Thursday, February 27, 2014

ಕಂಡೆ ನಾ ಉದ್ದಂಡ ನರಸಿಂಹನಾ

ಕಂಡೆ ನಾ ಉದ್ದಂಡ ನರಸಿಂಹನಾ

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ।।ಪ।।

ಗುಡುಗುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸಿ ಸೆನುಡಿಯ ಡಗಲೊಡನೆ ಮುಡಿ ಪಿಡಿದು
ಘಡ ಘಡನೆ ನಡು ನಡುಗೆ ಗುಡುಗುಡಿಸಿ ಸಭೆ ಬೆದರೆ ।।೧।।

ಹಿಡಿ ಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನೆ
ಉರದೊಳಪ್ಪಳಿಸಿ ಅರಿಬಸಿರ ಸರಸ ಸೀಳಿ
ಪರಿಪರಿಯಲಿ ಚರ್ಮವೆಳೆದೆಳೆಯಲು
ನರ ನರತನೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ ।।೨।।

ಹರಿ ಹರಿದು ಕರುಳ ಕೊರಳೊಳಿಟ್ಟವನ
ಪುರಜನರು ಹಾಯೆಂದು ಸುರರು ಹೂ ಮಳೆಗರೆಯೆ
ಹರಿ ಹರಿ ಶರಣೆಂದು ಸ್ತುತಿಸಿ ಶಿಶು ಮೆರೆಯೆ
ಕರುಣಾಳು ಕಾಗಿನೆಲೆ ಆದಿಕೇಶವನ ।।೩।।

ಬಾರಯ್ಯ ದಯಮಾಡಿ ತ್ವರಿತದಿಂ ಬೇಗ

ಬಾರಯ್ಯ ದಯಮಾಡಿ ತ್ವರಿತದಿಂ ಬೇಗ ।।ಪ।।

ಬೆದರಲು ಕರಿರಾಜ ಒದಗಿ ಬಂದೆ ಅಲ್ಲಿ
ಮದ ಭಯ ಭಾಗ್ಯವು ಒದಗಿದುಬ್ಬಸದಿಂದ ।।೧।।

ಸ್ತಂಭದಿ ನರಹರಿ ಎಂಬ ಭಾವದಿ ಬಂದು
ಕುಂಭಿಣಿ ಪತಿ ಬಹು ಸಂಭ್ರಮಗೊಳುತಲಿ ।।೨।।

ನರನು ಅರ್ಚಕನೆತ್ತ ನರಹರಿ ನೀನೆತ್ತ
ಕರುಣದಿ ಬರಬೇಕು ಸಿರಿ ಹಯವದನ ।।೩।।

Tuesday, February 25, 2014

ಕೇಳಿದೆ ನಿನ್ನಯ ಸುದ್ದಿ ಕೇಳಿದೆ

ಕೇಳಿದೆ ನಿನ್ನಯ ಸುದ್ದಿ ಕೇಳಿದೆ
ನೀರೊಳು ಮುಳುಗಿದೆಯಂತೆ ದೊಡ್ಡಭಾರ
ಗಿರಿಯ ಪೊತ್ತೆಯಂತೆ ಗಡ್ಡೆ
ಬೇರು ಗೆಣಸ ಮೆದ್ದೆಯಂತೆ ಆಹಾ ।।೧।।

ಮೂರೆರೆಡರಿಯದ ತರ ಮಾತಿಗೆ
ಘೋರ ದಾನವನ ಸಂಹಾರ ಮಾಡಿದೆಯಂತೆ
ನಾರಿಯೊಬ್ಬಳ ಪೆತ್ತೆಯಂತೆ
ಹೆತ್ತ ನಾರಿಯನು ಕೊಯ್ದೆಯಂತೆ ನಿನ್ನ ।।೨।।

ನಾರಿಚೋರನ ಕೊಂದೆಯಂತೆ ಆಹಾ
ಊರ ನಾರಿಯರ ಸೂರೆಗೊಳ್ಳುತ ಪರ
ನಾರಿಯರಭಿಮಾನ ಗಾರು ಮಾಡಿದೆಯಂತೆ
ತುರುಗ ರಾಹುತನಾದೆಯಂತೆ ।।೩।।

ನಿನ್ನ ಕರದಿ ಕಡಗೋಲು ನೇಣ೦ತೆ ನಿನಗೆ
ಸರಿ ಧರೆಯೊಳಗ್ಗಿಲ್ಲವಂತೆ ಆಹಾ
ವರದ ಶ್ರೀಪುರಂದರವಿಠಲನೆ ನಿನ್ನ
ಪರಿಪರಿ ಮಹಿಮೆಯ ಹರಿಸಿಸುತಲಿ ನಾನು ।।೪।।