Tuesday, September 30, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಮೋಹಿನಿ ಅವತಾರ ಮತ್ತು ಗರುಡ ವಾಹನ ಸೇವ)

ಬ್ರಹ್ಮೋತ್ಸವದ ಐದನೇ ದಿನ ಬಹಳ ಮುಖ್ಯವಾದ ದಿನ. ಈ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನು ಮೋಹಿನಿ ಅವತಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ. ಈ ದಿನ ಭಗವಂತನು ವಿಭಿನ್ನವಾದ ಭಂಗಿಯಲ್ಲಿ ತನ್ನ ವರದ ಹಸ್ತವನ್ನು ಅಭಯ ಹಸ್ತವನ್ನಾಗಿಸಿ ಬಂಗಾರದ ಆಭರಣಗಳನ್ನು ಧರಿಸಿ, ವಜ್ರದ ಕಿರೀಟವನ್ನು ಧರಿಸಿ ಶ್ರೀ ಕೃಷ್ಣನ ಜೊತೆಯಲ್ಲಿ ದಂತದ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಡುತ್ತಾನೆ.

ಸಂಜೆ ಭಗವಂತನಿಗೆ ವಿಶೇಷವಾದ ಗರುಡ ವಾಹನ ಸೇವೆ ಸಲ್ಲುತ್ತದೆ. ಈ ಸಮಯದಲ್ಲಿ ಭಗವಂತನು ಅಪರೂಪವಾದ ಲಕ್ಷ್ಮೀ ಹಾರ, ಮಕರ ಕಾಂತಿ ಮತ್ತು ಸಹಸ್ರ ನಾಮ ಹಾರವನ್ನು ಧರಿಸಿ ಬಂಗಾರದ ಗರುಡ ವಾಹನದ ಮೇಲೆ ವಿರಾಜಮಾನನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ 


Monday, September 29, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಕಲ್ಪವೃಕ್ಷ ವಾಹನ ಮತ್ತು ಸರ್ವಭೂಪಾಲ ವಾಹನ)

ಬ್ರಹ್ಮೋತ್ಸವದ ನಾಲ್ಕನೇ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನಾದ ಶ್ರೀನಿವಾಸನು ಕಲ್ಪವೃಕ್ಷ ವಾಹನದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ. ಕಲ್ಪವೃಕ್ಷ ಹೇಗೆ ಭಕ್ತರಿಗೋ ಎಲ್ಲವನ್ನೂ ಕರುಣಿಸುತ್ತದೋ ಹಾಗೆ ಭಗವಂತನು ಭಕ್ತರಿಗೆ ಎಲ್ಲವನ್ನೂ ಅನುಗ್ರಹಿಸುತ್ತಾನೆ ಎಂಬುದರ ಸಂಕೇತ ಈ ಕಲ್ಪವೃಕ್ಷ ವಾಹನ.

ನಾಲ್ಕನೇ ದಿನ ಸಂಜೆ ಪರಮಾತ್ಮನು ಶ್ರೀದೇವಿ ಭೂದೇವಿ ಸಮೇತನಾಗಿ ಸ್ವರ್ಣ ಕಚಿತವಾದ ವಾಹನದಲ್ಲಿ ಸರ್ವಭೂಪಾಲನಾಗಿ ಮೆರವಣಿಗೆ ಹೊರಡುತ್ತಾನೆ. ಭೂಮಂಡಲಕ್ಕೆ ತಾನೇ ಅಧಿಪತಿ ಎಂದು ಸಾರುವುದರ ಸಂಕೇತ ಈ ಸರ್ವ ಭೂಪಾಲ ವಾಹನ. ಏಳು ಅಡಿ ಎತ್ತರದ ವಾಹನದಲ್ಲಿ ಭಗವಂತನು ವಿರಾಜಮಾನನಾಗಿ ಭಕ್ತರಿಗೆ ಅನುಗ್ರಹ ನೀಡುತ್ತಾನೆ


Saturday, September 27, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಸಿಂಹ ವಾಹನ ಮತ್ತು ಮುತ್ಯಾಲ ಪಂದಿರಿ (ಮುತ್ತಿನ ಪಲ್ಲಕಿ) ವಾಹನ)



ಮೂರನೆಯ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನಾದ ಶ್ರೀನಿವಾಸನು ವಜ್ರಕಿರೀಟಿ ಧಾರಿಯಾಗಿ ಸಿಂಹವಾಹನದಲ್ಲಿ ಮೆರವಣಿಗೆ ಹೊರಡುತ್ತಾನೆ. ಪ್ರತಿ ಮನುಷ್ಯನು ತನ್ನಲ್ಲಿನ ಮೃಗತ್ವವನ್ನು ಹೊರಹಾಕಬೇಕೆಂಬ ಉದ್ದೇಶದಿಂದ ಭಗವಂತನು ಸಿಂಹವಾಹನದಲ್ಲಿ ಮೆರವಣಿಗೆ ಹೊರಡುತ್ತಾನೆ.

