು ಎಂದು ಹೇಳಿ ಹೋಗುತ್ತಾನೆ.

ಈ ಅನಿರೀಕ್ಷಿತ ಸಂಘಟನೆಯಿಂದ ಕುಂತಿದೇವಿ ಕಂಗಾಲಾಗಿ ಬಿಟ್ಟಳು. ಇನ್ನೂ ಮದುವೆ ಆಗಿಲ್ಲ ಆಗಲೇ ಗರ್ಭಧಾರಣೆ ಆಗಿ ಹೋಗಿದೆ ಎಂದು ಚಿಂತಿಸುತ್ತಾ ಕನ್ಯಾಂತಃಪುರದಲ್ಲೇ ಇದ್ದುಬಿಟ್ಟಳು. ಯಾರಿಗೂ ವಿಷಯ ತಿಳಿಯದೆ ಗುಟ್ಟಾಗಿ ಇಟ್ಟಿದ್ದಳು. ಕೊನೆಗೆ ಮಗು ಜನಿಸಿತು. ಹುಟ್ಟಿದ ಮಗು ಹೇಗಿತ್ತೆಂದರೆ ದಿವ್ಯ ವರ್ಚಸ್ಸು, ಕವಚ ಕುಂಡಲಗಳೊಂದಿಗೆ ಹುಟ್ಟಿದೆ. ಹುಟ್ಟಿದ ಮಗುವಿನ ಕಿವಿ ಬಹಳ ಸುಂದರವಾಗಿ ಕುಂಡಲದಿಂದ ಕಂಗೊಳಿಸುತ್ತಿದ್ದನ್ನ್ನು ನೋಡಿ ಮಗುವಿಗೆ ಕರ್ಣ ಎಂದು ಹೆಸರಿಟ್ಟಳು. ಕನ್ಯಾವಸ್ಥೆಯಲ್ಲಿ ಮಗು ಹುಟ್ಟಿದೆ, ಮುಂದೆ ಸಮಾಜದಲ್ಲಿ ತನ್ನ ಪರಿಸ್ಥಿತಿ ಏನೆಂದು ಚಿಂತಿಸಿ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಮಲಗಿಸಿ, ಜೊತೆಯಲ್ಲಿ ಆ ಪೆಟ್ಟಿಗೆ ತುಂಬುವಷ್ಟು ರತ್ನ, ವಜ್ರ, ವೈಡೂರ್ಯಗಳನ್ನೂ ಇಟ್ಟು ಅಶ್ವ ನದಿಯಲ್ಲಿ ತೇಲಿಬಿಟ್ಟಳು. ಆ ಪೆಟ್ಟಿಗೆ ನದಿಯಲ್ಲಿ ತೇಲಿಕೊಂಡು ತೇಲಿಕೊಂಡು ಶರ್ಮಣ್ವತಿ ನದಿಗೆ ಬಂದು ಸೇರಿತು. ಅಲ್ಲಿಂದ ಯಮುನಾ ನದಿಗೆ ಬಂದು ಅಲ್ಲಿಂದ ಗಂಗಾ ನದಿಗೆ ಬಂದು ಸೇರಿತು. ಗಂಗಾ ನದಿಯಲ್ಲಿ ತೇಲಿಕೊಂಡು ಬರುತ್ತಿದ್ದಾಗ ಅಧಿರಥ ಎಂಬ ಸೂತಪುತ್ರ ಆ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಮಗು ಹಾಗೂ ಜೊತೆಯಲ್ಲಿದ್ದ ಐಶ್ವರ್ಯ ವನ್ನು ಕಂಡು ಆಶ್ಚರ್ಯ ಚಕಿತನಾಗಿ ಮನೆಗೆ ತೆಗೆದುಕೊಂಡು ಹೋಗಿ ತನ್ನ ಪತ್ನಿಯಾದ ರಾಧೆಗೆ ಅದನ್ನು ಕೊಟ್ಟು ಮಗುವಿಗೆ ವಸುಶೇಣ ಎಂದು ನಾಮಕರಣ ಮಾಡಿ ಸಾಕುತ್ತಿದ್ದರು.

ನಂತರದಲ್ಲಿ ಕುಂತಿದೇವಿ ಪಾಂಡುರಾಜನನ್ನು ವಿವಾಹವಾಗಿ ಚಿರಕಾಲ ರಮಿಸುತ್ತಿದ್ದರು. ಕೆಲಕಾಲದ ನಂತರ ಪಾಂಡುರಾಜ ಮಾದ್ರಿ ಎಂಬ ಇನ್ನೊಬ್ಬಳನ್ನು ವಿವಾಹ ಮಾಡಿಕೊಂಡನು. ಒಮ್ಮೆ ಪಾಂಡು ರಾಜ ತನ್ನ ಇಬ್ಬರು ಪತ್ನಿಯರೊಡನೆ ಹಿಮಾಲಯದಲ್ಲಿರುವ ಬದರಿಕಾಶ್ರಮಕ್ಕೆ ಬಂದು ವಾಸ ಮಾಡುತ್ತಿದ್ದನು.

