Sunday, November 24, 2013

ಎಷ್ಟು ಸಾಹಸವಂತ ನೀನೆ ಬಲವಂತ


ಎಷ್ಟು ಸಾಹಸವಂತ ನೀನೆ ಬಲವಂತ ಇಷ್ಟದಾಯಕ ಭಳಿ ಭಳಿರೇ ಹನುಮಂತ॥
ಅಟ್ಟುತ ಖಳರನು ಮೆಟ್ಟಿ ಸೀಳುತಲಿ ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ

ರಾಮರಪ್ಪಣೆಯಿಂದ ಶರಧಿಯ ದಾಟಿ ಮಹಾ ಅಸುರೆಯ ಸೀಳಿ ಬಿಸಾಟಿ
ಸ್ವಾಮಿ ಕಾರ್ಯವನುಕೂಲದಿ ಯೋಚಿಸಿ ಪ್ರೇಮದಿ ನಡೆದನು ಆರೆಲೆ ಸಾಟಿ

ದೂರದಿಂದಸುರನ ಪುರವನ್ನೇ ನೋಡಿ ಮನದಿ ಶ್ರೀರಾಮರ ಸ್ಮರಣೆಯಾ ಮಾಡಿ
ಹಾರುತ ಹರುಷದಿ ವರಸಿಲಂಕಿಣಿಯನು ವಾರಿಜ ಮುಖಿಯಳ ಕಂಡು ಮಾತಾಡಿ

ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆಯ ನೀಡಿ
ಭೂಮಿಜೆ ಜಾನಕಿ ಕುರುಡು ನೀಡಲಾಗ ಮಹಾವನದೊಳು ಫಲಗಳ ಬೇಡಿ

ಕಣ್ಣಿಗೆ ಬೇಕಾದ ಹಣ್ಣು ಸವಿದು ಹಣ್ಣಿನ ನೆವದಲಿ ಅಸುರರ ಬಡಿದು
ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು

ಶೃಂಗಾರ ವನದಲ್ಲಿದ್ದ ರಾಕ್ಷಸರ ಅಂಗವನಳಿಸಿದ್ಯೋ ಅತಿಶಯ ಶೂರಾ
ನುಂಗಿ ಅಸ್ತ್ರವನು ಅಕ್ಷಯ ಕುವರನ ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ

ದೂರ ಪೇಳುವರೆಲ್ಲ ರಾವಣನೊಡನೆ ಚೀರುತ ಕರೆಸಿದ ಇಂದ್ರಜಿತುವನ್ನೇ
ಚೋರ ಕಪಿಯನು ಹಿಡಿದುತಾ ಎನ್ನುತ ಶೂರರ ಕಳಿಸಿದ ನಿಜಸುತರೊಡನೆ

ಪಿಡಿದನು ಇಂದ್ರಜಿತು ಕಡುಕೋಪದಿಂದ ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ

ಕಂಡ ರಾವಣನು ಉದ್ದಂಡ ಕಪಿಯನ್ನೆ ಮಂಡೆಯ ತೂಗುತ ಮಾತನಾಡಿಸಿದ
ಭಂಡು ಮಾಡದೆ ಬಿಡೆ ನೋಡು ಕಪಿಯನೆ ಕಂಡು ದುರದುರನೆ ನಡೆದನಾಗ

ಛಲವ್ಯಾಕೋ ನಿನಗಿಷ್ಟು ಎಲವೋಕೋಡಗನೆ ನೆಲೆ ಯಾವುದ್ಹೇಳೋ ನಿನ್ನೊಡೆಯನ ಹೆಸರನ್ನ
ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನೆ ನಾನು

ಬಡ ರಾವಣನೆ ನಿನ್ನ ಬಡಿದು ಹಾಕುವೆನು ಎನ್ನೊಡೆಯನಪ್ಪಣೆಯಿಲ್ಲೆಂದು ತಾಳಿದೆನು
ಪುಡಿಮಾಡುವೆ ಫುಲ್ಲ ರಕ್ಕಸನೆ ತೊಡೆವೆನು ನಿನ್ನಪಣೆಯ ಅಕ್ಷರವ ೧೦

ನಿನ್ನಂತ ದೂತರು ರಾಮರ ಬಳಿಗೆ ಇನ್ನೆಷ್ಟು ಮಂದಿಗಳುಂಟು ಹೇಳೋ ನೀತ್ವರಿಯಾ
ನನ್ನಂತ ದೂತರು ನಿನ್ನಂತ ಪ್ರೇತರು ಇನ್ನೂರು ಕೋಟಿ ಕೇಳರಿಯಾ ೧೧

ಕಡುಕೋಪದಿಂದಲಿ ಖೂಳ ರಾವಣನು ಸುಡಿಸುಡಿ ಬಾಲವ ಸುತ್ತಿವಸನನು
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ ಒಡನೆ ಮುತ್ತಿದರು ಗಡಿಮನೆಯವರು ೧೨

ತಂದಿರುವಸನವ ತಂಡ ತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ ೧೩

ಶಾಲುಶಕಲಾತಿಯು ಸಾಲದೆಯಿರಲು ಬಾಲೆರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲೆಸಿ ಬೆಂಕಿಯನಿಡುತಲಿ ಕಾಲ ಮೃತ್ಯುವ ಕೆಣಕಿದರಲ್ಲಿ ೧೪

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣುಕಿ ನೋಡುತ ಅಸುರರಣಕಿಸುತ
ಝಣಝಣ ಝಣರೆನೆ ಬಾಲದ ಗಂಟೆಯು ಮನದಿ ಶ್ರೀರಾಮರ ಪಾದವ ನೆನೆಯುತ ೧೫

ಮಂಗಳಂ ಶ್ರೀರಾಮಚಂದ್ರ ಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯ ಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ ೧೬

ಹತ್ತಿತು ಅಸುರನ  ಗಡ್ಡಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿರಾಮರು ಕೋಪಿಸುವರು ಎಂದು ಚಿತ್ತದಿ ನಡೆದನು ಅಸುರನಿದ್ದೆಡೆಗೆ ೧೭

ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ ೧೮

ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಝಗ್ಗನೆ ಪೇಳ್ದರು ರಾವಣಗಂದು ೧೯

ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣಬಾಳೆಂದು
ದೇವಿ ಸೀತೆಯ ನೋಡಗೊಂಡಯೋಧ್ಯದಿ ದೇವ ಶ್ರೀರಾಮ ರಾಜ್ಯವಾಳಿದರು ೨೦

ಶಂಖದೈತ್ಯನ ಕೊಂದೆ ಶರಣು ಶರಣಯ್ಯ   ಶಂಖಾಗಿರಿಯಲಿ ನಿಂದ ಹನುಮಂತರಾಯ
ಪಂಕಜಾಕ್ಷ ಹಯವದನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜಪದವಿಯನು ೨೧