ಅದೇ ದಿನ ಸಾಯಂಕಾಲ ಭಗವಂತನು ಶ್ರೀದೇವಿ ಭೂದೇವಿ ಸಮೇತನಾಗಿ ಭೋಗಶ್ರೀನಿವಾಸನಾಗಿ ಮುತ್ಯಾಲ ಪಂದಿರಿ (ಮುತ್ತಿನ ಪಲ್ಲಕಿ) ವಾಹನದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾನೆ


Friday, September 26, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಚಿನ್ನ ಶೇಷ ವಾಹನ ಮತ್ತು ಹಂಸವಾಹನ)

ಬ್ರಹ್ಮೋತ್ಸವದ ಎರಡನೇ ದಿನ ಬೆಳಿಗ್ಗೆ ಬ್ರಹ್ಮಾಂಡ ನಾಯಕನನ್ನು ಚಿನ್ನ(ಚಿಕ್ಕ)ಶೇಷ ವಾಹನದಲ್ಲಿ ಮೆರವಣಿಗೆ ಕರೆದೊಯ್ಯುವುದು ಪ್ರತೀತಿ. ಪೆದ್ದ ಶೇಷ ವಾಹನ ಆದಿಶೇಷನಿಗೆ ಪ್ರತೀಕವಾದರೆ ಚಿನ್ನಶೇಷವಾಹನ ವಾಸುಕಿಗೆ ಪ್ರತೀಕ.

ಎರಡನೇ ದಿನ ಸಾಯಂಕಾಲ ಶ್ರೀನಿವಾಸನು ವಿದ್ಯಾಲಕ್ಷ್ಮಿಯಾಗಿ ಹಂಸವಾಹನದಲ್ಲಿ ಮೆರವಣಿಗೆ ಹೊರಟು ಭಕ್ತರನ್ನು ಅನುಗ್ರಹಿಸುತ್ತಾನೆ



ತಿರುಮಲ ತಿರುಪತಿ ಬ್ರಹ್ಮೋತ್ಸವ (ಧ್ವಜಾರೋಹಣ ಮತ್ತು ಪೆದ್ದಶೇಷವಾಹನ)



ಅಂಕುರಾರ್ಪಣವಾದ ಮರುದಿನ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಬ್ರಹ್ಮಾಂಡನಾಯಕನಾದ ಶ್ರೀನಿವಾಸನನ್ನು ಶ್ರೀದೇವಿ ಭೂದೇವಿ ಸಮೇತವಾಗಿ ಆಭರಣಗಳಿಂದ ಅಲಂಕರಿಸಿ, ಬಂಗಾರದ ಪಲ್ಲಕಿಯಲ್ಲಿ ತಿರುಮಲರಾಯನ ಆಸ್ಥಾನ ಮಂಟಪಕ್ಕೆ ಕರೆತರುತ್ತಾರೆ. ನಿಗದಿಯಾದ ಮಹೂರ್ತಕ್ಕೆ ಸರಿಯಾಗಿ ವೇದಘೋಷಗಳು, ಮಂತ್ರಘೋಷಗಳಿಂದ ಗರುಡ ಮೂರ್ತಿ ಇರುವ ಧ್ವಜವನ್ನು ಧ್ವಜಸ್ತಂಭಕ್ಕೆ ಆರೋಹಣ ಮಾಡುತ್ತಾರೆ. ಇದರಿಂದ ಒಂಭತ್ತು ದಿನಗಳ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಂತಾಗುತ್ತದೆ.