ಹೀಗೆ ಸಾಗಿರಲು ಒಮ್ಮೆ ಪಾಂಡುರಾಜ ಬೇಟೆ ಆಡಲು ಹೋಗಿದ್ದಾಗ ಒಂದು ಗಂಡು ಜಿಂಕೆ ಮತ್ತೊಂದು ಹೆಣ್ಣು ಜಿಂಕೆಯ ಜೊತೆ ಸರಸದಲ್ಲಿದ್ದಾಗ ಆ ಗಂಡು ಜಿಂಕೆಗೆ ಬಾಣ ಬಿಟ್ಟ. ಆದರೆ ಅದು ಬರೀ ಜಿಂಕೆ ಆಗಿರದೆ ಕಿಂದಮ ಎಂಬ ಋಷಿಗಳು ಆಗಿದ್ದರು. ಕ್ರೋಧಗೊಂಡ ಋಷಿಗಳು ನೀನು ಸಹ ನಿನ್ನ ಹೆಂಡತಿಯ ಜೊತೆ ಸಂಪರ್ಕ ಮಾಡಿದರೆ ಕೂಡಲೇ ನಿನಗೆ ಸಾವಾಗಲಿ ಎಂದು ಶಾಪ ಕೊಟ್ಟು ಬಿಟ್ಟರು. ಇದರಿಂದ ನೊಂದ ಪಾಂಡು ರಾಜ ಮಡದಿಯರೊಡನೆ ನಾನು ಇನ್ನು ಮುಂದೆ ಸನ್ಯಾಸಿ ಆಗಿಬಿಡುತ್ತೇನೆ ಎಂದಾಗ ಮಡದಿಯರು ಒಪ್ಪದೇ ನೀವು ಹೀಗೆ ಇಲ್ಲೇ ನಮ್ಮೊಡನೆ ಇರಬೇಕು ಎಂದು ಕೇಳಿಕೊಂಡಾಗ ಒಪ್ಪಿ ಅಲ್ಲೇ ಬದರಿಕಾಶ್ರಮದ ಸಮೀಪ ಇರುವ ಪಾಂಡು ಕೇಶ್ವರಕ್ಕೆ ಬಂದು ನೆಲೆಸಿದ್ದಾನೆ.

ಕಾಲ ಕಳೆದಂತೆ ಪಾಂಡು ರಾಜನಿಗೆ ಮಕ್ಕಳು ಬೇಕು ಅನಿಸಿತು. ಪಾಂಡು ರಾಜನೇ ಕುಂತಿಯನ್ನು ಕುರಿತು ನೀನು ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದು ಸಲಹೆ ಕೊಟ್ಟು ನನಗಿಂತ ಉತ್ತಮರಾದವರಿಂದ ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದನು. ಅದಕ್ಕೆ ಕುಂತಿ ದೇವಿ ನನಗೆ ಸಂತಾನ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ರೀತಿಯಲ್ಲಿ ಮಾತ್ರ ನನಗೆ ಸಂತಾನ ಬೇಡ ಎಂದಳು. ಆದರೂ ಪಟ್ಟು ಬಿಡದ ಪಾಂಡು ರಾಜ ಇಲ್ಲ ಇದರಿಂದ ನನಗೇನೂ ಮನ ನೋಯುವುದಿಲ್ಲ ಎಂದಾಗ ಕುಂತಿ ತನ್ನ ವೃತ್ತಾಂತವನ್ನು ತಿಳಿಸುತ್ತಾಳೆ. ಹಿಂದೆ ದೂರ್ವಾಸ ಮುನಿಗಳು ತನಗೆ ಕೊಟ್ಟ ವರದ ಬಗ್ಗೆ ತಿಳಿಸಿದಾಗ ಪಾಂಡು ರಾಜ ಬಹಳ ಸಂತೋಷದಿಂದ ಹಾಗಿದ್ದರೆ ಈಗಲೇ ದೇವತೆಯನ್ನು ಕರೆ ಎಂದು ಹೇಳಿದ.

ಪತಿಯ ಮಾತನ್ನು ಮೀರಬಾರದೆಂದು ಕುಂತಿ ದೇವಿ ಯಾವ ದೇವರನ್ನು ಕರೆಯಲಿ ಎಂದು ಅವನನ್ನೇ ಕೇಳಿದಳು.ನಮ್ಮ ರಾಜ್ಯದ ರಕ್ಷಣೆ ಮಾಡಬೇಕು. ರಾಜ ಆಗಬೇಕೆಂದರೆ ಅವನು ಬಹಳ ಧರ್ಮಿಷ್ಠನಾಗಿರಬೇಕು. ಆದ್ದರಿಂದ ಯಮಧರ್ಮನನ್ನು ಆಹ್ವಾನ ಮಾಡು ಅವನಿಂದ ಒಳ್ಳೆ ಧರ್ಮಿಷ್ಠನಾದ ಮಗ ಹುಟ್ಟಲಿ ಎಂದ. ಕೂಡಲೇ ಕುಂತಿ ಮಂತ್ರವನ್ನು ಪಠಿಸಿ ಯಮದೇವನನ್ನು ಆಹ್ವಾನಿಸಿದಾಗ ಯಮಧರ್ಮರಾಯ ಬಂದು ತಾನೇ ಒಂದು ಅಂಶದಲ್ಲಿ ಇದ್ದ ಮಗುವನ್ನು ಕರುಣಿಸಿದನು. ಆ ಮಗುವಿಗೆ ಯುಧಿಷ್ಠಿರ ಎಂದು ನಾಮಕರಣ ಮಾಡಿದಳು.

ಕೆಲದಿನಗಳ ನಂತರ ಪಾಂಡುರಾಜನಿಗೆ ಇನ್ನೊಂದು ಮಗು ಬೇಕು ಎನಿಸಿ ಕುಂತಿಯ ಬಳಿ ತನ್ನ ಮನದಿಂಗಿತವನ್ನು ತಿಳಿಸಿದನು. ಈ ಬಾರಿ ಬಲಿಷ್ಟನಾದ ಮಗ ಒಬ್ಬ ಬೇಕು. ಬರೀ ಧರ್ಮದಿಂದ ರಾಷ್ಟ್ರ ರಕ್ಷಣೆ ಆಗುವುದಿಲ್ಲ. ಆದ್ದರಿಂದ ಜ್ಞಾನ ಬಲ ಹಾಗೂ ಬಾಹು ಬಲ ಎರಡೂ ಆದ ಒಬ್ಬ ಮಗ ಬೇಕು. ಆದ್ದರಿಂದ ವಾಯುದೇವರನ್ನು ಕರೆಯಿರಿ ಎಂದು ಹೇಳಿದ. ಕುಂತಿ ಅವನ ಆಜ್ಞೆಯಂತೆ ವಾಯುದೇವರನ್ನು ಆಹ್ವಾನ ಮಾಡಿದಳು. ಕೂಡಲೇ ವಾಯುದೇವರು ಪ್ರತ್ಯಕ್ಷವಾಗಿ ತಮ್ಮ ಅಂಶದಿಂದ ಕೂಡಿದ ಮಗುವನ್ನು ಕರುಣಿಸಿದರು. ಹಾಗೆ ಹುಟ್ಟಿದ ಮಗುವಿಗೆ ಭೀಮಸೇನ ಎಂದು ನಾಮಕರಣ ಮಾಡಿದರು. ಭೀಮಸೇನ ದೇವರು ಹುಟ್ಟಿದ ಕೂಡಲೇ ಅಸುರರೆಲ್ಲ ರಕ್ತವಾಂತಿ ಮಾಡಿಕೊಂಡು ಅಸುನೀಗಿದರು. ಹತ್ತು ದಿನದ ನಂತರ ಕುಂತಿದೇವಿ ಭೀಮಸೇನನನ್ನು ಎತ್ತಿಕೊಂಡು ಒಂದು ಪರ್ವತಕ್ಕೆ ಹೋಗಿದ್ದಾಗ ಹುಲಿಯೊಂದು ಘರ್ಜನೆ ಮಾಡಿತು. ಅದರಿಂದ ಭಯಭೀತಳಾದ ಕುಂತಿ ಕೈಯಿಂದ ಭೀಮನನ್ನು ಬಿಟ್ಟು ಬಿಟ್ಟಳು. ಭೀಮ ಬಿದ್ದ ರಭಸಕ್ಕೆ ಆ ಪರ್ವತವೆ ಪುಡಿ ಪುಡಿಯಾಗಿ ಹೋಯಿತು. ಆ ಪರ್ವತ ಶತಶ್ರುಂಗ (ನೂರು ಪರ್ವತಗಳ ಸಮೂಹ) ಪರ್ವತದ ಒಂದು ಪರ್ವತ.

ಮತ್ತೊಮ್ಮೆ ಪಾಂಡು ರಾಜ ಕುಂತಿಯ ಬಳಿ ಬಂದು ನನಗೆ ಇನ್ನೊಬ್ಬ ಮಗ ಬೇಕು ಆದ್ದರಿಂದ ಮತ್ತೊಬ್ಬ ದೇವತೆಯನ್ನು ಕರಿ ಎಂದ. ಧರ್ಮಿಷ್ಠ ಒಬ್ಬ ಪರಾಕ್ರಮಿ ಒಬ್ಬ ಹುಟ್ಟಿದ್ದಾನಲ್ಲ ಮತ್ತೆ ಯಾಕೆ ಎಂದು ಕೇಳಿದಾಗ ಒಬ್ಬ ಪರಾಕ್ರಮಿ ಆಚೆ ಶತ್ರುಗಳ ಜೊತೆ ಹೋರಾಡಲು ಹೋದಾಗ ಇಲ್ಲಿ ರಕ್ಷಣೆ ಮಾಡಲು ಇನ್ನೊಬ್ಬ ಇರಬೇಕು ಆದ್ದರಿಂದ ಇನ್ನೊಬ್ಬ ಪರಾಕ್ರಮಿಯನ್ನು ಪಡೆಯಬೇಕು ಎಂದು ಹೇಳಿದ್ದಕ್ಕೆ ಕುಂತಿ ಈ ಬಾರಿ ಇಂದ್ರ ದೇವರನ್ನು ಆಹ್ವಾನ ಮಾಡಿದಳು. ಇಂದ್ರನ ಅಂಶದಿಂದ ಹುಟ್ಟಿದ ಮಗನೆ ಅರ್ಜುನ.

ಇಷ್ಟಾದರೂ ಪಾಂಡು ರಾಜ ಸುಮ್ಮನಿರದೆ ಮತ್ತೊಮ್ಮೆ ಕುಂತಿಯನ್ನು ಕುರಿತು ಹೇಳುತ್ತಿದ್ದಾನೆ. ಕುಂತಿ ಒಬ್ಬ ಧರ್ಮಿಷ್ಠ ಹಾಗೂ ಇಬ್ಬರೂ ಪರಾಕ್ರಮಿಗಳು ಹುಟ್ಟಿದರು. ಈಗ ಒಬ್ಬ ಸ್ಫುರದ್ರೂಪಿ ಮಗ ಹುಟ್ಟಬೇಕು. ಮತ್ತೊಮ್ಮೆ ಇನ್ನೊಬ್ಬ ದೇವರನ್ನು ಕರೆ ಎಂದನು. ಆಗ ಕುಂತಿ ದೇವಿ ನಿರಾಕರಿಸಿದಳು. ರಾಜ್ಯ ರಕ್ಷಣೆಗೆ ಧರ್ಮಿಷ್ಠ, ಪರಾಕ್ರಮಿಗಳು ಹುಟ್ಟಿದ್ದಾರೆ. ಅಷ್ಟು ಸಾಕು ಆದರೆ ರಾಜ್ಯ ರಕ್ಷಣೆಗೆ ಸ್ಫುರದ್ರೂಪಿ ಯಾಕೆ ಬೇಕು. ಆದ್ದರಿಂದ ಈ ಬಾರಿ ನಾನು ಒಪ್ಪುವುದಿಲ್ಲ. ಮೂರು ಬಾರಿ ನಿಯೋಗ ಪದ್ಧತಿಯಲ್ಲಿ ಮಕ್ಕಳನ್ನು ಪಡೆದಿದ್ದೇನೆ. ಮತ್ತೆ ನಾನು ಆ ರೀತಿ ಮಾಡಿದರೆ ಅದು ಧರ್ಮ ಆಗುವುದಿಲ್ಲ ವ್ಯಭಿಚಾರ ಆಗುತ್ತದೆ. ಆದ್ದರಿಂದ ಇನ್ನು ಸಾಕು ಎಂದು ಹೇಳಿದಳು. ಕುಂತಿದೇವಿ ಹೇಳಿದ್ದು ಸರಿ ಎನಿಸಿ ಪಾಂಡು ರಾಜ ಸುಮ್ಮನಾದ.