ನಂತರದಲ್ಲಿ ಅಷ್ಟದಿಕ್ಪಾಲಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಮುಂದುವರೆಸುತ್ತಾರೆ. ಅಂದಿನಿಂದ ಒಂಭತ್ತು ದಿನಗಳ ಕಾಲ ಭಗವಂತ ವಿವಿಧ ವಾಹನಗಳಲ್ಲಿ ಬೆಳಿಗ್ಗೆ ಮತ್ತು ರಾತ್ರಿ ತಿರುಮಲ ಮಾಡ ಬೀದಿಗಳಲ್ಲಿ ಮೆರವಣಿಗೆ ಬಂದು ಭಕ್ತರನ್ನು ಸಂತುಷ್ಟಿ ಗೊಳಿಸುತ್ತಾನೆ. ಪೆದ್ದಶೇಷವಾಹನ, ಚಿನ್ನ ಶೇಷ ವಾಹನ, ಹಂಸವಾಹನ, ಸಿಂಹವಾಹನ, ಮುತ್ತಿನ ಪಲ್ಲಕ್ಕಿ ವಾಹನ, ಕಲ್ಪವೃಕ್ಷ ವಾಹನ, ಸರ್ವಭೂಪಾಲ ವಾಹನ, ಮೋಹಿನಿ ಅವತಾರ, ಗರುಡ ವಾಹನ, ಹನುಮಂತ ವಾಹನ, ಸ್ವರ್ಣರಥ ಗಜವಾಹನ, ಸೂರ್ಯಪ್ರಭ ವಾಹನ,ಚಂದ್ರಪ್ರಭ ವಾಹನ, ಬ್ರಹ್ಮ ರಥೋತ್ಸವ, ಅಶ್ವ ವಾಹನ ಹೀಗೆ ವಿವಿಧ ವಾಹನಗಳಲ್ಲಿ ವಿರಾಜಮಾನನಾಗಿ ಕಡೆಯ ದಿನ ಚಕ್ರಸ್ನಾನ ಮುಗಿಸಿ ಧ್ವಜ ಅವರೋಹಣ ಮಾಡುವುದರೊಂದಿಗೆ ಬ್ರಹ್ಮೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳುವುದು.

ಧ್ವಜಾರೋಹಣ ವಾದ ದಿನ ಸಂಜೆ ಭಗವಂತನು ಪೆದ್ದಶೇಷವಾಹನದಲ್ಲಿ ವಿರಾಜಮಾನನಾಗಿ ಭಕ್ತರನ್ನು ಅನುಗ್ರಹಿಸುವನು. ಸ್ವಾಮಿಯು ಆದಿಶೇಷನ ಮೇಲೆ ಪವಡಿಸಿರುವ ಸಂಕೇತವಾಗಿ ಏಳು ತಲೆಗಳುಳ್ಳ ಪೆದ್ದ(ದೊಡ್ಡ) ಶೇಷ ವಾಹನದಲ್ಲಿ ಮೆರವಣಿಗೆ ನಡೆಸುತ್ತಾರೆ. ಪೂರ್ವದಲ್ಲಿ ಒಂಭತ್ತನೇ ದಿನ ಬೆಳಿಗ್ಗೆ ನಡೆಯುತ್ತಿದ್ದ ಉತ್ಸವವನ್ನು ಈಗ ಮೊದಲನೇ ದಿನವೇ ನಡೆಸುತ್ತಾರೆ. ಸ್ವಾಮಿಯು ನೆಲೆಸಿರುವ ಬೆಟ್ಟವನ್ನು ಶೇಷಾಚಲ, ಶೇಷಾದ್ರಿ ಎಂದೂ ಕರೆಯುವುದು ಪ್ರತೀತಿ. ಏಳು ಬೆಟ್ಟಗಳು ಏಳು ತಲೆಯ ಹಾವಿನಂತೆ.

Thursday, September 25, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವ)

ತಿರುಮಲ ತಿರುಪತಿ ಬ್ರಹ್ಮೋತ್ಸವ (ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವ)

ತಿರುಮಲದ ಆನಂದ ನಿಲಯದಲ್ಲಿ ನೆಲೆಸಿರುವ ಬ್ರಹ್ಮಾಂಡ ನಾಯಕನಾದ ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ಇದೇ ಆಶ್ವಯುಜ ಮಾಸದ ಪಾಡ್ಯ ಅಂದರೆ ೨೫ನೇ ತಾರೀಖಿನಿಂದ ಆರಂಭವಾಗಲಿದೆ. ಶ್ರೀನಿವಾಸನ ಬ್ರಹ್ಮೋತ್ಸವದ ಇತಿಹಾಸ ನೋಡಿದರೆ ಕಲಿಯುಗದ ಪ್ರಾರಂಭದಲ್ಲಿ ಶ್ರೀ ಮಹಾವಿಷ್ಣುವು ಸೌರಮಾನದ ಶ್ರವಣ ನಕ್ಷತ್ರದಂದು ತಿರುಮಲದಲ್ಲಿ ಅವತಾರ ತಾಳಿದನು. ಈ ಸುದಿನವನ್ನು ಸೃಷ್ಟಿಕರ್ತನಾದ ಬ್ರಹ್ಮದೇವನು ಚಿತ್ತ ನಕ್ಷತ್ರದಂದು ಧ್ವಜಾರೋಹಣ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು ನಂತರ ಒಂಭತ್ತು ದಿನಗಳ ಕಾಲ ನಿರಂತರ ಉತ್ಸವಗಳನ್ನು ಮಾಡಿ ಕಡೆಯದಾಗಿ ಆವರ್ಭೂತವನ್ನು ಮಾಡಿ ಮಹೋತ್ಸವಕ್ಕೆ ತೆರೆ ಎಳೆದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಉತ್ಸವ ನಡೆದುಕೊಂಡು ಬಂದಿದೆ. ಬ್ರಹ್ಮದೇವರು ನಡೆಸಿದ ಉತ್ಸವ ಆದ್ದರಿಂದ ಈ ಉತ್ಸವಕ್ಕೆ ಬ್ರಹ್ಮೋತ್ಸವ ಎಂದೇ ಕರೆಯುತ್ತಾರೆ.