ಇತ್ತ ಮಾದ್ರಿಗೂ ಮಕ್ಕಳು ಬೇಕು ಎನಿಸಿ ಪಾಂಡು ರಾಜನಲ್ಲಿ ತನ್ನ ಕೋರಿಕೆಯನ್ನು ತಿಳಿಸಿದಳು. ಕುಂತಿಗೆ ಮೂರು ಮಕ್ಕಳಾಗಿದ್ದಾರೆ ನನಗೆ ಒಬ್ಬರೂ ಬೇಡವೇ ಆದ್ದರಿಂದ ನೀವು ಕುಂತಿದೇವಿಯಲ್ಲಿ ಕೇಳಿ ಆ ಮಂತ್ರವನ್ನು ತನಗೆ ಉಪದೇಶ ಮಾಡಲು ಹೇಳಿ ನಾನು ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುತ್ತೇನೆ ಎಂದಳು. ಅದೇ ರೀತಿ ಪಾಂಡು ರಾಜ ಕುಂತಿದೇವಿಯಲ್ಲಿ ಬಂದು ವಿಷಯ ತಿಳಿಸಿದಾಗ ಕುಂತಿದೇವಿ ಅದಕ್ಕೆ ಸಮ್ಮತಿಸಿ ಮಾದ್ರಿಗೆ ಮಂತ್ರವನ್ನು ಉಪದೆಶಿಸುತ್ತೇನೆ. ಆದರೆ ಒಮ್ಮೆ ಮಾತ್ರ ಆ ಮಂತ್ರದಿಂದ ಫಲ ಪಡೆಯಬಹುದು ಅಷ್ಟೇ ಎಂದು ಹೇಳಿ ಮಾದ್ರಿಗೆ ಮಂತ್ರವನ್ನು ಉಪದೇಶಿಸುತ್ತಾಳೆ.

ಮಾದ್ರಿ ಯೋಚಿಸಲು ಶುರುಮಾಡಿದಳು, ಒಮ್ಮೆ ಮಾತ್ರ ಮಂತ್ರ ಪಠಿಸಲು ಸೂಚಿಸಿದ್ದಾಳೆ ಕುಂತಿ. ಮತ್ತೊಮ್ಮೆ ಮಂತ್ರದಿಂದ ಫಲವಾಗುವುದಿಲ್ಲ. ಆದರೆ ನನಗೆ ಎರಡು ಮಕ್ಕಳು ಬೇಕು ಎಂದು ದುರಾಲೋಚನೆ ಮಾಡಿ ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಿದ್ದಾರೆ. ಅವರಲ್ಲಿ ಯಾರೊಬ್ಬರನ್ನು ಕರೆದರೂ ಇಬ್ಬಿಬ್ಬರು ಬರುತ್ತಾರೆ ಆದ್ದರಿಂದ ಅವರನ್ನು ಕರೆಯೋಣ ಎಂದು ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಾದ ನಾಸತ್ಯ ಮತ್ತು ದಸ್ರ ಇಬ್ಬರಲ್ಲಿ ಒಬ್ಬರನ್ನು ಕರೆದಳು. ಕೂಡಲೇ ನಾಸತ್ಯ ಮತ್ತು ದಸ್ರ ಇಬ್ಬರೂ ಬಂದು ಫಲ ಕೊಟ್ಟರು. ಆಗ ಹುಟ್ಟಿದ ಅವಳಿ ಮಕ್ಕಳೇ ನಕುಲ ಸಹದೇವ

Thursday, April 12, 2012

ಮತ್ಸ್ಯ ಯಂತ್ರ



ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ ಒಳ್ಳೆಯ ಊಟದ ಸೌಕರ್ಯ ಇರುತ್ತದೆ. ಚೆನ್ನಾಗಿ ಊಟ ಮಾಡಿ ಎಂದು ಹೇಳುತ್ತಿದ್ದಾರೆ. ಪಾಂಡವರು ಒಳಗೊಳಗೇ ನಕ್ಕು ಸುಮ್ಮನೆ ತಲೆಯಾಡಿಸುತ್ತಾ ಸುಮ್ಮನೆ ನಡೆಯುತ್ತಿದ್ದಾರೆ. ಕೆಲ ಬ್ರಾಹ್ಮಣರು ಭೀಮನ ಪರಾಕ್ರಮ ಅರಿತಿದ್ದರಿಂದ ಅವರುಗಳು ದ್ರೌಪದಿಯು ಭೀಮನನ್ನು ಬಿಟ್ಟು ಇನ್ಯಾರಿಗೂ ಸಿಗುವುದಿಲ ಎಂದು ಮಾತನಾಡಿಕೊಳ್ಳುತ್ತಿದ್ದರು.

ಸ್ವಯಂವರದ ದಿನ ಬಹಳ ಹತ್ತಿರ ಇದ್ದದ್ದರಿಂದ ಹಗಲು ರಾತ್ರಿ ಎನ್ನದೆ ಪ್ರಯಾಣ ಮಾಡುತ್ತಿದ್ದಾರೆ. ನಡೆಯುತ್ತಾ ನಡೆಯುತ್ತಾ ಗಂಗಾ ನದಿ ದಂಡೆಗೆ ಬಂದಿದ್ದಾರೆ. ಗಂಗಾ ನದಿ ದಾಟಿ ಹೋದರೆ ದ್ರುಪದನ ರಾಜ್ಯ ಸಿಗುತ್ತಿತ್ತು. ರಾತ್ರಿಯಾದ್ದರಿಂದ ಎಲ್ಲರೂ ಅಲ್ಲೇ ಗಂಗೆ ದಂಡೆಯಲ್ಲಿ ಮಲಗಿದ್ದಾರೆ. ಪಾಂಡವರು ಮಾತ್ರ ನಾವು ಹೊರಡುತ್ತೇವೆ ಎಂದು ಹೊರಟಿದ್ದಾರೆ. ಮುಂದೆ ಅರ್ಜುನ ಕೊನೆಯಲ್ಲಿ ಭೀಮಸೇನ ಮಧ್ಯದಲ್ಲಿ ಕುಂತಿದೇವಿ ಹಾಗೂ ಉಳಿದ ಪಾಂಡವರು ನದಿಯನ್ನು ದಾಟುತ್ತಿದ್ದಾರೆ. ಅಂದು ಶುಕ್ಲ ಪಕ್ಷ ಅಷ್ಟಮಿ ದಿವಸ. ಚಂದ್ರ ಅಸ್ತಂಗತನಾಗಿ ಕತ್ತಲಾವರಿಸಿದೆ.ಅರ್ಧರಾತ್ರಿ ಆಗಿತ್ತು.

ಅದೇ ಸಮಯಕ್ಕೆ ಚಿತ್ರರತ ಎಂಬ ಗಂಧರ್ವ ತನ್ನ ಸಖಿಯರೊಡನೆ ಗಂಗಾ ನದಿಯಲ್ಲಿ ಜಲಕ್ರೀಡೆ ಆಡುತ್ತಿದ್ದಾನೆ.ಅರ್ಜುನ ಕೈಯಲ್ಲಿ ಕೊಳ್ಳಿಯ ದೀಪವನ್ನು ಹಿಡಿದು ಮುನ್ನಡೆಯುತ್ತಿದ್ದಾನೆ. ಪಾಂಡವರ ಆಗಮನದಿಂದ ಚಿತ್ರರತನಿಗೆ ವಿಘ್ನವಾದಂತಾಗಿ ಅವರ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾನೆ. ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದರೂ ಅವರು ಕ್ಷತ್ರಿಯರೆಂದು ಚಿತ್ರರತನಿಗೆ ಗೊತ್ತಾಯಿತು. ಅದೂ ಅಲ್ಲದೆ ಮಾನವರಿಗೆ ನಿಷಿದ್ಧವಾದ ಮಹಾ ನಿಷಿದ್ಧ ಕಾಲದಲ್ಲಿ ಬರುತ್ತಿದ್ದಾರೆ.(ಮಹಾ ನಿಷಿದ್ಧ ಕಾಲ ಎಂದರೆ ರಾತ್ರಿ ೧೧.೪೫ - ೧೨.೧೫) ಈ ಕಾಲದಲ್ಲಿ ಭೂತ ಪ್ರೇತಗಳು, ಗಂಧರ್ವರು ಸಂಚರಿಸುವ ಸಮಯ. ಈ ಸಮಯದಲ್ಲಿ ನೀವು ಬಂದು ನನಗೆ ವಿಘ್ನ ಉಂಟು ಮಾಡಿದ್ದೀರಾ ನಿಮ್ಮನ್ನು ಸಂಹರಿಸುತ್ತೇನೆ ಎಂದು ಆಕ್ರಮಣ ಮಾಡಲು ಬರುತ್ತಿದ್ದಾನೆ.

ಅರ್ಜುನನು ನಾವೆಲ್ಲರೂ ಅಸ್ತ್ರ ಜ್ಞಾನಿಗಳು ನಿನ್ನಿಂದ ನಮಗೇನು ಮಾಡಲು ಸಾಧ್ಯವಿಲ್ಲ. ನಿನ್ನ ಪ್ರಯತ್ನಗಳೆಲ್ಲ ವಿಫಲವಾಗುತ್ತದೆ ಎಂದು ಹೇಳಿದರೂ ಕೇಳದೆ ಬಾಣ ಪ್ರಯೋಗ ಮಾಡಲು ಮುಂದಾದ ಚಿತ್ರರತ. ಮುಂದಿದ್ದ ಅರ್ಜುನ ತನ್ನ ಕೈಯಲ್ಲಿದ್ದ ಕೊಳ್ಳಿಗೆ ಆಜ್ನೆಯಾಸ್ತ್ರವನ್ನು ಅಭಿಮಂತ್ರಿಸಿ ಅವನ ಮೇಲೆ ಬಿಸಾಡಿದಾಗ ಚಿತ್ರರತನ ರಥ ಸುಟ್ಟು ಅವನ ಮೈ ಸುಡಲು ಶುರುವಾಯಿತು. ಆಗ ಚಿತ್ರರತ ಅರ್ಜುನನಲ್ಲಿ ಕ್ಷಮೆ ಯಾಚಿಸಿದಾಗ ಅರ್ಜುನ ಅವನಿಗೆ ಕ್ಷಮೆ ನೀಡಿ ಕಳುಹಿಸುತ್ತಾರೆ. ಆಗ ಚಿತ್ರರತ ಹೇಳುತ್ತಾನೆ, ನಾನು ನಿಮ್ಮನ್ನು ಆಕ್ರಮಣ ಮಾಡಲು ಕಾರಣ ಏನೆಂದರೆ ನೀವೆಲ್ಲರೂ ಕ್ಷತ್ರಿಯರು. ಕ್ಷತ್ರಿಯರು ಯಾವಾಗಲೂ ಒಬ್ಬ ಬ್ರಾಹ್ಮಣನ ಜೊತೆ ಇಲ್ಲದೆ ಹೋಗಬಾರದು. ಹಾಗಾಗಿ ಮುಂದೆ ಪಾಂಚಾಲ ರಾಜ್ಯದಲ್ಲಿ ದೌಮ್ಯಾಚಾರ್ಯರು ಎಂಬ ಒಬ್ಬ ಬ್ರಾಹ್ಮಣರು ಇದ್ದಾರೆ ಅವರನ್ನು ಕರೆದುಕೊಂಡು ಹೋಗಿ ಎಂದು ಬೀಳ್ಕೊಟ್ಟನು.