ಬ್ರಹ್ಮೋತ್ಸವದ ಕಾರ್ಯಕ್ರಮಗಳು ಶುರುವಾಗುವುದು ಆಲಯ ಶುದ್ಧಿ ಕಾರ್ಯಕ್ರಮದಿಂದ. ಮಂಗಳವಾರದಂದು ಗರ್ಭಗುಡಿ ಮತ್ತು ಇತರ ಆಲಯಗಳನ್ನು ಗಂಧ,ಕರ್ಪೂರ,ಕೇಸರಿ ಇನ್ನಿತರ ಪದಾರ್ಥಗಳಿಂದ ಸ್ವಚ್ಛಗೊಳಿಸುತ್ತಾರೆ.ಈ ವಿಧಿಗೆ ಕೋವಿಲ್ ಆಳ್ವಾರ್ ತಿರುಮಂಜನಂ ಎಂದು ಕರೆಯುತ್ತಾರೆ.  ಧ್ವಜಾರೋಹಣದ ಮುನ್ನಾದಿನ ಅಂಕುರಾರ್ಪಣ ವಿಧಿಯನ್ನು ನೆರವೇರಿಸುತ್ತಾರೆ.  ಈ ವಿಧಿಯಲ್ಲಿ ಮೊದಲು ವಿಶ್ವಕ್ಸೇನ (ವಿಷ್ಣುವಿನ ಸೈನ್ಯದ ಸೇನಾಧಿಪತಿ) ರ ಜೊತೆ, ಅನಂತ, ಗರುಡ ಮತ್ತು ಸುದರ್ಶನರನ್ನು ವಸಂತ ಮಂಟಪಕ್ಕೆ ಮೆರವಣಿಗೆಯಲ್ಲಿ ಭೂಸೂಕ್ತ, ಇನ್ನಿತರ ಮಂತ್ರಗಳನ್ನು ಪಠಿಸುತ್ತಾ ಕರೆದು ತರುತ್ತಾರೆ. ಈ ಸಂದರ್ಭದಲ್ಲಿ ವಿಶ್ವಕ್ಸೇನರು ಬ್ರಹ್ಮೋತ್ಸವದ ತಯಾರಿಗಳು ಸರಿಯಾಗಿ ನಡೆದಿವೆಯೇ ಎಂದು ಪರೀಕ್ಷಿಸುತ್ತಾರೆ.

ನಂತರದಲ್ಲಿ ಮಣ್ಣಿನ ಪಾತ್ರೆಗಳಲ್ಲಿ ನವಧಾನ್ಯಗಳನ್ನು ಬಿತ್ತಿ ಅಂಕುರಾರ್ಪಣೆ ವಿಧಿಯನ್ನು ಪೂರೈಸುತ್ತಾರೆ. ಆ ನಂತರದಲ್ಲಿ ವಿಶ್ವಕ್ಸೇನರಿಗೆ ತಿರುಮಲರಾಯ ಆಸ್ಥಾನ ಮಂಟಪದಲ್ಲಿ ಗೌರವವನ್ನು ಸಲ್ಲಿಸಿ,ತದನಂತರ ಅನಂತ,ಗರುಡ ಮತ್ತು ಸುದರ್ಶನರ ಜೊತೆ ಮೆರವಣಿಗೆಯಲ್ಲಿ ಅಂಕುರಾರ್ಪಣ ಮಂಟಪಕ್ಕೆ ತೆರಳಿ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮುಗಿಯುವವರೆಗೂ ಅಲ್ಲೇ ನೆಲೆಸಿರುತ್ತಾರೆ.   

ಮಾಹಿತಿ : ಸಂಗ್ರಹ

Wednesday, September 24, 2014

ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ

ಇಂದಿನಿಂದ ಭೂವೈಕುಂಠ ಎಂದೇ ಪ್ರತೀತಿಯಲ್ಲಿರುವ ಕಲಿಯುಗದ ಪ್ರತ್ಯಕ್ಷ ದೈವ ಆನಂದ ನಿಲಯದಲ್ಲಿ ನೆಲೆಸಿರುವ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಇಂದು ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವಗಳು ನೆರವೇರುತ್ತದೆ. ಸರ್ವರಿಗೂ ನವರಾತ್ರಿ ಮತ್ತು ಬ್ರಹ್ಮೋತ್ಸವದ ಶುಭಾಶಯಗಳು.