ಗಂಗಾ ನದಿಯನ್ನು ದಾಟಿ ಪಾಂಡವರು ಚಿತ್ರರತನ ಸಲಹೆಯಂತೆ ದೌಮ್ಯಾಚಾರ್ಯರನ್ನು ಜೊತೆಗೂಡಿಕೊಂಡು ಸ್ವಯಂವರ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿದ್ದಾರೆ. ಪಾಂಚಾಲ ರಾಜ್ಯ ಎಲ್ಲೆಲ್ಲೂ ತಳಿರು ತೋರಣಗಳಿಂದ ಸಿಂಗರಿಸಿಕೊಂಡು ನವವಧುವಿನಂತೆ ಸಿದ್ಧವಾಗಿತ್ತು. ಅರಮನೆಯ ಮುಂಭಾಗದಲ್ಲಿ ಸ್ವಯಂವರಕ್ಕೆಂದು ಬೃಹದಾಕಾರದ ವೇದಿಕೆ ಸಿದ್ಧಗೊಂಡಿತ್ತು. ಸುತ್ತಲೂ ಬೇರೆ ಬೇರೆ ರಾಜ್ಯದ ರಾಜ ಮಹಾರಾಜರು ಕುಳಿತಿದ್ದಾರೆ. ಮತ್ತೊಂದೆಡೆ ಅಸಾಮಾನ್ಯ ಕ್ಷತ್ರಿಯರು ಕುಳಿತಿದ್ದಾರೆ. ಮತ್ತೊಂದೆಡೆ ದುರ್ಯೋಧನ, ಕರ್ಣ, ಶಲ್ಯ,ಶಿಶುಪಾಲ ಮುಂತಾದ ಪರಾಕ್ರಮಿಗಳು ಕುಳಿತಿದ್ದಾರೆ. ಇನ್ನೊಂದು ಬದಿಯಲ್ಲಿ ಸ್ವಯಂವರವನ್ನು ನೋಡಲೆಂದು ಬಂದಿದ್ದ ಬ್ರಾಹ್ಮಣರೂ ಕುಳಿತಿದ್ದಾರೆ. ಅರಗಿನ ಮನೆಯಲ್ಲಿ ಪಾಂಡವರೆಲ್ಲರೂ ಸತ್ತು ಹೋಗಿದ್ದಾರೆಂಬ ಭಾವನೆಯಲ್ಲೇ ದುರ್ಯೋಧನಾದಿಗಳು ಕುಳಿತಿದ್ದಾರೆ. ಶ್ರೀ ಕೃಷ್ಣನೂ ಆಗಮಿಸಿದ್ದಾನೆ.

ಅಲ್ಲಿಗೆ ಆಗಮಿಸಿದ ಬ್ರಾಹ್ಮಣ ವೇಷಧಾರಿಗಳಾದ ಪಾಂಡವರು ಹೋಗಿ ಬ್ರಾಹ್ಮಣರು ಕುಳಿತಿದ್ದ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ದೃಷ್ಟದ್ಯುಮ್ನ ದ್ರೌಪದಿಯ ಕೈ ಹಿಡಿದುಕೊಂಡು ಬಂದು ವೇದಿಕೆಗೆ ಕರೆ ತಂದಿದ್ದಾನೆ. ದ್ರೌಪದಿಯ ಕೈಯಲ್ಲಿ ದ್ರುಪದ ರಾಜನು ಮಾಲೆಯನ್ನು ಕೊಟ್ಟಿದ್ದಾನೆ. ಆ ಮಾಲೆ ಯಾವುದೆಂದರೆ ಅಂಬೆಯು ಭೀಷ್ಮಾಚಾರ್ಯರನ್ನು ಮದುವೆ ಆಗಲೆಂದು ಕೇಳಿದಾಗ ಭೀಷ್ಮಾಚಾರ್ಯರು ನಾನು ಬ್ರಹ್ಮಚಾರಿ ಆದ್ದರಿಂದ ಮದುವೆ ಆಗಲಾರೆ ಎಂದು ಹೇಳಿ ಕಳುಹಿಸಿದ್ದರು. ಅದರಿಂದ ಸಿಟ್ಟಾದ ಅಂಬೆ ರುದ್ರ ದೇವರನ್ನು ಕುರಿತು ತಪಸ್ಸು ಮಾಡಿ ನಾನು ಭೀಷ್ಮರನ್ನು ಕೊಲ್ಲಬೇಕೆಂದು ವರ ಕೇಳಿದಾಗ ರುದ್ರ ದೇವರು ಪ್ರಸನ್ನರಾಗಿ ನಾನು ನಿನಗೆ ಒಂದು ಮಾಲೆಯನ್ನು ಕೊಡುತ್ತೇನೆ. ಯಾರು ಆ ಮಾಲೆಯನ್ನು ಧರಿಸುತ್ತಾರೋ ಅವರು ಭೀಷ್ಮರನ್ನು ಕೊಲ್ಲುತ್ತಾರೆ ಎಂದು ಹೇಳಿ ಮಾಲೆಯನ್ನು ಕೊಟ್ಟಿರುತ್ತಾರೆ. ಆ ಮಾಲೆಯನ್ನು ಧರಿಸಿದವರು ಭೀಷ್ಮರನ್ನು ಕೊಲ್ಲುವವರು ಆಗುತ್ತಾರೆ ಎಂದು ತಿಳಿದು ಯಾರೂ ಆ ಮಾಲೆಯನ್ನು ಧರಿಸಲು ಮುಂದೆ ಬರಲಿಲ್ಲ. ಕೊನೆಗೆ ಅಂಬೆ ಆ ಮಾಲೆಯನ್ನು ತೆಗೆದುಕೊಂಡು ಹೋಗಿ ದ್ರುಪದ ರಾಜನ ಮನೆಯ ಮುಂದೆ ಇಟ್ಟು ಹೋಗಿಬಿಡುತ್ತಾಳೆ. ದ್ರುಪದ ರಾಜ ಆ ಮಾಲೆಯನ್ನು ಹಾಗೆಯೇ ರಕ್ಷಣೆ ಮಾಡಿ ಇಟ್ಟಿರುತ್ತಾನೆ.

ದೃಷ್ಟದ್ಯುಮ್ನ ವೇದಿಕೆಯ ಮೇಲೆ ನಿಂತು ಘೋಷಣೆ ಮಾಡುತ್ತಿದ್ದಾನೆ. ವೇದಿಕೆಯ ಪಕ್ಕದಲ್ಲಿದ್ದ ಮರವೊಂದರ ಕೊಂಬೆಗೆ ಮತ್ಸ್ಯ ಯಂತ್ರವನ್ನು ತೂಗಿ ಹಾಕಿದ್ದಾರೆ. ಅದರ ಕೆಳಗೆ ಒಂದು ತೂತು ಇರುವ ಹಲಗೆಯನ್ನು ನೇತು ಹಾಕಿದ್ದರೆ. ಕೆಳಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ. ಪಕ್ಕದಲ್ಲಿ ಐದು ಬಾಣಗಳು ಹಾಗೆ "ಕಿಂಧುರ" ಎಂಬ ಧನಸ್ಸು. ಆ ಧನಸ್ಸು ಯಾವುದೆಂದರೆ ರುದ್ರದೇವರು ಅದನ್ನು ದ್ರುಪದ ರಾಜನಿಗೆ ನೀಡಿದ್ದ ಧನಸ್ಸು. ಆ ಧನಸ್ಸನ್ನು ಸಾಮಾನ್ಯರು ಅಲುಗಾಡಿಸಲೂ ಸಾಧ್ಯವಾಗದು.

ಆ ಕೆಳಗಿರುವ ನೀರಿನ ಪಾತ್ರೆಯಲ್ಲಿ ನೋಡಿಕೊಂಡು ಮೇಲಿರುವ ಹಲಗೆಯಲ್ಲಿರುವ ರಂಧ್ರದ ಮೂಲಕ ಮತ್ಸ್ಯ ಯಂತ್ರದಲ್ಲಿರುವ ಮೀನಿನ ಪ್ರತಿಕೃತಿಗೆ ಬಾಣವನ್ನು ಹೂಡಿ ಯಾರು ಯಂತ್ರವನ್ನು ಭೇಧಿಸುತ್ತಾರೋ ಅವರಿಗೆ ದ್ರೌಪದಿಯನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸಿದ್ದಾನೆ ದೃಷ್ಟದ್ಯುಮ್ನ. ಆ ಕಿಂಧುರ ಧನಸ್ಸಿನ ಹಗ್ಗವನ್ನು ಬಿಚ್ಚಿಟ್ಟಿದ್ದಾರೆ. ಆ ಹಗ್ಗವನ್ನು ಎಳೆದು ಕಟ್ಟಿ ಬಾಣ ಹೂಡಬೇಕು.

ಘೋಷಣೆ ಮುಗಿಯುತ್ತಿದ್ದಂತೆ ಹಲವಾರು ಜನ ಹುಮ್ಮಸ್ಸಿನಿಂದ ಮತ್ಸ್ಯ ಯಂತ್ರವನ್ನು ಭೇಧಿಸಲು ಮುಂದಾದರು. ಕೆಲವರು ಯಾವ ಹುಮ್ಮಸ್ಸಿನಿಂದ ಎದ್ದರೋ ಧನಸ್ಸಿನ ಬಳಿ ಬಂದು ಇದು ತಮ್ಮ ಯೋಗ್ಯತೆಗೆ ಅಸಾಧ್ಯವಾದುದೆಂದು ತಿಳಿದು ಹಾಗೆ ಹಿಂದಿರುಗಿದರು. ಮತ್ತೆ ಕೆಲವರು ಮುಟ್ಟಿ ಹಿಂದಿರುಗಿದರೆ ಮತ್ತೆ ಕೆಲವರು ಅಲ್ಲಾಡಿಸಿ ಹಿಂದಿರುಗಿದರು.

ನಂತರದಲ್ಲಿ ಬಂದಿದ್ದು ಶಿಶುಪಾಲ. ಶಿಶುಪಾಲ ಮಹಾ ಪರಾಕ್ರಮಿ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ನಿಲ್ಲಿಸಿದ್ದಾನೆ. ಹಗ್ಗದಂತಿದ್ದ ಆ ಕಬ್ಬಿಣದ ತಂತಿಯನ್ನು ಎಳೆದು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಬಿಲ್ಲನ್ನು ಬಗ್ಗಿಸಿದ್ದಾನೆ. ಇನ್ನೇನು ಆ ಕೊಕ್ಕೆಗೆ ಒಂದು ಉದ್ದಿನ ಕಾಳಿನಷ್ಟು ಮಾತ್ರ ಜಾಗ ಇತ್ತು ಅಷ್ಟರಲ್ಲಿ ಶಿಶುಪಾಲನ ಮೈಯಲ್ಲಿದ್ದ ಶಕ್ತಿಯೆಲ್ಲಾ ಖಾಲಿ ಆಗಿ ಮೈಯೆಲ್ಲಾ ಬೆವರು ಕಿತ್ತುಕೊಂಡು ಬಿಲ್ಲನ್ನು ಬಿಟ್ಟುಬಿಟ್ಟ. ಮುಖಭಂಗ ಅನುಭವಿಸಿ ಹಿಂದಿರುಗಿದ ನಂತರ ಬಂದ ಶಲ್ಯ ರಾಜ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಎಳೆದು ಶಿಶುಪಾಲನಿಗಿಂತ ಕಮ್ಮಿ ಅಂತರಕ್ಕೆ ಬಗ್ಗಿಸಿ ನಂತರ ಸಾಧ್ಯವಾಗದೆ ಅವನೂ ಹಿಂತಿರುಗಿದ್ದಾನೆ. ಶಲ್ಯ ರಾಜ ಹಿಂತಿರುಗಿದಾಗ ನೆರೆದಿದ್ದವರಲ್ಲಿ ಶಲ್ಯ ರಾಜನಿಗೆ ಆಗದು ತಮಗೂ ಆಗುವುದಿಲ್ಲ ಎಂದು ಅಲ್ಲಿಂದಲೇ ಹಿಂತಿರುಗಿದರು.

ನಂತರದಲ್ಲಿ ಬಂದ ದುರಹಂಕಾರಿ ಜರಾಸಂಧ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಒಂದೇ ಒಂದು ಸಾಸಿವೆ ಕಾಳಿನಷ್ಟು ಜಾಗ ಇರುವಷ್ಟು ಎಳೆದಿದ್ದಾನೆ. ಆದರೆ ಸಾಧ್ಯವಾಗದೆ ಬಿಲ್ಲನ್ನು ಬಿಟ್ಟುಬಿಟ್ಟ. ಬಿಟ್ಟ ರಭಸಕ್ಕೆ ಬಿಲ್ಲು ಅವನಿಗೆ ಬಡಿದು ನೆಲದ ಬಿದ್ದು ಬಿಟ್ಟ. ಆದ ಅವಮಾನದಿಂದ ಯಾರ ಮುಖವನ್ನು ನೋಡದೆ ಅಲ್ಲಿಂದ ಹಿಂತಿರುಗಿ ನೋಡದೆ ಮಗಧ ರಾಜ್ಯದವರೆಗೂ ಹೋಗಿಬಿಟ್ಟಿದ್ದಾನೆ. ಜರಾಸಂಧನ ನಂತರ ಬಂದ ಕರ್ಣ ಆ ಬಿಲ್ಲನ್ನು ಎತ್ತಿ ಕಟ್ಟಿ ಮತ್ಸ್ಯ ಯಂತ್ರವನ್ನು ಭೇಧಿಸಿ ದ್ರೌಪದಿಯನ್ನು ಗೆದ್ದು ಅವಳನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಿಸಬೇಕೆಂಬ ದುರುದ್ದೇಶದಿಂದ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ತನ್ನೆಲ್ಲ ಬಲವನ್ನು ಹಾಕಿ ತಂತಿಯನ್ನು ಎಳೆದಿದ್ದಾನೆ. ಕೇವಲ ಒಂದೇ ಒಂದು ಕೂದಲೆಳೆಯಷ್ಟು ಅಂತರದವರೆಗೂ ಎಳೆದಿದ್ದಾನೆ. ಆದರೆ ಶಕ್ತಿ ಸಾಲದೇ ಬಿಟ್ಟು ಬಿಟ್ಟ. ಕರ್ಣನ ಸೋಲಿನ ನಂತರ ಬಹಳಷ್ಟು ಮಂದಿ ಅಲ್ಲಿಂದ ನಿರ್ಗಮಿಸಿಬಿಟ್ಟರು.

ಈಗ ಭೀಮ ಮತ್ತು ಅರ್ಜುನರು ಇಬ್ಬರೂ ಎದ್ದರು. ಬ್ರಾಹ್ಮಣರ ಗುಂಪಿನಲ್ಲಿ ಕುಳಿತಿದ್ದ ಭೀಮಾರ್ಜುನರು ಎದ್ದಿದ್ದು ನೋಡಿ ಪಕ್ಕದಲ್ಲಿದ್ದ ಬ್ರಾಹ್ಮಣರು ಅವರ ಶಲ್ಯವನ್ನು ಎಳೆದು ನಾವು ಬಂದಿದ್ದು ಸ್ವಯಂವರ ನೋಡಲು ಬಂದಿದ್ದಷ್ಟೇ ನೀವ್ಯಾಕೆ ಹೋಗುತ್ತಿದ್ದೀರಾ. ನೀವು ವಿಫಲರಾದರೆ ಇಡೀ ಬ್ರಾಹ್ಮಣ ಸಮಾಜದ ಮರ್ಯಾದೆಯೇ ಹಾಳಾಗಿ ಹೋಗುತ್ತದೆ. ಎಂಥೆಂಥ ರಾಜ ಮಹಾರಾಜರೇ ವಿಫಲರಾಗಿದ್ದಾರೆ ನೀವು ಯಾಕೆ ಹೋಗುತ್ತಿದ್ದೀರಾ ಸುಮ್ಮನೆ ಕೂಡಿ ಎಂದಾಗ ಭೀಮಾರ್ಜುನರು ಹೇಳುತ್ತಿದ್ದಾರೆ ನೀವೇನೂ ಚಿಂತಿಸಬೇಡಿ ಬ್ರಾಹ್ಮಣ ಸಮಾಜಕ್ಕೆ ಕೀರ್ತಿ ಬರುವ ಹಾಗೆ ಮಾಡುತ್ತೇವೆ ಎಂದು ಹೊರಟಿದ್ದಾರೆ. ಭೀಮಾರ್ಜುನರು ಒಮ್ಮೆ ಶ್ರೀ ಕೃಷ್ಣನ ಕಡೆ ಅನುಮತಿಗಾಗಿ ನೋಡಿದರು ಕೃಷ್ಣ ಯಾರ ಅರಿವಿಗೂ ಬಾರದೆ ಕಣ್ಸನ್ನೆಯಲ್ಲೇ ಅನುಮತಿ ನೀಡಿದ್ದಾನೆ. ಇಬ್ಬರೂ ಧನಸ್ಸಿನ ಸ್ಥಳಕ್ಕೆ ಬಂದು ಭೀಮ ಅರ್ಜುನನಿಗೆ ಧೈರ್ಯ ನೀಡಿ ತನ್ನ ಸ್ಥಳಕ್ಕೆ ಹಿಂದಿರುಗಿದ.

ಅರ್ಜುನ ಧನಸ್ಸನು ಮುಟ್ಟಿ ಮನಸಿನಲ್ಲೇ ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿ ನಿರಾಯಾಸವಾಗಿ ಧನಸ್ಸನ್ನು ಎತ್ತಿ ತಂತಿಯನ್ನು ಎಳೆದು ಕಟ್ಟಿ ಐದು ಬಾಣಗಳನ್ನು ತೆಗೆದುಕೊಂಡು ಕೆಳಗಡೆ ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ನೋಡಿ ಆ ಹಲಗೆಯ ರಂಧ್ರದ ಮೂಲಕ ಬಾಣವನ್ನು ಬಿಟ್ಟು ಮತ್ಸ್ಯ ಯಂತ್ರವನ್ನು ಭೇಧಿಸಿದನು. ತಕ್ಷಣ ಎಲ್ಲೆಡೆ ಹರ್ಷೋದ್ಘಾರ ತುಂಬಿ ತುಳುಕಿತು. ದ್ರೌಪದಿ ದೇವಿ ಆ ಮಾಲೆಯನ್ನು ತಂದು ಅರ್ಜುನನ ಕೊರಳಿಗೆ ಹಾಕಿದ್ದಾಳೆ